ತ್ರಿವಳಿ ಅಪಾಯಗಳನ್ನು ಸೃಷ್ಟಿಸಿದ ಒಂದು ವರ್ಷದಲ್ಲಿ `ಒಳ್ಳೆಯ ದಿನಗಳ’ ಆಶ್ವಾಸನೆ ಭ್ರಮೆಯಿಂದ ದುಸ್ವಪ್ನದತ್ತ

ಪಿಡಿ ಸಂಪಾದಕೀಯ – ಸೀತಾರಾಮ್ ಯೆಚೂರಿ

ಸಂಪುಟ 9 ಸಂಚಿಕೆ 22 – 31 ಮೇ 2015

ಆರು ದಶಕಗಳಲ್ಲಿ ಮೊತ್ತಮೊದಲ ಬಾರಿಗೆ ಭಾರತವನ್ನು ಪುನಶ್ಚೇತನಗೊಳಿಸಬಲ್ಲ ಸರಕಾರವೊಂದು ಬಂದಿದೆ ಎನ್ನುವ ಮಾತುಗಳು ಕಳೆದ ಒಂದು ವರ್ಷದಲ್ಲಿ ಜುಗುಪ್ಸೆ ಹುಟ್ಟುಸುವಷ್ಟು ಸಲ ಕೇಳಬಂದಿವೆ. ಆದರೆ ವಾಸ್ತವ ತದ್ವಿರುದ್ಧವಾಗಿದೆ- ಒಟ್ಟಾರೆ ವಿವಿಧ ಪರಿಧಿಗಳನ್ನು ಗಮನಕ್ಕೆ ತಗೊಂಡರೂ, ದೇಶದ ಮೇಲೆ ಮತ್ತು ಜನತೆಯ ಮೇಲೆ ಒಂದು ಹೊಸ ತ್ರಿವಿಧ ಪ್ರಹಾರವನ್ನು ನಡೆಸಲಾಗುತ್ತಿದೆ ಎಂಬುದೀಗ ಸ್ಪಷ್ಟವಾಗಿ ಕಾಣುತ್ತಿದೆ.

ಈ ಸರಕಾರ ನೀಡಿದ ’ಒಳ್ಳೆಯ ದಿನಗಳ’ ಆಶ್ವಾಸನೆ ಭ್ರಮೆಯಿಂದ ದುಸ್ವಪ್ನವಾಗಿ ಪರಿವರ್ತನೆಗೊಳ್ಳುತ್ತಿದೆ.

ಈ ಒಂದು ವರ್ಷದಲ್ಲಿ ಪ್ರಧಾನ ಮಂತ್ರಿಗಳು 18 ವಿದೇಶಿ ಪ್ರವಾಸಗಳನ್ನು ನಡೆಸಿದ್ದಾರೆ. ಇದೊಂದು ದಾಖಲೆ. ಅವರು ದೇಶದೊಳಗಿನ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಸಮಯ ಕೊಟ್ಟಿದ್ದರೆ ಒಳ್ಳೆಯದಿತ್ತು ಎಂದು ದೇಶ ಮತ್ತು ಜನತೆ ಆಶಿಸಿದರೆ, ಆರೆಸ್ಸೆಸ್ ಈ ವಿದೇಶಿ ಭೇಟಿಗಳಿಂದ ಉಬ್ಬಿ ಹೋಗಿದೆ- ಜಗತ್ತಿನ 40 ದೇಶಗಳಲ್ಲಿ ಆರೆಸ್ಸೆಸ್ ಜಾಲವನ್ನು ಹರಡುವಲ್ಲಿ ಪ್ರಧಾನ ಮಂತ್ರಿಗಳು ನೆರವಾಗಿದ್ದಾರೆ ಎಂದು! ಅವರು ಈಗಲೂ ಆರೆಸ್ಸೆಸ್ ಪ್ರಚಾರಕನ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ ಎಂಬುದು ಸ್ಪಷ್ಟ !

ಅವರು ಇದುವರೆಗೆ ಭೇಟಿ ಮಾಡಿದ ಕೊನೆಯ ದೇಶದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಕಳೆದ ಆರು ದಶಕಗಳಲ್ಲಿ ತಾವು ಭಾರತೀಯರೆಂದು ಹೇಳಿಕೊಳ್ಳಲು ನಾಚಿಕೆ ಪಡುತ್ತಿದ್ದ ಅನಿವಾಸಿಗಳು ಇಂದು ಹೆಮ್ಮೆಯಿಂದ ತಾವು ಭಾರತೀಯರು ಎಂದು ಎದೆತುಂಬಿ ತಮ್ಮ ದೇಶಪ್ರೇಮವನ್ನು ಸಾರಬಹುದಾಗಿದೆ ಎಂದು ಗುಡುಗಿದರು. ಅವರು ಮತ್ತು ಬಿಜೆಪಿ ತಮ್ಮ ಭಾರತೀಯ ನಾಗರಿಕತ್ವವನ್ನು ಪಟ್ಟು ಹಿಡಿದು ರಕ್ಷಿಸಿಕೊಂಡಿರುವ ಮತ್ತು ಭಾರತೀಯ ಪಾಸ್‌ಪೋರ್ಟ್‌ಗಳನ್ನು ಉಳಿಸಿಕೊಂಡಿರುವ ಹಲವು ದೇಶಪ್ರೇಮಿ ಅನಿವಾಸಿ ಭಾರತೀಯರಿಂದ ಈ ಬಗ್ಗ ಅಬಿಪ್ರಾಯಗಳನ್ನು ಪಡೆಯುವುದು ಒಳ್ಳೆಯದು.

ಅದಂತಿರಲಿ, ಕಳೆದ ಒಂದು ವರ್ಷದಲ್ಲಿ ಪ್ರಧಾನ ಮಂತ್ರಿಗಳು ಮತ್ತು ಬಿಜೆಪಿ ಸ್ವತಂತ್ರ ಭಾರತದಲ್ಲಿ ಆರು ದಶಕಗಳ ಕಾಲ ಆಡಳಿತ ನಡೆಸಿದ ಸರಕಾರಗಳೆಲ್ಲ ಬೀಳಿಸಿ ಹೋದುದನ್ನು ಮತ್ತೆ ಕಟ್ಟುತ್ತಿದ್ದಾರೆ ಎಂದು ಜಗತ್ತಿಗೆ ಮತ್ತು ದೇಶಕ್ಕೆ ಅದೆಷ್ಟೋ ಬಾರಿ ಜುಗುಪ್ಸೆ ಹುಟ್ಟುವಷ್ಟು ಸಲ ಹೇಳುತ್ತಲೇ ಇದ್ದಾರೆ. ಹೀಗೆ ಹೇಳುವಾಗ ಅಟಲ್ ಬಿಹಾರಿ ವಾಜಪೆಯಿಯವರ ನೇತೃತ್ವದ ಆರು ವರ್ಷಗಳ ಎನ್‌ಡಿಎ ಸರಕಾರವನ್ನು ಕೂಡ ಗುರುತಿಸದಿರುವುದು ಔದಾರ್ಯಹೀನತೆಯಾಗುತ್ತದೆ.

ಹೊಸ ತ್ರಿವಿಧ ಪ್ರಹಾರಗಳು

ನಿಸ್ಸಂದೇಹವಾಗಿಯೂ, ಈ ಆರು ದಶಕಗಳಲ್ಲಿ ಜನತೆಗೆ ನೀಡಿದ ನೂರಾರು ಭರವಸೆಗಳು ಈಡೇರದೆ ಉಳಿದಿವೆ, ನಮ್ಮ ಸಂಪನ್ಮೂಲಗಳ ನಿರ್ದಯ ಲೂಟಿ ಆಗಿದೆ,  ಮತ್ತು ನಮ್ಮ ಜನತೆಯ ಶೋಷಣೆ ಹೆಚ್ಚುತ್ತಿದೆ. ಆದರೆ ಈ ಅಂಶ ಮೋದಿ ಸರಕಾರದ ಈ ಸಾರ್ವಜನಿಕ ಸಂಬಂಧಗಳ ಕಸರತ್ತಿನ ಉದ್ದೇಶ ಅಲ್ಲ, ಈ ಸರಕಾರಕ್ಕೆ  ಮಾತ್ರವೇ ಭಾರತವನ್ನು ಪುನಶ್ಚೇತನಗೊಳಿಸುವುದು ಸಾಧ್ಯ ಎಂದು ಬಿಂಬಿಸುವದಷ್ಟೇ ಇದರ ಉದ್ದೇಶ.

ತದ್ವಿರುದ್ಧವಾಗಿ, ಒಟ್ಟಾರೆ ವಿವಿಧ ಪರಿಧಿಗಳನ್ನು ಗಮನಕ್ಕೆ ತಗೊಂಡರೂ, ಈಗ ದೇಶದ ಮೇಲೆ ಮತ್ತು ಜನತೆಯ ಮೇಲೆ ಒಂದು ಹೊಸ ತ್ರಿವಿಧ ಪ್ರಹಾರವನ್ನು ನಡೆಸಲಾಗುತ್ತಿದೆ ಎಂಬುದೀಗ ಸ್ಪಷ್ಟವಾಗಿ ಕಾಣುತ್ತಿದೆ. ನವ-ಉದಾರವಾದಿ ಆರ್ಥಿಕ ಸುಧಾರಣೆಗಳ ಉಗ್ರ ಅನುಸರಣೆ, ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸಿ ಭಾರತೀಯ ಗಣತಂತ್ರದ ಜಾತ್ಯಾತೀತ ಪ್ರಜಾಸತ್ತಾತ್ಮಕ ಬುನಾದಿಯ ಮೇಲೆ ಅವಿರತ ದಾಳಿಗಳು ಮತ್ತು ಒಂದು ಸಮಸದೀಯ ಪ್ರಜಾಪ್ರಭುತ್ವದಲ್ಲಿ ಪರಮ ಪವಿತ್ರವೆನಿಸಿರುವ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ವಿಧಾನಗಳನ್ನು ಕೃಶಗೊಳಿಸುವ ಮೂಲಕ ಒಂದು ಸರ್ವಾಧಿಕಾರಶಾಹಿ ಆಳ್ವಿಕೆಯತ್ತ- ಇವೀಗ ನಮ್ಮ ಮುಂದಿರುವ ದಾಳಿಗಳ ಸಮೂಹ.

ಕೃಪೆ : ಪಿ. ಮಹಮ್ಮದ್, ವಿಜಯ ಕರ್ನಾಟಕ
ಕೃಪೆ : ಪಿ. ಮಹಮ್ಮದ್, ವಿಜಯ ಕರ್ನಾಟಕ

ತಿಪ್ಪರಲಾಗಗಳು, ನಾಚಿಕೆಹೀನ ತಿಪ್ಪರಲಾಗಗಳು

ಈ ಮೋದಿ ಸರಕಾರ ಅವಿರತವಾಗಿ ಡಾ.ಮನಮೋಹನ್ ಸಿಂಗ್ ಅನುಸರಿಸಿದ ನವ-ಉದಾರವಾದಿ ಆರ್ಥಿಕ ಸುಧಾರಣೆಗಳ ದಿಕ್ಕಿನಲ್ಲೇ ಇನ್ನಷ್ಟು ಉಗ್ರವಾಗಿ ಮುಂದುವರೆದಿದೆ. ನಮ್ಮ ಆರ್ಥಿಕದ ಎಲ್ಲ ಪ್ರಮುಖ ವಲಯಗಳನ್ನು ಈಗ ಹೆಚ್ಚೆಚ್ಚು ವಿದೇಶಿ ನೇರ ಹೂಡಿಕೆ(ಎಫ್‌ಡಿಐ)ಗಳಿಗೆ ತೆರೆದಿಡಲಾಗಿದೆ. ಚಿಲ್ಲರೆ ವ್ಯಾಪಾರದಲ್ಲಿ ಎಫ್‌ಡಿಐಗೆ ಅವಕಾಶ ಮುಂತಾದ ಅವರೇ ಈ ಹಿಂದೆ ವಿರೋಧಿಸುತ್ತಿದ್ದ ಹಲವಾರು ಪ್ರಶ್ನೆಗಳಲ್ಲಿ ಈಗ ತಿಪ್ಪರಲಾಗ ಹಾಕುತ್ತಿದ್ದಾರೆ.

ಈ ವಿಷಯದಲ್ಲಿ, ಅವರ ಅತ್ಯಂತ ನಾಚಿಕೆಹೀನ ತಿಪ್ಪರಲಾಗ ಎಂದರೆ, ತಾವೇ 2013 ರಲ್ಲಿ ನೀಡಿದ್ದ ಬೆಂಬಲವನ್ನು ನಿರಾಕರಿಸಿ ಮೂರು ಬಾರಿ ಹೊಸ ಭೂಸ್ವಾಧೀನ ಸುಗ್ರೀವಾಜ್ಷೆಗಳನ್ನು ನುಗ್ಗಿಸಿರುವುದು. ದೇಶಿ-ವಿದೇಶಿ ಕಾರ್ಪೊರೇಟ್‌ಗಳಿಗೆ ಬೇಗನೇ ಗರಿಷ್ಟ ಲಾಭಗಳಿಕೆಗಾಗಿ ರಿಯಲ್ ಎಸ್ಟೇಟನ್ನು ವಹಿಸಿಕೊಡುವ ಅವರ ತುರ್ತು ಅಜೆಂಡಾಕ್ಕಾಗಿ ನಮ್ಮ ವಿಶಾಲ ರೈತಾಪಿ ಸಮೂಹಗಳನ್ನು ಬಲಿಗೊಡಲಾಗುತ್ತಿದೆ. ನೈಸರ್ಗಿಕ ಖನಿಜ ಸಂಪನ್ಮೂಲಗಳನ್ನು ವಿದೇಶಿ ಮತ್ತು ದೇಶೀ ಕಾರ್ಪೊರೇಟ್ ಗುಂಪುಗಳಿಗೆ ತೆರೆದು ಕೊಡುತ್ತಿರುವುದು, ಅದರೊಂದಿಗೆ ಭಾರೀ ಪ್ರಮಾಣದಲ್ಲಿ ಸಾರ್ವಜನಿಕ ವಲಯದ ಖಾಸಗೀಕರಣದ ಹೆಬ್ಬಯಕೆ- ಚಮಚಾ ಬಂಡವಾಳಶಾಹಿಗೆ ಸುಗ್ಗಿಯೋ ಸುಗ್ಗಿ.

ಜಿಡಿಪಿ ಬೆಳವಣಿಗೆ ದರವನ್ನು ಸುಂದರವಾಗಿ ಕಾಣುವಂತೆ ಮಾಡಲು ರಾಷ್ಟ್ರೀಯ ಆದಾಯದ ಲೆಕ್ಕಪತ್ರದ ಆಧಾರ ವರ್ಷವನ್ನೇ ಬದಲಿಸಲಾಯಿತು. ಆದಾಗ್ಯೂ ಸರಕು ಉತ್ಪಾದನೆ ಮತ್ತು ಕೈಗಾರಿಕಾ ಬೆಳವಣಿಗೆ ಏರುತ್ತಲೇ ಇಲ್ಲ. ಕಾರ್ಪೊರೇಟ್‌ಗಳ ಸರಕು ದಾಸ್ತಾನುಗಳು ಹಿಂದೆಂದೂ ಕಾಣದಷ್ಟು  ಸಂಗ್ರಹವನ್ನು ದಾಖಲಿಸಿವೆ. ಇದರಿಂದ ಉದ್ಯೋಗಾವಕಾಶದಲ್ಲಿ ತೀವ್ರ ಇಳಿಕೆಯಾಗುತ್ತಿದೆ ಆಮೂಲಕ ನಿರುದ್ಯೋಗಿ ಯುವಜನರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಇದರ ಜೊತೆಗೆ ಎಲ್ಲ ಜೀವನಾವಶ್ಯಕ ಸಾಮಗ್ರಿಗಳ ಬೆಲೆಗಳಲ್ಲಿ ನಿರಂತರ ಏರಿಕೆ, ಇಂಧನ ಬೆಲೆಗಳಲ್ಲಿ ಸತತವಾಗಿ ದೊಡ್ಡ ಏರಿಕೆಗಳು ನಮ್ಮ ಬಹುಪಾಲು ಜನತೆಯ ಜೀವನಾಧಾರಗಳ ಮೇಲೆ ವಿಪರೀತ ಸಂಕಷ್ಟಗಳನ್ನು ಹೇರುತ್ತಿವೆ.

ಎರಡು ಭಾರತಗಳ ನಡುವಿನ ಕಂದರ ತೀವ್ರವಾಗಿ ಹೆಚ್ಚಿದೆ

ಕೃಷಿ ಸಂಕಟ ಆಳಗೊಳ್ಳುತ್ತಿದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಒಟ್ಟು ಸಾಗುವಳಿ ಪ್ರದೇಶದಲ್ಲಿ ಇಳಿಕೆ ವರದಿಯಾಗಿದೆ. ಕೃಷಿ ಲಾಗುವಾಡುಗಳ ಬೆಲೆಗಳಲ್ಲಿ ಏರಿಕೆ ಮತ್ತು ಸಬ್ಸಿಡಿಗಳಲ್ಲಿ ತೀವ್ರ ಇಳಿಕೆಯಿಂದಾಗಿ ಬಹಳಷ್ಟು ಬೇಸಾಯಗಾರರಿಗೆ ಕೃಷಿ ಚಟುವಟಿಕೆ ಎರಡು ಹೊತ್ತಿನ ಊಟವನ್ನೂ ಒದಗಿಸದಾಗಿದೆ. ಇದರ ಫಲಿತಾಂಶವಾಗಿ ಹತಾಶ ಆತ್ಮಹತ್ಯೆಗಳು ಹೆಚ್ಚೆಚ್ಚು ಸಂಭವಿಸುತ್ತಲೇ ಇವೆ. ಕಾರ್ಮಿಕರ ಪರಿಸ್ಥಿತಿಯೂ ಇದಕ್ಕಿಂತ ಉತ್ತಮವೇನೂ ಆಗಿಲ್ಲ. ಒಟ್ಟು ಜಿಡಿಪಿಯಲ್ಲಿ ಸಂಬಳ-ಕೂಲಿಗಳ ಪ್ರಮಾಣ ೧೦ಶೇ.ಕ್ಕಿಂತ ತುಸು ಹೆಚ್ಚಿದೆಯಷ್ಟೇ. 1990-91ರಲ್ಲಿ ಇದು 25ಶೇ.ದಷ್ಟಿತ್ತು ಎಂಬುದನ್ನು ಹೋಲಿಸಿ ನೋಡಬಹುದು.

ಮತ್ತೊಂದು ಕಡೆ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. 2014ರ ಫೋರ್ಬ್ಸ್ ಪಟ್ಟಿಯ ಪ್ರಕಾರ ಭಾರತದ 100 ಅತ್ಯಂತ ಶ್ರೀಮಂತರೆಲ್ಲರೂ ಈಗ ಡಾಲರ್ ಬಿಲಯಾಧಿಪತಿಗಳು, ಅಂದರೆ ಅವರ ಆಸ್ತಿ ಮೌಲ್ಯ ಈಗಿನ ದರದಲ್ಲಿ 6,400 ಕೋಟಿ ರೂ.ಗಳಿಗಿಂತಲೂ ಹೆಚ್ಚು. 2011ರ ಈ ಪಟ್ಟಿಯಲ್ಲಿದ್ದದ್ದು 55 ಮಂದಿ, ಅಂದರೆ ಇನ್ನೂ 45 ಶ್ರೀಮಂತರು ಈ ಮೂರು ವರ್ಷಗಳಲ್ಲಿ ಈ ಪಟ್ಟಿಗೆ ಬಂದಿದ್ದಾರೆ. ಅಷ್ಟೇ ಅಲ್ಲ, ಈ 100 ಡಾಲರ್ ಬಿಲಿಯಾಧಿಪತಿಗಳ ಒಟ್ಟು ಸಂಪತ್ತು 346 ಬಿಲಿಯ ಡಾಲರುಗಳು (ಅಥವ 22,14,400 ಕೋಟಿ ರೂ.ಗಳು). ದೇಶದ ಒಟ್ಟು ಸಂಪತ್ತಿನಲ್ಲಿ ಅತ್ಯಂತ ಶ್ರೀಮಂತ 1ಶೇ. ಮಂದಿಯ ಪಾಲು 2000ದಲ್ಲಿ 36.8 ಶೇ. ಇತ್ತು, ಅದು 2014ರಲ್ಲಿ 49ಶೇ.ಕ್ಕೆ ಏರಿದೆ.

ಈ ಸರಕಾರ ನೀಡಿದ ’ಒಳ್ಳೆಯ ದಿನಗಳ’ಆಶ್ವಾಸನೆ ಭ್ರಮೆಯಿಂದ ದುಸ್ವಪ್ನವಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಒಂದು ವರ್ಷದಲ್ಲಿ ಎರಡು ಭಾರತಗಳ ನಡುವಿನ ಕಂದರ ತೀವ್ರವಾಗಿ ಹೆಚ್ಚಿದೆ.

ಕೋಮುವಾದಿ ಧ್ರುವೀಕರಣಕ್ಕೆ ಸರಕಾರೀ ಕೃಪಾಪೋಷಣೆ

ಇದೇ ಸಮಯದಲ್ಲಿ, ಈ ಹದಗೆಡುತ್ತಿರುವ ಪರಿಸ್ಥಿತಿಗಳಿಂದಾಗಿ ಜನತೆಯ ಪ್ರತಿಭಟನೆಗಳು ಬಲಗೊಳ್ಳದಿರಲಿ ಎಂದು ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸಲು ಈ ಸರಕಾರದ ಕೃಪಾಪೋಷಣೆ ದೊರೆಯುತ್ತಿದೆ.

ಆರೆಸ್ಸೆಸ್‌ನ ರಾಜಕೀಯ ಅಂಗವಾಗಿ ಬಿಜೆಪಿ ಆಧುನಿಕ ಜಾತ್ಯಾತೀತ ಪ್ರಜಾಸತ್ತಾತ್ಮಕ ಭಾರತೀಯ ಗಣತಂತ್ರವನ್ನು ಒಂದು ಉನ್ಮತ್ತ ಅಸಹಿಷ್ಣು ಫ್ಯಾಸಿಸ್ಟ್ ಮಾದರಿಯ ’ಹಿಂದೂರಾಷ್ಟ್ರ’ವಾಗಿ ಪರಿವರ್ತಿಸುವ ಆರೆಸ್ಸೆಸ್ ಯೋಜನೆಯನ್ನು ಮುಂದೊತ್ತುತ್ತಿದೆ.

ಘರ್ ವಾಪಸಿ, ಲವ್ ಜಿಹಾದ್ ಮುಂತಾದ ಕೋಮುವಾದಿ ಪ್ರಚಾರದೊಂದಿಗೆ ಇತಿಹಾಸದಲ್ಲಿ ಪುರಾಣವನ್ನು, ತತ್ವಶಾಸ್ತ್ರದ ಜಾಗದಲ್ಲಿ ಧರ್ಮಶಾಸ್ತ್ರವನ್ನು ಕೂರಿಸುವ ಬಿರುಸಿನ ಪ್ರಯತ್ನಗಳು ನಡೆಯುತ್ತಿವೆ. ಇದರ ಫಲಿತಾಂಶವಾಗಿ ಪಠ್ಯಕ್ರಮ, ಶೈಕ್ಷಣಿಕ ಸಂಶೋಧನಾ ಸಂಸ್ಥೆಗಳು ಮುಂತಾದವುಗಳನ್ನು ಬದಲಿಸುವ ಪ್ರಯತ್ನ ನಡೆದಿದೆ. ವೈಜ್ಞಾನಿಕ ಮನೋಭಾವದ ಮೇಲೆ ಗಂಭೀರ ಹೊಡೆತ ಹಾಕಲಾಗುತ್ತಿದೆ.

ದೇಶದ ವಿವಿಧ ಮೂಲೆಗಳಿಂದ ಕೋಮುವಾದಿ ಉದ್ವಿಗ್ನತೆ, ಗಲಭೆಗಳ ವರದಿಗಳು ಹೆಚ್ಚುತ್ತಿವೆ. ಮುಸ್ಲಿಂ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ಕ್ರಿಶ್ಚಿಯನ್ ಚರ್ಚಗಳ ಮೇಲೆ ದಾಳಿಗಳು ವಿಪರೀತವಾಗಿ ಹೆಚ್ಚಿವೆ. ಪ್ರಧಾನ ಮಂತ್ರಿಗಳು ದ್ವೇಷ ಹುಟ್ಟಿಸುವ ಭಾಷಣಗಳನ್ನು ನೀಡಿ ಕಾನೂನನ್ನು ಉಲ್ಲಂಘಿಸುತ್ತಲೇ ಇರುವ ತನ್ನ ಸಂಪುಟದ ಸದಸ್ಯರುಗಳು ಮತ್ತು ಸಂಸತ್ ಸದಸ್ಯರುಗಳ ಮೇಲೆ ಕ್ರಮ ಕೈಗೊಳ್ಳುವ ಆಶ್ವಾಸನೆಯನ್ನು ಕೊಡಲು ಕೂಡ  ಸಂಸತ್ತಿನಲ್ಲಿ ನಿರಾಕರಿಸಿದ್ದಾರೆ.

ಇನ್ನೊಂದು ಹಂತದಲ್ಲಿ, ಲೋಕಸಭೆಯಲ್ಲಿ ಕೇವಲ ೩೧ಶೇ. ಮತ ಪಡೆದು ಗಳಿಸಿರುವ ತನ್ನ ಸರಳ ಬಹುಮತವನ್ನು ಬಳಸಿ  ಹಲವಾರು ಮಹತ್ವದ ಶಾಸನಗಳನ್ನು ಸಂಸತ್ತಿನ ಪರೀಕ್ಷಣೆ ಅಥವ ಚರ್ಚೆಯಿಲ್ಲದೆಯೇ ಹೇಗಾದರೂ ತೂರಿಸಿ ಬಿಡುವ  ಪ್ರಯತ್ನಗಳನ್ನು ಬಿಜೆಪಿ ಮಾಡುತ್ತಿದೆ.

ಅನಿಷ್ಟಕಾರಿ ಸಂಕೇತಗಳು

ಇವು ನಿಜಕ್ಕೂ ಅನಿಷ್ಟಕಾರಿ ಸಂಕೇತಗಳು. ಸಂಸದೀಯ ವಿಧಾನಗಳನ್ನು ಬದಿಗೆ ಸರಿಸುವುದು ಸರ್ವಾಧಿಕಾರಶಾಹಿಯತ್ತ ಸಾಗಬಹುದಾದ ಹೆದ್ದಾರಿಯೆಂಬುದು ಖಂಡಿತ. ಅದು ನಮ್ಮ ಗಣತಂತ್ರದ ಪ್ರಜಾಸತ್ತಾತ್ಮಕ ಬುನಾದಿಗಳನ್ನು ಧ್ವಂಸ ಮಾಡಲು ಕಾರಣವಾಗಬಹುದು. ಇದರೊಂದಿಗೆ ಕೋಮುವಾದಿ ದಾಳಿಗಳು ಮತ್ತು ನಮ್ಮ ವಿಸ್ಮಯಕಾರೀ ವೈವಿಧ್ಯಪೂರ್ಣ ಸಮಾಜದ ಸಾಮಾಜಿಕ ಸಾಮರಸ್ಯವನ್ನು ನಾಶಮಾಡಲು ಪ್ರಯತ್ನಿಸುವ ಅತ್ಯಂತ ಕಟ್ಟಾ ಹಿಂದುತ್ವ ಅಜೆಂಡಾದ ಉಗ್ರ ಅನುಸರಣೆ, ಇವೆಲ್ಲ ಸೇರಿ ನಮ್ಮ ಸಂವಿಧಾನಾತ್ಮಕ ಗಣತಂತ್ರ ವ್ಯವಸ್ಥೆಯ ಬುನಾದಿಯ ಮೇಲೆ ಒಂದು ಗಂಭೀರ ದಾಳಿಯೇ ಆಗುತ್ತದೆ.

ಹೀಗಿವೆ ಈ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಮೊದಲ ವರ್ಷದಲ್ಲಿ ಅನಾವರಣ ಗೊಂಡಿರುವ ತ್ರಿವಳಿ ಅಪಾಯಗಳ ಪರಿ. ಇದು ’ಭಾರತ ಎಂಬ ಭಾವ’ವನ್ನೇ-ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣತಂತ್ರವನ್ನೇ ಬುಡಮೇಲು ಮಾಡುತ್ತದೆ. ಅತ್ತ ನಮ್ಮ ಬಹುಪಾಲು ಜನತೆಯ ಬದುಕಿನ ಮೇಲೆ ನಿರ್ದಯ ದಾಳಿಗಳನ್ನು ಮಾಡುತ್ತದೆ.

ಇವೀಗ ಈ ’ಕನಿಷ್ಟ ಸರಕಾರ, ಗರಿಷ್ಟ ಆಡಳಿತ’ದ  ವಿಶಾಲ ಪರಿಧಿಗಳು.

ಈ ವರ್ಷದಲ್ಲಿ ಭ್ರಷ್ಟಾಚಾರದ ಹಗರಣಗಳೇನೂ ಹೊರಬಂದಿಲ್ಲ ಎಂಬುದು ತಮ್ಮ ಮಹಾವಿಜಯ ಎಂದು ಪ್ರಧಾನ ಮಂತ್ರಿ ಮೋದಿ ಮತ್ತು ಬಿಜೆಪಿ ಹೇಳಿಕೊಳ್ಳುತ್ತಿದ್ದಾರೆ. ಯುಪಿಎ ಸರಕಾರದ ಮೊದಲ ನಾಲ್ಕು ವರ್ಷಗಳಲ್ಲಿ ಯಾವುದೇ ಇಂತಹ ಹಗರಣ ಬೆಳಕಿಗೆ ಬಂದದ್ದು ಯಾರಿಗಾದರೂ ನೆನಪಿದೆಯೇ?  ಈ ವಿಷಯದಲ್ಲೂ, ಚಮಚಾ ಬಂಡವಾಳಶಾಹಿ ಯನ್ನು ಉಗ್ರವಾಗಿ ಅನುಸರಿಸುತ್ತಿರುವ ಫಲಿತಾಂಶವಾಗಿ ಈ ಸರಕಾರದ ದಾಖಲೆಯೇನಾಗಬಹುದು ಎಂಬುದನ್ನು ಸಮಯವೇ ತೋರಿಸುತ್ತದೆ.

ಕೃಪೆ : ಮಂಜುಲ್, ಡಿಎನ್ಎ
ಕೃಪೆ : ಮಂಜುಲ್, ಡಿಎನ್ಎ

ಈ ವರ್ಷದಲ್ಲಿ ಭ್ರಷ್ಟಾಚಾರದ ಹಗರಣಗಳೇನೂ ಹೊರಬಂದಿಲ್ಲ ಎಂಬುದು ತಮ್ಮ ಮಹಾವಿಜಯ ಎಂದು ಪ್ರಧಾನ ಮಂತ್ರಿ ಮೋದಿ ಮತ್ತು ಬಿಜೆಪಿ ಹೇಳಿಕೊಳ್ಳುತ್ತಿದ್ದಾರೆ. ಯುಪಿಎ ಸರಕಾರದ ಮೊದಲ ನಾಲ್ಕು ವರ್ಷಗಳಲ್ಲಿ ಯಾವುದೇ ಇಂತಹ ಹಗರಣ ಬೆಳಕಿಗೆ ಬಂದದ್ದು ಯಾರಿಗಾದರೂ ನೆನಪಿದೆಯೇ?  ಈ ವಿಷಯದಲ್ಲೂ, ಚಮಚಾ ಬಂಡವಾಳಶಾಹಿ ಯನ್ನು ಉಗ್ರವಾಗಿ ಅನುಸರಿಸುತ್ತಿರುವ ಫಲಿತಾಂಶವಾಗಿ ಈ ಸರಕಾರದ ದಾಖಲೆಯೇನಾಗಬಹುದು ಎಂಬುದನ್ನು ಸಮಯವೇ ತೋರಿಸುತ್ತದೆ.

Donate Janashakthi Media

Leave a Reply

Your email address will not be published. Required fields are marked *