ಅಫಜಲಪುರ: ರೈತರು ಬೆಳೆದ ತೊಗರಿಯನ್ನು ಅವರು ಈಗಾಗಲೇ ಕಟಾವು ಮಾಡಿ ಮನೆಗಳಲ್ಲಿ ಶೇಖರಣೆ ಮಾಡಿಕೊಂಡಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಜನವರಿ ಮೊದಲ ವಾರದಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಪ್ರಾಂತ ರೈತ ಸಂಘದ ಮುಖಂಡ ಶ್ರೀಮಂತ ಬಿರಾದಾರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರದಿಂದ ತೊಗರಿ ಪ್ರತಿ ಕ್ವಿಂಟಲ್‌ಗೆ ಘೋಷಿಸಲಾದ ೬ ಸಾವಿರ ರೂ. ಬೆಂಬಲ ಬೆಲೆಯು ಅವೈಜ್ಞಾನಿಕವಾಗಿದ್ದು ಅದನ್ನು ೮ ಸಾವಿರ ರೂ.ಗೆ ಹೆಚ್ಚಿಸಬೇಕು. ಹಾಗೂ ಖರೀದಿ ಕೇಂದ್ರದಲ್ಲಿ ಖರೀದಿ ಮಾಡಿದ ತೊಗರಿಯನ್ನು ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್ ೧೫೦೦ ರೂ. ಪ್ರೋತ್ಸಾಹ ಧನವಾಗಿ ನೀಡಬೇಕು. ಹಾಗೂ ಪ್ರತಿ ಪಹಣಿಗೆ ೧೦ ಕ್ವಿಂಟಲ್ ಖರೀದಿಸುತ್ತಿದ್ದ ತೊಗರಿಯನ್ನು ಇನ್ನು ಮುಂದೆ ಪಹಣಿ ಒಂದಕ್ಕೆ ೨೦ ಕ್ವಿಂಟಲ್‌ಗೆ ಹೆಚ್ಚುವರಿಯಾಗಿ ತೆಗೆದುಕೊಂಡು ತೊಗರಿ ಖರೀದಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿ ದಲ್ಲಾಳಿಗಳ ಹಾವಳಿಯನ್ನು ತಡೆಗಟ್ಟಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಭೀಮಾ ನದಿ ಪ್ರವಾಹದಿಂದ ಮನೆ ಮಠ ಕಳೆದುಕೊಂಡ ಸಂತ್ರಸ್ತರಿಗೆ ಶಾಶ್ವತ ನೆಲೆ ಕಲ್ಪಿಸಬೇಕು ಮತ್ತು ಬೆಳೆ ಕಳೆದುಕೊಂಡ ರೈತರಿಗೆ ಶೀಘ್ರದಲ್ಲೆ ಪರಿಹಾರ ಒದಗಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಕೂಡಲೇ ರೈತರ ಹಿತದೃಷ್ಟಿಯಿಂದ ಖರಿದಿ ಕೇಂದ್ರ ಆರಂಭಿಸಬೇಕು ಇಲ್ಲವಾದಲ್ಲಿ ಶೀಘ್ರದಲ್ಲೇ ಹೋರಾಟದ ರೂಪು ರೇಷಗಳನ್ನು ಸಿದ್ಧಪಡಿಸಲಾಗುವುದು ಎಂದು ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.