– ಆರ್.ಆರ್.ನಗರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೆಟ್ ಟಾಪ್ ಬಾಕ್ಸ್ ಹಂಚಿಕೆ ಸಂಬಂಧ ಚುನಾವಣಾ ಆಯೋಗದ ಮೌನ ಪ್ರಶ್ನಿಸಿದ್ದ ದಿನೇಶ್ ಗುಂಡೂರಾವ್
ಬೆಂಗಳೂರು : ಉಪಚುನಾವಣೆ ಮತದಾನಕ್ಕೆ ಒಂದು ವಾರ ಬಾಕಿ ಇರುವಾಗಲೇ ಕಾಂಗ್ರೆಸ್ ಸೋಲಿಗೆ ನೆಪ ಹುಡುಕುತ್ತಿದೆ ಎಂದು ಬಿಜೆಪಿ ನಾಯಕರು ದಿನೇಶ್ ಗುಂಡೂರಾವ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಶಿರಾ ಮತ್ತು ಆರ್ . ಆರ್ ನಗರ ಉಪಚುನಾವಣೆ ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿ ನಡೆಯುವುದು ಅನುಮಾನವಾಗಿದೆ. ಬಿಜೆಪಿ ಈಗಾಗಲೇ ಆಡಳಿತ ಯಂತ್ರ ದುರುಪಯೋಗ ಪಡಿಸಿಕೊಂಡು ಜನರ ಮೇಲೆ ಪ್ರಭಾವ ಬೀರುತ್ತಿದೆ. ಆರ್.ಆರ್ ನಗರದಲ್ಲಿ ಹಣ ಮತ್ತು ಸೆಟ್ ಟಾಪ್ ಬಾಕ್ಸ್ ವಿತರಣೆ ಮಾಡಿದೆ. ಆದರೆ ಈ ಬಗ್ಗೆ ಚುನಾವಣಾ ಆಯೋಗ ಮೌನವಾಗಿದೆ. ಚುನಾವಣಾ ಆಯೋಗ ಕೇವಲ ಬೆದರು ಬೊಂಬೆಯೇ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
ದಿನೇಶ್ ಗುಂಡೂರಾವ್ ವಿರುದ್ದ ತಿರುಗಿ ಬಿದ್ದಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ , ಉಪಚುನಾವಣೆಗಳ ಮತದಾನಕ್ಕೆ ಇನ್ನೂ ಒಂದು ವಾರ ಇರುವಾಗಲೇ ಸೋಲಿಗೆ ನೆಪಗಳನ್ನು ಹುಡುಕುತ್ತಿರುವ ಕಾಂಗ್ರೆಸ್ ನಾಯಕರ ವರಸೆ ನೋಡಿದರೆ ಯುದ್ಧಕ್ಕೆ ಮುಂಚೆಯೇ ಶಸ್ತ್ರತ್ಯಾಗ ಮಾಡಿದಂತಿದೆ. ಕಾಂಗ್ರೆಸ್ ಪಕ್ಷವನ್ನು ಮತದಾರರು ತಿರಸ್ಕರಿಸಿದ್ದು ಆರ್.ಆರ್. ನಗರ ಮತ್ತು ಶಿರಾ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಟಾಂಗ್ ಕೊಟ್ಟಿದ್ದಾರೆ.
ಗುಂಡೂರಾವ್ ಹೇಳಿಕೆಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಆರ್. ಆರ್. ನಗರ ಮತ್ತು ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭಿವೃದ್ಧಿಯ ಮಾನದಂಡದ ಮೇಲೆ ಗೆಲ್ಲುವುದು ಶತಸಿದ್ದ. ಜನರ ಅಲೆ ಬಿಜೆಪಿ ಪರವಾಗಿರುವುದರಿಂದ ದಿನೇಶ್ ಗುಂಡುರಾವ್ ರವರು ಹತಾಶರಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕುಟುಕಿದ್ದಾರೆ.