ನೈಸ್‌ ಸಂಸ್ಥೆಯ ದೌರ್ಜನ್ಯ ಕೊನೆಗಾಣಿಸಬೇಕು: ಕೆಪಿಆರ್‌ಎಸ್ ಹಾಗೂ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಆಗ್ರಹ

ಬೆಂಗಳೂರು: ಮೈಸೂರಿನಿಂದ ಬೆಂಗಳೂರಿನವರೆಗೆ ರೈತರ ಪಹಣಿಯಲ್ಲಿರುವ ನೈಸ್ ಹೆಸರನ್ನು ತೆಗೆದು, ದಶಕಗಳ ಕಾಲ ನಡೆಯುತ್ತಿರುವ ದೌರ್ಜನ್ಯವನ್ನು ಕೊನೆಗಾಣಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ರೈತರ ಭೂ ಸ್ವಾಧೀನದ ಹೆಸರಿನಲ್ಲಿ ನೈಸ್ ಸಂಸ್ಥೆ ನಡೆಸುತ್ತಿರುವ ಭ್ರಷ್ಟಾಚಾರ ಮತ್ತು ರೈತರ ಮೇಲಿನ ದೌರ್ಜನ್ಯವನ್ನು ನೈಸ್ ಭೂ ಸಂತ್ರಸ್ಥ ರೈತರ ಬೃಹತ್ ಪ್ರತಿಭಟನಾ ಧರಣಿ ಬುಧವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯಿತು.

“ಹಗರಣಗಳ ಸರಮಾಲೆಯನ್ನೇ ನಡೆಸಿರುವ ನೈಸ್ ಕಂಪನಿಯ ಬಿಎಂಐಸಿಪಿ (ಬೆಂಗಳೂರು-ಮೈಸೂರು ಇನ್ಪಾಸ್ಟ್ರಕ್ಚರ್ ಕಾರಿಡಾರ್ ಯೋಜನೆ) ಯೋಜನೆಯನ್ನು ರದ್ದುಪಡಿಸಬೇಕು. ನೈಸ್ ಕಂಪನಿಯ ಭೂ ಸ್ವಾಧೀನ ಮತ್ತು ರಸ್ತೆ ನಿರ್ಮಾಣ ಹಗರಣಗಳನ್ನು ತನಿಖೆಗೆ ಒಳಪಡಿಸಿ ಶಿಕ್ಷಿಸಬೇಕು. ರೈತರ ಒಪ್ಪಿಗೆ ಇಲ್ಲದೇ, ರೈತರ ಗಮನಕ್ಕೆ ಬಾರದಂತೆ ಭೂ ಸ್ವಾಧೀನಕ್ಕೆ ಒಳಪಡಿಸಿರುವ ಎಲ್ಲಾ ಪ್ರಕರಣಗಳನ್ನು ರದ್ದುಪಡಿಸಬೇಕು” ಎಂದು ಕೆಪಿಆರ್‌ಎಸ್ ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಆಗ್ರಹಿಸಿದೆ.

ಇದನ್ನೂ ಓದಿ: ನೈಸ್ ಸಂಸ್ಥೆ ಟೌನ್ ಶಿಪ್‍ಗಾಗಿ ಕೊಟ್ಟಿದ್ದ ಜಮೀನನ್ನು ವಾಪಸ್ ಪಡೆಯಲಾಗುವುದು : ಎಸ್‌.ಟಿ.ಸೋಮಶೇಖರ್‌

“ರೈತರಿಂದ ಭೂ ಸ್ವಾಧೀನದ ಮೂಲಕ ಪಡೆದು ನೈಸ್ ಕಂಪನಿಗೆ ಹಸ್ತಾಂತರಿಸಿರುವ ಭೂಮಿಯನ್ನು ಖಾಸಗಿಯವರಿಗೆ ನೈಸ್ ಕಂಪನಿ ಮಾರಾಟ ಮಾಡಿರುವ ಎಲ್ಲಾ ಕ್ರಯ ಕರಾರನ್ನು ರದ್ದುಪಡಿಸಬೇಕು. ಟೋಲ್ ಸಂಗ್ರಹಿಸುತ್ತಿರುವ ರಸ್ತೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಈ ಹಿಂದೆ ಆದ ಒಪ್ಪಂದದಂತೆ ನಿವೇಶನ ಮತ್ತು ಹೆಚ್ಚಿನ ಪರಿಹಾರ ನೀಡಬೇಕು. ಸದನ ಸಮಿತಿ ಮತ್ತು ಕ್ಯಾಬಿನೆಟ್ ಉಪ ಸಮಿತಿಗಳು ನೀಡಿರುವ ವರದಿಗಳನ್ನು ಜಾರಿಗೊಳಿಸಬೇಕು” ಎಂದು ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಬಿಎಂಐಸಿಪಿ ಯೋಜನೆಗಾಗಿ ಬಲವಂತದ ಭೂ ಸ್ವಾಧೀನ ಮಾಡಿಕೊಂಡ 27 ವರ್ಷ ಕಳೆದರೂ ಬಿಎಂಐಸಿ ಯೋಜನೆ ಕಾರ್ಯಗತಗೊಂಡಿಲ್ಲ ಎಂದು ಧರಣಿ ಸ್ಥಳದಲ್ಲಿದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೈಸ್‌ ಸಂಸ್ಥೆಯ ದೌರ್ಜನ್ಯ ಕೊನೆಗಾಣಿಸಬೇಕು: ಕೆಪಿಆರ್‌ಎಸ್ ಹಾಗೂ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಆಗ್ರಹ | Atrocities of Nice organization must end: KPRS and Land Affected Farmers' Struggle Committee demand

“ಮೂಲ ಒಪ್ಪಂದಕ್ಕೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಂಡಿರುವ ನೈಸ್ ಕಂಪನಿ ಬಿಎಂಐಸಿ ಯೋಜನೆಯನ್ನು ರದ್ದುಪಡಿಸಬೇಕು. ಬೆಂಗಳೂರಿನಿಂದ ಮೈಸೂರುವರೆಗೆ ರೈತರ ಪಹಣಿಯಲ್ಲಿರುವ ನೈಸ್ ಹೆಸರನ್ನು ತೆಗೆಯಬೇಕು. ಈ ಮೂಲಕ ದಶಕಗಳ ನೈಸ್ ದೌರ್ಜನ್ಯವನ್ನು ಕೊನೆಗಾಣಿಸಬೇಕು” ಎಂದು ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಅಧ್ಯಕ್ಷರಾದ ಎನ್. ವೆಂಕಟಾಚಲಯ್ಯ ಹೇಳಿದರು.

“ನೈಸ್ ಸಂಸ್ಥೆ, ಕಾನೂನು ಉಲ್ಲಂಘಿಸಿ ರೈತರಿಂದ ಪಡೆದಿರುವ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಯನ್ನಾಗಿಸಿ ಮಾರಾಟ ಮಾಡುತ್ತಿದೆ. ನೈಸ್ ಕಂಪನಿಗೆ ಸ್ವಾಧೀನಕ್ಕೆ ಒಳಪಟ್ಟಿದೆ ಎಂದು ತನ್ನ ಗೂಂಡಾಪಡೆ ಮತ್ತು ಪೊಲೀಸರನ್ನು ಬಳಸಿ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಇತ್ತೀಚೆಗೆ ಸುಮಾರು ಒಂದು ವಾರದ ಹಿಂದೆ ಕೆಂಗೇರಿ ಸಮೀಪದ ವರಾಹಸಂದ್ರ ದಲ್ಲಿ ರೈತರ ಭೂಮಿ ವಶಪಡಿಸಿಕೊಳ್ಳಲು ಅಧಿಕಾರಿಗಳು ಮತ್ತು ಪೊಲೀಸರ ನೆರವಿನೊಂದಿಗೆ ಬಂದಿದ್ದ ಘಟನೆ ನಡೆದಿದೆ” ಎಂಧು ಎನ್. ವೆಂಕಟಾಚಲಯ್ಯ ಜನಶಕ್ತಿ ಮೀಡಿಯಾ ಜೊತೆಗೆ ಹೇಳಿದರು.

ಇದನ್ನೂ ಓದಿ: ಎಐಕೆಎಸ್ ನೇತೃತ್ವದ ರೈತ ಹೋರಾಟಕ್ಕೆ ಮಂಡಿಯೂರಿದ ಉತ್ತರ ಪ್ರದೇಶ ಸರ್ಕಾರ

“ಬೈರಸಂದ್ರ, ಗಂಗಸಂದ್ರ ಮುಂತಾದ ಗ್ರಾಮಗಳಲ್ಲಿ ನೈಸ್ ಗೆ ಸ್ವಾಧೀನವಾಗಿದೆ ಎಂದು ಹೇಳಿ ಆಕ್ರಮವಾಗಿ ಗೋಡೆ ನಿರ್ಮಿಸಿ ಭೂಮಿ ಕಿತ್ತುಕೊಳ್ಳಲಾಗಿದೆ. ಇಂತಹ ಎಷ್ಟೋ ಪ್ರಕರಣಗಳಲ್ಲಿ ರೈತರಿಗೆ ಪರಿಹಾರವೂ ಸಹ ವಿತರಣೆ ಆಗಿಲ್ಲ. ನೈಸ್ ಕಂಪನಿಯ ದೌರ್ಜನ್ಯದಿಂದ ನೊಂದ ರೈತರು ಕೋರ್ಟ್ – ಕಛೇರಿಗಳಲ್ಲಿ ಅಲೆದಾಡಿ ಲಕ್ಷಾಂತರ ರೂಗಳನ್ನು ಕಳೆದುಕೊಂಡಿದ್ದಾರೆ. ಈ ಆನ್ಯಾಯದಿಂದ ರೈತರಿಗೆ ರಕ್ಷಣೆ ನೀಡಬೇಕು” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಅವರು ಹೇಳಿದರು.

“ಸದನ ಸಮಿತಿ ತನಿಖಾ ವರದಿಯಲ್ಲಿ, ಹಲವಾರು ಸುಪ್ರೀಂ ಕೋರ್ಟ್, ಹೈ ಕೋರ್ಟ್ ತೀರ್ಪುಗಳಲ್ಲಿ, ಸಂಪುಟ ಉಪ ಸಮಿತಿ ಸಭೆಗಳ ನಡಾವಳಿಯಲ್ಲಿ ನೈಸ್ ಸಂಸ್ಥೆ, ಮೂಲ ಒಪ್ಪಂದ ಚೌಕಟ್ಟನ್ನು ಉಲ್ಲಂಘಿಸಿರುವುದು, ಮೂಲ ಒಪ್ಪಂದ ಚೌಕಟ್ಟಿಗೆ ಸಂಬಂದಿಸದೇ ಇರುವ ಭೂಮಿಗಳನ್ನು ಅಕ್ರಮವಾಗಿ ಕಬಳಿಸಿದೆ. ಟೋಲ್ ರಸ್ತೆಯನ್ನು ಒಪ್ಪಂದದಂತೆ ಅಭಿವೃದ್ಧಿ ಪಡಿಸದೇ, ಒಪ್ಪಂದ ಉಲ್ಲಂಘಿಸಿ ಟೋಲ್ ದರವನ್ನು ಕಾನೂನುಬಾಹಿರವಾಗಿ ಹೆಚ್ಚಳ ಮಾಡಿದೆ” ಎಂದು ಯಶವಂತ ಅವರು ಆರೋಪಿಸಿದರು.

ಯೋಜನೆಯನ್ನು ಪೂರ್ಣಗೊಳಿಸದೇ ಇದ್ದರೂ, ಕಾನೂನು ಉಲ್ಲಂಘನೆ-ಆಕ್ರಮಗಳನ್ನು ನಡೆಸಿದ್ದರೂ ನೈಸ್ ಸಂಸ್ಥೆಯನ್ನು ಯಾವ ಕಾರಣಕ್ಕಾಗಿ ಈ ಯೋಜನೆ ಪೂರ್ಣಗೊಳಿಸಲು ಉಳಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಇದನ್ನೂ ಓದಿ: ರೈತರ ಭೂಮಿ ಕಿತ್ತು ರಿಯಲ್ ಎಸ್ಟೇಟ್ ದಂಧೆ!: ನೈಸ್ ಸಂಸ್ಥೆ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜು

ನೈಸ್ ಭೂ ಸಂತ್ರಸ್ಥ ರೈತರ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಹಣಕಾಸು ಕಾರ್ಯದರ್ಶಿ ಹೆಚ್.ಆರ್. ನವೀನ್ ಕುಮಾರ್, ಹೋರಾಟ ಸಮಿತಿ ಪದಾಧಿಕಾರಿಗಳಾದ ಸಾದಪ್ಪ, ಹನುಮಯ್ಯ, ಜಯರಾಮಣ್ಣ, ಕೆಂಪೇಗೌಡ, ಸುಧಾಕರ್, ಪುಟ್ಟರಾಜು, ವೆಂಕಟರಸಪ್ಪ, ಗಾಯಿತ್ರಿ, ಸಣ್ಣರಂಗಯ್ಯ ಹಾಗೂ ನೂರಾರು ರೈತರು ಹೋರಾಟದಲ್ಲಿ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *