- ಹೊಸ ರೂಪ ತೊಡಿಸಿದ ಹಳೆಯ ಪ್ರಸ್ತಾವಗಳು: ಎಲ್ಲ ರೈತರ ತಿರಸ್ಕಾರ
ದೆಹಲಿ : ಭಾರತ ಬಂದ್ ಅಭೂತಪೂರ್ವ ಯಶಸ್ಸಿನ ನಂತರ, ಅದೇ ದಿನ ರಾತ್ರಿ ಗೃಹ ಮಂತ್ರಿ ಅಮಿತ್ ಷಾ ಸಭೆಯನ್ನು ಕರೆದರೂ ಆ ಸಭೆಯಲ್ಲೂ ಸರಕಾರದ ಸ್ಪಂದನೆಯಲ್ಲಿ ಹೊಸತೇನೂ ಕಾಣಲಿಲ್ಲ. ರೈತ ಮುಖಂಡರು ಮೂರು ಕಾಯ್ದೆಗಳು ಮತ್ತು ವಿದ್ಯುತ್ ಮಸೂದೆಯ ಬಗ್ಗೆ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ ಮೇಲೆ ಮರುದಿನ ಸರಕಾರದ ಕಡೆಯಿಂದ ಪ್ರಸ್ತಾವಗಳನ್ನು ಲಿಖಿತವಾಗಿ ಕಳಿಸಲಾಗುವುದು ಎಂದು ಹೇಳಲಾಯಿತು. ಡಿಸೆಂಬರ್ 9ರಂದು ಕೇಂದ್ರ ಸರಕಾರ ‘ಹೊಸದು’ ಎಂದು ಕಳಿಸಿದ ಲಿಖಿತ ಪ್ರಸ್ತಾವಗಳನ್ನು ಎಲ್ಲ ರೈತ ಸಂಘಟನೆಗಳು ಖಂಡಿಸಿವೆ ಮತ್ತು ತಿರಸ್ಕರಿಸಿವೆ. ಏಕೆಂದರೆ ಅವು ಹಳೆಯ ಪ್ರಸ್ತಾವಗಳಿಗೇ ಹೊಸ ರೂಪ ತೊಡಿಸಿರುವಂತವುಗಳು ಎಂದು ರೈತ ಸಂಘಟನೆಗಳು ತಿಳಿಸಿವೆ.
ಇವು ಮೋದಿ ಸರಕಾರದ ಅಪ್ರಾಮಾಣಿಕತೆ ಮತ್ತು ಅಹಂಕಾರವನ್ನು ಪ್ರದರ್ಶಿಸುತ್ತವೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹೇಳಿದೆ.
ಇದನ್ನು ಓದಿ : ಶಾ ಜೊತೆಗಿನ ಅನೌಪಚಾರಿಕ ಮಾತುಕತೆ’ ವಿಫಲ : ಸರಕಾರದ ಸಭೆ ಬಹಿಷ್ಕರಿಸಿದ ರೈತರು
ಎಲ್ಲ ರೈತ ಸಂಘಟನೆಗಳು ಮೂರು ಕೃಷಿ ಕಾಯ್ದೆಗಳನ್ನು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ರದ್ದು ಮಾಡಬೇಕೆಂಬ ತಮ್ಮ ಮೂಲ ಬೇಡಿಕೆಯನ್ನು ಪುನರುಚ್ಛರಿಸಿವೆ. ಮತ್ತು ತಮ್ಮ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿವೆ. ಮೋದಿ ಸರಕಾರ ಇನ್ನೆರಡು ದಿನಗಳಲ್ಲಿ ತನ್ನ ಮೊಂಡುತನ ಬಿಡದಿದ್ದರೆ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲು ರೈತ ಸಂಘಟನೆಗಳು ನಿರ್ಧರಿಸಿವೆ:
- ಡಿಸೆಂಬರ್ 12: ದೇಶಾದ್ಯಂತ ಟೋಲ್ ಪ್ಲಾಝಾಗಳು ಶುಲ್ಕ ಮುಕ್ತವಾಗಿರುತ್ತವೆ.
- ಡಿಸೆಂಬರ್12 ರಂದು ದಿಲ್ಲಿ- ಜೈಪುರ ರಾಷ್ಟ್ರೀಯ ಹೆದ್ದಾರಿಯನ್ನು ಜಾಮ್ ಮಾಡಲಾಗುವುದು.
- ಡಿಸೆಂಬರ್14 ರಂದು ಉತ್ತರ ಭಾರತದ ರೈತರ ಮತ್ತೊಂದು ‘ದಿಲ್ಲಿ ಚಲೋ’.
- ಇತರರಾಜ್ಯಗಳಲ್ಲಿ ಪ್ರತಿಭಟನಾ ಕಾರ್ಯಾಚರಣೆಗಳು
- ಜಿಯೊಉತ್ಪನ್ನಗಳ, ಅಂಬಾನಿ-ಅದಾನಿ ಮಾಲ್‌ಗಳು ಮತ್ತು ಪೆಟ್ರೋಲ್ ಬಂಕ್‌ಗಳ ಬಹಿಷ್ಕಾರ
“ಸರ್ಕಾರ್ ಕೀ ಅಸ್ಲಿ ಮಜ್ಬೂರಿ/ ಅಂಬಾನಿ ಅದಾನಿ ಜಮಾಖೋರಿ”
(ಸರಕಾರದ ನಿಜವಾದ ಅಸಹಾಯಕತೆ- ಅಂಬಾನಿ ಅದಾನಿ, ಜಮಾಕೋರತೆ) ಎಂಬ ರಾಷ್ಟವ್ಯಾಪಿ ಪ್ರಚಾರಾಂದೋಲನವನ್ನು ಆರಂಭಿಸಲು ನಿರ್ಧರಿಸಿರುವುದಾಗಿ ಎ.ಐ.ಕೆ.ಎಸ್.ಸಿ.ಸಿ. ಹೇಳಿದೆ. ಪ್ರತಿಭಟನೆಗಳು ಮುಂದುವರೆಯುತ್ತವೆ, ಹೆಚ್ಚೆಚ್ಚು ರೈತರು ದಿಲ್ಲಿಗೆ ಬರುತ್ತಾರೆ, ಚಳುವಳಿಯನ್ನು ತೀವ್ರಗೊಳಿಸುತ್ತಾರೆ ಎಂದಿರುವ ಎ.ಐ.ಕೆ.ಎಸ್.ಸಿ.ಸಿ. ಎಲ್ಲಾ ಜಿಲ್ಲೆಗಳಲ್ಲಿ ಮತ್ತು ರಾಜ್ಯಗಳ ರಾಜಧಾನಿಗಳಲ್ಲಿ ನಿರಂತರ ಧರಣಿಗಳನ್ನು ಇತರ ಬೆಂಬಲಿಗ ಸಂಘಟನೆಗಳೊಂದಿಗೆ ಸಂಘಟಿಸಬೇಕು ಎಂದು ಕರೆ ನೀಡಿದೆ.