ಬೆಂಗಳೂರು: ಅನಾರೋಗ್ಯದಿಂದಾಗಿ ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ನಟ ಸತ್ಯಜಿತ್ (72) ಭಾನುವಾರ ಮುಂಜಾನೆ 2 ಗಂಟೆಗೆ ನಿಧನರಾದರು.
ವಾರದ ಹಿಂದಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದರು.
ಅವರಿಗೆ ಪುತ್ರಿ ಹಾಗೂ ಪುತ್ರ ಇದ್ದಾರೆ. ಪುತ್ರಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಉದ್ಯೋಗಿ. ಪುತ್ರ ಚಿತ್ರರಂಗದಲ್ಲಿ ತೊಡಗಿದ್ದಾರೆ.
ವಯೋಸಹಜ ಆರೋಗ್ಯದ ಸಮಸ್ಯೆಗಳ ಜೊತೆ 2016ರಲ್ಲಿ ಗ್ಯಾಂಗ್ರಿನ್‌ಗೆ ತುತ್ತಾಗಿ ಒಂದು ಕಾಲನ್ನು ಸತ್ಯಜಿತ್ ಕಳೆದುಕೊಂಡರು. ಬಳಿಕವೂ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದರು.
ಸತ್ಯಜಿತ್ 1986ರಲ್ಲಿ ಬಿಡುಗಡೆಯಾದ ‘ಅಂಕುಶ್’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟರು. ಮುಂದೆ ಮೈಸೂರು ಜಾಣ (1992) ಅವರಿಗೆ ಚಂದನವನದಲ್ಲಿ ನೆಲೆಯೂರಲು ಬ್ರೇಕ್ ಕೊಟ್ಟ ಸಿನಿಮಾ. ‘ಪುಟ್ನಂಜ’, ‘ಶಿವಮೆಚ್ಚಿದ ಕಣ್ಣಪ್ಪ’, ‘ಚೈತ್ರದ ಪ್ರೇಮಾಂಜಲಿ’, ‘ಆಪ್ತಮಿತ್ರ’ ಚಿತ್ರಗಳಲ್ಲಿ ಅಭಿನಯದ ಮೂಲಕ ಜನಪ್ರಿಯತೆ ಗಳಿಸಿದರು. ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ಸತ್ಯಜಿತ್ ನಟಿಸಿದ್ದಾರೆ.
ಕೈ ಬೀಸಿ ಕರೆದ ಬಾಲಿವುಡ್ : ಸತ್ಯಜಿತ್ ಯಾವುದೇ ಫಿಲ್ಮೀ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ಮೂರೂವರೆ ದಶಕಗಳ ಹಿಂದೆ ಅವರು ಹುಬ್ಬಳ್ಳಿಯಲ್ಲಿ ಬಸ್ ಡ್ರೈವರ್ ಆಗಿದ್ದರು. ಕೆಎಸ್ಆರ್ಟಿಸಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗಲೇ ಅವರಿಗೆ ನಟನೆ ಬಗ್ಗೆ ಅಪಾರ ಪ್ರೀತಿ ಇತ್ತು. ಹಾಗಾಗಿ ಹವ್ಯಾಸಿ ನಾಟಕ ತಂಡಗಳ ಜೊತೆ ಗುರುತಿಸಿಕೊಂಡಿದ್ದರು. ಅನೇಕ ಊರುಗಳಿಗೆ ತೆರಳಿ ಹಲವು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಆ ಮೂಲಕ ಅವರಿಗೆ ಬಣ್ಣದ ಸಹವಾಸ ಅಂಟಿಕೊಂಡಿತು. ಅದು ಅವರನ್ನು ಬಾಲಿವುಡ್ವರೆಗೆ ಕರೆದುಕೊಂಡು ಹೋಯಿತು ಎಂಬುದೇ ಅಚ್ಚರಿ.
ಬೇರೆ ಬೇರೆ ಊರುಗಳಲ್ಲಿ ನಡೆಯುತ್ತಿದ್ದ ನಾಟಕ ಸ್ಪರ್ಧೆಗಳಲ್ಲಿ ಸತ್ಯಜಿತ್ ಅವರ ತಂಡ ಕೂಡ ಭಾಗವಹಿಸುತ್ತಿತ್ತು. ಒಮ್ಮೆ ಅವರು ಮುಂಬೈನಲ್ಲಿ ನಾಟಕ ಪ್ರದರ್ಶನ ನೀಡಿದರು. ಆಗ ಅವರಿಗೆ ಬಾಲಿವುಡ್ ನಟ ನಾನಾ ಪಾಟೇಕರ್ ಪರಿಚಯ ಆಯಿತು. ಆ ಪರಿಚಯದಿಂದಾಗಿ ಹಿಂದಿಯ ‘ಅಂಕುಶ್’ ಸಿನಿಮಾದಲ್ಲಿ ನಟಿಸಲು ಸತ್ಯಜಿತ್ ಅವರಿಗೆ ಅವಕಾಶ ಸಿಕ್ಕಿತು. ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಕೂಡ ಆಯಿತು. ಅದರಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದ ಸತ್ಯಜಿತ್ಗೆ ಜೀವನದಲ್ಲಿ ಹೊಸ ದಾರಿ ಕಾಣುವಂತಾಯಿತು.
ಮೂಲ ಹೆಸರು ಸಯ್ಯದ್ ನಿಜಾಮುದ್ದೀನ್: ಸತ್ಯಜಿತ್ ಅವರ ಮೂಲ ಹೆಸರು ಸಯ್ಯದ್ ನಿಜಾಮುದ್ದೀನ್. ಆದರೆ ಚಿತ್ರರಂಗಕ್ಕೆ ಕಾಲಿಟ್ಟಾಗ ಅವರು ಹೆಸರು ಬದಲಾಯಿಸಿಕೊಂಡರು. ಸತ್ಯಜಿತ್ ಎಂಬ ಹೆಸರಿನಿಂದಲೇ ಅವರು ಫೇಮಸ್ ಆದರು. ಗಡಿಬಿಡಿ ಗಂಡ, ಮನೆ ದೇವ್ರು, ಶಿವಮೆಚ್ಚಿದ ಕಣ್ಣಪ್ಪ, ಮಂಡ್ಯದ ಗಂಡು, ಪೊಲೀಸ್ ಸ್ಟೋರಿ, ಅಪ್ಪು, ಅಭಿ, ಆಪ್ತಮಿತ್ರ ಮುಂತಾದ ಸಿನಿಮಾಗಳಲ್ಲಿ ನಟಿಸಿ ಅವರು ಕನ್ನಡ ಸಿನಿಪ್ರಿಯರನ್ನು ರಂಜಿಸಿದ್ದರು.