ಬೆಂಗಳೂರು ಜ 28 : ನಮ್ಮ ಸರಾಕರ ಕೈಗಾರಿಕೆ ಮತ್ತು ಹೂಡಿಕೆದಾರರ ಪರವಾಗಿರುವ ಸರಾಕರವಾಗಿದೆ. ನಾವು ಉದ್ದಿಮೆದಾರರಿಗೆ ಕಾನೂನಿನ ವ್ಯಾಪ್ತಿಯಲ್ಲೇ ಉದ್ಯಮ ನಡೆಸಲು ಎಲ್ಲಾ ರೀತಿಯ ಅನುಕೂಲ ಕಲ್ಪಿಸುತ್ತೇವೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವರಾದ ಮುರಗೇಶ್ ನಿರಾಣಿ ಆಶ್ವಾಸನೆ ನೀಡಿದ್ದಾರೆ.
ಅವರು ವಿಧಾನಮಂಡಲದ ಜಂಟಿ ಅಧಿವೇಶನ ಮುಗಿದ ಬಳಿಕ ವಿಕಾಸಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಇಂದು ಸರಣಿ ಸಭೆಗಳನ್ನು ನಡೆಸಿದ್ದಾಗಿ ತಿಳಿಸಿದರು. ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ನಮಗೆ ಉದ್ಯಮ ನಡೆಸಲು ಅನುಕೂಲವಾಗುವಂತೆ ನಿಯಮಗಳನ್ನು ಜಾರಿ ಮಾಡಬೇಕೆಂದು ಮನವಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿ ಗಣಿ ಮತ್ತು ಕಲ್ಲು ಕ್ವಾರಿ ಉದ್ದಿಮೆದಾರರಿಗೆ ಎದುರಾಗಿರುವ ಸಂಕಷ್ಟಗಳನ್ನು ನಿವಾರಿಸುವ ಕುರಿತಂತೆ ಮಾತುಕತೆ ನಡೆಸಲಾಗಿದೆ,ಇದೇ ಮೊದಲ ಬಾರಿಗೆ ರಾಜ್ಯದ ಐದು ಕಂದಾಯ ವಿಭಾಗದಲ್ಲಿ ಅದಾಲತ್ ನಡೆಸಲಾಗುವುದು, ಸಣ್ಣ ಮತ್ತು ಅತಿ ಸಣ್ಣ ಗಣಿ ಹಾಗೂ ಕಲ್ಲು ಕ್ವಾರಿ ಉದ್ದಿಮೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು, ಇದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಬಳಿಕ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತಡೆಗಟ್ಟುವಿಕೆ, ಕಲ್ಲು ಕ್ವಾರಿಯಿಂದ ಉಂಟಾಗುತ್ತಿರುವ ಸಮಸ್ಯೆ, ಹೊಸ ನಿಯಮಗಳ ಜಾರಿ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾಗಿ ತಿಳಿಸಿದರು.