- ಛತ್ ಪೂಜೆ ವಿವಾದಕ್ಕೆ ಬಿಜೆಪಿ ಕಾರಣ ಎಂದು ಆದಿತ್ಯ ಠಾಕ್ರೆ ಆರೋಪ.
- ಮರಾಠಿ ಮತ್ತು ಮರಾಠಿಯೇತರರ ನಡುವೆ ಸಂಘರ್ಷ ಸೃಷ್ಟಿಸುವ ಯತ್ನ
- ಬೆಲೆ ಏರಿಕೆ, ಮಾಲಿನ್ಯ, ನಿರುದ್ಯೋಗದಿಂದ ಜನರ ಗಮನ ಬೇರೆಡೆ ಸೆಳೆಯುವ ಆರೋಪ.
- ಬಿಜೆಪಿ ವಿರುದ್ಧ ರಾಜ್ ಠಾಕ್ರೆ ಕೂಡ ವಾಗ್ದಾಳಿ.
Aaditya Thackeray: ಮಹಾರಾಷ್ಟ್ರದಲ್ಲಿ ಛತ್ ಪೂಜೆ ಆಚರಣೆಗೆ ಸಂಬಂಧಿಸಿದ ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ವಿಚಾರವಾಗಿ ಬಿಜೆಪಿ ವಿರುದ್ಧ ಶಿವಸೇನೆ (UBT) ನಾಯಕ ಆದಿತ್ಯ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಮರಾಠಿ ಮತ್ತು ಮರಾಠಿಯೇತರ ಸಮುದಾಯಗಳ ನಡುವೆ ಸಂಘರ್ಷ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದು ಬಿಜೆಪಿಯ ಪ್ರಾಯೋಜಿತ ವಿವಾದ ಎಂದು ಅವರು ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಆದಿತ್ಯ ಠಾಕ್ರೆ, ಬೆಲೆ ಏರಿಕೆ, ಮಾಲಿನ್ಯ, ನೀರಿನ ಕೊರತೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗದಂತಹ ಪ್ರಮುಖ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಇಂತಹ ವಿವಾದಗಳನ್ನು ಹುಟ್ಟುಹಾಕುತ್ತಿದೆ ಎಂದು ದೂರಿದರು. ಪ್ರತಿಯೊಬ್ಬರೂ ತಮ್ಮ ಹಬ್ಬಗಳನ್ನು ಆಚರಿಸುವ ಹಕ್ಕು ಹೊಂದಿದ್ದಾರೆ. ಆದರೆ ಯಾರೂ ತಮ್ಮ ಹಬ್ಬವನ್ನು ಇತರರ ಮೇಲೆ ಬಲವಂತವಾಗಿ ಹೇರುವಂತಿಲ್ಲ. ಈ ತತ್ವವನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.
ಆದಿತ್ಯ ಠಾಕ್ರೆ ಅವರ ಈ ಹೇಳಿಕೆಗೂ ಮುನ್ನ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ ಕೂಡ ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. ಛತ್ ಪೂಜೆಯನ್ನು ಮುಂದಿಟ್ಟುಕೊಂಡು ಮುಂಬೈನಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘರ್ಷ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ದೂರಿದ್ದರು. ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮರಾಠಿ ಮತ್ತು ಉತ್ತರ ಭಾರತೀಯ ಸಮುದಾಯಗಳ ನಡುವೆ ಸಂಘರ್ಷಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂಬುದು ಅವರ ಆರೋಪವಾಗಿತ್ತು.
ಇದನ್ನೂ ಓದಿ: ಎರಡು ವರ್ಷಗಳಲ್ಲಿ ಎಐಬಿಇ ಪಾಸಾಗದ ವಕೀಲರು ವೃತ್ತಿ ನಡೆಸುವಂತಿಲ್ಲ: ರಾಜ್ಯ ವಕೀಲರ ಪರಿಷತ್ ಸೂಚನೆ
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ರಾಜ್ ಠಾಕ್ರೆ, ಛತ್ ಪೂಜೆಗೆ ಸಂಬಂಧಿಸಿದ ರೀಲ್ಸ್‌ಗಳನ್ನು ಹರಡುವ ಮೂಲಕ ಮಹಾರಾಷ್ಟ್ರದಲ್ಲಿ ಸಾಂಸ್ಕೃತಿಕ ಸಂಘರ್ಷ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದರು. ಮರಾಠಿ ಜನರು ಇಂತಹ ವಿವಾದಗಳಿಗೆ ಸಿಲುಕಬಾರದು ಎಂದು ಮನವಿ ಮಾಡಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಗೆರಿಲ್ಲಾ ಯುದ್ಧತಂತ್ರವನ್ನು ಉಲ್ಲೇಖಿಸಿ, ಬಿಜೆಪಿ ಆಯ್ಕೆ ಮಾಡಿದ ಹೋರಾಟದ ಅಂಗಳದಲ್ಲಿ ಮಹಾರಾಷ್ಟ್ರ ಹೋರಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.
ಇದನ್ನೂ ನೋಡಿ: ಮಕ್ಕಳ ದಿನಾಚರಣೆ | ಬಾಲ್ಯವನ್ನೇ ಕಳೆದುಕೊಂಡ ಮಕ್ಕಳಿಗಿದು ಯಾವ ಸಂಭ್ರಮ? Janashakthi Media
ಇದಕ್ಕೂ ಎರಡು ದಿನಗಳ ಹಿಂದೆ ಮುಂಬೈನ ಕೆಲವು ರೈಲು ನಿಲ್ದಾಣಗಳಲ್ಲಿ ಛತ್ ಪೂಜೆಗೂ ಮುನ್ನ ಭೋಜ್‌ಪುರಿ ಹಾಡುಗಳನ್ನು ಹಾಕಿದ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ರಾಜ್ ಠಾಕ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಛತ್ ಪೂಜೆ ಸಂದರ್ಭದಲ್ಲಿ ಬಿಹಾರದ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಇಂತಹವರು ಪ್ರತಿವರ್ಷ ಹಬ್ಬದ ಸಮಯದಲ್ಲಿ ಮಾಧ್ಯಮಗಳ ಗಮನ ಸೆಳೆಯಲು ವಿವಾದ ಸೃಷ್ಟಿಸುತ್ತಾರೆ ಎಂದು ಟೀಕಿಸಿದ್ದರು
