ಜಗತ್ತೇ ಕಂಡಿರದಂಥ ಅಹಿಂಸೆ, ಸತ್ಯಾಗ್ರಹಗಳ ಮೂಲಕ ಜಗತ್ತಿನ ಅತ್ಯಂತ ಪ್ರಬಲ ಸಾಮ್ರಾಜ್ಯಶಾಹಿಯನ್ನು ಹೊರಹಾಕಿ ಈ ದೇಶದ ಜನರು ಸ್ವಾತಂತ್ರ್ಯವನ್ನು ಪಡೆದರು.
ಆದರೆ ಕೇವಲ ಏಳೆಂಟು ದಶಕಗಳಲ್ಲಿ ದೇಶದ ಪ್ರಜೆಗಳು ಪರಸ್ಪರ ಅಪನಂಬಿಕೆಯಲ್ಲಿ ಬದುಕುವಂತಾಗಿದೆ. ಯಾರು ಇಲ್ಲಿಯವರು ಯಾರು ನುಸುಳುಕೋರರು ಎಂದು ದಾಖಲೆ ಹುಡುಕಬೇಕಾಗಿದೆ. ಇದೊಂದು ಮಹಾನ್ ದುರಂತ ನಾಟಕವಾಗಿದೆ. ನಾನು ಇಲ್ಲಿ ಹುಟ್ಟಿ ಬೆಳೆದಿದ್ದರ ಬಗ್ಗೆ ದಾಖಲೆ ಇದೆ. ಆದರೆ ನನ್ನ ಅಜ್ಜನ ಹತ್ತಿರ ಯಾವ ದಾಖಲೆಯೂ ಇರಲಿಲ್ಲ. ಆದ್ದರಿಂದ ನನ್ನ ಅಜ್ಜನನ್ನು ಮರಣೋತ್ತರವಾಗಿಯಾದರೂ ಈ ದೇಶದ ಪ್ರಜೆಯನ್ನಾಗಿ ಮಾಡುವ ಪ್ರಯತ್ನದಲ್ಲಿದ್ದೇನೆ!
ಈಗ ಬರುತ್ತಿರುವ ಸುದ್ದಿಗಳು ನಿಜವಾಗಿ ಆತಂಕ ಹುಟ್ಟಿಸುತ್ತಿವೆ. ರಾಷ್ಟ್ರೀಯ ಪೌರತ್ವ ದಾಖಲೆಯನ್ನು(ಎನ್ ಆರ್ ಸಿ) ಭಾರತದ ಎಲ್ಲಾ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರುತ್ತೇವೆ ಎಂದು ಕೇಂದ್ರದ ಗೃಹಮಂತ್ರಿಗಳು ಮತ್ತೆ ಮತ್ತೆ ಹೇಳುತ್ತಿದ್ದಾರೆ. ಅಲ್ಲದೆ ನಾಗರಿಕತ್ವ ಅಥವಾ ಪೌರತ್ವಕ್ಕೆ ಸಂಬಂಧಿಸಿದ ತಿದ್ದುಪಡಿ ಕಾಯಿದೆಯನ್ನು ಸಂಸತ್ತಿನಲ್ಲಿ ಪಾಸು ಮಾಡಿಸುವ ತೈಯಾರಿ ನಡೆದಿದೆ ಹಾಗೂ ಅದು ಶತಃಸಿದ್ಧವೆಂದೂ ಅವರು ಹೇಳಿದ್ದಾರೆ. ಇದರ ಕರಡಿನ ಪ್ರಕಾರ ಒಂದು ವೇಳೆ ಪೌರತ್ವ ದಾಖಲೆ ಇಲ್ಲದಿದ್ದವರು ಹಿಂದುಗಳು, ಸಿಖ್ಖರು, ಪಾರ್ಸಿಗಳು, ಬೌದ್ಧರು ಆಗಿದ್ದರೆ ಅವರನ್ನು ಹೊರಗಿಡುವುದಿಲ್ಲ. ಆದರೆ ಅವರು ಮುಸ್ಲಿವiರಾದರೆ? ಕರಡು ಏನೂ ಹೇಳುವುದಿಲ್ಲ. ಕರ್ನಾಟಕವು ಸೇರಿದಂತೆ ಅನೇಕ ಕಡೆಗೆ ನಾಗರಿಕತ್ವವು ದೊರೆಯದವರಿಗಾಗಿ detention ಶಿಬಿರಗಳನ್ನು ನಿರ್ಮಿಸಲಾಗುತ್ತಿದೆಯೆಂದು ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗಿದೆ.
ಮೇಲಿನವರಿಗೆ ತಮ್ಮ ವಿಧೇಯತೆಯನ್ನು ತೋರಿಸಲೆಂದು ಕರ್ನಾಟಕದ ಗೃಹಮಂತ್ರಿಗಳು ನಾವೂ ಎನ್ ಆರ್ ಸಿ ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ. ಆದರೆ ನುಸುಳುಕೋರರ ಅಂದಾಜು ಸಂಖ್ಯೆ ಗೊತ್ತಿಲ್ಲವೆಂದು ಹೇಳಿದ್ದಾರೆ. ಜನಸಾಮಾನ್ಯರಲ್ಲಿ ಹರಡಿಕೊಂಡಿರುವ ಕಥಾನಕವು ಹೀಗಿದೆ: ಅಪಾರ ಸಂಖ್ಯೆಯಲ್ಲಿ ಗಡಿಯಾಚೆಯಿಂದ ನುಸುಳಿ ಬಂದ ಜನರು ಕರ್ನಾಟಕದ ಉದ್ದಕ್ಕೂ ಇದ್ದಾರೆ. ಇವರು ಅನ್ಯಧರ್ಮೀಯರು. ನಮ್ಮ ಮನೆಯಲ್ಲಿ ಬಂದು ಕುಳಿತವರನ್ನು ಎನ್ ಆರ್ ಸಿ ಮೂಲಕ ಹೊರದಬ್ಬಬೇಕು.
ಆದರೆ ಅಸ್ಸಾಮ್ ರಾಜ್ಯದ ಅನುಭವವು ಈ ಪುರಾಣ ಕತೆಯನ್ನು ಪ್ರಶ್ನಿಸುವಂತಿದೆ. ಹಾಗೂ ಹೀಗೂ ಈಗ ಎನ್ ಆರ್ ಸಿ ಯಿಂದ ಹೊರಗುಳಿದ 19 ಲಕ್ಷ ಜನರಲ್ಲಿ ಅನೇಕರು ಪಶ್ಚಿಮ ಬಂಗಾಳದ ಹಿಂದೂಗಳು. ಅವರಿಗಾಗಿಯೇ ಈಗ ತಿದ್ದುಪಡಿ ಕಾನೂನನ್ನು ತರಲಾಗುತ್ತಿದೆ. ಅಂದರೆ ನಾಗರೀಕರ ದಾಖಲೆ ಪರಿಶೀಲಿಸಿ ಸಿದ್ಧಪಡಿಸುವುದು ಇತ್ಯಾದಿಯೆಲ್ಲವೂ ನೆಪಮಾತ್ರ. ಹೊರಗಿನಿಂದ ಬಂದವರು ಮಾತ್ರವಲ್ಲ. ಇಲ್ಲಿಯ ಮುಸ್ಲಿಮ್ರಿಗೆ ದಾಖಲೆ ಇಲ್ಲದಿದ್ದರೆ ಅವರು detention ಶಿಬಿರಕ್ಕೆ ಹೋಗಬೇಕು. ಇನ್ನೊಂದು ಬಹುಮುಖ್ಯ ಸಮಸ್ಯೆಯಿದೆ. ಈ ದೇಶದ ಆದಿವಾಸಿಗಳಿಗೆ, ಅಲೆಮಾರಿ ಜನಾಂಗದವರಿಗೆ ದಾಖಲೆಗಳು ಇಲ್ಲ. ಅವರು ಅಪಾರ ಸಂಖ್ಯೆಯಲ್ಲಿದ್ದಾರೆ. ಅವರ ಗತಿಯೇನು?
ನಾವು ಈ ದೇಶದ ನಾಗರೀಕರಾಗಿರುವುದು ನಮ್ಮ ಸಂವಿಧಾನದಿಂದಾಗಿ. ‘We, the people of India’, ನಾವು ನಮ್ಮ ಸಂವಿಧಾನವನ್ನು ಸ್ವೀಕರಿಸುವುದರ ಮೂಲಕ ಧರ್ಮ, ಜಾತಿ, ಲಿಂಗ, ಮತ ಇವೆಲ್ಲವನ್ನೂ ಮೀರಿದ ಸಮಾನತೆಯನ್ನು ಪಡೆದ ನಾಗರೀಕರಾಗಿದ್ದೇವೆ. ಸಂವಿಧಾನದ ಮೊದಲು ಅದೆಷ್ಟೋ ಸಹಸ್ರಾರು ವರ್ಷಗಳಿಂದ ಈ ನೆಲದಲ್ಲಿ ನಮ್ಮ ಪೂರ್ವಜರು ವಾಸವಾಗಿದ್ದರು. ಈಗ 30 ಅಥವಾ 50 ವರ್ಷಗಳ ದಾಖಲೆ ಇದ್ದರೆ ಮಾತ್ರ ನಾವು ಈ ದೇಶದ ನಾಗರೀಕರು! ಇದೆಲ್ಲ ಒಣ ಚರ್ಚೆಗಳು ನಮ್ಮನ್ನು ದಾರಿತಪ್ಪಿಸುವುದಕ್ಕೆ ಮಾತ್ರ. ಸಾವರ್ಕರ್ ಅವರು ತಮ್ಮ ಗ್ರಂಥದಲ್ಲಿ ಸ್ಪಷ್ಟವಾಗಿ ಹೇಳಿರುವ ಹಾಗೆ ಮುಸ್ಲಿಮ್ರು ಮತ್ತು ಕ್ರಿಶ್ಚಿಯನ್ರು ಈ ದೇಶದ ನಾಗರೀಕರಲ್ಲ, ಪ್ರಜೆಗಳಲ್ಲ. ಏಕೆಂದರೆ ಅವರಿಗೆ ಈ ದೇಶವು ಪಿತೃಭೂಮಿಯಲ್ಲ. ಅಂದರೆ ಅವರ ಧರ್ಮಗಳು ಇಲ್ಲಿಯವು ಅಲ್ಲ. ಅವರು ಇಲ್ಲಿರುವುದಾದರೆ ದ್ವಿತೀಯ ದರ್ಜೆಯ ನಾಗರೀಕರಾಗಿರಬೇಕು. ಅವರು ಶಾಶ್ವತವಾಗಿ “ಅನ್ಯ” ರು. ಈ ತಾತ್ವಿಕತೆಗೆ ಎನ್ ಆರ್ ಸಿ ಒಂದು ರಾಜಕೀಯ ಮುಖವಾಡವಾಗಿದೆ.
ಈ ತಾತ್ವಿಕತೆಯ ಪ್ರಕಾರ ಕಬೀರ್ ಮತ್ತು ಶಿಶುನಾಳ ಶರೀಫರು ಈ ದೇಶದ ಪ್ರಜೆಗಳಾಗುವುದು ಸಾಧ್ಯವಿಲ್ಲ. ಅಂತರ್ ಧರ್ಮಿಯ ಮದುವೆಯಾಗಿ ತಮ್ಮ ಪ್ರತ್ಯೇಕ ಧರ್ಮಗಳನ್ನು ಉಳಿಸಿಕೊಂಡವರು ಈ ದೇಶದ ಪ್ರಜೆಗಳಾಗುವುದು ಸಾಧ್ಯವಿಲ್ಲ. ಹೀಗೆ ಹೇಳಿದರೆ ನೀವು ಸಲ್ಲದ ಮಾತುಗಳನ್ನು, ಅತಿಶಯೋಕ್ತಿಯಿಂದ ಹೇಳುತ್ತಿದ್ದೀರಿ ಎನ್ನಲಾಗುತ್ತದೆ. ಅಥವಾ ದೇಶದ್ರೋಹಿ ಎನ್ನಲೂ ಬಹುದು. ಒಂದು ಸಮುದಾಯದ ಜನರಲ್ಲಿ ಭೀತಿ ಹುಟ್ಟಿಸಿ ಬಹುಸಂಖ್ಯಾತರ ಮನಸ್ಸುಗಳಲ್ಲಿ ಈಗಾಗಲೇ ಇರುವ ದ್ವೇಷ ಹಾಗೂ ಅಸಹನೆಗಳನ್ನು ಬೆಳೆಸುವುದೇ ಈ ರಾಜಕೀಯದ ಉದ್ದೇಶವಾಗಿದೆ. ಇದು ನಡೆಯುತ್ತಿರುವುದು ತಕ್ಷಣ ಪರಿಹಾರವಾಗಬೇಕಾಗಿರುವ ಅನೇಕ ಸಮಸ್ಯೆಗಳಿರುವಾಗ ಅವುಗಳಿಂದ ಜನರು ದೂರವಿರುವಂತೆ ಮಾಡುವುದಕ್ಕಾಗಿ. ಭಾರತದ ಆರ್ಥಿಕ ಸ್ಥಿತಿಯು ಆತಂಕಕಾರಿಯಾಗಿದೆ. ಉದ್ಯೋಗವಿಲ್ಲದ ಯುವಜನತೆಗೆ ಭವಿಷ್ಯವೇ ಇಲ್ಲವಾಗುತ್ತಿದೆ. ಶಿಶುಗಳಿಗೆ ಮಕ್ಕಳಿಗೆ ಇರುವ ಪೌಷ್ಠಿಕಾಂಶದ ಕೊರತೆಯ ಪ್ರಮಾಣ ಜಗತ್ತಿಗೇ ಗಾಬರಿ ಹುಟ್ಟಿಸುವಂತಿದೆ. ಶಿಕ್ಷಣ ಮತ್ತು ಆರೋಗ್ಯ ಇವೆರಡೂ ಸಾಮಾನ್ಯರಿಗೆ ಎಟುಕುವಂತಿಲ್ಲ.
ರೈತರ ಆತ್ಮಹತ್ಯೆಗಳು ಅವ್ಯಾಹತವಾಗಿ ನಡೆದಿವೆ. ಮಹಿಳೆಯರ ಮೇಲಿನ ಅತ್ಯಾಚಾರಗಳು ಹಿಂದೆಂದೂ ಇಲ್ಲದ ಸಂಖ್ಯೆಯಲ್ಲಿ ನಡೆಯುತ್ತಿವೆ. ಇವೆಲ್ಲವುಗಳು ಮುಖ್ಯವಲ್ಲವೆನ್ನುವಂತೆ ಕೆಲಸಕ್ಕೆ ಬಾರದ ಪೌರತ್ವ ದಾಖಲೆಯ ಅಸಂಗತ ನಾಟಕದಲ್ಲಿ ನಾವೆಲ್ಲಾ ಪಾತ್ರಧಾರಿಗಳಾಗುತ್ತಿದ್ದೇವೆ. ಆದರೆ ಇದೊಂದು ಮಹಾನ್ ದುರಂತ ನಾಟಕವಾಗಿದೆ. ಜಗತ್ತೇ ಕಂಡಿರದಂಥ ಅಹಿಂಸೆ, ಸತ್ಯಾಗ್ರಹಗಳ ಮೂಲಕ ಜಗತ್ತಿನ ಅತ್ಯಂತ ಪ್ರಬಲ ಸಾಮ್ರಾಜ್ಯಶಾಹಿಯನ್ನು ಹೊರಹಾಕಿ ಈ ದೇಶದ ಜನರು ಸ್ವಾತಂತ್ರ್ಯವನ್ನು ಪಡೆದರು.
ಆದರೆ ಕೇವಲ ಏಳೆಂಟು ದಶಕಗಳಲ್ಲಿ ದೇಶದ ಪ್ರಜೆಗಳು ಪರಸ್ಪರ ಅಪನಂಬಿಕೆಯಲ್ಲಿ ಬದುಕುವಂತಾಗಿದೆ. ಯಾರು ಇಲ್ಲಿಯವರು ಯಾರು ನುಸುಳುಕೋರರು ಎಂದು ದಾಖಲೆ ಹುಡುಕಬೇಕಾಗಿದೆ. ನಾನು ಇಲ್ಲಿ ಹುಟ್ಟಿ ಬೆಳೆದಿದ್ದರ ಬಗ್ಗೆ ದಾಖಲೆ ಇದೆ. ಆದರೆ ನನ್ನ ಅಜ್ಜನ ಹತ್ತಿರ ಯಾವ ದಾಖಲೆಯೂ ಇರಲಿಲ್ಲ. ಆದ್ದರಿಂದ ನನ್ನ ಅಜ್ಜನನ್ನು ಮರಣೋತ್ತರವಾಗಿಯಾದರೂ ಈ ದೇಶದ ಪ್ರಜೆಯನ್ನಾಗಿ ಮಾಡುವ ಪ್ರಯತ್ನದಲ್ಲಿದ್ದೇನೆ! ಸದ್ಯ ಸ್ವರ್ಗದಲ್ಲಿ, ನರಕದಲ್ಲಿ ಶಿಬಿರಗಳಿಲ್ಲವಾದ್ದರಿಂದ ನನ್ನ ಅಜ್ಜನ ಬಗ್ಗೆ ತುಂಬಾ ಆತಂಕವಿಲ್ಲ!
ಇದು ಕೇವಲ ಭಾರತದಲ್ಲಿ ಮಾತ್ರ ನಡೆಯುತ್ತಿಲ್ಲ. ‘ಅಮೇರಿಕನ್ರಿಗಾಗಿ ಅಮೇರಿಕಾ’ ಎಂದು ಘೋಷಿಸಿದ ಅಧ್ಯಕ್ಷ ಟ್ರಂಪ್ ಆಡಳಿತ ಕೂಡ ಮೆಕ್ಸಿಕೋದ ಗಡಿಯ ಬಳಿಗೆ ತಡೆಗೋಡೆಯನ್ನು ನಿರ್ಮಿಸಿ ನುಸುಳುಕೋರರಿಗಾಗಿ detention ಶಿಬಿರಗಳನ್ನು ನಿರ್ಮಿಸುವಂತೆ ಆದೇಶಿಸಿದೆ. ಹಾಗೆ ಶಿಬಿರಗಳನ್ನು ಮಾಡಲಾಯಿತು ಕೂಡ. ಆದರೆ ಇದರಿಂದಾಗಿ ಉಂಟಾದ ಅಪಾರವಾದ ಅಮಾನವೀಯವಾದ ದುಃಖ ಹಾಗೂ ನೋವುಗಳನ್ನು ನೋಡಿದ ಅಮೇರಿಕದ ಜನತೆ (ಎಲ್ಲರೂ ಅಲ್ಲ) ಇದನ್ನು ವಿರೋಧಿಸಿದರು. ಸಮಸ್ಯೆಯು ಬಗೆಹರಿದಿಲ್ಲ. ಅನೇಕ ದೇಶಗಳಲ್ಲಿ ಯುದ್ಧ, ಅಶಾಂತಿ, ಹಿಂಸೆ ಹಾಗು ಬಡತನಗಳಿಂದಾಗಿ ನಿರಾಶ್ರಿತರಾದವರು ಪಶ್ಚಿಮದ ದೇಶಗಳಿಗೆ ವಲಸೆ ಬರುತ್ತಿದ್ದಾರೆ. ಅನೇಕ ಬಾರಿ ದಾಖಲೆ, ಪರವಾನಗಿ ಇಲ್ಲದೆಯೆ. ಜರ್ಮನಿಯಂಥ ಕೆಲವು ದೇಶಗಳು ಇವರ ಬಗ್ಗೆ ಸ್ವಲ್ಪ ಉದಾರವಾಗಿದ್ದರೆ ಅನೇಕ ದೇಶಗಳು ದಿಡ್ಡಿ ಬಾಗಿಲು ಹಾಕಿಬಿಡುತ್ತಿವೆ. ಅಕ್ರಮ ವಲಸಿಗರು ಎಂದು ಹೇಳುವುದು ಸುಲಭ. ಆದರೆ ಆಧುನಿಕ ಜಗತ್ತಿನಲ್ಲಿ ದೇಶದಿಂದ ದೇಶಕ್ಕೆ ಗುಳೇ ಹೋಗುವವರ ಸಂಖ್ಯೆಯು ಅಪಾರವಾಗಿದೆ. ಇದು ಆಧುನಿಕ ಚರಿತ್ರೆಯ ಮುಖ್ಯ ಲಕ್ಷಣವೂ ಆಗಿದೆ.
ಹಾಗೆ ನೋಡಿದರೆ ಮನುಷ್ಯ ಕುಲವು ಭೂಮಿಯನ್ನು ಆವರಿಸಿದ್ದು ವಲಸೆಯ ಮೂಲಕವೇ ಅಲ್ಲವೆ? ಇನ್ನೊಂದು ವಿಷಯ ಗಮನಿಸಿ. ಟ್ರಂಪ್ ಮತ್ತು ಸಂಗಡಿಗರಿಗೆ ದ್ವೇಷ ಹುಟ್ಟುವಂತೆ ಅಪಾರ ಸಂಖ್ಯೆಯಲ್ಲಿ ಅಮೇರಿಕಕ್ಕೆ ಬಂದಿರುವವರಲ್ಲಿ ಲ್ಯಾಟಿನ್ ಅಮೇರಿಕದ ಪ್ರಜೆಗಳು ಬಹು ಸಂಖ್ಯೆಯಲ್ಲಿದ್ದಾರೆ. ಒಂದು ಕಾಲದಲ್ಲಿ ಪಶ್ಚಿಮದ ಬಲಿಷ್ಠ ದೇಶಗಳು ಚಿನ್ನವನ್ನು ಹಾಗೂ ಅಪಾರ ಸಂಪನ್ಮೂಲಗಳನ್ನು ಹುಡುಕಿಕೊಂಡು ಈ ಲ್ಯಾಟಿನ್ ಅಮೇರಿಕದ ನಾಡುಗಳಿಗೆ ಬಂದು, ಲೂಟಿಮಾಡಿ ನಿಧಾನವಾಗಿ ಅವುಗಳನ್ನು ನಿರ್ಗತಿಕವÀನ್ನಾಗಿ ಮಾಡಿದವು. ಈಗ ಪಶ್ಚಿಮದ ಬಂಡವಾಳಶಾಹಿ, ಸಾಮ್ರಾಜ್ಯಶಾಹಿಗಳೇ ತಂದ ಬಡತನದಿಂದಾಗಿ ಈ ದೇಶದ ಪ್ರಜೆಗಳು ಅಮೇರಿಕಕ್ಕೆ ಬಂದರೆ ಅವರು ನುಸುಳುಕೋರರು! ಭಾರತಕ್ಕೆ ಬಂದ ಬ್ರಿಟಿಷ್ರು ಭಾರತವನ್ನು ಹೇಗೆ ಲೂಟಿ ಮಾಡಿದರು ಎಂದರೆ ಅವರು ತಂದು ಹೇರಿದ ಬಡತನದಿಂದಾಗಿ ಭಾರತೀಯರು ನರಭಕ್ಷಕರಾಗಿ ಒಬ್ಬರನ್ನೊಬ್ಬರು ತಿನ್ನಬೇಕಾಗುತ್ತದೆ ಎಂದು ಒಬ್ಬ ಬ್ರಿಟಿಷ್ ಅಧಿಕಾರಿಯೇ ಬರೆದಿದ್ದ! ಈಗ ಒಬ್ಬ ಬಡಭಾರತೀಯ ದಾಖಲೆ ಇಲ್ಲದೆ ಇಂಗ್ಲೇಂಡ್ಗೆ ಹೋದರೆ ಅವನು ನುಸುಳುಕೋರ! ಅವನಿಂದಾಗಿ ಬ್ರಿಟನ್ನ ಶ್ರೀಮಂತಿಕೆ ನಾಶವಾಗುತ್ತದೆ. ‘ಅಮೇರಿಕವು ಅಮೇರಿಕನ್ರಿಗಾಗಿ’ ಎನ್ನುವ ಟ್ರಂಪ್ ಒಂದು ವೇಳೆ ಅಲ್ಲಿ ನೆಲೆಸಿರುವ ಎಲ್ಲಾ ಭಾರತೀಯರನ್ನು ಭಾರತಕ್ಕೆ ವಾಪಸ್ಸು ಕಳಿಸಿದರೆ?!