ಸೆಂಗೋಲ್‌ಗೆ ಕೃತಜ್ಞತೆಯಾಗಿ ತಮಿಳುನಾಡು 25 ಎನ್‍ಡಿಎ ಸಂಸದರನ್ನು ಆರಿಸಬೇಕು! -ಷಾ ಕೋರಿಕೆ

 ಚೆನ್ನೈ : ಜೂನ್ 11 ರಂದು ತಮಿಳುನಾಡಿನ ವೆಲ್ಲೂರು ನಗರದಲ್ಲಿ ಬಿಜೆಪಿ ನಡೆಸಿದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತ ಕೇಂದ್ರ ಗೃಹ ಸಚಿವರು 2024ರಲ್ಲಿ ಮತ್ತೊಮ್ಮೆ 300 ಸ್ಥಾನಗಳೊಂದಿಗೆ ನರೇಂದ್ರ ಮೋದಿ ಸರ್ಕಾರ ರಚನೆಯಾಗಲಿದೆ, ತಮಿಳುನಾಡಿನ ಹೊಸ ಸಂಸತ್‍ ಭವನದಲ್ಲಿ ಸೆಂಗೋಲ್ ಅನ್ನು ಸ್ಥಾಪಿಸಿದ್ದಕ್ಕಾಗಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಲು ನೀವು 25 ಸಂಸದರನ್ನು ಸಂಸತ್ತಿಗೆ ಆಯ್ಕೆ ಮಾಡಬೇಕೆಂದು ವಿನಂತಿಸಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿರುವುದಾಗಿ ವರದಿಯಾಗಿದೆ.

ತಮಿಳುನಾಡಿನ ಒಂದು ಶೈವ ಮಠದವರು 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯದ ಘೋಷಣೆಯಾದಾಗ,  ಸ್ವತಂತ್ರ ದೇಶದ ಮೊದಲ ಪ್ರಧಾನಿಯಾಗಲಿದ್ದ ನೆಹರೂರವರಿಗೆ ಕೊಡುಗೆಯಾಗಿ ಕೊಟ್ಟಿದ್ದರೆನ್ನಲಾದ ಚೋಳ ರಾಜವಂಶದ ರಾಜದಂಡವನ್ನು ಹೋಲುವ ಸೆಂಗೋಲ್ ಬಗ್ಗೆ ಆಳುವ ಪಕ್ಷ ಮಾಡಿದ ಪ್ರಚಾರಕಾರ್ಯದಲ್ಲಿ ಮತ್ತು ಮೇ 28 ರಂದು ಪ್ರಸಕ್ತ ಪ್ರಧಾನಿಗಳು ಹೊಸ ಸಂಸತ್ತಿನ ಕಟ್ಟಡದಲ್ಲಿ ಅದನ್ನು ಪ್ರತಿಷ್ಠಾಪಿಸುವಾಗ ಹೇಳಿದ ಮಾತುಗಳಲ್ಲಿ ಅರೆಸತ್ಯಗಳೇ ತುಂಬಿದ್ದವು ಎಂದು ಈಗ ಸಾಕಷ್ಟು ಸ್ಪಷ್ಟವಾದ ನಂತರವೂ ಗೃಹಮಂತ್ರಿಗಳ ಈ ಹೇಳಿಕೆ ಈ ಸೆಂಗೋಲ್ ಪ್ರಚಾರದ ನಿಜ ಉದ್ದೇಶವೇನು ಎಂಬುದನ್ನು ಬಯಲಿಗೆಳೆದಿದೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ತಮಿಳು ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಮಾಡಬೇಕೆಂದು ಚೆನ್ನೈನಲ್ಲಿ ನಡೆದ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಅಮಿತ್ ಷಾ ಪ್ರಸ್ತಾಪಿಸಿದ್ದಾರೆ ಎಂದು ಕೂಡ ಪಿಟಿಐ ವರದಿ ಮಾಡಿದೆ.

ಆದರೆ ಅದು 2024ರಲ್ಲಂತೂ ಅಲ್ಲ ಎಂಬುದು ಸ್ಪಷ್ಟ. ಅವರು ಹೇಳಿದ 2024ರ 300 ಸ್ಥಾನಗಳಲ್ಲಿ ತಮಿಳುನಾಡಿನ 25 ಕೂಡ ಸೇರಿದೆಯೇ ಎಂಬುದೂ ಸ್ಪಷ್ಟವಾಗಿಲ್ಲ.ತಮಿಳುನಾಡಿನ ಮತದಾರರು 2019ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಯ ಕೇವಲ ಒಬ್ಬ ಸಂಸದನನ್ನು ಆರಿಸಿ ಕಳಿಸಿದರು. ಅವರು ಕೂಡ ಬಿಜೆಪಿಯವರಲ್ಲ, ಎಐಎಡಿಎಂಕೆ ಯವರು. ಆ ಪಕ್ಷದ ಮುಖಂಡರು ಷಾ ಅವರ ಕರೆಯ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ತನ್ನ ಮೈತ್ರಿಕೂಟದಲ್ಲಿ ಸೇರ್ಪಡೆಗೊಳ್ಳುವ ಪಕ್ಷಗಳನ್ನು ಎಐಎಡಿಎಂಕೆ ನಿರ್ಧರಿಸಲಿದೆ ಎಂದ ಆ ಪಕ್ಷದ ಹಿರಿಯ ನಾಯಕರೊಬ್ಬರು, ವಾಸ್ತವವಾಗಿ ಬಿಜೆಪಿ ತಮ್ಮ ನೇತೃತ್ವದ ಮೈತ್ರಿಕೂಟಕ್ಕೆ ಒಂದು ಹೊರೆಯೇ, ಏಕೆಂದರೆ ಅದರ ಅತಿ-ರಾಷ್ಟ್ರವಾದ ಮತ್ತು ಒಕ್ಕೂಟತತ್ವ-ವಿರೋಧಿ ಚಾರಿತ್ರ್ಯ ರಾಜ್ಯದ ಜನತೆಗೆ ಸರಿಬರುವುದಿಲ್ಲ ಎಂದಿರುವುದಾಗಿಯೂ ವರದಿಯಾಗಿದೆ.

ಅಲ್ಲದೆ ಸೆಂಗೋಲ್ ಪ್ರಾಚೀನ ಕಾಲದ  ಚೋಳ ರಾಜಪ್ರಭುತ್ವದ ಬ್ರಾಹ್ಮಣ್ಯದ ಮೌಲ್ಯಗಳಿಗೆ ಆದ್ಯತೆ ನೀಡುತ್ತಿದ್ದ  ನ್ಯಾಯವ್ಯವಸ್ಥೆಯ ಪ್ರತೀಕ, ಅಲ್ಲಿಂದ ತಮಿಳುನಾಡಿನ ಸಾಮಾಜಿಕ ಆಂದೋಲನ ಬಹಳ ದೂರ ಸಾಗಿ ಬಂದಿದೆ, ಹೀಗಿರುವಾಗ ಸೆಂಗೋಲ್ ಪ್ರತಿಷ್ಠಾಪಿಸಿದ್ದಕ್ಕಾಗಿ ರಾಜ್ಯದ ಮತದಾರರು ಬಿಜೆಪಿ ಸಂಸದರನ್ನು ಆರಿಸಬೇಕು ಎಂದು ಕೇಳುವುದು ರಾಜ್ಯದ ಚರಿತ್ರೆಯ ಬಗ್ಗೆ ಗೃಹಮಂತ್ರಿಗಳ ‘ಬೌದ್ಧಿಕ ಸಲಹೆ’ಗಾರರು ಅವರಿಗೆ ಸರಿಯಾದ ಮಾಹಿತಿ ಕೊಟ್ಟಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಒಬ್ಬ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ(ಉರ್ಮಿಲೇಶ್, ನ್ಯೂಸ್‍ ಕ್ಲಿಕ್, ಜೂನ್‍16)

ಈ ನಡುವೆ ಇದೇ ಕೇಂದ್ರ ಗೃಹಮಂತ್ರಿಗಳ ಅಡಿಯಲ್ಲಿರುವ ಇ.ಡಿ. ತಮಿಳುನಾಡಿನ ಮಂತ್ರಿಯೊಬ್ಬರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಬಗ್ಗೆ, ಮತ್ತು ಅಲ್ಲಿಯ ರಾಜ್ಯಪಾಲರು ಅವರನ್ನು ವಜಾ ಮಾಡಬೇಕೆಂದು ಸಂಸದೀಯ ನಡವಳಿಕೆಗೆ ವಿರುದ್ಧವಾಗಿ ಮುಂದಾಗಿರುವುದಕ್ಕೆ ಆ ರಾಜ್ಯದಲ್ಲಿ ಮತ್ತು ದೇಶದಲ್ಲಿಯೂ ವ್ಯಾಪಕ ವಿರೋಧ ವ್ಯಕ್ತವಾಗಿದೆ.

 

ಸಾಮ, ದಾನ, ಭೇದ, ದಂಡ

ತಮಿಳಗ ಪ್ರಧಾನಿ!

ಸೆಂಗೋಲ್‍ ಹೆಸರಲ್ಲಿ 25

ಲೋಕಸಭಾ ಸೀಟು ಕೊಡಿರಪ್ಪಾ..!

 ಇಡಿ, ಸಿಬಿಐ, ಐಟಿ

ನಮಗೆ 25 ಸೀಟುಗಳು ಬೇಕು

 

ವ್ಯಂಗ್ಯಚಿತ್ರ: ಸತೀಶ ಆಚಾರ್ಯ, ಸೌತ್‍ ಫಸ್ಟ್

 

Donate Janashakthi Media

Leave a Reply

Your email address will not be published. Required fields are marked *