ಬೆಂಗಳೂರು: ವೃದ್ಧನಿಗೆ ಎಲ್‌ಐಸಿ ಪಾಲಿಸಿ ಏಜೆಂಟ್ ಕಮಿಷನ್ ಕೊಡಿಸುವುದಾಗಿ ನಂಬಿಸಿ, ಸೈಬರ್ ಕಳ್ಳರು, 1.61 ಕೋಟಿ ರೂ. ವಂಚನೆ ಮಾಡಿದ್ದಾರೆ. ಮಾರತ್ತಹಳ್ಳಿ ನಿವಾಸಿ ಸತ್ಯನಾರಾಯಣ ಶರ್ಮ (60) ಮೋಸಕ್ಕೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಪಶ್ಚಿಮ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
2014ರ ನ. 3ಕ್ಕೆ ಸತ್ಯನಾರಾಯಣ ರಿಗೆ ಕರೆ ಮಾಡಿದ್ದ ವ್ಯಕ್ತಿ, ರಾಜೀವ್ ಠಾಕೂರ್ ಎಂದು ಪರಿಚಯಿಸಿಕೊಂಡಿದ್ದ. ‘ನಿಮಗೆ ಎಲ್‌ಐಸಿ ಪಾಲಿಸಿ ಏಜೆಂಟ್ ಕಮಿಷನ್ ಕೊಡಿಸುವಲ್ಲಿ ಅಧಿಕಾರಿಗಳು ಮೋಸ ಮಾಡಿದ್ದಾರೆ ಹಣವನ್ನು ಕೊಡಲು ಕರೆ ಮಾಡಿದ್ದೇನೆ. ಮೊದಲು ನಿಮ್ಮ ಮಕ್ಕಳ ಹೆಸರಿನಲ್ಲಿ ಹೊಸ ಪಾಲಿಸಿ ಮಾಡಬೇಕು. ಬಳಿಕ ನಿಮಗೆ ಕಮಿಷನ್ ದೊರೆಯಲಿದೆ. ಅದಕ್ಕಾಗಿ ದೆಹಲಿ ಕಚೇರಿಗೆ ಕರೆ ಮಾಡಿ’ ಎಂದು ಹೇಳಿ ಮೊಬೈಲ್ ನಂಬರ್ ಕೊಟ್ಟಿದ್ದ.
ಆ ಪಕಾರ, ಕರೆ ಮಾಡಿದಾಗ ಮಹೇಶ್ ಅಗರವಾಲ್ ಮತ್ತು ಅಜಯ್ ತ್ಯಾಗಿ ಎಂಬುವರು ಕರೆ ಸ್ವೀಕರಿಸಿ, ತಾವು ಐಆರ್‌ಡಿಎ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ದೂರುದಾರರ ಮಕ್ಕಳ ದಾಖಲೆಗಳನ್ನು ಸ್ವೀಕರಿಸಿ ಹೊಸ ಪಾಲಿಸಿ ಮಾಡಿಸಿದರೆ ನಿಮಗೆ ಏಜೆಂಟ್ ಕಮಿಷನ್ ದೊರೆಯಲಿದೆ ಎಂದು ನಂಬಿಸಿದ್ದರು. ಪಾಲಿಸಿ ಕಂತು ಯಾವ ರೀತಿ ಪಾವತಿ ಮಾಡಬೇಕೆಂದು ಕೇಳಿದಾಗ ಮೊದಲು ನಮ್ಮ ಸ್ನೇಹಿತ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ, ಅಲ್ಲಿಂದ ಎಲ್‌ಐಸಿ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಮನಗೂಳಿ: ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಅಸಭ್ಯ ವರ್ತನೆ – ಪೋಲಿಸ್ ಠಾಣೆಗೆ ಬಂದು ದೂರು ನೀಡಿದ ವಿದ್ಯಾರ್ಥಿನಿಯರು
ವಂಚಕರ ಮಾತು ನಂಬಿದ ಸತ್ಯನಾರಾಯಣಶರ್ಮ, ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 2014ರಿಂದ 2018ರವರೆಗೂ 1.61 ಕೋಟಿ ರೂ. ವರ್ಗಾವಣೆ ಮಾಡಿದ್ದರು. ಕಮಿಷನ್ ಹಣ ಕೇಳಲು ಕರೆ ಮಾಡಿದಾಗ, ಅಪರಿಚಿತ ವ್ಯಕ್ತಿಗಳ ಮೊಬೈಲ್ ನಂಬರ್ ಸಿಚ್ ಆ ಆಗಿದ್ದವು. ಎಲ್‌ಐಸಿ ಹಸರಿನಲ್ಲಿ ಮೋಸ ಮಾಡಿರುವ ವಂಚಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕ್ರೆಡಿಟ್ ಕಾರ್ಡ್ ರಿವಾರ್ಡ್ಸ್
ಐಸಿಐಸಿಐ ಕ್ರೆಡಿಟ್ ಕಾರ್ಡ್ ಬ್ರಾಂಚ್‌ನಿಂದ ಮಾತನಾಡುತ್ತಿರುವುದಾಗಿ ಯುವಕನಿಗೆ ಕರೆ ಮಾಡಿದ ಸೈಬರ್ ಕಳ್ಳರು, ಕ್ರೆಡಿಟ್ ಕಾರ್ಡ್ ರಿವಾರ್ಡ್ ಬಂದಿರುವುದಾಗಿ ನಂಬಿಸಿ 3.59 ಲಕ್ಷ ರೂ. ದೋಚಿದ್ದಾರೆ. ಈಜಿಪುರದ ಮಚೇಲಾ ಗಣೇಶ್ ಎಂಬಾತ ಮೋಸಕ್ಕೆ ಒಳಗಾದವರು. ಇವರಿಗೆ ಡಿ. 28ರಂದು ಕರೆ ಮಾಡಿದ್ದ ಅಪರಿಚಿತ, ‘ಐಸಿಐಸಿಐ ಕ್ರೆಡಿಟ್ ಕಾರ್ಡ್ ಶಾಖೆಯಿಂದ ಮಾತನಾಡುತ್ತಿದ್ದೇನೆ.
ನಿಮ್ಮ ಕ್ರೆಡಿಟ್ ಕಾರ್ಡ್‌ಗೆ ರಿವಾರ್ಡ್ಸ್ ಪಾಯಿಂಟ್ಸ್ ಬಂದಿದೆ. ಅದನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡಬೇಕಿದೆ. ಅದಕ್ಕಾಗಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಬೇಕಿದೆ’ ಎಂದು ಹೇಳಿ ಒಟಿಪಿ ಪಡೆದು ಕ್ರೆಡಿಟ್ ಕಾರ್ಡ್‌ನಿಂದ ಹಂತ ಹಂತವಾಗಿ 3.59 ಲಕ್ಷ ರೂ. ಅನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದರು. ಈ ಬಗ್ಗೆ, ಗಣೇಶ್ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಕೇಂದ್ರ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ನೋಡಿ: ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ, ಸಿಪಿಐ(ಎಂ) ನಾಯಕ ಜಿ.ಸಿ.ಬಯ್ಯಾರೆಡ್ಡಿ ನಿಧನ Janashakthi Media