34 ವರ್ಷದ ಸುಶಾಂತ್ ಸಿಂಗ್ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಅವರ ಮನೆಯ ಕೆಲಸದವರು ಬಂದು ನೋಡಿದಾಗ ಈ ವಿಷಯ ಗೊತ್ತಾಗಿದೆ. ಬೆಡ್ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್ ಸಿಂಗ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಳೆದ 6 ತಿಂಗಳಿನಿಂದ ಸುಶಾಂತ್ ಸಿಂಗ್ ಖಿನ್ನತೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸುಶಾಂತ್ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ.
ವಿಶ್ವ ಕಂಡ ಅತ್ಯದ್ಭುತ ಕ್ರಿಕೆಟ್ ಆಟಗಾರ ಎಂಎಸ್ ಧೋನಿ ಬಯೋಪಿಕ್ ಮಾಡಬೇಕು ಎಂದುಕೊಂಡಾಗ ಯಾರನ್ನು ಹೀರೋ ಮಾಡಬೇಕು ಎನ್ನುವ ಪ್ರಶ್ನೆ ಬಾಲಿವುಡ್ ಅಂಗಳದಲ್ಲಿ ಮನೆ ಮಾಡಿತ್ತು. ಅನೇಕ ನಾಯಕರಿಗೆ ಸ್ಕ್ರೀನ್ ಟೆಸ್ಟ್ ಕೂಡ ಮಾಡಲಾಗಿತ್ತು. ಕೊನೆಯದಾಗಿ ಸುಶಾಂತ್ ಸಿಂಗ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದರು ಸುಶಾಂತ್.
ಸುಶಾಂತ್ ಸಿಂಗ್ ಮೂಲತಃ ಡಾನ್ಸರ್. 2013ರಲ್ಲಿ ತೆರೆಕಂಡ ಕಾಯ್ ಪೊ ಚೆ ಸಿನಿಮಾ ಮೂಲಕ ಬಾಲಿವುಡ್ಗೆ ಕಾಲಿಟ್ಟರು. ನಂತರ ಶುದ್ಧ ದೇಸಿ ರೊಮ್ಯಾನ್ಸ್, ಪಿಕೆ, ಸಿನಿಮಾಗಳಲ್ಲಿ ಇವರು ನಟಿಸಿದ್ದರು. ಆದರೆ, ಈ ಯಾವ ಚಿತ್ರಗಳು ಹೇಳಿಕೊಳ್ಳುವಂತ ಹಿಟ್ ನೀಡಲಿಲ್ಲ. ಪಿಕೆ ಯಶಸ್ಸು ಗಳಿಸಿತ್ತಾದರೂ ಆ ಸಿನಿಮಾದಲ್ಲಿ ಸುಶಾಂತ್ದು ಚಿಕ್ಕ ಪಾತ್ರ.
ಈ ಸಂದರ್ಭದಲ್ಲಿ ಸುಶಾಂತ್ಗೆ ಎಂ.ಎಸ್.ಧೋನಿ: ದಿ ಅನ್ ಟೋಲ್ಡ್ ಸ್ಟೋರಿ ಸಿನಿಮಾ ಆಫರ್ ಬಂದಿತ್ತು. ಸ್ಕ್ರೀನ್ ಟೆಸ್ಟ್ನಲ್ಲಿ ಅವರು ಪಾಸ್ ಆಗಿದ್ದರು. ಅಲ್ಲಿಂದ ಅವರ ಅದೃಷ್ಟವೇ ಬದಲಾಗಿತ್ತು. ನೀರಜ್ ಪಾಂಡೆ ನಿರ್ದೇಶನದ ಈ ಸಿನಿಮಾ ಭಾರೀ ದೊಡ್ಡ ಯಶಸ್ಸು ಕಂಡಿತ್ತು. ಸುಶಾಂತ್ ಸಿಂಗ್ ಕೆರಿಯರನಲ್ಲಿ ಅತಿ ದೊಡ್ಡ ಹಿಟ್ ಕಂಡ ಸಿನಿಮಾ ಕೂಡ ಇದೇ ಆಗಿದೆ.
ಬ್ಯಾಟ್ ಬೀಸುವ ಶೈಲಿ, ಮಾತನಾಡುವ ರೀತಿ ಎಲ್ಲವೂ ಧೋನಿಯನ್ನು ಯಥಾವತ್ತಾಗಿ ಅನುಸರಿಸಿದ್ದರು ಸುಶಾಂತ್. ಧೋನಿ ಕ್ರಿಕೆಟ್ ಜಗತ್ತಿಗೆ ಬಂದಿದ್ದರಿಂದ ಹಿಡಿದು, ಅವರು ವಿಶ್ವಕಪ್ ಗೆಲ್ಲಿಸಕೊಟ್ಟ ಎಲ್ಲ ಕ್ಷಣಗಳನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿತ್ತು. 100 ಕೋಟಿ ವೆಚ್ಛದಲ್ಲಿ ಸಿದ್ಧಗೊಂಡಿದ್ದ ಈ ಸಿನಿಮಾ ಬರೋಬ್ಬರಿ 200 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು.
ಈ ಸಿನಿಮಾ ತೆರೆಕಂಡ ನಂತರ ಧೋನಿ ಅಭಿಮಾನಿಗಳು ಕೂಡ ಸುಶಾಂತ್ ಹಿಂಬಾಲಕರಾಗಿಬಿಟ್ಟಿದ್ದರು. ಈ ಸಿನಿಮಾ ಮೂಲಕ ಅವರು ಸಾಲು ಸಾಲು ಸಿನಿಮಾಗಳನ್ನು ಪಡೆದುಕೊಂಡಿದ್ದರು. ಆದರೆ, ಈಗ ತೆರೆಯಮೇಲಿನ ಧೋನಿ ನಿಧನರಾಗಿದ್ದಾರೆ ಎನ್ನುವ ಅಂಶವನ್ನು ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ.