ಬೆಂಗಳೂರು: ʻʻರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕಳೆದ ಎರಡು ವರ್ಷ ಉತ್ತಮ ಸಾಧನೆಗಳನ್ನು ಮಾಡಿರುವ ಜೊತೆಗೆ ಪಕ್ಷದ ವರಿಷ್ಠರ ಸೂಚನೆಯಂತೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯಡಿಯೂರಪ್ಪ ಅವರು ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆʼʼ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ʻʻಯಡಿಯೂರಪ್ಪ ಜನನಾಯಕರು, ಯಾವಾಗಲೂ ಜನರೊಂದಿಗೆ ಇದ್ದು ರಾಜಕಾರಣ ಮಾಡುವವರು. ಅಷ್ಟೇ ಅಲ್ಲದೆ ಪಕ್ಷದ ಶಿಸ್ತಿನಿಂದ ನಡೆದುಕೊಳ್ಳುವವರು ಸಹ. ಅವರ ನೇತೃತ್ವದಲ್ಲಿ ಎರಡು ವರ್ಷ ಉತ್ತಮ ಸಾಧನೆಗಳನ್ನು ಮಾಡಲಾಗಿದೆ. ರಾಜೀನಾಮೆಯ ಅವರ ನಿರ್ಧಾರ ವರಿಷ್ಠರ ಸೂಚನೆಯಂತೆಯೇ ಬಹಳ ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಮಾರ್ಗದರ್ಶನ ಸದಾ ನಮಗೆ ಇರುತ್ತದೆ ಎಂದು ತಿಳಿಸಿದರು.
ಇದನ್ನು ಓದಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಯಡಿಯೂರಪ್ಪ
ಇನ್ನು ರಾಜೀನಾಮೆ ನೀಡುವ ಕುರಿತು ನಿಮಗೆ ಮೊದಲೇ ಸೂಚನೆ ಕೊಟ್ಟಿದ್ದರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಂದು ವಾರದ ಹಿಂದೆಯೇ 25 ಅಥವಾ 26 ಕ್ಕೆ ಹೈಕಮಾಂಡ್ನಿಂದ ಸೂಚನೆ ಬರುತ್ತದೆ ಅದಕ್ಕೆ ಕಾಯುತ್ತಿದ್ದೇನೆ ಎಂದಿದ್ದರು. ಇದೀಗ ಮಾತು ಕೊಟ್ಟ ಹಾಗೆ ನಡೆದುಕೊಂಡಿದ್ದಾರೆ ಎಂದರು.
ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ನಿಮ್ಮ ಹೆಸರು ಇದೆಯಾ ಎಂದಾಗ ಅದು ವರಿಷ್ಠರಿಗೆ ಬಿಟ್ಟಿದ್ದು ಎಂದರು.
ಶಿಸ್ತಿನ ಸಿಪಾಯಿ ಯಡಿಯೂರಪ್ಪ: ಆರ್ ಅಶೋಕ
ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಆರ್ ಆಶೋಕ ಅವರು ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದು ಅದನ್ನು ಅಂಗೀಕರಿಸಲಾಗಿದೆ. ಈಗ ಯಡಿಯೂರಪ್ಪ ಅವರು ಹಂಗಾಮಿ ಮುಖ್ಯಮಂತ್ರಿ ಎಂದರು.
ಪಕ್ಷದ ಹೈಕಮಾಂಡ್ ಸೂಚನೆಯಂತೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಶಿಸ್ತಿನ ಸಿಪಾಯಿಯಾಗಿ ಅವರು ಕೆಲಸ ಮಾಡಿದ್ದಾರೆ. ಅವರು ಎಂದೆಂದಿಗೂ ಬಿಜೆಪಿಯ ಆಸ್ತಿ ಎಂದು ಅಶೋಕ್ ತಿಳಿಸಿದರು.
ಮುಖ್ಯಮಂತ್ರಿ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅವರು ಯಾರನ್ನು ಘೋಷಣೆ ಮಾಡುತ್ತಾರೋ ಅವರ ಜೊತೆ ನಾವು ಕೆಲಸ ಮಾಡುತ್ತೇವೆ. ಎಲ್ಲರಿಗೂ ಮುಖ್ಯಮಂತ್ರಿ ಆಗೋ ಆಕಾಂಕ್ಷೆ ಇರುತ್ತದೆ. ಎಲ್ಲರೂ ಸಮರ್ಥರಿದ್ದಾರೆ. ಎಂದು ಪರೋಕ್ಷವಾಗಿ ನಾನು ಸಿಎಂ ಅಭ್ಯರ್ಥಿ ಎಂದು ಅಶೋಕ್ ಹೇಳಿದರು.