19ನೇ ಶತಮಾನದಲ್ಲಿ ಬ್ರಿಟಿಶ್ ವಸಾಹುಶಾಹಿಗಳು ಕೆರೇಬಿಯನ್ ದೇಶಗಳಿಗೆ ಕಳಿಸಿದ ಬಡ ಭಾರತೀಯ ಕಾರ್ಮಿಕರು ಪಟ್ಟ ಪಾಡುಗಳ ಬಗ್ಗೆ ಹಲವಾರು ದೂರು, ಆಕ್ರೋಶಗಳನ್ನು ಎದುರಿಸಿದ ವಸಾಹತುಶಾಹಿ ಆಳ್ವಿಕೆಯ ವಸಾಹತು ಕಾರ್ಯದರ್ಶಿ ಭಾರತದ ಬಡಕಾರ್ಮಿಕರನ್ನು ಹೊರದೇಶಗಳಿಗೆ ಕಳಿಸುವುದನ್ನು ನಿಲ್ಲಿಸಬೇಕು, ಅಥವ ಇದರಲ್ಲಿ ಸರಕಾರ ಭಾಗಿಯಾಗುವುದನ್ನಾದರೂ ತಡೆಯಬೇಕು ಎಂದು 1910ರಲ್ಲಿ ಸಲಹೆ ಮಾಡಿದ್ದರಂತೆ. ಕೊನೆಗೂ 1915ರಲ್ಲಿ ಇದು ಜಾರಿಗೆ ಬಂತು. ಆದರೆ ಈಗ ಒಂದು ಶತಮಾನದ ನಂತರ ದೇಶದ ಅರ್ಥವ್ಯವಸ್ಥೆ ಅದ್ಭುತ ಪ್ರಮಾಣದಲ್ಲಿ ಬೆಳೆಯುತ್ತಿದೆ, ಇನ್ನೇನು 5 ಟ್ರಿಲಿಯನ್ ಡಾಲರ್ ಮಟ್ಟ ತಲುಪಿ, ಮೂರನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಲಿದೆ ಎಂದು ಡಂಗುರ ಸಾರುತ್ತಿರುವ ‘ದೇಶಭಕ್ತ’ ಸರಕಾರವೇ ಅದನ್ನು ಮತ್ತೆ ಆರಂಭಿಸುತ್ತಿರುವಂತೆ ಕಾಣುತ್ತದೆ. ಇಸ್ರೇಲಿಗೆ ತಾತ್ಕಾಲಿಕವಾಗಿ ಭಾರತದಿಂದ 40ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಕಳಿಸುವ ಒಪ್ಪಂದವನ್ನು ಅದು ಮಾಡಿಕೊಂಡಿದೆಯಂತೆ.
ಪ್ಯಾಲೆಸ್ಟೈನ್ ಮೇಲೆ ಅಮಾನವೀಯ ಬರ್ಬರ ನರಮೇಧದ ಯುದ್ಧವನ್ನು ಆರಂಭಿಸಿರುವ ಇಸ್ರೇಲ್‌ಗೆ ಭಾರತೀಯ ಕಾರ್ಮಿಕರನ್ನು ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಸಿಐಟಿಯು ಖಂಡಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಇಸ್ರೇಲ್‌ನೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಗೊಳಿಸುವಂತೆ ಅದು ಸರ್ಕಾರವನ್ನು ಒತ್ತಾಯಿಸಿದೆ. ಇತರ ಕೇಂದ್ರೀಯ ಕಾರ್ಮಿಕ ಸಂಘಟನೆಗಳೂ ಈ ಒಪ್ಪಂದವನ್ನು ವಿರೋಧಿಸಿವೆ.
ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿ(ಎನ್.ಎಸ್.ಡಿ.ಸಿ.)ಯ ಮೇಲುಸ್ತುವಾರಿ ನಡೆಸುತ್ತಿರುವ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು(ಎಂ.ಎಸ್.ಡಿ.ಇ.) ನವೆಂಬರ್ 2023 ರಲ್ಲಿ ಇಸ್ರೇಲಿನೊಂದಿಗೆ ಮೂರು ವರ್ಷಗಳ ಒಪ್ಪಂದದ ಪ್ರಕಾರ ಕಟ್ಟಡ ನಿರ್ಮಾಣ ಮತ್ತು ಆರೈಕೆಯಂತಹ ನಿರ್ದಿಷ್ಟ ಶ್ರಮ ವಲಯಗಳಲ್ಲಿ ಇಸ್ರೇಲಿಗೆ ತಾತ್ಕಾಲಿಕವಾಗಿ ಭಾರತದಿಂದ 40ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಕಳಿಸಲು ಭಾರತ ಸರಕಾರ ಅನುವು ಮಾಡಿಕೊಡುತ್ತದೆ.
ಸಾವಿರಾರು ಮಂದಿಯನ್ನು ಸಂಹಾರ ಮಾಡುತ್ತಿರುವ ಯುದ್ಧದ ನಡುವೆಯೇ ಈ ಒಪ್ಪಂದ ನಡೆದಿದೆ. ಆಗಲೂ ಸಿಐಟಿಯು ಮತ್ತು ಅದಕ್ಕೆ ಸಂಯೋಜಿತವಾದ ಭಾರತದ ನಿರ್ಮಾಣ ಕಾರ್ಮಿಕರ ಒಕ್ಕೂಟ (ಸಿಡಬ್ಲ್ಯೂಎಫ್‌ಐ) ಇದನ್ನು ಖಂಡಿಸಿದ್ದವು. ಇದು ದೇಶದ ಅಸಹಾಯಕ ನಿರುದ್ಯೋಗಿ ಯುವಜನರ ಜೀವಗಳನ್ನು ಸಾವಿನ ಬಲೆಯತ್ತ ನೂಕುತ್ತಿದೆ ಎಂದು ಹೇಳಿದ್ದವು. ಪ್ಯಾಲೆಸ್ಟೈನ್ ಮೇಲೆ ದಾಳಿಗಳನ್ನು ನಡೆಸಿ ನರಮೇಧದಲ್ಲಿ ತೊಡಗಿರುವ ಇಸ್ರೇಲಿ ಸರಕಾರವೇ ಸಾವಿರಾರು ಪ್ಯಾಲೆಸ್ತೀನಿಯನ್ನರನ್ನು ನಿರುದ್ಯೋಗಿಗಳಾಗಿ ಮಾಡಿದ್ದು, ಅವರ ಜಾಗದಲ್ಲಿ ಕೆಲಸ ಮಾಡಲು ಕೇಂದ್ರ ಮತ್ತು ರಾಜ್ಯಗಳ ಬಿಜೆಪಿ ನೇತೃತ್ವದ ಸರ್ಕಾರಗಳು ಒಡ್ಡುತ್ತಿರುವ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಸಿಐಟಿಯು ಮತ್ತು ಇತರ ಕಾರ್ಮಿಕ ಸಂಘಟನೆಗಳು ಭಾರತೀಯ ಕಾರ್ಮಿಕರಿಗೆ ಮನವಿ ಮಾಡಿತ್ತು.
ಸಿಐಟಿಯು ಸೇರಿದಂತೆ ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ವಿರೋಧಿಸಿದರೂ ಗಾಜಾದ ಮೇಲಿನ ಇಸ್ರೇಲಿನ ಬರ್ಬರ ದಾಳಿ 100ನೇ ದಿನಕ್ಕೆ ಕಾಲಿಟ್ಟಿರುವ ವೇಳೆಗೇ ಬಿಜೆಪಿ ನೇತೃತ್ವದ ಉತ್ತರಪ್ರದೇಶ ಮತ್ತು ಹರಿಯಾಣ ಸರಕಾರಗಳು ಇಸ್ರೇಲಿನಲ್ಲಿ ಉದ್ಯೋಗಕ್ಕಾಗಿ ತಲಾ 10000 ಯುವಕರ ಆಯ್ಕೆಗೆ ಸಿದ್ಧತೆ ನಡೆಸಿವೆ ಎಂದು ವರದಿಯಾಗಿದೆ. ಕಾರ್ಮಿಕ ಸಂಘಗಳ ಮನವಿಯ ಹೊರತಾಗಿಯೂ ಸಾವಿರಾರು ಕಾರ್ಮಿಕರು ಇಸ್ರೇಲಿಗೆ ಹೋಗಲು ಸಿದ್ಧರಾಗಿದ್ದಾರೆ ಎಂದೂ ವರದಿಯಾಗಿದೆ.
ಇದು ಭಾರತದಲ್ಲಿ ಕುಶಲ ಕಾರ್ಮಿಕರ ಹತಾಶ ಪರಿಸ್ಥಿತಿಯನ್ನು ಬಿಂಬಿಸುತ್ತದೆ ಎಂದೊಬ್ಬ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಹರಿಯಾಣದ ರೋಹ್ಟಕ್‌ನಲ್ಲಿ ಅನೇಕರು ಇಸ್ರೇಲ್‌ನಲ್ಲಿ ಉದ್ಯೋಗಕ್ಕಾಗಿ ನೋಂದಾಯಿಸಲು ಸಾಲುಗಟ್ಟಿ ನಿಂತಿದ್ದರು, ಕೆಲವು ಡಾಲರ್‌ಗಳಿಗೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬಾಂಬ್ ದಾಳಿಗೊಳಗಾದ ಗಾಜಾದಲ್ಲಿ ಕೆಲಸ ಮಾಡಲು ಸಹ ಸಿದ್ಧರಾಗಿರುವವರು “ನಮ್ಮ ಅದೃಷ್ಟದಲ್ಲಿ ಸಾಯುವುದೇ ಇದ್ದರೆ, ಇಲ್ಲಿಯಾದರೇನು, ಅಲ್ಲಿಯಾದರೇನು? ನಾವು ಅಲ್ಲಿಗೆ ಹೋಗಿ ಒಳ್ಳೆಯ ಕೆಲಸ ಮಾಡಿ ಸ್ವಲ್ಪ ಸಮಯ ಕಳೆದು ಹಿಂತಿರುಗಿ ಬರುತ್ತೇವೆ ಎಂಬುದು ನನ್ನ ನಿರೀಕ್ಷೆ” ಎಂದೊಬ್ಬ ಕಾರ್ಮಿಕ ಹೇಳಿರುವುದು 19ನೇ ಶತಮಾನದಲ್ಲಿ ಬ್ರಿಟಿಶ್ ವಸಾಹುಶಾಹಿಗಳು ಶಾಂತಸಾಗರ ಮತ್ತು ಅಟ್ಲಾಂಟಿಕ್ ಸಾಗರ ಪ್ರದೇಶಗಳ ಪ್ಲಾಂಟೇಶನ್‌ಗಳಲ್ಲಿ ದುಡಿಯಲು ಕೂಲಿಯಾಳುಗಳಾಗಿ ಬಿಹಾರ, ಬಂಗಾಲ ಮತ್ತು ಬಿಹಾರದ ಬಡ ಜನರ ಹತಾಶ ಸ್ಥಿತಿಯನ್ನು ನೆನಪಿಸುತ್ತದೆ ಎಂದಿದ್ದಾರೆ ಈ ಅರ್ಥಶಾಸ್ತ್ರಜ್ಞರು.
ಇದನ್ನೂ ಓದಿ : ವಲಸೆಗಾರರ ಗಡಿಪಾರಿಗೆ ಫ್ಯಾಸಿಸ್ಟ್ ಪಿತೂರಿಯ ವಿರುದ್ಧ 14 ಲಕ್ಷ ಜನರ ಪ್ರತಿರೋಧ
ಹತಾಶ ಸ್ಥಿತಿಯ ಪ್ರತಿಬಿಂಬ
28 ವರ್ಷದ ಇನ್ನೊಬ್ಬ ಕಾರ್ಮಿಕ “ಹೌದು, ನನಗೆ ಘರ್ಷಣೆ ನಡೆಯುತ್ತಿರುವುದು ತಿಳಿದಿದೆ, ಆದರೆ ನಾನು ಒಂದು ವರ್ಷದಲ್ಲಿ 12000 ಡಾಲರ್ ಗಳಿಸಬಹುದು. ಭಾರತದಲ್ಲಿ ಅದೇ ಪ್ರಮಾಣದ ಹಣವನ್ನು ಗಳಿಸಲಿಕ್ಕೆ ನನಗೆ ಕನಿಷ್ಟಐದು ವರ್ಷ ಬೇಕಾಗಬಹುದು” ಎಂದನಂತೆ.
ಇಸ್ರೇಲಿ ಸರಕಾರೀ ಏಜೆನ್ಸಿ ‘ಜನಸಂಖ್ಯೆ, ಒಳವಲಸೆ ಮತ್ತು ಗಡಿ ಪ್ರಾಧಿಕಾರ’(ಪಿಐಬಿಎ) ಈ ಕಾರ್ಮಿಕರಿಗೆ ತಿಂಗಳಿಗೆ ರೂ. 1.36ಲಕ್ಷದಷ್ಟು ಸಂಬಳ ಕೊಡುವುದಾಗಿ ಹೇಳಿದೆಯಂತೆ. ಇಸ್ರೇಲಿ ಸರಕಾರ ಈ ಒಪ್ಪಂದದ ಬಗ್ಗೆ ಮಾತಾಡಲು ಇಚ್ಛಸುತ್ತಿಲ್ಲಅದನ್ನು ಅಪಾರದರ್ಶಕವಾಗಿ ಇಡಲು ಪ್ರಯತ್ನಿಸುತ್ತಿದೆ. ಆದರೆ ಭಾರತದಲ್ಲಿ (ಬಿಜೆಪಿ) ಸರಕಾರಗಳು ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿಗಳು, ಸಾಮಾಜಿಕ ಮಾಧ್ಯಮಗಳು , ಜಾಹೀರಾತುಗಳು ಇತ್ಯಾದಿಗಳ ಮೂಲಕ ಹೆಚ್ಚೆಚ್ಚು ಕಾರ್ಮಿಕರು ಇಸ್ರೇಲಿಗೆ ಹೋಗಲು ಮುಂದೆ ಬರುವಂತೆ ಪ್ರೋತ್ಸಾಹಿಸುತ್ತಿದೆ ಎಂದು ವರದಿಯಾಗಿದೆ( ದಿ ವೈರ್, ಜನವರಿ 29).
ಜಲಾಂವು ಜಿಲ್ಲೆಯ ಕೆಳ ಮಧ್ಯಮ ಕುಟುಂಬದಿಂದ ಬಂದಿರುವ ದೀಪಕ್ ಕುಮಾರ್ ಎಂಬಾತ “ಇಲ್ಲಿ ಉದ್ಯೋಗವಿಲ್ಲದ ನನಗೆ 1ಲಕ್ಷ 36 ಸಾವಿರ ರೂ. ಒಂದುದೊಡ್ಡ ಮೊತ್ತ. ಇಲ್ಲಿ ಮನೆಯಲ್ಲಿ ನಿರುದ್ಯೋಗಿಯಾಗಿ ಇರುವುದಕ್ಕಿಂತ ಅಪಾಯದ ವಲಯದಲ್ಲಿ ಇರುವುದು ವಾಸಿ” ಎಂದು ಹೇಳಿದ್ದಾನೆ. ಎಷ್ಟೇ ಪ್ರಯತ್ನಿಸಿದರೂ ನನಗೆ ಯಾವ ಕೆಲಸವೂ ಸಿಗಲಿಲ್ಲವಾದ್ದರಿಂದ ಹೋಗುತ್ತಿದ್ದೇನೆ, ಇಸ್ರೇಲಿನಿಂದ ಬಂದ ಮೇಲೆ ಉಳಿಸಿದ ಹಣದಿಂದ ಇಲ್ಲೇ ಬಿಸಿನೆಸ್ ಮಾಡ್ತೇನೆ ಎಂದಿದ್ದಾನೆ.
ಈ ಕೆಲಸದ ಶರತ್ತುಗಳ ಬಗ್ಗೆ ಏನೂ ಗೊತ್ತಿಲ್ಲ, ಯಾರೂ ಏನೂ ಹೇಳಿಲ್ಲ, ಆದರೆ ಕೆಲಸ ಸಿಗುವ ಭರವಸೆ ಇದೆ, ಇಲ್ಲಿ 8000-10000 ಅಷ್ಟೇ ಸಿಗುತ್ತದೆ, ಬೆಲೆಯೇರಿಕೆ ಎದುರು ಇದು ಏನೇನೂ ಸಾಲದು ಎಂದು ಬಡಗಿ ಕೆಲಸಕ್ಕೆ ಅರ್ಜಿ ಹಾಕಿರುವ ಆಶೀಷ್ ಮಿಶ್ರ ಹೇಳುತ್ತಾನೆ.
ಇಸ್ರೇಲಿನಲ್ಲಿ ತೀವ್ರ ಜೀವಾಪಾಯ ಇದೆ ಎಂದು ಗೊತ್ತು, ಆದರೆ ಬಡತನಕ್ಕಿಂತ ದೊಡ್ಡ ಅಪಾಯ ಬೇರೇನಿದೆ ಎಂದು ಕೇಳುತ್ತಾನೆ ಈ ಮೊದಲು ಕತಾರ್ ಲ್ಲಿ ಕೆಲಸ ಮಾಡಿ ಈಗ ನಿರುದ್ಯೋಗಿಯಾಗಿರುವ ಸತೀಶ ಯಾದವ್.
ಈ ಹಿನ್ನೆಲೆಯಲ್ಲಿ ನಿರುದ್ಯೋಗ ಮತ್ತು ಕಡಿಮೆ ಮಟ್ಟದ ಕೂಲಿ/ಸಂಬಳ ಭಾರತದಲ್ಲಿ ಕಾರ್ಮಿಕರ ಹತಾಶೆಯ ಹಿಂದಿದೆ ಎಂಬುದು ಸ್ವಯಂವೇದ್ಯ ಎಂದು ಮೇಲೆ ಉಲ್ಲೇಖಿಸಿದ ಅರ್ಥಶಾಸ್ತ್ರಜ್ಞರು ಹೇಳಿರುವುದನ್ನು ಒಪ್ಪದಿರಲು ಸಾಧ್ಯವಿಲ್ಲ.
19ನೇ ಶತಮಾನದಲ್ಲಿ ಬ್ರಿಟಿಶ್ ವಸಾಹುಶಾಹಿಗಳು ಕೆರೇಬಿಯನ್ ದೇಶಗಳಿಗೆ ಕಳಿಸಿದ ಬಡ ಭಾರತೀಯ ಕಾರ್ಮಿಕರು ಪಟ್ಟ ಪಾಡುಗಳ ಬಗ್ಗೆ ಹಲವಾರು ದೂರು, ಆಕ್ರೋಶಗಳನ್ನು ಎದುರಿಸಿದ ವಸಾಹತುಶಾಹಿ ಆಳ್ವಿಕೆಯ ವಸಾಹತು ಕಾರ್ಯದರ್ಶಿ ಬಡಕಾರ್ಮಿಕರನ್ನು ಕಳಿಸುವುದನ್ನು ನಿಲ್ಲಿಸಬೇಕು, ಅಥವ ಇದರಲ್ಲಿ ಸರಕಾರ ಭಾಗಿಯಾಗುವುದನ್ನಾದರೂ ತಡೆಯಬೇಕು ಎಂದು 1910ರಲ್ಲಿ ಸಲಹೆ ಮಾಡಿದ್ದರಂತೆ. ಕೊನೆಗೂ 1915ರಲ್ಲಿ ಇದು ಜಾರಿಗೆ ಬಂತು.
ಆದರೆ ಈಗ ದೇಶದ ಅರ್ಥವ್ಯವಸ್ಥೆ ಅದ್ಭುತ ಪ್ರಮಾಣದಲ್ಲಿ ಬೆಳೆಯುತ್ತಿದೆ, ಇನ್ನೇನು 5 ಟ್ರಿಲಿಯನ್ ಡಾಲರ್ ಮಟ್ಟ ತಲುಪಿ, ಮೂರನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಲಿದೆ ಎಂದು ಡಂಗುರ ಸಾರುತ್ತಿರುವ ಬಿಜೆಪಿಯ ‘ದೇಶಭಕ್ತ’ ಸರಕಾರವೇ ಅದನ್ನು ಮತ್ತೆ ಆರಂಭಿಸುತ್ತಿರುವಂತೆ ಕಾಣುತ್ತದೆ.
ಮತ್ತೊಂದು ಮುಖ
ಇಷ್ಟೇ ಅಲ್ಲ, ಭಾರತದ ‘ದೇಶಭಕ್ತರು’ ಎಂದೆನಿಸಿಕೊಳ್ಳುವವರು ಬಾಂಗ್ಲಾದೇಶೀ, ರೊಹಿಂಗ್ಯಾ ಇತ್ಯಾದಿ ‘ಕಾನೂನುಬಾಹಿರ ವಲಸೆಗಾರರ’ ವಿರುದ್ಧ ಹರಿಹಾಯುತ್ತಿರುವಾಗ, ಅಕ್ಟೋಬರ್ 2022ರಿಂದ ಸಪ್ಟಂಬರ್ 2023ರ ನಡುವೆ 96917 ಭಾರತೀಯರು ಕಾನೂನುಬಾಹಿರವಾಗಿ ಅಮೆರಿಕವನ್ನು ಪ್ರವೇಶಿಸಿದ್ದಾರೆ ಎಂದು ಅಲ್ಲಿನ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ದತ್ತಾಂಶಗಳು ಹೇಳುತ್ತಿವೆಯಂತೆ. ಕಳೆದ ತಿಂಗಳಷ್ಟೇ 303 ಭಾರತೀಯರಿದ್ದ ಒಂದು ವಿಮಾನವನ್ನು ಪ್ಯಾರಿಸಿನಲ್ಲಿ ತಡೆಹಿಡಿದು, ವಾಪಾಸು ಕಳಿಸಿದ ಘಟನೆ ವರದಿಯಾಗಿದೆ. ಇವರು ದುಬಾಯಿ ಮೂಲಕ ನಿಕರಗುವಕ್ಕೆ ಹೋಗಿ ಅಮೆರಿಕಾಕ್ಕೆ ಕಾನೂನುಬಾಹಿರವಾಗಿ ಪ್ರವೇಶಿಸಲು ಹೊರಟವರು ಎಂಬ ಗುಮಾನಿಯ ಮೇಲೆ ಹೀಗೆ ಮಾಡಲಾಯಿತು. ಇವರಲ್ಲಿ 96 ಮಂದಿ ಗುಜರಾತಿನವರು, ಅವರಲ್ಲಿ ಕೆಲವರು ತಮ್ಮ ‘ಮಾದರಿ ರಾಜ್ಯ’ಕ್ಕೆ ಹಿಂದಿರುಗಲು ನಿರಾಕರಿಸಿದರು ಎಂದೂ ವರದಿಯಾಗಿದೆ.
ಇದು ಒಂದು ಬಗೆಯ ಕತೆಯಾದರೆ, ಇನ್ನೊಂದೆಡೆಯಲ್ಲಿ ಸರಕಾರ ಸಂಸತ್ತಿಗೆ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಈ ಪರಮ ದೇಶಭಕ್ತ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವ ಸರಕಾರದ ಆಳ್ವಿಕೆಯ ಕಳೆದ 9 ವರ್ಷಗಳಲ್ಲಿ, 15,06,724 ಭಾರತೀಯ ನಾಗರಿಕರು ತಮ್ಮ ಭಾರತೀಯ ನಾಗರಿಕತ್ವವನ್ನು ತ್ಯಜಿಸಿದ್ದಾರೆ. ಸ್ವತಂತ್ರ ಭಾರತದ ಅಮೃತ ವರ್ಷದಲ್ಲಂತೂ (2022ರಲ್ಲಿ) 2ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಭಾರತೀಯ ನಾಗರಿಕತ್ವವನ್ನು ಬಿಟ್ಟುಕೊಟ್ಟಿದ್ದಾರೆ!
ಇನ್ನೇನು ಐದು ಟ್ರಿಲಿಯನ್ ಡಾಲರ್ ಮಟ್ಟಕ್ಕೇರಿ ಜಗತ್ತಿನ ಮೂರನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಲಿದೆ ಎಂದು ದಿನಬೆಳಗಾದರೆ ಬೆನ್ನು ತಟ್ಟಿಕೊಳ್ಳುತ್ತಿರುವ ಅರ್ಥವ್ಯವಸ್ಥೆಗೆ ತನ್ನ ಕಾರ್ಮಿಕರಿಗೆ ಒಂದು ಘನತೆಯ ಬದುಕು ಒದಗಿಸಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.
ಇಸ್ರೇಲಿಗೆ ಮೇಸ್ತ್ರಿಗಳು, ಪೇಂಟರ್‌ಗಳು, ಎಲೆಕ್ಟ್ರಿಷಿಯನ್‌ಗಳು, ಪ್ಲಂಬರ್‌ಗಳು ಬೇಕಂತೆ. ಅವರ ಬೇಡಿಕೆಗಳನ್ನು ಪೂರೈಸುವ ಒಪ್ಪಂದವನ್ನು ಮಾಡಿಕೊಂಡಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವಾಗಲೀ, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿಯಾಗಲೀ ಈ ಕಾರ್ಮಿಕರ ಸುರಕ್ಷತೆ, ಸಾಮಾಜಿಕ ಭದ್ರತೆ ಮತ್ತು ಇತರ ಕನಿಷ್ಟ ಕಾರ್ಮಿಕ ರಕ್ಷಣೆ ಸೇರಿದಂತೆ ಕಾರ್ಮಿಕರ ಭವಿಷ್ಯ ಮತ್ತು ಸುರಕ್ಷತೆಯ ಬಗ್ಗೆ ಯಾವುದೇ ಜವಾಬ್ದಾರಿಯನ್ನು ವಹಿಸುವುದಿಲ್ಲ. ಅದೇ ಸಮಯದಲ್ಲಿ ಸಚಿವಾಲಯ ಇಸ್ರೇಲಿನಲ್ಲಿ ಉದ್ಯೋಗಗಳಿಗೆ ಅಗತ್ಯವಿರುವ ಕೌಶಲ್ಯಗಳನ್ನು ಬೆಳೆಸುವ ಶುಲ್ಕದ ಹೆಸರಿನಲ್ಲಿ ನಿರುದ್ಯೋಗಿ ಯುವಕರಿಂದ ರೂ.10000 ಲೂಟಿ ಮಾಡುತ್ತಿದೆ ಎಂದು ಸಿಐಟಿಯು ಆಕ್ರೋಶ ವ್ಯಕ್ತಪಡಿಸಿದೆ.
ಇದಷ್ಟೇ ಅಲ್ಲ, ನರಹತ್ಯೆಯ ಯುದ್ಧದಲ್ಲಿ ಮುಳುಗಿರುವ ದೇಶಕ್ಕೆ ಅಗ್ಗದ ಶ್ರಮಶಕ್ತಿಯನ್ನು ಒದಗಿಸುವ ಭಾರತ ಸರ್ಕಾರದ ಈ ನಡೆಯು ವಿಶ್ವಸಂಸ್ಥೆಯ ಎರಡು ರಾಷ್ಟ್ರಗಳ ನಿರ್ಣಯ ಮತ್ತು ಯುದ್ಧವಿರಾಮದ ನಿರ್ಣಯ ಇವೆರಡಕ್ಕೂ ಮತ್ತು ಪ್ಯಾಲೆಸ್ಟೈನನ್ನು ಸ್ವತಂತ್ರ ಸಾರ್ವಭೌಮ ರಾಷ್ಟ್ರವೆಂದು ಗುರುತಿಸುವ ಭಾರತದ ವಿದೇಶಾಂಗ ನೀತಿಗೂ ತದ್ವಿರುದ್ಧವಾಗಿದೆ. ಇದು ಅಮಾನುಷ ಝಿಯೋನಿಸ್ಟ್ ನರಮೇಧದ ಯುದ್ಧಕೋರ ಇಸ್ರೇಲಿನ ಬೆಂಬಲಕ್ಕೆ ನಿಲ್ಲುವ , ಮತ್ತು ಭಾರತೀಯ ಕಾರ್ಮಿಕರ ಜೀವಗಳನ್ನು ಪಣಕ್ಕಿಡುವ ಕೃತ್ಯವಾಗಿದೆ, ಈ ಅಮಾನವೀಯ ನಡೆಯನ್ನು ನಿಲ್ಲಿಸಬೇಕು ಎಂದು ಸಿಐಟಿಯು ಆಗ್ರಹಿಸಿದೆ.
ಈ ವಿಡಿಯೋ ನೋಡಿ : ದೇಶವನ್ನು ಆಳವಾಗಿ ಘಾಸಿಗೊಳಿಸಿದ ಎರಡು ಘಟನೆಗಳು Janashakthi Media