ರೈತ ಸಂಘಟನೆಗಳ ಪ್ರತಿಭಟನೆಗೆ ಡಿಕೆಶಿ ಬೆಂಬಲ

ಬೆಂಗಳೂರು: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ, ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ಬೆಂಬಲ ಸೂಚಿಸಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್, ಪ್ರತಿಭಟನಾ ನಿರತ ವಿವಿಧ ರೈತ ಸಂಘಗಳ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ರೈತರ ಹೋರಾಟಕ್ಕೆ ಕೆಪಿಸಿಸಿ ಬೆಂಬಲವಾಗಿ ನಿಲ್ಲಲಿದ್ದು, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಜನರಿಗೆ ತಲುಪಿಸಲು ಶ್ರಮಿಸಲಿದೆ ಎಂದು ಈ ವೇಳೆ ಡಿಕೆಶಿ ರೈತ ನಾಯಕರಿಗೆ ಭರವಸೆ ನೀಡಿದರು.

ಕೇಂದ್ರ ಸರ್ಕಾರ ಕೃಷಿ ವಿಧೇಯಕದ ಮೂಲಕ ರೈತ ಸಮುದಾಯದ ಮೇಲೆ ದಾಳಿ ಮಾಡಲು ಸಜ್ಜಾಗಿದ್ದರೆ, ರಾಜ್ಯ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ ಮೂಲಕ ಕೃಷಿ ಕ್ಷೇತ್ರವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂದು ಡಿಕೆಶಿ ಈ ವೇಳೆ ಹರಿಹಾಯ್ದರು.

ರಾಜ್ಯ ಸರ್ಕಾರದ ಕೃಷಿ ನೀತಿಗಳನ್ನು ಖಂಡಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದ್ದು, ರಾಜ್ಯದ ರೈತ ಬಾಂಧವರೊಂದಿಗೆ ಕಾಂಗ್ರೆಸ್ ಗಟ್ಟಿಯಾಗಿ ನಿಲ್ಲಲಿದೆ ಎಂದು ಈ ವೇಳೆ ಕೆಪಿಸಿಸಿ ಅಧ್ಯಕ್ಷರು ಭರವಸೆ ನೀಡಿದರು.

ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಡಿಕೆಶಿ, ಪ್ರತಿಭಟನೆಯ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಭೂ ಸುಧಾರಣೆ, ವಿದ್ಯುತ್ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ರಾಜ್ಯದ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

Donate Janashakthi Media

Leave a Reply

Your email address will not be published. Required fields are marked *