ಬೆಂಗಳೂರು: ಬೆಂಗಳೂರಿನ ಜ್ಞಾನ ಭಾರತಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಬಸ್ ಹಾಯ್ದು ತೀವ್ರ ಗಾಯಗೊಂಡ ಘಟನೆ ಆಘಾತ ಮೂಡಿಸುವಂತದ್ದು. ಓದಲು, ಅನೇಕ ಕನಸುಗಳೊಂದಿಗೆ ಬಂದಂತಹ ವಿದ್ಯಾರ್ಥಿಯೊಂದಿಗೆ ಇಂತಹ ಅಪಘಾತ ಘಟಿಸಿರುವುದಕ್ಕೆ ಎಐಡಿಎಸ್ಓ ಬೆಂಗಳೂರು ಜಿಲ್ಲಾ ಸಮಿತಿ ವಿಷಾದ ವ್ಯಕ್ತಪಡಿಸುತ್ತದ್ದು, ಈ ಘಟನೆಯ ತರುವಾಯ ವಿವಿಯ ವರ್ತನೆಯನ್ನು ಅತ್ಯುಗ್ರವಾಗಿ ಖಂಡಿಸಿದೆ.
ಘಟನೆಯ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಒತ್ತಾಯಿಸಿದ್ದರು. ಆದರೆ ಬೆಂಗಳೂರು ವಿವಿಯು ಇಂತಹ ಆಘಾತಕಾರಿ ಅಪಘಾತ ನಡೆದಿದ್ದರೂ, ವಿದ್ಯಾರ್ಥಿಗಳ ಬೇಡಿಕೆಗೆ ಕಿಂಚಿತ್ತೂ ಬೆಲೆ ನೀಡದೇ ಕೇವಲ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೂ ಮಾತ್ರ ವಾಹನಗಳು ಸಂಚರಿಸದಂತೆ ಆದೇಶ ನೀಡಿರುವುದು ವಿದ್ಯಾರ್ಥಿಗಳ ಕಣ್ಣೊರೆಸುವ ತಂತ್ರವಾಗಿದೆ. ವಿದ್ಯಾರ್ಥಿಗಳ ಜೀವನದ ಕುರಿತಾಗಿ ವಿವಿಯ ಅಸಡ್ಡೆಯನ್ನು ಎಐಡಿಎಸ್ಓ ಬೆಂಗಳೂರು ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಬೆಂಗಳೂರು ವಿವಿಯು ಈ ಕೂಡಲೇ ವಿವಿಯಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸಬೇಕು ಹಾಗೂ ಸ್ಥಳೀಯರ ಸಮಸ್ಯೆ ಪರಿಹರಿಸಲು ಸಮಿತಿ ರಚಿಸಿ ಅವರಿಗಾಗಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಎಐಡಿಎಸ್ಓ ಬೆಂಗಳೂರು ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.