- ಗೂಗಲ್ ಪೇ, ಫೋನ್ ಪೇ, ಭಿಮ್, ಪೇಟಿಎಂ, ಬಿಬಿಪಿಎಸ್, ಬೆಂಗಳೂರು ಒನ್ ನಲ್ಲಿ ಪಾವತಿಸಲು ಅವಕಾಶ
ಬೆಂಗಳೂರು: ಸಿಲಿಕಾನ್ ಸಿಟಿಯ ಲಕ್ಷಾಂತರ ಮಂದಿ ಕಾವೇರಿ ನೀರಿಗೆ ಅವಲಂಬಿತರಾಗಿದ್ದಾರೆ. ನೀರಿನ ಬಳಕೆ ಅನುಸಾರ ನೀರಿನ ಬಿಲ್ ಕಟ್ಟುತ್ತಿದ್ದಾರೆ. ಇಷ್ಟು ದಿನ ಚೆಕ್, ಡಿಡಿ ಮೂಲಕ ಬಿಲ್ ಕಟ್ಟುತ್ತಿದ್ದ ಗ್ರಾಹಕರಿಗೆ ಬಿಡಬ್ಲ್ಯೂಎಸ್ಎಸ್ಬಿ ಕಷ್ಟ ಕೊಟ್ಟಿದೆ. ಇನ್ಮುಂದೆ ಪರ್ಯಾಯ ಆಪ್ ಮೂಲಕ ನೀರಿನ ಬಿಲ್ ಪಾವತಿಸುವಂತೆ ಸೂಚಿಸಿದೆ.
ಈ ಕುರಿತು ಬೆಂಗಳೂರು ಜಲಮಂಡಳಿ ನಿರ್ಧಾರ ತೆಗೆದುಕೊಂಡಿದ್ದು, ಚೆಕ್ ಹಾಗೂ ಡಿಡಿ ಮೂಲಕ ಗ್ರಾಹಕರು ನೀರಿನ ಬಿಲ್ ಕಟ್ಟುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್ ನಿಂದ ತಿರಸ್ಕೃತವಾಗುತ್ತಿದೆ. ಹೀಗಾಗಿ ಆನ್ ಲೈನ್ ಮೂಲಕ ಅಂದ್ರೆ, ಗೂಗಲ್ ಪೇ, ಫೋನ್ ಪೇ, ಭಿಮ್, ಪೇಟಿಎಂ, ಬಿಬಿಪಿಎಸ್, ಸೇರಿದಂತೆ ಪರ್ಯಾಯ ವ್ಯವಸ್ಥೆ ಮುಖಾಂತರ ಕಟ್ಟಬೇಕಂತೆ. ಇದು ಸಾಧ್ಯವಾಗದಿದ್ರೆ, ಬೆಂಗಳೂರು ಒನ್ ನಲ್ಲಿ ಪಾವತಿಸುವಂತೆ ಸೂಚಿಸಿದೆ ಎಂದು ಜಲಮಂಡಳಿ ಎಫ್ಎ, ಸಿಎ ಅಧಿಕಾರಿ ಪ್ರಶಾಂತ ಕುಮಾರ್ ತಿಳಿಸಿದ್ದಾರೆ.
ಇನ್ಮುಂದೆ BWSSB ಚೆಕ್ ಹಾಗೂ ಡಿಡಿನಲ್ಲಿ ಬಿಲ್ ಸ್ವೀಕರಿಸಲ್ಲ. ಈ ಸೌಲಭ್ಯ ಅಕ್ಟೋಬರ್ ತಿಂಗಳೇ ಕೊನೆಯಾಗಿದೆ. ನ.1 ರಿಂದ ಡಿಜಿಟಲ್ ಆಪ್ ಮೂಲಕ ಶುಲ್ಕ ಪಾವತಿಸಬೇಕು. ಇಲ್ಲವೇ ಬೆಂಗಳೂರು ಒನ್,ಕಿಯೋಸ್ಕ್ ನಲ್ಲಿ ನಗದು ಕಟ್ಟಬಹುದು. ಡಿಜಿಟಲೀಕರಣ ಪ್ರೋತ್ಸಾಹಿಸಲು ಕ್ಯೂಆರ್ ಕೋಡ್ಗೆ ಹೆಚ್ಚಿನ ಆದ್ಯತೆ ನೀಡಿದೆ. ಬಿಬಿಪಿಎಸ್, ಪೇಟಿಎಂ, BHIP, ಫೋನ್ ಪೇ, ಗೂಗಲ್ ಪೇ ಇತ್ಯಾದಿ ಯುಪಿಐ ಆ್ಯಪ್ಗಳ ಮೂಲಕ ಬಿಲ್ ಕಟ್ಟಬಹುದು ಎಂದು ಹೇಳಿದೆ.
ಚೆಕ್ ಹಾಗೂ ಡಿಡಿಗಳು ಬ್ಯಾಂಕ್ನಿಂದ ತಿರಸ್ಕೃತ ಹಿನ್ನೆಲೆ ಡಿಜಿಟಲ್ ಆಪ್ ಮೂಲಕ ಪಾವತಿಸಲು BWSSB ಅವಕಾಶ ನೀಡಿದೆ. ಅ.31ರವರೆಗೆ ಮಾತ್ರ ಚೆಕ್ ಹಾಗೂ ಡಿಡಿ ಮೂಲಕ ಬಿಲ್ ಪಾವತಿಸಬಹುದು.ಆನಂತರ ಚೆಕ್, ಡಿಡಿ ಪಡೆಯವುದಿಲ್ಲ. ಬೆಂಗಳೂರಿನಲ್ಲಿ ಪ್ರತಿ ತಿಂಗಳು 120 ಕೋಟಿ ನೀರಿನ ಬಿಲ್ ಸಂಗ್ರಹವಾಗ್ತಿದೆ. ಇದರಲ್ಲಿ ಪ್ರತಿ ತಿಂಗಳು ಚೆಕ್, ಡಿಡಿ ಮೂಲಕ ಕಟ್ಟುವ ಜನರೂ ಇದ್ದಾರೆ. ಆದರೆ ಯಾರೋ ಕೆಲವರು ಮಾಡಿದ ತಪ್ಪಿಗೆ ಪ್ರತಿ ತಿಂಗಳು ನಿಯತ್ತಾಗಿ ಕಟ್ಟುವ ಗ್ರಾಹಕರಿಗೆ ಕಿರಿಕಿರಿಯಾಗ್ತಿದೆ. ವಾಟರ್ ಬಿಲ್ ಕೊಟ್ಟ ಕೆಲವರದ್ದು ಚೆಕ್ ಬೌನ್ಸ್ ಆಗ್ತಿದೆ. ಬೆಂಗಳೂರಿನ ಒಂದೊಂದು ಉಪ ವಿಭಾಗದಲ್ಲಿ 10ಕ್ಕೂ ಹೆಚ್ಚು ಚೆಕ್ ಬೌನ್ಸ್ ಪ್ರಕರಣ ಪತ್ತೆಯಾಗಿದೆ. ಅದಕ್ಕಾಗಿ ನಿಯತ್ತಾಗಿ ಚೆಕ್ ಕೊಡುವ ವ್ಯಾಪಾರಿಗಳು, ಕಟ್ಟಡ ಮಾಲಿಕರಿಗೆ ಇನ್ನಿಲ್ಲದ ತೊಂದರೆಯಾಗ್ತಿದೆ. ಪ್ರತಿ ತಿಂಗಳು ಶೇ.2ರಷ್ಟು ಚೆಕ್ ಬೌನ್ಸ್ ಆಗ್ತಿದೆ. ಕಳೆದೊಂದು ವರ್ಷದಿಂದ ಚೆಕ್ ಬೌನ್ಸ್ ಕಿರಿಕಿರಿ ಹೆಚ್ಚಳವಾಗ್ತಿದೆ. ಇದಕ್ಕಾಗಿ ಚೆಕ್, ಡಿಡಿ ಸ್ವೀಕರಿಸುವುದನ್ನೇ ಜಲಮಂಡಳಿ ರದ್ದುಪಡಿಸಿದೆ. ಇದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.