ಮೈಸೂರು: ಯಾರನ್ನು ಮೆಚ್ಚಿಸಲು ನನ್ನ ವಿರುದ್ದ ಮುಗಿಬಿದ್ದಿದ್ದೀರಿ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ರನ್ನ ,ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದರು.
ನಾನು ಹಾಗೂ ಶ್ರೀನಿವಾಸಪ್ರಸಾದ್ ಹಳೆಯ ಸ್ನೇಹಿತರು, ಬಹು ಕಾಲದ ಒಡನಾಡಿಗಳು. ಅದನ್ನು ಮರೆತು ನನ್ನನ್ನು ರಾಜಕೀಯ ಅಲೆಮಾರಿ ಅಂತ ಹೇಗೆ ಕರೆದಿದ್ದಿರಾ? ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ರನ್ನು ನಾನು ಭೇಟಿ ಮಾಡಿದ್ದನ್ನೇ ಘೋರ ಅಪರಾಧ ಎಂಬಂತೆ ಶ್ರೀನಿವಾಸಪ್ರಸಾದ್ ಬಿಂಬಿಸುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಸರಿಯಲ್ಲ. ಯಾರನ್ನು ಮೆಚ್ಚಿಸಲು ನನ್ನ ವಿರುದ್ದ ಮುಗಿಬಿದ್ದಿದ್ದೀರಿ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಸಂಸದರಾಗಿರುವ ನೀವು ನಿಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ನೀಡುವ ಬದಲು, ಏಕಾಏಕಿ ನನ್ನ ವಿರುದ್ಧ ಏಕೆ ತಿರುಗಿ ಬಿದ್ದಿದ್ದೀರಿ? ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗ್ತಿದೆ, ಆ ವೇಳೆ ನಂಜನಗೂಡು ಕ್ಷೇತ್ರದ ಶಾಸಕರಾಗಿರುವ ನಿಮ್ಮ ಅಳಿಯನಿಗೆ ಅವಕಾಶ ಸಿಗಲೆಂದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿ.ನರಸೀಪುರ ಕ್ಷೇತ್ರದಲ್ಲಿ ನಿಮ್ಮ ಮಗಳಿಗೆ ಟಿಕೆಟ್ ಸಿಗಲೆಂದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ನಿಮ್ಮ ಮತ್ತೊಬ್ಬ ಅಳಿಯನಿಗೆ ಟಿಕೆಟ್ ಕೊಡಿಸುವ ಸಲುವಾಗಿ ನನ್ನನ್ನು ಈ ರೀತಿ ಟೀಕಿಸಿದ್ದೀರಾ ಶ್ರೀನಿವಾಸಪ್ರಸಾದ್ ಅವರೇ? ಎಂದು ಪ್ರಶ್ನಿಸಿದರು.
ನೀವು ಹುಟ್ಟಿ ಬೆಳೆದ ಅಶೋಕಪುರಂಗೆ ನಿಮ್ಮ ಕೊಡುಗೆಯಾದರೂ ಏನು?
ಯಾರಿಗೋ ಕಲ್ಲು ಹೊಡೆದರೇ ಅದು ಮತ್ತೆ ನಿಮಗೇ ಹೊಡೆಯತ್ತದೇ ಎಂಬುದನ್ನು ಮರೆಯಬೇಡಿ ಶ್ರೀನಿವಾಸಪ್ರಸಾದ್ ಅವರೇ ಎಂದು ಕುಟುಕಿದರು.