ಮಣಿಪುರ: ಕಲುಷಿತ ಮದ್ಯ ಸೇವನೆಯಿಂದ ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ಭಾರೀ ದುರಂತ ಸಂಭವಿಸಿದೆ. ಶಂಕಿತ ಮೆಥನಾಲ್ ವಿಷಬಾಧೆಯಿಂದ ಕನಿಷ್ಠ 11 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ನವೆಂಬರ್ 18ರ ಬುಧವಾರದಿಂದ ಈ ಘಟನೆ ವರದಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ. ಮಣಿಪುರ
ಚಂದೇಲ್ ಜಿಲ್ಲೆಯ ಚಕ್ಪಿಕರಾಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಈ ದುರಂತಕ್ಕೆ ತುತ್ತಾಗಿದ್ದಾರೆ. ಅಸ್ವಸ್ಥರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂಫಾಲ್‌ನ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆ (JNIMS), ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆ (RIMS), ಶಿಜಾ ಆಸ್ಪತ್ರೆ ಮತ್ತು ಬಾಬಿನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿಗಳ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ
ಮಣಿಪುರ ಮುಖ್ಯಮಂತ್ರಿ ಯುಮ್ನಾಮ್ ಖೇಮಚಂದ್ ಸಿಂಗ್ ಅವರು ಶುಕ್ರವಾರ ಮಧ್ಯಾಹ್ನ ಶಿಜಾ ಮತ್ತು ಬಾಬಿನಾ ಆಸ್ಪತ್ರೆಗಳಿಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಚಂದೇಲ್ ಜಿಲ್ಲೆಯ ಚಕ್ಪಿಕರಾಂಗ್ ಪ್ರದೇಶದಲ್ಲಿ ಶಂಕಿತ ಕಲುಷಿತ ಮದ್ಯ ಸೇವನೆಯಿಂದ ಅಸ್ವಸ್ಥರಾದವರಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದಿರುವುದಾಗಿ ತಿಳಿಸಿದ್ದಾರೆ. ಶಿಜಾ ಆಸ್ಪತ್ರೆಯಲ್ಲಿ 140ಕ್ಕೂ ಹೆಚ್ಚು ಮಂದಿ ಹಾಗೂ ಬಾಬಿನಾ ಆಸ್ಪತ್ರೆಯಲ್ಲಿ 41 ಮಂದಿ ದಾಖಲಾಗಿದ್ದರು. ಕಳೆದ 48 ಗಂಟೆಗಳಲ್ಲಿ ಸಾವಿನ ಸಂಖ್ಯೆ 11ಕ್ಕೆ ತಲುಪಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
312ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ
ಶಿಜಾ ಆಸ್ಪತ್ರೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಚೇತನ್ ಕೆ. ಅವರ ಪ್ರಕಾರ, ಅಸ್ವಸ್ಥರಲ್ಲಿ ತಲೆಸುತ್ತು, ಹೊಟ್ಟೆನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಕೆಲವು ರೋಗಿಗಳಿಗೆ ಹಿಮೋಡಯಾಲಿಸಿಸ್ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಮಣಿಪುರ
ಶಿಜಾ ಆಸ್ಪತ್ರೆಯ ಮಾಹಿತಿ ಪ್ರಕಾರ, ಮೆಥನಾಲ್ ವಿಷಬಾಧೆ ಶಂಕೆಯ ಹಿನ್ನೆಲೆಯಲ್ಲಿ ಈವರೆಗೆ 312ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಕಲುಷಿತ ಮದ್ಯವನ್ನು ಕಾಕ್ಚಿಂಗ್ ಜಿಲ್ಲೆಯ ಸುಗ್ನು ಪ್ರದೇಶದಿಂದ ಖರೀದಿಸಿರುವ ಸಾಧ್ಯತೆ ಇದೆ. ಆದರೆ, ಮದ್ಯದಲ್ಲಿ ವಿಷಕಾರಿ ಅಂಶ ಹೇಗೆ ಸೇರಿತು ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.
ಇದನ್ನೂ ಓದಿ: ಕಾವೇರಿ ನೀರು ವಿವಾದ: ತಮಿಳುನಾಡಿಗೆ 11 ಟಿಎಂಸಿ ನೀರು ಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ತನಿಖೆಗೆ ಸರ್ಕಾರದ ಭರವಸೆ
ಪರಿಸ್ಥಿತಿಯನ್ನು ನಿಯಂತ್ರಿಸಲು ಚಂದೇಲ್ ಜಿಲ್ಲೆಗೆ ಸಾಮಾನ್ಯ ವೈದ್ಯಕೀಯ ತಜ್ಞರ ನೇತೃತ್ವದ ವೈದ್ಯಕೀಯ ತಂಡವನ್ನು ಅಗತ್ಯ ಔಷಧಗಳೊಂದಿಗೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಘಟನೆ ಕುರಿತು ಸರ್ಕಾರ ತನಿಖೆ ನಡೆಸಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಚಂದೇಲ್ ಕ್ಷೇತ್ರದ ಶಾಸಕಿ ಎಸ್.ಎಸ್. ಓಲಿಶ್ ಅವರು ಹೆಚ್ಚಿನ ರೋಗಿಗಳನ್ನು ಇಂಫಾಲ್‌ಗೆ ಕರೆತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಚಕ್ಪಿಕರಾಂಗ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಕ್ಷದ ಕಾರ್ಯಕರ್ತರು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ವಾಹನಗಳ ವ್ಯವಸ್ಥೆಯಲ್ಲಿ ನಿರತರಾಗಿದ್ದಾರೆ. ಈ ದುರಂತದಿಂದ ಚಂದೇಲ್ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಆರೋಗ್ಯ ಇಲಾಖೆ ಮತ್ತು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.
ಇದನ್ನೂ ನೋಡಿ: ಸಾಹಿತ್ಯಕ್ಕೆ ಪ್ರಾಯೋಜಕತ್ವ| ಜಿಂದಾಲ್ ಸಾಹಿತ್ಯ ಹಬ್ಬದ ನಡುವೆ ‘ಜನನುಡಿ’ ಯಾಕೆ ಮಾದರಿಯಾಗುತ್ತದೆ? Janashakthi Media
