ಹಿಂದುತ್ವ ಭಯೋತ್ಪಾದನೆಗೆ ರಕ್ಷಾ ಕವಚ

ಪ್ರಕಾಶ ಕಾರಟ್ – ಪಿ.ಡಿ. ಸಂಪಾದಕೀಯ

ಸಂಪುಟ – 9 ಸಂಚಿಕೆ – 28 ಜುಲೈ 12, 2015


 

ಹಿಂದುತ್ವ ಭಯೋತ್ಪಾದಕರ ದಾಳಿಗಳಲ್ಲಿ ಸತ್ತ ಹತ್ತಾರು ಮುಸ್ಲಿಮರು ಮತ್ತು ಅವರ ಕುಟುಂಬದವರಿಗೆ  ನ್ಯಾಯ ಸಿಗುವುದಿಲ್ಲ ಎಂಬ ಸಂದೇಶ ಹೋಗುವಂತಾಗಿದೆ. ಹಿಂದುತ್ವ ಮತಾಂಧರಿಗೂ ಸಂದೇಶ ಸ್ಪಷ್ಟವಾಗಿದೆ, ಅವರಿಗೆ  ಒಂದು ರಕ್ಷಣಾ ಕವಚ ನೀಡುವ ಸರಕಾರ ಇಗೋ ಇಲ್ಲಿದೆ ಎಂಬ ಸಂದೇಶ.

 

2008ರ ಮಾಲೇಗಾಂವ್ ಸ್ಫೋಟದ ಮೊಕದ್ದಮೆಯ ಎಸ್‌ಪಿಪಿ(ಸ್ಪೆಶಲ್ ಪಬ್ಲಿಕ್ ಪ್ರೊಸಿಕ್ಯೂಟರ್-ವಿಶೇಷ ಸರಕಾರೀ ವಕೀಲರು) ರೋಹಿಣಿ ಸಾಲ್ಯಾನ್ ಹೊರಗೆಡಹಿರುವ ಸಂಗತಿ ಅತ್ಯಂತ ಗಂಭೀರ ಮತ್ತು ಆತಂಕಕಾರಿ ಪರಿಣಾಮಗಳನ್ನು ಉಂಟು ಮಾಡುವಂತದ್ದು.

ಶ್ರೀಮತಿ ಸಾಲ್ಯಾನ್ ಪ್ರಕಾರ ಎನ್‌ಐಎ(ನ್ಯಾಶನಲ್ ಇನ್ವೆಸ್ಟಿಗೇಶನ್ ಏಜೆನ್ಸಿ-ರಾಷ್ಟ್ರೀಯ ತನಿಖಾ ಸಂಸ್ಥೆ)ಯ ಒಬ್ಬ ಅಧಿಕಾರಿ ಅವರನ್ನು ಭೇಟಿಯಾಗಿ ಈ ಮೊಕದ್ದಮೆಯಲ್ಲಿ ನಯವಾಗಿ ವರ್ತಿಸಿರಿ ಎಂದರು. ನಂತರ ಈ ಮೊಕದ್ದಮೆಯಲ್ಲಿ ಅವರು ಎನ್‌ಐಎ ಪರವಾಗಿ ವಾದಿಸಬೇಕಾಗಿಲ್ಲ ಎಂದು ತಿಳಿಸಲಾಯಿತು.

ಎರಡನೇ ಮಾಲೇಗಾಂವ್ ಸ್ಫೋಟ ನಾಲ್ವರು ಮುಸ್ಲಿಮರನ್ನು ಸಾಯಿಸಿತ್ತು, 79 ಮಂದಿ ಗಾಯಗೊಂಡಿದ್ದರು.  ಈ ಭಯೋತ್ಪಾದಕ ದಾಳಿಗೆ ಒಂದು ಹಿಂದುತ್ವ ಉಗ್ರಗಾಮಿ ಗುಂಪು ಹೊಣೆ ಎಂದು ಹೇಮಂತ ಕರ್ಕರೆ ನೇತೃತ್ವದ ಮಹಾರಾಷ್ಟ್ರ ಭಯೋತ್ಪಾದನಾ-ವಿರೋಧಿ  ತಂಡ(ಎಟಿಎಸ್)ದ ವಿಚಾರಣೆಯಿಂದ ಕಂಡು ಬಂದಿತ್ತು. ಈ ತನಿಖೆಯಿಂದ ಪ್ರಜ್ಞಾ ಠಾಕುರ್, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಮತ್ತು ಮತ್ತಿತರನ್ನು ಬಂಧಿಸಲಾಯಿತು,

ನಂತರ ಈ ಜಾಲದ ಕೊಂಡಿಗಳು ಮಾಲೆಗಾಂವ್(2006), ಮಕ್ಕಾ ಮಸೀದಿ(2007), ಅಜ್ಮೇರ್ ಶರೀಫ್(2007), ಸಂಝೌತಾ ಎಕ್ಸ್‌ಪ್ರೆಸ್(2007) ಮತ್ತು ಮೋಡಸ(2008) ಸ್ಫೋಟಗಳಲ್ಲಿ ಬೆಳಕಿಗೆ ಬಂದವು. ಜಾಲ ವಿಸ್ತಾರಗೊಂಡಿತು, ಒಬ್ಬ ಆರೆಸ್ಸೆಸ್-ವಿಹೆಚ್‌ಪಿಯ ಪ್ರೀತಿಯ ’ಸ್ವಾಮಿ’ ಅಸೀಮಾನಂದ ಸಿಕ್ಕಿ ಬಿದ್ದ. ಮಾಲೇಗಾಂವ್, ಮಕ್ಕಾ ಮಸೀದಿ ಮತ್ತು ಅಜ್ಮೇರ್ ಶರೀಫ್ ಸ್ಫೋಟಗಳಲ್ಲಿ ಹಲವು ಮುಸ್ಲಿಂ ಯುವಕರನ್ನು ಸುಳ್ಳು ಆಪಾದನೆಯ ಮೇಲೆ  ಬಂಧಿಸಲಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಆಗ ಬಿಜೆಪಿ ಮತ್ತು ಆರೆಸ್ಸೆಸ್‌ನವರು ಪ್ರಜ್ಞಾ ಠಾಕುರ್ ಮತ್ತು ಇತರರ ಬಂಧನವನ್ನು ಖಂಡಿಸಿತ್ತು, ಹಿಂದು ’ಸಂತ’ರ ಹೆಸರು ಕೆಡಿಸಲಾಗುತ್ತಿದೆ, ಅವರನ್ನು ಸುಳ್ಳು-ಸುಳ್ಳೇ ಬಂಧಿಸಲಾಗುತ್ತಿದೆ ಎಂದು ದಾವೆ ಮಾಡಿತ್ತು. ಮೋದಿ ಸರಕಾರ ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ಎನ್‌ಐಎ ಈ ಮೊಕದ್ದಮೆಗಳ ವಿಚಾರಣೆಯನ್ನು ನಿಧಾನಗೊಳಿಸುತ್ತದೆ, ಅವನ್ನು ತಪ್ಪಿಸಲು ಪ್ರಯತ್ನಿಸುತ್ತದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿತ್ತು. ರೋಹಿಣಿ ಸಾಲ್ಯಾನ್ ಈಗ ಧೈರ್ಯದಿಂದ ಹೊರಗೆಡಹಿರುವ ಸಂಗತಿ ಭಯೋತ್ಪಾದಕ ಅಪರಾಧಗಳನ್ನು ಎಸಗಿದವರನ್ನು ರಕ್ಷಿಸುವ ಈ ದುಷ್ಟ ಪ್ರಯತ್ನವನ್ನು ದೃಢಪಡಿಸಿದೆ. ಸಂಘ ಕೂಟದ ವಿಕೃತ ತರ್ಕದ ಪ್ರಕಾರ ಮುಸ್ಲಿಮರು ಮಾತ್ರವೇ ಭಯೋತ್ಪಾದಕರಾಗಬಲ್ಲರು, ಹಿಂದುಗಳಲ್ಲ.

ಮೋದಿ ಸರಕಾರ ಪ್ರಭುತ್ವ ಭಯೋತ್ಪಾದನೆಯನ್ನೂ ರಕ್ಷಿಸಲು ಮುಂದಡಿಯಿಟ್ಟಿದೆ. ಇಷ್ರತ್ ಜಹಾಂ ಪ್ರಕರಣ ಗುಜರಾತಿನಲ್ಲಿ ಪ್ರಭುತ್ವದ ಸಂಸ್ಥೆಗಳು ಎಸಗಿದ ಒಂದು ಕಗ್ಗೊಲೆ ಎಂಬುದು ಸಾಬೀತಾಗಿದೆ. ಸುಪ್ರಿಂ ಕೋರ್ಟ್ ಆದೇಶದ ಮೇರೆಗೆ ನಡೆದ ಸಿಬಿಐ ತನಿಖೆ ಗುಜರಾತ್ ಪೋಲೀಸ್ ಸಿಬ್ಬಂದಿಯಲ್ಲದೆ, ಕೆಲವು ಗುಪ್ತಚರ ಪಡೆಗಳ ಆಧಿಕಾರಿಗಳೂ ಇದರಲ್ಲಿ  ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಕಂಡು ಹಿಡಿದಿದೆ. ಸಿಬಿಐ ನಿಯಮಗಳ ಪ್ರಕಾರ ಕೇಂದ್ರೀಯ ಸಂಸ್ಥೆಯ ಈ ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೇಳಿತು. ಕೇಂದ್ರ ಗ್ರಹ ಮಂತ್ರಾಲಯ ಅನುಮತಿಯನ್ನು ನಿರಾಕರಿಸಿದೆ. ಇದರೊಂದಿಗೆ ಇಷ್ರತ್ ಕೊಲೆ ಮೊಕದ್ದಮೆ ಕುಂಠಿತಗೊಂಡಿದೆ. ಆಗಿನ ಗುಜರಾತಿನ ಮೋದಿ ಸರಕಾರಕ್ಕೆ ಕಳಂಕ  ಹಚ್ಚಿದ ಈ ಮೊಕದ್ದಮೆಯನ್ನು ವಿಫಲಗೊಳಿಸುವ ಒಂದು ದಾರಿಯನ್ನು ಬಿಜೆಪಿ ಕಂಡು ಕೊಂಡಿದೆ.

ಭಯೋತ್ಪಾದನೆಯ ಬಗ್ಗೆ ಸರಕಾರದ ಕೋಮುವಾದಿ ಕಣ್ಣೋಟ ಮತ್ತು ಹಿಂದುತ್ವ ಭಯೋತ್ಪಾದನಾ ದಾಳಿಗಳಿಗೆ ಸಂಬಂಧಪಟ್ಟಂತೆ  ಇಂತಹ ಕೈಚಳಕ ಒಂದು ಅಶುಭ ಸೂಚನೆಯಾಗಿದೆ. ಈ ದಾಳಿಗಳಲ್ಲಿ ಸತ್ತ ಹತ್ತಾರು ಮುಸ್ಲಿಮರು ಮತ್ತು ಅವರ ಕುಟುಂಬದವರಿಗೆ   ನ್ಯಾಯ ಸಿಗುವುದಿಲ್ಲ ಎಂಬ ಸಂದೇಶ ಹೋಗುವಂತಾಗಿದೆ. ಹಿಂದುತ್ವ ಮತಾಂಧರಿಗೂ ಸಂದೇಶ ಸ್ಪಷ್ಟವಾಗಿದೆ, ನಿಜ, ಅದೊಂದು ಭಿನ್ನ ಸಂದೇಶ, ಒಂದು ರಕ್ಷಣಾ ಕವಚ ನೀಡುವ ಸರಕಾರ ಇಗೋ ಇಲ್ಲಿದೆ ಎಂಬ ಸಂದೇಶ.

rohini-salian-lead1

ರೋಹಿಣಿ ಸಾಲ್ಯಾನ್ ಧೈರ್ಯದಿಂದ ಹೊರಗೆಡಹಿರುವ ಸಂಗತಿ ಭಯೋತ್ಪಾದಕ ಅಪರಾಧಗಳನ್ನು ಎಸಗಿದವರನ್ನು ರಕ್ಷಿಸುವ ದುಷ್ಟ ಪ್ರಯತ್ನವನ್ನು ದೃಢಪಡಿಸಿದೆ.

Donate Janashakthi Media

Leave a Reply

Your email address will not be published. Required fields are marked *