ಬೆಂಗಳೂರು ಮಳೆ ಅನಾಹುತಕ್ಕೆ ಯಾರು ಕಾರಣ ಎಂದು ದಾಖಲೆ ಸಮೇತ ತೋರಿಸುತ್ತೇನೆ – ಆರ್ ಅಶೋಕ್

ಬೆಂಗಳೂರು: ಕಂದಾಯ ಸಚಿವನಾಗಿ, ವಿಪತ್ತು ನಿರ್ವಹಣೆಯ ಮುಖ್ಯಸ್ಥನಾಗಿ ಇಂದು ಅಥವಾ ನಾಳೆ ವಿಧಾನಸಭೆಯಲ್ಲಿ ಬೆಂಗಳೂರಿನ ಮಳೆ ಅನಾಹುತ ವಿಚಾರ ಕುರಿತು ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡುತ್ತೇನೆ, ಆ ಸಂದರ್ಭದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಭಾರೀ ಮಳೆಯಾದಾಗ ಪ್ರವಾಹ ಉಂಟಾಗುವ ಬಗ್ಗೆ ಅದಕ್ಕೆ ಮೂಲ ಕಾರಣರು ಯಾರು ಎಂದು ತೋರಿಸುತ್ತೇನೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕಲೆಹಾಕಿ ದಾಖಲೆಗಳನ್ನು ಸಿದ್ದಪಡಿಸುವಂತೆ ಸೂಚಿಸಿದ್ದೇನೆ. ಅಧಿಕಾರಿಗಳು ಕೂಡ ಅಗತ್ಯವಿರುವ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಕೆರೆಗಳನ್ನು ನುಂಗಿದ ಮೂಲ ಪುರುಷರು ಯಾರು, ಯಾವ ಯಾವ ಸರ್ಕಾರದಲ್ಲಿ ಎಷ್ಟೆಷ್ಟು ಒತ್ತುವರಿಯಾಗಿದೆ ಎಲ್ಲವನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.

ವಿಧಾನಸಭೆಯ ಸಭಾಧ್ಯಕ್ಷರ ಬಳಿ ಚರ್ಚಿಸಿ ಸಮಯ ನಿಗದಿಪಡಿಸಬೇಕೆಂದು ಮನವಿ ಮಾಡುತ್ತೇವೆ. ಅವರು ಯಾವ ಸಮಯ ನಿಗದಿಪಡಿಸುತ್ತಾರೋ ಅಂದೇ ಬಿಡಗಡೆ ಮಾಡುತ್ತೇನೆ ಎಂದರು.
ಅಧಿಕಾರಿಗಳ ಮೇಲೆ ಕೆಲವರು ಒತ್ತಡ ಹಾಕಿ ಕೆರೆಗಳನ್ನು ಮುಚ್ಚಿ ಕಟ್ಟಡಗಳನ್ನು ಕಟ್ಟಿದ ಪರಿಣಾಮ ಬೆಂಗಳೂರಿಗೆ ಈ ಪರಿಸ್ಥಿತಿ ಬಂದಿದೆ. ಕೆರೆಗಳನ್ನು ಮುಚ್ಚಿದ ಪರಿಣಾಮ ನೀರು ಸರಾಗವಾಗಿ ಹರಿಯದೆ ರಾಜಕಾಲುವೆಗೆ ಹೋಗದೆ ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಯಾವ ಕಾಲದಲ್ಲಿ ಯಾವ ಸರ್ಕಾರ, ಯಾವ ಮುಖ್ಯಮಂತ್ರಿಗಳು, ಅಧಿಕಾರಿಗಳು ಅನುಮೋದನೆ ಕೊಟ್ಟಿದ್ದರು ಎಂಬ ಬಗ್ಗೆ ದಾಖಲೆಗಳು ಲಭ್ಯವಾಗಿವೆ. ಸದನದಲ್ಲಿ ಇದನ್ನು ಬಹಿರಂಗಪಡಿಸುವುದಾಗಿ ಹೇಳಿದರು. ಪ್ರಸ್ತುತ ಅಧಿವೇಶನದಲ್ಲಿ ಪ್ರವಾಹ ಪರಿಸ್ಥಿತಿ ಕುರಿಂತೆ ಚರ್ಚೆ ನಡೆಯುತ್ತಿದೆ. ಕಂದಾಯ ಸಚಿವನಾಗಿ ರಾಜ್ಯ ವಿಪತ್ತು ನಿರ್ವಹಣಾ ಮುಖ್ಯಸ್ಥನಾಗಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ಕೊಡುವುದು ನನ್ನ ಜವಾಬ್ದಾರಿ ಚರ್ಚೆ ಮುಗಿದ ಬಳಿಕ ಉತ್ತರ ಕೊಡುತ್ತೇನೆ ಎಂದರು.

Donate Janashakthi Media

Leave a Reply

Your email address will not be published. Required fields are marked *