ಗದಗ:ಫೆ.01: ನಗರದದಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿನ ನವೀಕೃತ ಪೌಷ್ಠಿಕ ಪುನಶ್ಚೇತನ ಕೇಂದ್ರವನ್ನು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಉದ್ಘಾಟಿಸಿದರು.
ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ. ಅವರ ಮುತುವರ್ಜಿಯಿಂದಾಗಿ ನಗರದ ಪೌಷ್ಠಿಕ ಪುನಶ್ಚೇತನ ಕೇಂದ್ರವು ನವೀಕೃತಗೊಂಡಿರುತ್ತದೆ. ನವೀಕೃತ ಕೇಂದ್ರದಲ್ಲಿ ದಾಖಲಾಗುವ ಮಕ್ಕಳ ಪೊಷಕರು ಉತ್ತಮ ಆಹಾರದ ಬಗ್ಗೆ ಅನುಸರಿಸಬೇಕಾದ ವ್ಯವಸ್ಥೆಯ ಕುರಿತು ಭಿತ್ತಿ ಚಿತ್ರಗಳನ್ನು ಬರೆಯಲಾಗಿದ್ದು ಜೊತೆಗೆ ಮಕ್ಕಳ ಮನಪರಿವರ್ತನೆಗಾಗಿ ಆಟಿಕೆ, ವಿವಿಧ ಹಣ್ಣುಗಳ ಚಿತ್ರಗಳನ್ನು ಸಹ ಬರೆಯಲಾಗಿರುತ್ತದೆ.
ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ಒದಗಿಸಲು ನಗರದ ಹೆರಿಗೆ ಆಸ್ಪತ್ರೆಯಲ್ಲಿ ನಿರ್ಮಿಸಲಾದ ಪೌಷ್ಠಿಕ ಕೇಂದ್ರದಲ್ಲಿ ಹತ್ತು ಹಾಸಿಗೆಗಳ ವ್ಯವಸ್ಥೆ ಇರುತ್ತದೆ. ಪೌಷ್ಠಿಕ ಪುನಶ್ಚೇತನಕ್ಕಾಗಿ ದಾಖಲಾಗುವ ಮಕ್ಕಳಿಗೆ ಹದಿನಾಲ್ಕು ದಿನಗಳ ಕಾಲ ಚಿಕಿತ್ಸೆ ಒದಗಿಸಲಾಗುವುದು. ಈ ಹದಿನಾಲ್ಕು ದಿನಗಳ ಕಾಲ ಮಕ್ಕಳೊಂದಿಗೆ ಆಗಮಿಸಿವ ಪೋಷಕರಿಗೆ ದಿನಭತ್ಯೆಯನ್ನು ಪಾವತಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ ಬಸರಿಗಿಡದ, ಆರೋಗ್ಯ ಇಲಾಖೆಯ ವಿಭಾಗೀಯ ಸಹನಿರ್ದೇಶಕ ಡಾ.ಬಿರಾದರ ಸೇರಿದಂತೆ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಜರಿದ್ದರು.
ವರದಿ: ದಾವಲಸಾಬ ತಾಳಿಕೋಟಿ