ನ್ಯಾಯಸಮ್ಮತ ಮೀಸಲಾತಿ ನಮ್ಮ ಉದ್ದೇಶ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡುವ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸದನಕ್ಕೆ ಸ್ಪಷ್ಟನೆ ನೀಡಬೇಕು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉತ್ತರ ನೀಡಿದ್ದಾರೆ.

ವಿಧಾನಸಭೆಯಲ್ಲಿ ಯತ್ಮಾಳ್ ಪ್ರಶ್ನೆಗೆ ಉತ್ತರಿಸಿದ ಬಸವರಾಜ್ ಬೊಮ್ಮಾಯಿ, ಸಮಾಜಗಳ ನಡುವೆ ಸಂಘರ್ಷ ಆಗಬಾರದು ಎಂಬ ಕಾರಣಕ್ಕೆ ಈ ನಿಟ್ಟಿನಲ್ಲಿ ಸೂಕ್ಷ್ಮ ಹೆಜ್ಜೆಗಳನ್ನು ಇಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಪಂಚಮಸಾಲಿ ಸಮಾಜವನ್ನು 2 ಎ ಗೆ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಅಂಕಿ ಅಂಶಗಳ ಮಾಹಿತಿಯನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ನೀಡಲಾಗಿದೆ. ‌ಇದನ್ನು ಸಂವಿಧಾನದ ಚೌಕಟ್ಟು ಹಾಗೂ ಕಾನೂನು ವ್ಯಾಪ್ತಿಯಲ್ಲಿ ಮಾಡಬೇಕು ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.

ಜನಸಂಖ್ಯೆ ಹಾಗೂ ಸಾಮಾಜಿಕ ಸ್ಥಿತಿಗತಿ ಅನುಗುಣವಾಗಿ ಬೇಡಿಕೆ ಇಟ್ಟ ಎಲ್ಲ ಸಮುದಾಯಗಳಿಗೆ ಮೀಸಲಾತಿ ಯಲ್ಲಿ ಪಾಲು ಕೊಡಲು ಸರ್ಕಾರ ಬದ್ಧವಾಗಿದೆ ಎಂದೂ ಗೃಹ ಸಚಿವರು ಈ ವೇಳೆ ಸ್ಪಷ್ಟಪಡಿಸಿದರು.

ಆದರೆ ಬೊಮ್ಮಾಯಿ ಉತ್ತರದಿಂದ ತೃಪ್ತರಾಗದ ಯತ್ನಾಳ್, ಈಗಾಗಲೇ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಇರುವಾಗ ಮತ್ತೊಂದು ಉನ್ನತ ಮಟ್ಟದ ಸಮಿತಿ ಏಕೆ ಎಂದು ಪ್ರಶ್ನಿಸಿದರು.
ಸರ್ಕಾರ ಕಾಲಹರಣಕ್ಕಾಗಿ ಈ ರೀತಿ ನಾಟಕವಾಡುತ್ತಿದೆ. ಒಂದು ವೇಳೆ ಸರ್ಕಾರದಿಂದ ಸ್ಪಷ್ಟ ಉತ್ತರ ದೊರೆಯದೇ ಇದ್ದಲ್ಲಿ ಮಾರ್ಚ್ 15 ರಿಂದ ಧರಣಿ ಕೂರುತ್ತೇನೆ. ಮೀಸಲಾತಿ ಬೇಡಿಕೆ ವಿಚಾರವಾಗಿ ಸಿಎಂ ಬಿಎಸ್ ಯಡಿಯೂರಪ್ಪ ಉತ್ತರ ಕೊಡಬೇಕು ಎಂದು ಯತ್ನಾಳ್ ಪಟ್ಟು ಹಿಡಿದರು.

ಇನ್ನು ಮೀಸಲಾತಿ ಚರ್ಚೆಯ ಸಂದರ್ಭದಲ್ಲಿ ಮಧ್ಯಪ್ರದೇಶ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮೀಸಲಾತಿ ಬೇಡಿಕೆ ಹಿನ್ನೆಲೆಯಲ್ಲಿ ಸಮಗ್ರ ಅಧ್ಯಯನ ನಡೆಯಬೇಕು ಎಂದು ಆಗ್ರಹಿಸಿದರು.

ಪಂಚಮಸಾಲಿ ಸಮಾಜವನ್ನು 2 ಎ ಗೆ ಸೇರ್ಪಡೆ ಮಾಡುವ ಸಾಧ್ಯತೆಗಳ ಕುರಿತು ನಿರ್ಧರಿಸಲು ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿದೆ. ಆದಷ್ಟು ಬೇಗ ವರದಿ ತರಿಸಿ ನ್ಯಾಯಸಮ್ಮತವಾಗಿ ಮೀಸಲಾತಿ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಧ್ಯಯನ ನಡೆಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಬೊಮ್ಮಾಯಿ ಭರವಸೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *