ಶಿಕ್ಷಣ ಸಚಿವರ ಟ್ವೀಟ್ ಬಿ.ಎಲ್.ಸಂತೋಷ್, ಅರುಣ್ ಗೆ ಟ್ಯಾಗ್: ನೆಟ್ಟಿಗರ ತರಾಟೆ

  • ಎಸ್ಸೆಸ್ಸೆಲ್ಸಿ ಫಲಿತಾಂಶ ಕುರಿತ ಶಿಕ್ಷಣ ಸಚಿವರು ಮಾಡಿದ್ದ ಟ್ವೀಟ್

ಬೆಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ ಎಂದು ಮಾಹಿತಿ ನೀಡುವ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ತಮ್ಮ ಟ್ವಿಟ್ಟರ್ ಖಾತೆಯಿಂದ ಮಾಹಿತಿ ನೀಡಿದ್ದಾರೆ. ಆದರೆ ಈ ಟ್ವೀಟ್ ಗೆ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ   @BSYBJP, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ @blsanthosh ಮತ್ತು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ @arunbpbjp ಅವರ ಖಾತೆಗೆ ಟ್ಯಾಗ್ ಮಾಡಿರುವುದು ವಿವಾದಕ್ಕೀಡಾಗಿದೆ.

S.Suresh Kumar, Minister- Govt of Karnataka ಎಂಬ ತಮ್ಮ ಟ್ವಿಟ್ಟರ್ ಖಾತೆಯಿಂದ ಆ.7ರಂದು sslc ಪರೀಕ್ಷೆಗಳ ಫಲಿತಾಂಶವನ್ನು ಸೋಮವಾರ 10-8-2020 ರಂದು ಮಧ್ಯಾಹ್ನ 3.00 ಗಂಟೆಗೆ ಪ್ರಕಟಿಸಲಾಗುವುದು ಎಂದು  ಟ್ವೀಟ್ ಮಾಡಿದ್ದು, ಆ ಟ್ವೀಟ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ   @BSYBJP, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ @blsanthosh ಮತ್ತು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ @arunbpbjp ಅವರ ಖಾತೆಗೆ ಟ್ಯಾಗ್ ಮಾಡಿರುವುದು ವಿವಾದಕ್ಕೀಡಾಗಿದೆ. ಯಡಿಯೂರಪ್ಪ ಅವರ ಖಾತೆಗೆ ಟ್ಯಾಗ್ ಮಾಡಿರುವುದು ವಿವಾದಕ್ಕೆ ಕಾರಣವಲ್ಲ. ಬದಲಿಗೆ ಸರ್ಕಾರದ ಯಾವ ಹುದ್ದೆಗಳಲ್ಲಿ ಅಧಿಕೃತವಾಗಿ ಇಲ್ಲದಿರುವ ಬಿಜೆಪಿಯ ಪದಾಧಿಕಾರಿಗಳನ್ನು ಸಚಿವರ ಅಧಿಕೃತ ಖಾತೆಯಿಂದ ಪ್ರಕಟಿಸಲಾದ ಪೋಸ್ಟ್ ಒಂದಕ್ಕೆ ಟ್ಯಾಗ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಆದರೆ ಇದೇ  ಪೋಸ್ಟ್ ಅನ್ನು ಎರಡು ಬಾರಿ ಟ್ವೀಟ್ ಮಾಡಿದ್ದು, ಮೊದಲ ಬಾರಿ ಮಧ್ಯಾಹ್ನ 2.28ಕ್ಕೆ ಟ್ವೀಟ್ ಮಾಡಿದಾಗ ಯಾರಿಗೂ ಟ್ಯಾಗ್ ಮಾಡಿಲ್ಲ. ಆದರೆ ಎರಡನೇ ಬಾರಿ ಮಧ್ಯಾಹ್ನ 2.47ಕ್ಕೆ ಟ್ವೀಟ್ ಮಾಡಿದಾಗ ಯಡಿಯೂರಪ್ಪ, ಸಂತೋಷ್ ಮತ್ತು ಅರುಣ್ ಕುಮಾರ್ ಅವರಿಗೆ ಟ್ಯಾಗ್ ಮಾಡಲಾಗಿದೆ. ಇದು ಟ್ವಿಟರ್ ನಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಸರ್ಕಾರದ ಶಿಕ್ಷಣ ಇಲಾಖೆಯ ಮೇಲೆ ಸಂತೋಷ್  ಮತ್ತು ಅರುಣ್ ಕುಮಾರ್ ಅವರ ಹಿಡಿತ ಅಷ್ಟೊಂದು ಪ್ರಬಲವಾಗಿದೆಯೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಜೊತೆಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ ಮಾಡುವ ಸಂಬಂಧ ಇಬ್ಬರು ಬಿಜೆಪಿ ನಾಯಕರಿಗೆ ಟ್ಯಾಗ್ ಮಾಡಿರುವ ಸಚಿವರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ, ಪರೀಕ್ಷಾ ಮಂಡಳಿ ನಿರ್ದೇಶಕರಿಗೆ ಟ್ಯಾಗ್ ಮಾಡಿಲ್ಲದಿರುವುದು ಗಮನಾರ್ಹ.

ಗಡ್ಡಪ್ಪ ಎನ್ನುವವರು ಸುರೇಶ್ ಕುಮಾರ್ ರವರ ಟ್ವೀಟ್ ಗೆ ಪ್ರತಿಕ್ರಿಯಿಸಿ, “ಎಲ್ಲಾ ಒಕೆ ಈ ಅರುಣ್ ಮತ್ತು ಬಿ.ಎಲ್,ಸಂತೋಷ್ ಗೆ ಟ್ಯಾಗ್ ಯಾಕೆ” ಎಂದು ಉಪೇಂದ್ರ ಸ್ಟೈಲಲ್ಲಿ ಪ್ರಶ್ನೆ ಮಾಡಿದ್ದಾರೆ.

ಅಬ್ದುಲ್ ಸಮದ್ ಚೌದರಿ ಎನ್ನುವವರು “BSYಗೆ ಮಾಡದಿದ್ದರೂ ಪರವಾಗಿಲ್ಲ, BLS ಗೆ ಮಾಡಬೇಕು. ಯಾಕೆಂದರೆ ಸೂಪರ್ ಸಿಎಂ ಇರಬೇಕು” ಎಂದು ಕಾಲೆಳೆದಿದ್ದಾರೆ.

ಅದೇ ರೀತಿ ಚೇತನ್ ಕೃಷ್ಣ ಎನ್ನುವವರು “ SSLC ಪರೀಕ್ಷೆಗೂ BL ಸಂತೋಷ್ ಗೂ ಸಂಬಂಧವೇನು ಸಚಿವ ಸೂರಿ ಅವರೇ ಎಂದು ಪ್ರಶ್ನಿಸಿದ್ದರೆ, ಸಂತೋಷ್ ಕುಮಾರ್ ಎನ್.ಸಿ. ಅವರು, ಸರ್, ಸಿಎಂಗೆ ಟ್ಯಾಗ್ ಮಾಡೋದು ಖಂಡಿತವಾಗಿಯೂ ಸರಿ, ಉಳಿದ ಇಬ್ಬರು ಯಾರು? ನೀವು ಯಾಕೆ ಹೀಗಾದ್ರಿ ಅಥವಾ ನೀವೇ ಹೀಗೋ ಎಂದು ಕೇಳಿದ್ದಾರೆ. ಅದೇ ರೀತಿ ಕುಬೇರಪ್ಪ ಪಿ.ಎಚ್. ಅವರ ಪ್ರತಿಕ್ರಿಯಿಸಿ, ನಿಮ್ಮಂತವರೂ ಅಡಿಯಾಳಾಗುತ್ತೀರಾ??? BL Santhosh ಸರ್ಕಾರದಲ್ಲಿ ಯಾವ positionಲ್ಲಿ ಇದಾರೆ ಸಚಿವರೇ ಎಂದು ಕೇಳಿದ್ದಾರೆ.

ಮನುಗೌಡ ಕೆ. ಅವರು ಅಲ್ಲಾ ಸಾರ್ BL SANTHOSH ಅವರಿಗೂ SSLC ರಿಸಲ್ಟ್ ಗೂ ಏನ್ ಸಂಬಂಧ ಸ್ವಲ್ಪ ಹೇಳ್ತೀರಾ  ಎಂದು ಕೇಳಿದ್ದಾರೆ. ಪ್ರಸಾದ್ ಎನ್ನುವವರು ಪ್ರತಿಕ್ರಿಯಿಸಿ @blsanthosh, @arunbpbjp ಯಾರು ? ಅವರನ್ಯಾಕೆ ಟ್ಯಾಗ್ ಮಾಡಿದ್ದೀರಿ ಎಂದು ಕೇಳಿದ್ದರೆ, ಅಭಿಷೇಕ್ ಉಮೇಶ್ ಎನ್ನುವವರು @blsanthosh is part of the govt????? ಎಂದು ಕೇಳಿದ್ದರೆ, ಕುಮಾರ ಸಿಸಿ ಎನ್ನುವವರು Reason for tagging @blsanthosh ಎಂದು ಕೇಳಿದ್ದರೆ, ನಿಲಾಂಜನ್ ನಿಶಾಂತ್ ಎನ್ನುವವರು ಇವರು ಯಾರು @blsanthosh @arunbpbjp ಸರ್ಕಾರದ ಕಾರ್ಯದಲ್ಲಿ ಇವರಿಗೇನು ಕೆಲಸ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನೆಟ್ಟಿಗರು ಇಷ್ಟು ತರಾಟೆಗೆ ತೆಗೆದುಕೊಂಡಿದ್ದರೂ ಸುರೇಶ್ ಕುಮಾರ್ ಅವರ ಸಚಿವರ ಅಧಿಕೃತ ಖಾತೆಯಿಂದ ಅದೇ ದಿನ ಪ್ರಕಟವಾಗಿರುವ ಇನ್ನೊಂದು ಪೋಸ್ಟ್ ಕೂಡ ಬಿ.ಎಲ್. ಸಂತೋಷ್ @blsanthosh ಮತ್ತು  ಅರುಣ್ ಕುಮಾರ್ @arunbpbjp ಅವರಿಗೆ ಟ್ಯಾಗ್ ಆಗಿದೆ. ಕೊರೊನಾ ಕಾಲದಲ್ಲಿ ಮಕ್ಕಳ ಕಲಿಕೆ ಕುರಿತು ಇಂದು ಕರ್ನಾಟಕ ವಿಧಾನಪರಿಷತ್ತಿನ ಪದವೀಧರ/ಶಿಕ್ಷಕ ಕ್ಷೇತ್ರದ ಗೌರವಾನ್ವಿತ ಸದಸ್ಯರ ಜೊತೆ ಸಂವಾದ ನಡೆಸಿದೆ ಎಂದು ಹಾಖಿರುವ ಪೋಸ್ಟ್ ಕೂಡ ಸಂತೋಷ್ ಮತ್ತು ಅರುಣ್ ಕುಮಾರ್ ಅವರಿಗೆ ಟ್ಯಾಗ್ ಆಗಿದೆ.

ಆರೆಸ್ಸೆಸ್ ನ ರಾಜಕೀಯ ಮುಖವಾಗಿರುವ ಬಿಜೆಪಿಯಲ್ಲಿ ಸಂಘಟನಾ ಕಾರ್ಯದರ್ಶಿ ಹುದ್ದೆಯು ಆರೆಸ್ಸೆಸ್ ನ ನಾಯಕರಿಗೆ ಮೀಸಲಾಗಿರುತ್ತದೆ. ಈ ಸಂಘಟನಾ ಕಾರ್ಯದರ್ಶಿ ಒಪ್ಪಿಗೆ ಇಲ್ಲದೆ ಬಿಜೆಪಿಯ ಯಾವ ನಿರ್ಣಯಗಳೂ ಆಗುವುದಿಲ್ಲ. ಯಡಿಯೂರಪ್ಪ ಸಂಘಪರಿವಾರದ ಹಿನ್ನೆಲೆಯಿಂದ ಬಂದಿರುವ ಬಿಜೆಪಿಯ ಮಾಸ್ ಲೀಡರ್ ಆಗಿದ್ದಾರೆ. ಬಹುತೇಕ ಸಂದರ್ಭದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸ್ವಭಾವ ಹೊಂದಿರುವುದರಿಂದ  ಯಡಿಯೂರಪ್ಪ ಮತ್ತು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿರುವ ಬಿ.ಎಲ್.ಸಂತೋಷ್ ನಡುವೆ ಮುಸುಕಿನ ಯುದ್ಧ ನಡೆಯುತ್ತಲೇ ಇರುತ್ತದೆ.

 

Donate Janashakthi Media

Leave a Reply

Your email address will not be published. Required fields are marked *