ಚಿತ್ರದುರ್ಗ : ಲೈಂಗಿಕ ದೌರ್ಜನ್ಯ ಆರೋಪವನ್ನು ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಟೋಲ್ಗೇಟ್ ಬಳಿಯಲ್ಲಿ ವಶಕ್ಕೆ ಪಡೆದಿರುವ ಪೊಲೀಸರು ಭಾರಿ ಭದ್ರತೆಯೊಂದಿಗೆ ಶ್ರೀಮಠಕ್ಕೆ ಕರೆದುಕೊಂಡು ಬಂದಿದ್ದಾರೆ. ಮುರುಘಾ ಶರಣರ ಬಂಧನದ ವದಂತಿಗಳನ್ನು ಕೇಳಿದ ಬಳಿಕ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಆಗಮಿಸಿದ್ದರು.
ಮಠಕ್ಕೆ ಆಗಮಿಸಿದ ಬಳಿಕ ಭಕ್ತರನ್ನುದ್ದೇಶಿಸಿ ಮಾತನಾಡಿದ ಡಾ. ಶಿವಮೂರ್ತಿ ಮುರುಘಾ ಶರಣರು, ಇದೇನು ಹೊಸದಲ್ಲ, ಕಳೆದ 15 ವರ್ಷಗಳಿಂದ ನಮ್ಮ ಮೇಲೆ ಪಿತೂರಿ ನಡೆಯುತ್ತಲೇ ಇದೆ. ಆದರೆ ಈಗ ಅದು ಸಾರ್ವಜನಿಕವಾಗಿ ಹೊರಬಂದಿದೆ.ಈ ಪರಿಸ್ಥಿತಿಯನ್ನು ನಾವು ಸಹನೆ, ಬುದ್ಧಿವಂತಿಕೆ ಹಾಗೂ ಸಾಂಘಿಕ ರೀತಿಯಲ್ಲಿ ಎದುರಿಸಬೇಕಿದೆ. ನಿಮ್ಮೆಲ್ಲರ ಸಲುವಾಗಿ ನಾವು ಧೈರ್ಯದಿಂದ ಇದ್ದೇವೆ ಎಂದು ಭಕ್ತರಲ್ಲಿ ಹೇಳಿದರು.
ಈ ವಿಚಾರದಲ್ಲಿ ಯಾರೂ ತೀರಾ ಆತಂಕಪಡುವ ಅಗತ್ಯವಿಲ್ಲ.ಎದುರಾಗಿರುವ ಪರಿಸ್ಥಿತಿಯನ್ನು ಅತ್ಯಂತ ಶಾಂತ ರೀತಿಯಲ್ಲಿ ಎದುರಿಸೋಣ. ನಾವು ಈ ಎಲ್ಲಾ ಆರೋಪಗಳಿಂದ ಮುಕ್ತರಾಗಿ ಹೊರಬರುತ್ತೇವೆಂಬ ನಂಬಿಕೆಯನ್ನು ಹೊಂದಿದ್ದೇವೆ. ಈ ಸಮಸ್ಯೆಗೆ ತಾರ್ಕಿಕ ಅಂತ್ಯವನ್ನು ಕಾಣಿಸುವ ನಿಟ್ಟಿನಲ್ಲಿ ನಾವು ಕೆಲಸವನ್ನು ಮಾಡೋಣ. ನಾವು ಈ ನೆಲದ ಕಾನೂನನ್ನು ಗೌರವಿಸುವ ಮಠಾಧೀಶರು.ಹೀಗಾಗಿ ನಾವು ಪಲಾಯನ ಮಾಡುವವರಲ್ಲ. ಕಾನೂನಿನ ಚೌಕಟ್ಟಿನ ಒಳಗಡೆಯೇ ನಿಂತು ಈ ಪರಿಸ್ಥಿತಿಯನ್ನು ಎದುರಿಸುತ್ತೇವೆ ಎಂದರು.