ಚಮಚಾ ಬಂಡವಾಳಶಾಹಿ ಯುಪಿಎ ಸರಕಾರದಲ್ಲಿ ಹೇಗಿತ್ತೋ, ಮೋದಿ ಸರಕಾರದಲ್ಲೂ ಅಷ್ಟೇ ಸಮೃದ್ಧವಾಗಿದೆ ಎಂಬುದು ವರ್ಷ ಕಳೆಯುತ್ತಿದ್ದಂತೆಯೇ ಸ್ಪಷ್ಟವಾಗಿದೆ. ಇನ್ನು ಕಪ್ಪು ಹಣವನ್ನು ವಾಪಾಸು ತರಿಸಿಕೊಳ್ಳುವ ಮತ್ತು ಕಪ್ಪು ಹಣವನ್ನು ಬಿಳಿ ಮಾಡುವುದರ ಮೇಲೆ ಗದಾಪ್ರಹಾರ ಮಾಡಲಾಗುತ್ತಿದೆ ಎಂಬ ಮಾತುಗಳು, ಇದನ್ನು ಕೇಳಿ ದೇಶದ ಕಾನೂನಿನಿಂದ ತಪ್ಪಿಸಿಕೊಂಡು ಸ್ವತಃ ಇದೇ ಸರಕಾರದ ವಿದೇಶಾಂಗ ಮಂತ್ರಿಗಳ ಕೃಪೆಯಿಂದ ಜಗತ್ತಿನ ಸುತ್ತೆಲ್ಲ ಠಳಾಯಿಸುತ್ತಿರುವ ಲಲಿತ್ ಮೋದಿ ತನ್ನೊಳಗೇ ನಗುತ್ತಿರಬೇಕು!
ಮೋದಿ ಸರಕಾರ ಒಂದು ಪ್ರಮುಖ ಹಗರಣವನ್ನು ಎದುರಿಸುತ್ತಿದೆ. ಅದು ಲಲಿತ್ ಮೋದಿ ವ್ಯವಹಾರಗಳಿಗೆ ಸಂಬಂಧಪಟ್ಟದ್ದು. ಈ ಘಟನೆ ಸಂಪುಟದಲ್ಲಿನ ಒಬ್ಬ ಹಿರಿಯ ಮಂತ್ರಿಗಳ ಕಡೆಯಿಂದ ಒಂದು ಗಂಭೀರ ಅನುಚಿತ ನಡೆ, ಚಮಚಾ ಬಂಡವಾಳಶಾಹಿಯ ಬೆಚ್ಚಗಿನ ನಂಟು ಮತ್ತು ಇಡೀ ವ್ಯವಹಾರವನ್ನು ನಿರಾಕರಿಸುವ ಮತ್ತು ಮುಚ್ಚಿ ಹಾಕುವ ಆಶಯ ಹೊಂದಿರುವ ಸರಕಾರದ ಪ್ರತಿಕ್ರಿಯೆಯನ್ನು ಪ್ರಕಟಪಡಿಸುತ್ತಿದೆ.
ವಿದೇಶಾಂಗ ವ್ಯವಹಾರಗಳ ಮಂತ್ರಿ ಸುಷ್ಮಾ ಸವರಾಜ್ ಅವರು ಲಲಿತ್ ಮೋದಿ ಬ್ರಿಟಿಶ್ ಸರಕಾರದಿಂದ ಪ್ರಯಾಣದ ದಸ್ತಾವೇಜುಗಳನ್ನು ಪಡೆಯಲು ತಾನು ಅನುಕೂಲ ಮಾಡಿ ಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ.
ಲಲಿತ್ ಮೋದಿ ಐಪಿಎಲ್‌ನ ಮುಖ್ಯಸ್ಥ ರಾಗಿದ್ದಾಗ ಮಾಡಿದ್ದ ವಿದೇಶ ವಿನಿಮಯ ಉಲ್ಲಂಘನೆಗಳು ಮತ್ತು ಕಪ್ಪು ಹಣವನ್ನು ಬಿಳಿ ಮಾಡುವ ವ್ಯವಹಾರಗಳ ಬಗ್ಗೆ ಜಾರಿ ನಿರ್ದೇಶನಾಲಯ(ಎನ್‌ಪೋರ್ಸ್‌ಮೆಂಟ್ ಡೈರೆಕ್ಟರೇಟ್ ಅಥವ ಸಂಕ್ಷಿಪ್ರವಾಗಿ ’ಇ.ಡಿ.’)ದ ತನಿಖೆಯಿಂದ ತಪಿಸಿಕೊಳ್ಳಲು ಲಂಡನ್‌ಗೆ ಓಡಿ ಹೋಗಿದ್ದರು. 2010ರಲ್ಲಿ ವಿದೇಶಾಂಗ ವ್ಯವಹಾರಗಳ ಮಂತ್ರಾಲಯ ಅವರ ಪಾಸ್‌ಪೋರ್ಟನ್ನು ರದ್ದು ಮಾಡಿತ್ತು. ಈತನ ಮೇಲೆ ಇರುವ ಹಲವು ವಿದೇಶಿ ವಿನಿಮಯ ನಿಯಮಗಳ ಉಲ್ಲಂಘನೆಯ ಮತ್ತು ಕಪ್ಪು ಹಣವನ್ನು ಬಿಳಿ ಮಾಡುವ ಕೇಸುಗಳ ಮೊತ್ತ 1700 ಕೋಟಿ ರೂ.ಗಳು ಎಂದು ಅಂದಾಜು ಮಾಡಲಾಗಿದೆ.
ಈ ಬಗ್ಗೆ ಇ.ಡಿ.ಯ ವಿಚಾರಣೆಗೆ ಒಳಪಡಲು ಆತ ಇದುವರೆಗೂ ನಿರಾಕರಿಸುತ್ತಿದ್ದಾರೆ. ಈ ಮೊದಲು ಇ.ಡಿ.ಯ ಕೋರಿಕೆಯ ಮೇರೆಗೆ ಇಂಟರ್‌ಪೋಲ್ ಈತನ ಬಗ್ಗೆ ’ಬ್ಲೂ ಕಾರ್ನರ್’ ನೋಟೀಸು (ವಿಚಾರಣೆಯಿಂದ ತಪ್ಪಿಸಿ ಕೊಂಡಿರುವ ವ್ಯಕ್ತಿ ಎಂದು ಸಾರುವ ನೀಲಿ ಮೂಲೆ ಹೊಂದಿರುವ ನೋಟೀಸು) ಪ್ರಕಟಿಸಿ ಈತ ಭಾರತೀಯ ಅಧಿಕಾರಿಗಳಿಗೆ ವಿಚಾರಣೆಗೆ ಬೇಕಾಗಿರುವ ವ್ಯಕ್ತಿ ಎಂದು ಹೇಳಿತ್ತು.
2012ರಲ್ಲಿ ಯುಪಿಎ ಸರಕಾರ ಬ್ರಿಟಿಶ್ ಸರಕಾರಕ್ಕೆ ಒಂದು ರಾಜತಾಂತ್ರಿಕ ಟಿಪ್ಪಣಿಯನ್ನು ಕಳಿಸಿತ್ತು. ಅದರಲ್ಲಿ ಈತನಿಗೆ ಯಾವುದೇ ಪ್ರಯಾಣ ದಸ್ತಾವೇಜು ನೀಡಬಾರದು ಎಂದು ಎಚ್ಚರಿಸಲಾಗಿತ್ತು.
ಜುಲೈ 2014ರಲ್ಲಿ ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ವ್ಯವಹಾರಗಳ ಮಂತ್ರಿಯಾಗಿ ಲಲಿತ್ ಮೋದಿಗೆ ಬ್ರಿಟಿಶ್ ಸರಕಾರ ಒಂದು ಪ್ರಯಾಣ ದಸ್ತಾವೇಜನ್ನು ಕೊಡುವುದಕ್ಕೆ ಭಾರತ ಸರಕಾರದ ಆಕ್ಷೇಪ ಇಲ್ಲ ಎಂದು ಭಾರತದಲ್ಲಿ ಇರುವ ಬ್ರಿಟಿಶ್ ಹೈಕಮಿಷನರ್‌ಗೆ ಪತ್ರ ಬರೆದಿದ್ದರು. ಇದರ ಆಧಾರದಲ್ಲಿ ಲಲಿತ್ ಮೋದಿಗೆ ಎರಡು ವರ್ಷಗಳಿಗೆ ಪ್ರಯಾಣ ದಸ್ತಾವೇಜನ್ನು ನೀಡಲಾಗಿದೆ. ಅದನ್ನು ಬಳಸಿ ಆತ ತನ್ನ ಪತ್ನಿ ವೈದ್ಯಕೀಯ ಶುಶ್ರೂಷೆ ಪಡೆಯುವ ಪೊರ್ತುಗಲ್ ಮಾತ್ರವಲ್ಲ ಜಗತ್ತೆಲ್ಲ ಸುತ್ತಾಡುತ್ತಿದ್ದಾರೆ.
ಲಲಿತ್ ಮೋದಿ ತನಗೆ ಪ್ರಯಾಣದ ದಸ್ತಾವೇಜು ಪಡೆಯಲು ನೆರವಾಗಬೇಕು ಎಂದು ಸುಷ್ಮಾ ಸ್ವರಾಜ್‌ರನ್ನು ನೇರವಾಗಿ ಕೇಳಿದಾಗ ಅವರು ಹಣಕಾಸು ಮತ್ರಾಲಯದೊಡನೆ ಸಮಾಲೋಚನೆ ನಡೆಸಬೇಕಾಗಿತ್ತು, ಏಕೆಂದರೆ ಇ.ಡಿ. ಅದರ ಅಡಿಯಲ್ಲಿ ಕೆಲಸ ಮಾಡುವಂತದ್ದು. ಅವರು ಹಾಗೆ ಮಾಡಲಿಲ್ಲ, ಅಲ್ಲದೆ ಆತನ ಕೋರಿಕೆಯನ್ನು ಪರಿಗಣಿಸಲು ಎಂದಿನ ವಿದೇಶಾಂಗ ಮಂತ್ರಾಲಯದ ವಿಧಿ-ವಿಧಾನಗಳನ್ನೂ ಪಾಲಿಸಲಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಸುಷ್ಮಾ ಸ್ವರಾಜ್ ಅವರ ಪತಿ ಮತ್ತು ಪುತ್ರಿ ವಕೀಲರಾಗಿದ್ದು ಲಲಿತ್ ಮೋದಿಯ ಕಾನೂನು ವ್ಯವಹಾರಗಳ ಪ್ರತಿನಿಧಿಗಳಾಗಿದ್ದರು ಎಂಬುದೂ ಸ್ಥಾಪಿತವಾಗಿದೆ. ಎಂಬುದೂ ಸ್ಥಾಪಿತಗೊಂಡಿದೆ. ಆದ್ದರಿಂದ ಇಲ್ಲಿ ಸ್ಪಷ್ಟವಾಗಿ ಹಿತಾಸಕ್ತಿಗಳ ತಾಕಲಾಟದ ಪ್ರಶ್ನೆಯೂ ಇದೆ.
ಲಲಿತ್ ಮೋದಿಯ ಪ್ರಕರಣವನ್ನು ಮೋದಿ ಸರಕಾರ ಎತ್ತಿಕೊಂಡಿರುವ ರೀತಿಯೂ ಆತನೊಡನೆ ಸರಕಾರದ ಮತ್ತು ಬಿಜೆಪಿ ಮುಖಂಡರ ಕೊಂಡಿಗಳನ್ನು ಸೂಚಿಸುತ್ತದೆ. ಆಗಸ್ಟ್ 2014ರಲ್ಲಿ ದಿಲ್ಲಿ ಹೈಕೋರ್ಟಿನ ವಿಭಾಗೀಯ ಪೀಠ ಆತನ ಪಾಸ್‌ಪೋರ್ಟನ್ನು ಮತ್ತೆ ಕೊಡಬೇಕು ಎಂದು ಆದೇಶಿಸಿದಾಗ ಸರಕಾರ ಅದರ ವಿರುದ್ಧ ಅಪೀಲು ಹೋಗದಿರಲು ಬಯಸಿತು ಎಂಬುದು ಗಮನಾರ್ಹ. ಏಕೆಂದರೆ ಅದೇ ಹೈಕೋರ್ಟಿನ ನ್ಯಾಯಾಧೀಶ ರೊಬ್ಬರು ಯುಪಿಎ ಸರಕಾರ ಪಾಸ್‌ಪೋರ್ಟನ್ನು ರದ್ದು ಮಾಡಿರುವ ಕ್ರಮವನ್ನು ಎತ್ತಿ ಹಿಡಿದಿತ್ತು. ಈಗ ಲಲಿತ್ ಮೋದಿಗೆ ಭಾರತೀಯ ಪಾಸ್‌ಪೋರ್ಟ್ ನೀಡಲಾಗಿದೆ.
ಈಗ ರಾಜಸ್ತಾನದ ಬಿಜೆಪಿ ಸರಕಾರದ ಮುಖ್ಯಮಂತ್ರಿ ಯಾಗಿರುವ ವಸುಂಧರಾ ರಾಜೇ ಸಿಂಧ್ಯಾ ರಾಜಸ್ತಾನ ವಿಧಾನಸಭೆಯಲ್ಲಿ ಪ್ರತಿಪಕ್ಷದ ಮುಖಂಡರಾಗಿದ್ದಾಗ ಮೋದಿಯವರ ವಲಸೆಗೆ ಸಾಕ್ಷಿಯ ಹೇಳಿಕೆ ನೀಡಿದ್ದರು ಎಂಬ ಸಂಗತಿಯನ್ನು ಲಲಿತ್ ಮೋದಿಯವರ ಕಾನೂನು ಸಲಹಾ ತಂಡವೇ ಹೊರಗೆಡವಿದೆ. ಇದು ಲಲಿತ್ ಮೋದಿ ಮತ್ತು ಬಿಜೆಪಿ ಮುಖಂಡರ ನಡುವಿನ ನಂಟನ್ನು ಮತ್ತಷ್ಟು ದೃಢಪಡಿಸಿದೆ.
ಲಂಡನಿನ ’ಸಂಡೇ ಟೈಮ್ಸ್’ ಈ ವಿಷಯದಲ್ಲಿ ಸುಷ್ಮಾ ಸ್ವರಾಜ್ ಅವರ ಮಧ್ಯಪ್ರವೇಶವನ್ನು ಬಯಲಿಗೆಳೆದಂದಿನಿಂದ ಬಿಜೆಪಿ ಅಧ್ಯಕ್ಷರು ಮತ್ತು ಮೋದಿ ಸರಕಾರದ ಹಿರಿಯ ಮಂತ್ರಿಗಳು ಸುಷ್ಮಾ ಸ್ವರಾಜ್ ರವರ ರಕ್ಷಣೆಗೆ ನಿಂತಿದ್ದಾರೆ, ಅದು ಮಾನವೀಯ ಪರಿಗಣನೆಯ ಮೇಲೆ ಕೈಗೊಂಡ ಕ್ರಮ ಮಾತ್ರ ಎಂದು ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಗ್ಗೆ ಏನೂ ಹೇಳಿಲ್ಲ. ಆದರೆ ಗ್ರಹಮಂತ್ರಿ ಮತ್ತು ಹಣಕಾಸು ಮಂತ್ರಿಗಳು ಅವರು ಅನುಮೋದಿಸಿದ ನಿಲುವನ್ನೇ ತಳೆದಿದ್ದಾರೆ ಎಂದು ಊಹಿಸಬೇಕಾಗಿದೆ.
ಪ್ರಧಾನ ಮಂತ್ರಿಗಳು ಮತ್ತು ಬಿಜೆಪಿ ಸುಷ್ಮಾ ಸ್ವರಾಜ್‌ರನ್ನು ರಕ್ಷಿಸುತ್ತಿರುವುದು ಎಷ್ಟೊಂದು ಬಿಜೆಪಿ ಮುಖಂಡರು ಐಪಿಎಲ್-ಕ್ರಿಕೆಟ್ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂಬುದನ್ನು ಬಯಲಿಗೆ ತಂದಿದೆ. ಲಲಿತ್ ಮೋದಿ ಐಪಿಎಲ್ ಕಮಿಶನರ್ ಆಗಿದ್ದಾಗ ನರೇಂದ್ರ ಮೋದಿಯವರೇ ಗುಜರಾತ್ ಕ್ರಿಕೆಟ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿದ್ದರು.
ಈ ಸರಕಾರಕ್ಕೆ ಒಂದು ವರ್ಷವಾದಾಗ ಮೋದಿ ಆಳ್ವಿಕೆಯಲ್ಲಿ ಭ್ರಷ್ಟಾಚಾರವಿಲ್ಲ, ಚಮಚಾ ಬಂಡವಾಳಶಾಹಿ ಇಲ್ಲ ಎಂದು ಬೊಬ್ಬೆ ಹಾಕಿತ್ತು. ಆದರೆ ಅದೊಂದು ಟೊಳ್ಳು ಬೊಬ್ಬೆ ಎಂಬುದನ್ನು ಲಲಿತ್ ಮೋದಿ ವ್ಯವಹಾರ ಕಣ್ಣಿಗೆ ಕುಕ್ಕುವ ರೀತಿಯಲ್ಲಿ ತೋರಿಸಿ ಕೊಟ್ಟಿದೆ.
ಚಮಚಾ ಬಂಡವಾಳಶಾಹಿ ಯುಪಿಎ ಸರಕಾರದಲ್ಲಿ ಹೇಗಿತ್ತೋ, ಹಾಗೆಯೇ ಮೋದಿ ಸರಕಾರದಲ್ಲೂ ಅಷ್ಟೇ ಸಮೃದ್ಧವಾಗಿದೆ. ಇನ್ನು ಕಪ್ಪು ಹಣವನ್ನು ವಾಪಾಸು ತರಿಸಿಕೊಳ್ಳುವ ಮತ್ತು ಕಪ್ಪು ಹಣವನ್ನು ಬಿಳಿ ಮಾಡುವುದರ ಮೇಲೆ ಗದಾಪ್ರಹಾರ ಮಾಡಲಾಗುತ್ತಿದೆ ಎಂಬ ಮಾತುಗಳನ್ನು ಕೇಳಿ ಸುಷ್ಮಾ ಸ್ವರಾಜ್ ಅವರ ಕೃಪೆಯಿಂದ ಜಗತ್ತಿನ ಸುತ್ತೆಲ್ಲ ಠಳಾಯಿಸುತ್ತಿರುವ ಲಲಿತ್ ಮೋದಿ ತನ್ನೊಳಗೇ ನಗುತ್ತಿರಬೇಕು!
ಇ.ಡಿ.(ಜಾರಿ ನಿರ್ದೇಶನಾಲಯ) ಲಲಿತ್ ಮೋದಿ ವಿರುದ್ಧ ಹಾಕಿರುವ ಹತ್ತಾರು ಕೇಸುಗಳ ಗತಿಯೇನು? ಸ್ವತಃ ದೇಶದ ಕ್ರಿಕೆಟ್ ನಿಯಂತ್ರಣ ಮಂಡಳಿ, ಬಿಸಿಸಿಐನಲ್ಲಿ ದೊಡ್ಡ ಕುಳವಾಗಿರುವ ಅರುಣ್ ಜೇಟ್ಲಿಯವರು ಹಣಕಾಸು ಮಂತ್ರಿಯಾಗಿ ಲಲಿತ್ ಮೋದಿಯವರನ್ನು ನ್ಯಾಯ ತೀರ್ಪಿಗೆ ಒಳಪಡಿಸಬಲ್ಲರೇ?
ಮೋದಿ ಸರಕಾರ ಮತ್ತು ಬಿಜೆಪಿ ವಾಸ್ತವತೆಯನ್ನು ನಿರಾಕರಿಸಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸುಷ್ಮಾ ಸ್ವರಾಜ್ ಅವರು ಮಂತ್ರಿಯಾಗಿ ಮುಂದುವರೆಯುವುದು ಅಸಮರ್ಥನೀಯ. ಪೂರ್ಣ ಪ್ರಮಾಣದ ತನಿಖೆಯ ಅಗತ್ಯವಿದೆ. ವಸುಂಧರಾ ರಾಜೇ ಅವರು ಲಲಿತ್ ಮೋದಿಯವರಿಗೆ ನಿಜವಾಗಿಯೂ ಗುಟ್ಟಾಗಿ ಸಾಕ್ಷಿ ಪ್ರಮಾಣ ಪತ್ರ ನೀಡಿದ್ದರೆ ಆಕೆಯೂ ಅಧಿಕಾರದಿಂದ ಇಳಿಯಲೇ ಬೇಕು. ಇ.ಡಿ. ತನಿಖೆಗಳು ಇಷ್ಟೊಂದು ನಿಧಾನವಾಗಿ ಒಲ್ಲದ ಮನದಲ್ಲಿರುವಂತೆ ಸಾಗಿದೆ ಏಕೆ ಎಂಬುದಕ್ಕೆ ಹಣಕಾಸು ಮಂತ್ರಿ ಅರುಣ್ ಜೇಟ್ಲಿಯವರು ವಿವರಣೆ ನೀಡಬೇಕಾಗಿದೆ. ಲಲಿತ್ ಮೋದಿಯನ್ನು ಭಾರತದ ವಶಕ್ಕೆ ಒಪ್ಪಿಸುವಂತೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲು ಒಂದು ಸಮಯ ಚೌಕಟ್ಟನ್ನು ಹಾಕಬೇಕಾಗಿದೆ.
ಇ.ಡಿ. ತನಿಖೆಗಳು ಇಷ್ಟೊಂದು ನಿಧಾನವಾಗಿ ಒಲ್ಲದ ಮನದಲ್ಲಿರುವಂತೆ ಸಾಗಿದೆ ಏಕೆ ಎಂಬುದಕ್ಕೆ ಹಣಕಾಸು ಮಂತ್ರಿ ಅರುಣ್ ಜೇಟ್ಲಿಯವರು ವಿವರಣೆ ನೀಡಬೇಕಾಗಿದೆ. ಲಲಿತ್ ಮೋದಿಯನ್ನು ಭಾರತದ ವಶಕ್ಕೆ ಒಪ್ಪಿಸುವಂತೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲು ಒಂದು ಸಮಯ ಚೌಕಟ್ಟನ್ನು ಹಾಕಬೇಕಾಗಿದೆ.