ಪರೀಕ್ಷೆಯಿಲ್ಲದೆ ಪದವಿ ವಿದ್ಯಾರ್ಥಿಗಳನ್ನು ಪಾಸ್​​ ಮಾಡಲಾಗದು: ಸುಪ್ರೀಂಕೋರ್ಟ್

– ಯುಜಿಸಿ ಅಧಿಸೂಚನೆ ಎತ್ತಿಹಿಡಿದ ಸುಪ್ರೀಂಕೋರ್ಟ್

 

 

ನವದೆಹಲಿ: ಪದವಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲೇ ಬೇಕು ಎಂಬ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧಿಸೂಚನೆಯನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್, ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಪಾಸ್​​ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಸೆಪ್ಟೆಂಬರ್ 30ನೇ ತಾರೀಕಿನೊಳಗೆ ನಡೆಸಬೇಕಾದ ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಕುರಿತ ವಿಚಾರಣೆಯನ್ನು ಶುಕ್ರವಾರ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ​ ತೀರ್ಪು ನೀಡಿದೆ.

ಯುಜಿಸಿ ಆದೇಶದಂತೆಯೇ ಅಂತಿಮ ವರ್ಷದ ವಿದ್ಯಾರ್ಥಿಗಳ ಪದವಿ ಪರೀಕ್ಷೆ ನಡೆಯಲಿದೆ. ಯಾವುದೇ ರಾಜ್ಯಕ್ಕೂ ಯುಜಿಸಿ ಆದೇಶವನ್ನು ಮೀರಿ ಅಂತಿಮ ವರ್ಷದ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಗೊಳಿಸಿ ಉತ್ತೀರ್ಣಗೊಳಿಸುವ ಅಧಿಕಾರವಿಲ್ಲ. ಪದವಿ ಪರೀಕ್ಷೆ ಮುಂದೂಡುವ ವಿಚಾರದಲ್ಲಿ ಸಂಬಂಧಪಟ್ಟ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ(ಎಸ್‌ಡಿಎಂಎ) ನಿರ್ಧಾರ ಪರಿಣಾಮ ಬೀರಬಹುದು ಎಂದು ಕೋರ್ಟ್​ ಹೇಳಿದೆ.

ಆದರೂ ಪದವಿ ಪರೀಕ್ಷೆಗಳನ್ನು ನಡೆಸಲು ಸೆಪ್ಟೆಂಬರ್​​​ 30 ಅಂತಿಮವಲ್ಲ. ಬದಲಿಗೆ ಸೆಪ್ಟೆಂಬರ್ 30ರ ಗಡುವನ್ನು ವಿಸ್ತರಿಸಲು ರಾಜ್ಯಗಳು ಯುಜಿಸಿಗೆ ಮನವಿ ಮಾಡಿಕೊಳ್ಳಬಹುದು ಎಂದು ತೀರ್ಪು ನೀಡಿದೆ.

ಸೆಪ್ಟೆಂಬರ್ 30 ರೊಳಗೆ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸುವಂತೆ ಯುಜಿಸಿ ಜುಲೈ 6 ರಂದು ದೇಶಾದ್ಯಂತ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಿತ್ತು. ಪರೀಕ್ಷೆಗಳು ನಡೆಯದಿದ್ದರೆ ವಿದ್ಯಾರ್ಥಿಗಳ ಭವಿಷ್ಯವು ಅಪಾಯಕ್ಕೆ ಸಿಲುಕುತ್ತದೆ ಎಂದು ಯುಜಿಸಿ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.

ಆದರೆ, ಕೊರೋನಾ ರೋಗವನ್ನು ಗಮನದಲ್ಲಿಟ್ಟುಕೊಂಡು ಆನ್‌ಲೈನ್/ಆಫ್‌ಲೈನ್ ಪರೀಕ್ಷೆಗಳನ್ನು ರದ್ದುಗೊಳಿಸಿ ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ ನಲ್ಲಿ ಮನವಿ ಮಾಡಿಕೊಂಡಿದ್ದರು. . ವಿದ್ಯಾರ್ಥಿಗಳ ಹಿಂದಿನ ಸಾಧನೆ ಮತ್ತು ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಫಲಿತಾಂಶಗಳನ್ನು ಘೋಷಿಸಲು ಯುಜಿಸಿಗೆ ನಿರ್ದೇಶನ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿತ್ತು.

“ರಾಜ್ಯ ಸರ್ಕಾರಗಳು ಪರೀಕ್ಷೆಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಆ ಅಧಿಕಾರ ಯುಜಿಸಿಗೆ ಮಾತ್ರ ಇದೆ” ಎಂದು ಯುಜಿಸಿ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಗಸ್ಟ್ 8 ರಂದು ಉನ್ನತ ನ್ಯಾಯಾಲಯಕ್ಕೆ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *