ಮಂಗಳೂರು : ಡಿವೈಎಫ್ಐ ರಾಜ್ಯಸಮಿತಿ ಮಂಗಳೂರಿನ ಕಲಾಂಗಣದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಅಧ್ಯಯನ ಶಿಬಿರದ ಎರಡನೇ ದಿನ ರಾತ್ರಿ ಮನೋರಂಜನೆಗೆ ಎಂದು ಆಯೋಜಿಸಿದ್ದ ಅಯನ ನಾಟಕ ಮನೆಯ “ದ್ವೀಪ“ ನಾಟಕ ಒಂದು ಪರಿಣಾಮಕಾರಿ ತರಗತಿಯಂತೆ ಪ್ರದರ್ಶನ ಕಂಡಿತು.
ನೆಲ್ಸನ್ ಮಂಡೇಲ ಕಾಲದ ಆಫ್ರಿಕಾದ ಪ್ರಭುತ್ವದ ವಿರುದ್ಧ ನಡೆದ ಹೋರಾಟದ ಭಾಗವಾಗಿ ಹುಟ್ಟಿಕೊಂಡ ಈ ನಾಟಕ ಪ್ರದರ್ಶನಗೊಂಡಾಗ ಭಾರತ ದೇಶದದಲ್ಲಿ ಈಗ ನಡೆಯುತ್ತಿರುವ ಘಟನೆಗಳ ಹೊಚ್ಚ ಹೊಸ ಕತೆಯಂತೆಯೆ ಗೋಚರಿಸಿ ಅಚ್ಚರಿ ಮೂಡಿಸಿತು. ಸರ್ವಾಧಿಕಾರಿ ಪ್ರಭುತ್ವದ ವಿರುದ್ದ ಹೋರಾಡಿ ದೂರದ ದ್ವೀಪದ ಜೈಲು ಸೇರಿದ ಇಬ್ಬರು ಕ್ರಾಂತಿಕಾರಿ ಖೈದಿಗಳು, ಅವರು ಜೈಲಿನಲ್ಲಿ ತಾಲೀಮು ನಡೆಸುವ ನಾಟಕದ ಅಂತಿಗೊನೆ, ಆಕೆಯನ್ನು ಬಲಿ ಪಡೆಯುವ ಗ್ರೀಕ್ ನ ಸರ್ವಾಧಿಕಾರಿ ದೊರೆ… ಎಲ್ಲವೂ ಅದ್ಭುತವಾಗಿ ಮೂಡಿಬಂದು ಪ್ರೇಕ್ಷಕರ ಎದೆಯೊಳಗೆ ಇಳಿಯಿತು.
ಯಾವುದೇ ಕಾಲದ, ಯಾವುದೇ ದೇಶದ ಸರ್ವಾಧಿಕಾರಿ ಪ್ರಭುತ್ವದ ಗುಣ, ಕ್ರೌರ್ಯವನ್ನು ಪ್ರಸ್ತುತ ಪಡಿಸುವ ಇಬ್ವರೇ ಕಲಾವಿದರು, ಕಡಿಮೆ ಪರಿಕರಗಳ ಸರಳ ನಾಟಕ ಎಲ್ಲಾ ಕಡೆ ಪ್ರದರ್ಶನಗೊಳ್ಳಬೇಕಿದೆ. ಅದರಲ್ಲೂ ಹಿರಿಯ ರಂಗಕರ್ಮಿಗಳಾದ ಚಂದ್ರಹಾಸ ಉಲ್ಲಾಳ್, ಪ್ರಭಾಕರ ಕಾಪಿಕಾಡ್ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಪ್ರೇಕ್ಷಕರನ್ನುಅಲ್ಲಾಡದಂತೆ ಹಿಡಿದಿಟ್ಟು ಕೊಳ್ಳುತ್ತಾರೆ.
ಚಳವಳಿಯ ಮೇಲೆ ಪ್ರೀತಿಯಿಟ್ಟು ನಾಟಕ ಪ್ರದರ್ಶನ ನಡೆಸಿದ ಹಿರಿಯ ಸಂಗಾತಿಗಳಾದ ಚಂದ್ರಹಾಸ ಉಲ್ಲಾಳ್, ಪ್ರಭಾಕರ್ ಕಾಪಿಕಡ್ ಅವರ ಕಾಳಜಿಗೆ ಶರಣು.
ಮುನೀರ್ ಕಾಟಿಪಳ್ಳ