ಹೊಸ ಪಡಿತರ ಚೀಟಿಗಳನ್ನು ವಿತರಿಸಿದಷ್ಟೇ ಪ್ರಮಾಣದಲ್ಲಿ ಹಳೆಯ ಪಡಿತರ ಚೀಟಿಗಳನ್ನು ರದ್ದುಪಡಿಸಬೇಕು

ಬೆಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ‘ಹೊಸ ಪಡಿತರ ಚೀಟಿಗಳನ್ನು ವಿತರಿಸಿದಷ್ಟೇ ಪ್ರಮಾಣದಲ್ಲಿ ಹಳೆಯ ಪಡಿತರ ಚೀಟಿಗಳನ್ನು ರದ್ದುಪಡಿಸಬೇಕು. ಒಟ್ಟಾರೆ ಈಗಿರುವ ಪಡಿತರ ಚೀಟಿಗಳ ಸಂಖ್ಯೆ ಹೆಚ್ಚಿಸುವಂತಿಲ್ಲ’ ಎಂಬ ಆದೇಶವು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಸತತ 6 ತಿಂಗಳಿನಿಂದ ಪಡಿತರ ಪಡೆಯದ ಅಂತ್ಯೋದಯ ಹಾಗೂ ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಆದ್ಯತೆ ಮೇರೆಗೆ ಸೂಚಿಸಲಾಗಿದೆ. ಅನರ್ಹರೂ ಪಡಿತರ ಚೀಟಿಗಳನ್ನು ಪಡೆದ ಬಗ್ಗೆ ದೂರುಗಳಿದ್ದು, ಪರಿಶೀಲಿಸಿ ಅಂತಹವರ ಕಾರ್ಡ್‌ಗಳನ್ನು ರದ್ದುಪಡಿಸಲು ತಿಳಿಸಲಾಗಿದೆ. ರಾಜ್ಯದಲ್ಲಿರುವ ಒಟ್ಟು ಪಡಿತರ ಚೀಟಿದಾರರ ಪೈಕಿ 14,826 ಅಂತ್ಯೋದಯ ಮತ್ತು 3.32 ಲಕ್ಷ ಬಿಪಿಎಲ್‌ ಕಾರ್ಡ್ ಹೊಂದಿದವರು ಸತತ 6 ತಿಂಗಳಿಂದ ಆಹಾರ ಧಾನ್ಯ ಪಡೆಯದಿರುವುದು ಗೊತ್ತಾಗಿದೆ. ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಪಡಿತರ ಪಡೆಯದಿರುವವರ ಸಂಖ್ಯೆ 37,880 ಇದೆ.

ರಾಜ್ಯದಲ್ಲಿ 10.88 ಲಕ್ಷ ಅಂತ್ಯೋದಯ ಮತ್ತು 1.16 ಕೋಟಿ ಬಿಪಿಎಲ್‌ ಕಾರ್ಡ್‌ದಾರರು ಇದ್ದಾರೆ. ‘ಹೊಸ ಬಿಪಿಎಲ್‌ ಪಡಿತರ ಚೀಟಿಗಾಗಿ 2.95 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ’ ಎಂದು ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ ಇಲಾಖೆಯ ಆದೇಶ ಹೊರಬಂದಿದೆ. ಒಟ್ಟು 2.95 ಲಕ್ಷ ಪೈಕಿ 2.78 ಲಕ್ಷ ಅರ್ಜಿಗಳ ಸ್ಥಳ ಪರಿಶೀಲನೆ ನಡೆದಿದೆ. 2.28 ಲಕ್ಷ ಅರ್ಜಿಗಳು ಅರ್ಹವೆಂದು ಕಂಡು ಬಂದಿವೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು 27,486 ಅರ್ಜಿ ಸಲ್ಲಿಕೆಯಾಗಿವೆ.

ಬಿಪಿಎಲ್‌ ಹಾಗೂ ಅಂತ್ಯೋದಯ ಪಡಿತರ ಚೀಟಿಗಳ ಆಧಾರದ ಮೇಲೆಯೇ ಗೃಹಲಕ್ಷ್ಮಿ, ಆಯುಷ್ಮಾನ್‌ ಆರೋಗ್ಯ ಚಿಕಿತ್ಸೆಯ ₹5 ಲಕ್ಷ ವೆಚ್ಚ, ವಿವಿಧ ಇಲಾಖೆ, ನಿಗಮಗಳ ಫಲಾನುಭವಿಗಳ ಆಯ್ಕೆ, ಸಾಲ ಸೌಲಭ್ಯ ನೀಡಲಾಗುತ್ತದೆ. ಪಡಿತರ ಚೀಟಿ ಸಂಖ್ಯೆ ಹೆಚ್ಚಳವಾದರೆ, ಸರ್ಕಾರಕ್ಕೂ ಹೊರೆಯಾಗುವ ಕಾರಣ ಪಡಿತರ ಕಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ‘6 ತಿಂಗಳಿನಿಂದ ಪಡಿತರ ಪಡೆಯದ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ತಿಳಿಸಿದರು.

 

Donate Janashakthi Media

Leave a Reply

Your email address will not be published. Required fields are marked *