ಮುಂಬೈ: ಭಾರತದಲ್ಲಿನ “ವ್ಯಾಗ್ನರ್ ಗುಂಪು” ಅಹಿಂಸೆಯ ಮಾರ್ಗವನ್ನು ಬಳಸಿಕೊಂಡು ಮತಪೆಟ್ಟಿಗೆಯ ಮೂಲಕ ನರೇಂದ್ರ ಮೋದಿ ಸರ್ಕಾರವನ್ನು ಪದಚ್ಯುತಗೊಳಿಸಲಿದೆ ಎಂದು ಶಿವಸೇನೆ (ಯುಬಿಟಿ) ವಿರೋಧ ಪಕ್ಷಗಳನ್ನು ಉಲ್ಲೇಖಿಸಿ ಸೋಮವಾರ ಪ್ರತಿಪಾದಿಸಿದೆ.
ಶಿವಸೇನೆ (ಯುಬಿಟಿ)ಯ ಮುಖವಾಣಿ ‘ಸಾಮ್ನಾ’ ದ ಸಂಪಾದಕೀಯವು ವ್ಯಾಗ್ನರ್ ಗುಂಪಿನ ಬಗ್ಗೆ ಚರ್ಚೆ ನಡೆಸಿದೆ. “ರಷ್ಯಾದ ಅಧ್ಯಕ್ಷ ಪುಟಿನ್ ವಿರುದ್ಧದ ದಂಗೆ” ಮತ್ತು ಕಳೆದ ವಾರ ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯ ನಡುವಿನ ಸಾಮ್ಯತೆಯ ಬಗ್ಗೆ ಬರೆದಿದೆ.
ಹನ್ನೆರಡಕ್ಕೂ ಹೆಚ್ಚು ವಿರೋಧ ಪಕ್ಷಗಳ 32 ಕ್ಕೂ ಹೆಚ್ಚು ನಾಯಕರು ಶುಕ್ರವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಯೋಜಿಸಿದ್ದ ಪಾಟ್ನಾದಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಒಗ್ಗಟ್ಟಿನಿಂದ ಎದುರಿಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಬಣ ರಾಜಕೀಯದ ಅವ್ಯವಹಾರ; ಶಿವಸೇನೆ ಚಿಹ್ನೆ-ಹೆಸರಿಗೆ ₹2 ಸಾವಿರ ಕೋಟಿ ರೂ ಲಂಚ: ಸಂಜಯ್ ರಾವತ್ ಆರೋಪ
“ವ್ಯಾಗ್ನರ್ ಗುಂಪು” ಸರ್ವಾಧಿಕಾರವನ್ನು ಸವಾಲು ಮಾಡಬಹುದು ಎಂದು ಸಾಮ್ನಾ ಸಂಪಾದಕೀಯ ಹೇಳಿದ್ದು, ಮೋದಿ ಅಥವಾ ಪುಟಿನ್ ಈ ಬಂಡಾಯವನ್ನು ಎದುರಿಸಬೇಕಾಗುತ್ತದೆ. ಭಾರತ ಸರ್ಕಾರವನ್ನು ಅಹಿಂಸಾತ್ಮಕ ವ್ಯಾಗ್ನರ್ ಗುಂಪಿನಿಂದ ಮತಪೆಟ್ಟಿಗೆಯ ಮೂಲಕ ಹೊರಹಾಕಲಾಗುತ್ತದೆ” ಎಂದು ಶಿವಸೇನೆ (ಯುಬಿಟಿ) ಸಾಮ್ನಾದಲ್ಲಿ ಹೇಳಿಕೊಂಡಿದೆ.
ಪುಟಿನ್ ಅವರಂತೆ ಮೋದಿಯೂ ತೊಲಗಬೇಕಿದ್ದು, ಆದರೆ ಇದು ಇದು ಪ್ರಜಾಸತ್ತಾತ್ಮಕ ರೀತಿಯಲ್ಲಿ ತೊಲಗಬೇಕು ಎಂದು ಅದು ಹೇಳಿದೆ. ಕಳೆದ ವಾರ ಬಿಹಾರದ ರಾಜಧಾನಿಯಲ್ಲಿ ನಡೆದ ವಿರೋಧ ಪಕ್ಷಗಳ ಸಮಾವೇಶವನ್ನು ಉಲ್ಲೇಖಿಸಿರುವ ಪತ್ರಿಕೆಯು “ವ್ಯಾಗ್ನರ್ ಗುಂಪು ಪ್ರಜಾಪ್ರಭುತ್ವದ ರಕ್ಷಕರಾಗಿ ಪಾಟ್ನಾದಲ್ಲಿ ಒಟ್ಟುಗೂಡಿತು” ಎಂದು ಹೇಳಿದೆ.
ಇವಿಎಂಗಳು 2024 ರಲ್ಲಿ ಫಲಿತಾಂಶಗಳನ್ನು ನಿರ್ಧರಿಸುವುದಿಲ್ಲ, ಬದಲಾಗಿ ಜನರು ನಿರ್ಧರಿಸುತ್ತಾರೆ. ಇವಿಎಂ ಹಗರಣ ನಡೆದರೆ ದೇಶದಲ್ಲಿ ಮಣಿಪುರದಂತಹ ಪರಿಸ್ಥಿತಿ ನಿರ್ಮಾಣವಾಗಿ, ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶ ವ್ಯಕ್ತವಾಗಲಿದೆ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.
ಮೇ 3 ರಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಿಂದ ಸುಮಾರು 120 ಜನರು ಸಾವನ್ನಪ್ಪಿದ್ದಾರೆ ಮತ್ತು 3,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆದ ಹಿಂಸಾಚಾರದಲ್ಲಿ ಅನೇಕ ಜನರು ನಿರಾಶ್ರಿತರಾಗಿದ್ದು, ಹಲವಾರು ಮನೆಗಳನ್ನು ಸುಟ್ಟುಹಾಕಲಾಗಿದೆ.
ಇದನ್ನೂ ಓದಿ: ಶಿವಸೇನೆ ಪಕ್ಷದ ಶಾಸಕರ ಅನರ್ಹತೆ ಪ್ರಶ್ನೆ: ಯಾವುದೇ ನಿರ್ಧಾರ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ಆದೇಶ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಗುಂಪಿನಂತಹ ಅನೇಕ ಜನರನ್ನು ಬಿಜೆಪಿ ತನ್ನ “ರಕ್ಷಕ” ನಂತೆ ಇಟ್ಟುಕೊಂಡಿದೆ. ನಾಳೆ ಅದೇ ಜನರು ಅವರನ್ನು “ಇರಿಯುತ್ತಾರೆ” ಎಂದು ಸಂಪಾದಕೀಯ ಹೇಳಿದೆ.
ಶಿಂಧೆ ಅವರು ಕಳೆದ ವರ್ಷ ಜೂನ್‌ನಲ್ಲಿ ಶಿವಸೇನೆ ನಾಯಕತ್ವದ ವಿರುದ್ಧ ಬಂಡಾಯ ಎದ್ದರು. ಇದರಿಂದಾಗಿ ಶಿವಸೇನೆ ವಿಭಜನೆಗೊಂಡು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾಗಿತ್ತು. ಇದರ ನಂತರ ಬಿಜೆಪಿ ಬೆಂಬಲದಿಂದ ಶಿಂಧೆ ಸಿಎಂ ಆದರು.
ಕಳೆದ ವಾರ ರಷ್ಯಾದಲ್ಲಿ ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಪುಟಿನ್ ವಿರುದ್ಧ ಸಶಸ್ತ್ರ ದಂಗೆಗೆ ಕರೆ ನೀಡಿದ್ದಾರೆ. ಜೊತೆಗೆ ದೇಶದ ದಕ್ಷಿಣ ನಗರವಾದ ರೋಸ್ಟೊವ್-ಆನ್-ಡಾನ್ ತನ್ನ ಸೈನ್ಯದ ನಿಯಂತ್ರಣದಲ್ಲಿ ಇದು ಎಂದು ಹೇಳಿಕೊಂಡಿದ್ದಾರೆ. ಈ ಸೇನೆಯು ದೇಶದ ರಾಜಧಾನಿ ಮಾಸ್ಕೋಗೆ ಮುನ್ನಡೆಯುತ್ತಿದೆ. ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ದಂಗೆಯನ್ನು ದ್ರೋಹ ಮತ್ತು ದೇಶದ್ರೋಹದ ಕೃತ್ಯ ಎಂದು ಕರೆದಿದ್ದಾರೆ.