ಬೆಂಗಳೂರು : ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ( ವಿಮ್ಸ್ ) ಐಸಿಯು ನಲ್ಲಿ ದಾಖಲಾಗಿದ್ದ ಮೂವರು ರೋಗಿಗಳು ಬುಧವಾರ ಆಸ್ಪತ್ರೆಯಲ್ಲಿ ವೆಂಟಿಲೇಟರ್ಗಳ ಸಮಸ್ಯೆಯಿಂದ ಹಾಗೂ ವಿದ್ಯುತ್ ಕಡಿತದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದರೆ, ಆಸ್ಪತ್ರೆಯ ಅಧಿಕಾರಿಗಳು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಘಟನೆಯಲ್ಲಿ ಮೃತ ಪಟ್ಟವರು ಮೌಲಾ ಹುಸೇನ್(35), ಚೆಟ್ಟಮ್ಮ(30) ಮತ್ತು ಮನೋಜ್ (18) ಎಂದು ಗುರುತಿಸಲಾಗಿದೆ. ಮೊದಲ ಎರಡು ಸಾವು ಗುರುವಾರ ಮುಂಜಾನೆ ಬೆಳಕಿಗೆ ಬಂದಿದ್ದು, ಮೂರನೇ ಸಾವು ಮಧ್ಯಾಹ್ನದ ವೇಳೆಗೆ ಬಹಿರಂಗವಾಗಿದೆ.
ಬುಧವಾರ ಹಠಾತ್ ವಿದ್ಯುತ್ ಕಡಿತದಿಂದ ಸಾವು ಸಂಭವಿಸಿದೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ, ಆಸ್ಪತ್ರೆಯ ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ. ವಿದ್ಯುತ್ ಕಡಿತದಿಂದ ಯಾವುದೇ ಸಾವು ಸಂಭವಿಸಿಲ್ಲ, ಒಬ್ಬರು ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ ಎಂದು ವಿಮ್ಸ್ ನಿರ್ದೇಶಕ ಗಂಗಾಧರ ರೆಡ್ಡಿ ತಿಳಿಸಿದ್ದಾರೆ. ಎರಡೂ ಸಾವುಗಳು ವಿದ್ಯುತ್ ಕಡಿತದಿಂದ ಸಂಬಂಧಿಸಿಲ್ಲ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ತಿಳಿಸಿದ್ದಾರೆ.
ಈ ವಿಚಾರವಾಗಿ ವಿಧಾನಸೌಧದಲ್ಲಿ ಚರ್ಚೆಯಾಗಿದ್ದು, ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ‘ಇದು ಸರ್ಕಾರದ ತಪ್ಪಿನಿಂದ ಆಗಿರುವ ಅನಾಹುತ. ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳದಿದ್ದುದು ತಪ್ಪು. ಮೃತಪಟ್ಟವರಿಗೆ ₹ 25 ಲಕ್ಷ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು. ಸಿದ್ದರಾಮಯ್ಯ ಮಾತು ಮುಗಿಸಿದ ನಂತರ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮಾಧುಸ್ವಾಮಿ, ‘ಪ್ರಕರಣದ ಬಗ್ಗೆ ವಿಷಾದವಿದೆ. ಆದರೆ ಸಿದ್ದರಾಮಯ್ಯ ಅವರು ಬಳಸಿರುವ ಭಾಷೆಯನ್ನು ಒಪ್ಪಲು ಆಗುವುದಿಲ್ಲ’ ಎಂದು ಹೇಳಿದರು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಶ್ರೀರಾಮುಲು, ‘ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಐಸಿಯುನಲ್ಲಿ ಇದ್ದವರು ಕೇವಲ ವೆಂಟಿಲೇಟರ್ ವೈಫಲ್ಯದಿಂದಷ್ಟೇ ಮೃತಪಟ್ಟಿಲ್ಲ. ಅವರ ಸಾವಿಗೆ ಬೇರೆ ಕಾರಣಗಳು ಇವೆ. ರೋಗಿಗಳ ಆರೋಗ್ಯ ಸ್ಥಿತಿ ವ್ಯತ್ಯಯಗೊಂಡಿದ್ದರಿಂದ ಮೃತಪಟ್ಟರು. ನಾನು ಆಸ್ಪತ್ರೆಯ ಅಧೀಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ’ ಎಂದರು.
ಸಚಿವ ಮಾಧುಸ್ವಾಮಿ ಮಾತನಾಡಿ, ‘ವೆಂಟಿಲೇಟರ್ ಇರುವ ಆಸ್ಪತ್ರೆಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಸಮಸ್ಯೆ ಇದ್ದರೆ ಸರಿಪಡಿಸುತ್ತೇವೆ. ಇದನ್ನು ಸರ್ಕಾರದ ತಪ್ಪು ಎಂದು ಒಪ್ಪಿಕೊಂಡು ಪರಿಹಾರ ಘೋಷಿಸಲು ಅಗುವುದಿಲ್ಲ. ಪ್ರತಿಪಕ್ಷದ ನಾಯಕರ ಸಲಹೆಯಂತೆ ತನಿಖೆ ಮಾಡಿಸುತ್ತೇವೆ’ ಎಂದರು. ‘ಮಾನವೀಯ ದೃಷ್ಟಿಯಿಂದ ಪರಿಶೀಲಿಸಿ’ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿರು.
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ಬಗ್ಗೆ ವಿಸ್ತೃತ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಬಿಎಂಸಿಆರ್ಐ ಸಂಸ್ಥೆಯ ಡಾ.ಸ್ಮಿತಾ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದೆ. ಈ ಸಂಬಂಧ ಆರೋಗ್ಯ ಸಚಿವ ಡಾ ಸುಧಾಕರ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ. ‘ಸಮಿತಿಯ ತನಿಖಾ ವರದಿ ಕೈಸೇರಿದ ಕೂಡಲೇ ಕರ್ತವ್ಯ ಲೋಪ ಎಸಗಿ ಅಮಾಯಕ ರೋಗಿಗಳ ದುರಂತ ಸಾವಿಗೆ ಕಾರಣರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದ್ದಾರೆ.