ಹೊಸದಿಲ್ಲಿ: ಜಾರಿ ನಿರ್ದೇಶನಾಲಯವು (ಈಡಿ) ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಅವರ ಮನೆ ಹಾಗೂ ಕಚೇರಿಯ ಮೇಲೆ ಗುರುವಾರ ದಾಳಿ ನಡೆಸಿತು ಎಂದು ವರದಿಯಾಗಿದೆ.
ಅಡ್ಚಿನಿಯಲ್ಲಿರುವ ಅವರ ಕಚೇರಿ ಹಾಗೂ ವಸಂತ್ ಕುಂಜ್‌ನಲ್ಲಿರುವ ಅವರ ನಿವಾಸದ ಜೊತೆಗೆ, ಮೆಹ್ರೌಲಿಯಲ್ಲಿ ಕಾರ್ಯಕರ್ತರಿಂದ ನಡೆಸಲ್ಪಡುವ ಚಿಲ್ಡ್ರನ್ ಹೋಮ್ ಮೇಲೆಯೂ ಈಡಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಮಂದರ್ ತನ್ನ ಪತ್ನಿಯೊಂದಿಗೆ ಜರ್ಮನಿಗೆ ತೆರಳಿದ ಕೆಲವು ಗಂಟೆಗಳ ನಂತರ ದಾಳಿಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ವಸಂತ ಕುಂಜ್‌ನಲ್ಲಿರುವ ಅವರ ನಿವಾಸ ಮತ್ತು ಅಡ್ಚಿನಿಯಲ್ಲಿರುವ ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್ ಕಚೇರಿಯಲ್ಲಿ ಬೆಳಿಗ್ಗೆ 8 ಗಂಟೆಗೆ ದಾಳಿ ಆರಂಭವಾಯಿತು ಎಂದು ಮೂಲಗಳು ತಿಳಿಸಿವೆ.
ಗುರುವಾರ ಮುಂಜಾನೆ 3: 30 ರ ಸುಮಾರಿಗೆ ಮಂದರ್ ಅವರು ಬರ್ಲಿನ್‌ನ ರಾಬರ್ಟ್ ಬಾಷ್ ಅಕಾಡೆಮಿಯಲ್ಲಿ ಫೆಲೋಶಿಪ್‌ಗಾಗಿ ಜರ್ಮನಿಗೆ ತೆರಳಿದರು. ಅವರು ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚಿಂತಕರಿಂದ ಖಂಡನೆ : ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಅವರ ಮನೆ ಹಾಗೂ ಕಚೇರಿಗಳ ಸಹಿತ ನಗರದಲ್ಲಿರುವ ಹಲವು ಸ್ಥಳಗಳ ಮೇಲೆ ನಡೆಸಲಾದ ಜಾರಿ ನಿರ್ದೇಶನಾಲಯದ(ಈಡಿ) ದಾಳಿಯನ್ನು ವಿಪಕ್ಷಗಳು ಮತ್ತು ಸಾಮಾಜಿಕ ಹೋರಾಟಗಾರರು ಹಾಗೂ ಚಿಂತಕರು ಖಂಡಿಸಿದ್ದಾರೆ.
ಈ ದಾಳಿಗಳು ಸರಕಾರದ ಟೀಕಾಕಾರರನ್ನು ಮೌನವಾಗಿಸಲು “ಸರಕಾರಿ ಸಂಸ್ಥೆಗಳ ದುರುಪಯೋಗದ ಸರಣಿ” ಯ ಒಂದು ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
ಹೇಳಿಕೆಗೆ ಸಹಿ ಹಾಕಿದ 29 ಜನರಲ್ಲಿ ಸಾಮಾಜಿಕ ಹೋರಾಟಗಾರ್ತಿ ಅರುಣಾ ರಾಯ್, ಮಾಜಿ ಯೋಜನಾ ಆಯೋಗದ ಸದಸ್ಯೆ ಸೈಯಿದಾ ಹಮೀದ್, ಅರ್ಥಶಾಸ್ತ್ರಜ್ಞ ಜೀನ್ ಡ್ರೀಝ್, ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಡಿಯು ಪ್ರೊಫೆಸರ್ ಅಪೂರ್ವಾನಂದ್, ಮಹಿಳಾ ಹೋರಾಟಗಾರರಾದ ಕವಿತಾ ಕೃಷ್ಣನ್ ಮತ್ತು ಅನ್ನಿ ರಾಜಾ ಸೇರಿದಂತೆ ಇತರರು ಸೇರಿದ್ದಾರೆ.