ನ್ಯಾಯಾಂಗ ನಿಂದನೆ ಕೇಸ್  ಪ್ರಶಾಂತ್ ಭೂಷಣ್‌ಗೆ 1 ರೂ ದಂಡ!

 

ಹೊಸದಿಲ್ಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ  ಕೋರ್ಟ್ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸರ್ವೋಚ್ಚ ನ್ಯಾಯಾಲಯ 1 ರೂ. ದಂಡ ವಿಧಿಸಿ ಸೋಮವಾರ ಅಚ್ಚರಿಯ ತೀರ್ಪು ನೀಡಿದೆ.
ಒಂದೊಮ್ಮೆ ಸೆಪ್ಟೆಂಬರ್ 15ರ ಒಳಗೆ ದಂಡ ಕಟ್ಟದೇ ಇದ್ದಲ್ಲಿ, ಅವರು 3  ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಮತ್ತು 3 ವರ್ಷ ವಕೀಲಿಕೆ ಅಭ್ಯಾಸದಿಂದ ಅವರನ್ನು ನಿರ್ಬಂಧಿಸಲಾಗುತ್ತದೆ ಎಂದು ನ್ಯಾಯಾಲಯ ಆದೇಶ ನೀಡಿದೆ.

ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ  ಈ ಮಹತ್ವದ ತೀರ್ಪು ನೀಡಿದೆ. ತೀರ್ಪು ನೀಡುವ ವೇಳೆ ಪೀಠ, 2018ರಲ್ಲಿ  ಸುಪ್ರೀಂ ಕೋರ್ಟ್ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿದ್ದಕ್ಕೂ ಅಸಮಧಾನ ವ್ಯಕ್ತಪಡಿಸಿದ್ದು, ಈ ರೀತಿ ಪತ್ರಿಕಾಗೋಷ್ಠಿ ನಡೆಸಿದ್ದು ಸರಿಯಲ್ಲ ಎಂದು ಹೇಳಿದೆ.

ಪ್ರಶಾಂತ್ ಭೂಷಣ್

ಪ್ರಶಾಂತ್ ಭೂಷಣ್ ಮಾಡಿದ್ದ ಎರಡು ಟ್ಟೀಟ್‌ಗಳ ಸಂಬAಧ ಅವರನ್ನು ಆಗಸ್ಟ್ 14 ರಂದು ದೋಷಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ನಂತರ ಅವರಿಗೆ ಕ್ಷಮೆ ಕೇಳಲು ಸಮಯಾವಕಾಶ ನೀಡಲಾಗಿತ್ತು. ಆದರೆ ಎರಡೆರಡು ಬಾರಿ ಅವಕಾಶ ನೀಡಿದ್ದರೂ ಅವರು ಕ್ಷಮೆ ಕೇಳಲು ನಿರಾಕರಿಸಿದ್ದರು. ನಾನು ಅನ್ಯಮನಸ್ಕನಾಗಿ ಈ ಟ್ಟೀಟ್ ಮಾಡಿಲ್ಲ ಎಂದು ಹೇಳಿದ್ದ ಅವರು, ನಾನು ಕ್ಷಮೆ ಕೋರುವುದರಿಂದ ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಂತಾಗುತ್ತದೆ ಎಂದಿದ್ದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಮೂರ್ತಿ ಎಸ್.ಎ.ಬೊಬ್ಡೆ ಮತ್ತು ಉನ್ನತ ನ್ಯಾಯಾಲಯದ ಕಾರ್ಯವೈಖರಿ ಟೀಕಿಸಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಭೂಷಣ್ ಅವರನ್ನು ದೋಷಿ ಎಂದು ಘೋಷಿಸಲಾಗಿತ್ತು.
ಪ್ರಶಾಂತ್ ಭೂಷಣ್ ಅವರಿಗೆ ಯಾವುದೇ ಶಿಕ್ಷೆ ನೀಡಬಾರದು. ಒಂದೊಮ್ಮೆ ಅನಿವಾರ್ಯವಾದರೆ ಅವರಿಗೆ ಎಚ್ಚರಿಕೆ ನೀಡಿ ಬಿಟ್ಟುಬಿಡಿ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ ಈ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.
ನಂತರ ಭೂಷಣ್ ಅವರ ಪರ ವಾದಮಂಡಿಸಿದ ಹಿರಿಯ ವಕೀಲ ರಾಜೀವ್ ಧವನ್, ಪ್ರಶಾಂತ್ ಭೂಷಣ್ ಅವರನ್ನು ಶಿಕ್ಷೆಗೊಳಪಡಿಸುವ ತೀರ್ಪನ್ನು ಮರುಪರಿಶೀಲಿಸಬೇಕು ಹಾಗೂ ಅವರಿಗೆ ಯಾವುದೇ ಶಿಕ್ಷೆ ವಿಧಿಸಬಾರದು. ಭೂಷಣ್ ಅವರ ಪ್ರಕರಣವನ್ನು ಮುಚ್ಚುವುದು ಮಾತ್ರವಲ್ಲ, ವಿವಾದವನ್ನೇ ಅಂತ್ಯಗೊಳಿಸುವ ಮೂಲಕ ನ್ಯಾಯಾಲಯ ಉತ್ತಮ ಸಂದೇಶವನ್ನು ರವಾನಿಸಬೇಕು ಎಂದು ಮನವಿ ಮಾಡಿದರು.
ಇದೀಗ ಪ್ರಶಾಂತ್ ಭೂಷಣ್ 1 ರೂ ದಂಡ ಕಟ್ಟುವರೇ ಅಥವಾ ಹೋರಾಟ ಮುಂದುವರಿಸುವರೇ ಎಂಬುದನ್ನು ಕಾದು ನೋಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *