ಮತ್ತೊಂದು ‘ಉತ್ತೇಜನಾ’ ಪ್ಯಾಕೇಜ್ : ಸರಕಾರದ ಖರ್ಚುಗಳಲ್ಲಿ ಗಣನೀಯ ಹೆಚ್ಚಳ ಇಲ್ಲ: ಸಿಪಿಎಂ

ನವದೆಹಲಿ: ಕೇಂದ್ರ ಸರಕಾರ ಮತ್ತೊಂದು ‘ಉತ್ತೇಜನಾ’ ಪ್ಯಾಕೇಜನ್ನು ಪ್ರಕಟಿಸಿದೆ, ಆದರೆ ಇದರಲ್ಲಿ ಸರಕಾರದ ಖರ್ಚುಗಳಲ್ಲಿ ಯಾವುದೇ ಗಣನೀಯ ಏರಿಕೆಯೂ ಇಲ್ಲ, ಅಥವ ಜನಗಳಿಗೆ ನೇರ ನಗದು ವರ್ಗಾವಣೆಗಳೂ ಇಲ್ಲ ಎಂದು ಸಿಪಿಐ(ಎಂ) ಪ್ರತಿಕ್ರಿಯೆ ವ್ಯಕ್ತಪಡಿಸಿದೆ.

ಸರಕಾರ, ಹಿಂದಿನ ಮೂರು ಪ್ರಕಟಣೆಗಳು, ಮತ್ತು ಈ ಪ್ರಕಟಣೆಯೊಂದಿಗೆ ಒಟ್ಟು ಜಿಡಿಪಿಯ 15ಶೇ.ದಷ್ಟು ಉತ್ತೇಜನೆಗಳನ್ನು ಕೊಟ್ಟಿರುವುದಾಗಿ ಬಡಾಯಿ ಕೊಚ್ಚಿಕೊಂಡಿದೆ. ಆದರೆ ವಾಸ್ತವತೆಯೇನೆಂದರೆ, ಸರಕಾರ ಮಾಡುವ ಒಟ್ಟು ಹೆಚ್ಚುವರಿ ಖರ್ಚುಗಳ ಮೊತ್ತ, ಅತ್ಯಂತ ಉದಾರವಾಗಿ ಅಂದಾಜು ಮಾಡಿದರೂ, ರೂ. 3,72,295 ಕೋಟಿ ರೂ. ಅಂದರೆ ಕೇವಲ ಜಿಡಿಪಿಯ 1.9ಶೇ. ಮಾತ್ರ. ಜಗತ್ತಿನ ಇತರ ಪ್ರಧಾನ ಅರ್ಥವ್ಯವಸ್ಥೆಗಳಿಗೆ ಹೋಲಿಸಿದರೆ ಇದು ಅತ್ಯಲ್ಪ, ಅವು ತಮ್ಮ ಜಿಡಿಪಿಯ 10ರಿಂದ 15ಶೇ.ದಷ್ಟು ಉತ್ತೇಜನೆಗಳನ್ನು ಕೊಟ್ಟಿವೆ ಎಂಬ ಸಂಗತಿಯತ್ತ ಸಿಪಿಎಂ ಗಮನ ಸೆಳೆದಿದೆ.

ಸರಕಾರದ ಖರ್ಚುಗಳಲ್ಲಿ ಹೆಚ್ಚಳದ ಪ್ರಕಟಣೆಗಳು ಕೂಡ ಕೇವಲ ಬಜೆಟ್ ಹಂಚಿಕೆಗಳಷ್ಟೇ. ಇವನ್ನು ಬಜೆಟಿನ ಇತರ ಬಾಬ್ತುಗಳಲ್ಲಿ ಕಡಿತ ಮಾಡಿ ಹೊಂದಿಸಿಕೊಳ್ಳಬಹುದು. ಆ ಮೂಲಕ ಹೆಚ್ಚುವರಿ ಖರ್ಚುಗಳ ಮೊತ್ತ ಉದಾರವಾಗಿ ಅಂದಾಜುಮಾಡಿದ ಜಿ.ಡಿ.ಪಿ.ಯ 1.9ಶೇ.ಕ್ಕಿಂತಲೂ ಕಡಿಮೆಯಾಗಬಹುದು. ಸರಕಾರದ ಖರ್ಚುಗಳ ಬಜೆಟ್ ಅಂದಾಜಿಗಿAತ ಎಷ್ಟು ಹೆಚ್ಚು ಹಣವನ್ನು ಖರ್ಚು ಮಾಡಲಾಗುತ್ತದೆ ಎಂದು ಹಣಕಾಸು ಮಂತ್ರಿಗಳು ದೇಶಕ್ಕೆ ಹೇಳಬೇಕಾಗಿದೆ. ಆಗ ಮಾತ್ರವೇ ನಿಜವಾದ ಚಿತ್ರ ಹೊಮ್ಮುತ್ತದೆ.

ಭಾರತೀಯ ಅರ್ಥವ್ಯವಸ್ಥೆ ಇತಿಹಾಸದಲ್ಲೇ ಮೊದಲ ಬಾರಿಗೆ ಆಳವಾದ ಹಿಂಜರಿತಕ್ಕೊಳಗಾಗಿದೆ ಎಂಬ ರಿಸರ್ವ್ ಬ್ಯಾಂಕ್‌ನ ತೀವ್ರ ತಪ್ಪು ಹೊರಿಕೆಯ ಮರುದಿನವೇ ಬಂದಿರುವ ಈ ಪ್ರಕಟಣೆ ಆರ್ಥಿಕ ಪುನಶ್ಚೇತನದ ನೀಲನಕ್ಷೆಯನ್ನು ಮುಂದಿಡುವಲ್ಲಿ ವಿಫಲವಾಗಿದೆ.

ಈ ಪ್ಯಾಕೇಜಿನ ಇತರ ಅಂಶಗಳು, ಹಿಂದಿನ ಮೂರು ಪ್ರಕಟಣೆಗಳಲ್ಲಿದ್ದಂತೆ, ಹೂಡಿಕೆಗಳನ್ನು ಹೆಚ್ಚಿಸುತ್ತವೆ, ಉದ್ಯೋಗಗಳನ್ನು ಸೃಷ್ಟಿಸುತ್ತವೆ ಮತ್ತು ಅರ್ಥವ್ಯವಸ್ಥೆ ಚೇತರಿಸಿಕೊಳ್ಳುವಂತೆ ಮಾಡುತ್ತವೆ ಎಂಬ ಆಶಯದಿಂದ ಸಾಲ ಪಡೆಯಲು ಅನುಕೂಲ ಕಲ್ಪಿಸಿ ಕೊಡುವಂತವುಗಳು. ಅದರೆ ಇಂತಹ ಚೇತರಿಕೆ ಎಂದೂ ಆಗದು, ಏಕೆಂದರೆ ಇಂತಹ ಹೂಡಿಕೆಗಳಿಂದ ಉತ್ಪಾದಿಸಿದ ಸರಕುಗಳು ಮಾರಾಟವಾಗಬೇಕು ತಾನೇ? ಆದರೆ ಭಾರತೀಯ ಮಾರುಕಟ್ಟೆ ಮುಳುಗುತ್ತಿದೆ, ಏಕೆಂದರೆ, ಜನಗಳ ಖರೀದಿ ಸಾಮರ್ಥ್ಯ ಕಡಿಮೆ-ಕಡಿಮೆಯಾಗುತ್ತಲೇ ಇದೆ.
ನಮಗೆ ಬಹಳ ಅಗತ್ಯವಿರುವ ಮೂಲರಚನೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸಿ, ಉದ್ಯೋಗಗಳನ್ನು ಸೃಷ್ಟಿಸಿ, ಆಂತರಿಕ ಬೇಡಿಕೆಯನ್ನು ಹೆಚ್ಚಿಸುವ ಮೂಲಕ ಮಾತ್ರವೇ ಅರ್ಥವ್ಯವಸ್ಥೆಯಲ್ಲಿ ಮತ್ತೆ ಚೇತರಿಕೆ ಸಾಧ್ಯ.

ಸರಕಾರದ ಈ ಉತ್ತೇಜನಾ ಪ್ಯಾಕೇಜುಗಳು ವಿದೇಶೀ ಮತ್ತು ದೇಶೀ ಬಂಡವಾಳಗಳ ಲಾಭಗಳನ್ನು ಗರಿಷ್ಟ ಮಟ್ಟಕ್ಕೇರಿಸುವ ಅಗತ್ಯವನ್ನು ಈಡೇರಿಸಬಹುದಷ್ಟೇ, ಅರ್ಥವ್ಯವಸ್ಥೆಯ ಪುನಶ್ಚೇತನ ಇವುಗಳಿಂದ ಸಾಧ್ಯವಿಲ್ಲ. ಏರುಗತಿಯಲ್ಲಿರುವ ನಿರುದ್ಯೋಗ, ಹಸಿವು ಮತ್ತು ಬೆಲೆಯೇರಿಕೆಗಳಿಂದ ಜನಗಳ ಸಂಕಟಗಳು ಹೆಚ್ಚುತ್ತಲೇ ಹೋಗುತ್ತವೆ, ಬಡತನ ಮತ್ತು ಅಭಾವಗಳು ಮತ್ತಷ್ಟು ಬೆಳೆಯಲು ದಾರಿ ಮಾಡಿ ಕೊಡುತ್ತವೆ ಎಂದಿರುವ ಸಿಪಿಐ(ಎಂ) ನೇರ ನಗದು ವರ್ಗಾವಣೆ ಮತ್ತು ಉಚಿತ ಆಹಾರ ವಿತರಣೆ ತಕ್ಷಣವೇ ಆಗಬೇಕಾಗಿದೆ ಎಂದು ಪುನರುಚ್ಚರಿಸಿದೆ. ಇದು ಮಾನವೀಯ ಆಧಾರದಿಂದಷ್ಟೇ ಅಲ್ಲ, ಜನಗಳಿಗೆ ಖರೀದಿ ಸಾಮರ್ಥ್ಯವನ್ನು ಕೊಡಲು ಕೂಡ ಅಗತ್ಯ, ಇದರಿಂದ ಮಾತ್ರವೇ ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಹೆಚ್ಚಬಲ್ಲದು, ಈ ಮೂಲಕವೇ  ಯಾವುದೇ ಆರ್ಥಿಕ ಪುನಶ್ಚೇತನ ಆರಂಭವಾಗಬಲ್ಲದು ಎಂದು ಸಿಪಿಎಂ ಹೇಳಿದೆ.

 

 

Donate Janashakthi Media

Leave a Reply

Your email address will not be published. Required fields are marked *