ಮೊದಲು ಅಧಿಸೂಚನೆ-ನಂತರ ಆಕ್ರೋಶ ಸೃಷ್ಟಿ- ಕೊನೆಗೆ ತಡೆಯಾಜ್ಞೆ
ಎರಡು ತದ್ವಿರುದ್ಧ ಗುರಿಗಳನ್ನು , ಅಂದರೆ ಹಿಂದೂ ಸಮಾಜದಲ್ಲಿ ‘ಸಾಮರಸ್ಯ’ ಮತ್ತು ಜಾತಿ ತಾರತಮ್ಯದ ವಿರುದ್ಧ ಸಕ್ರಿಯ ಆಡಳಿತಾತ್ಮಕ ಹೋರಾಟ ಇವೆರಡನ್ನು ಸಂಯೋಜಿಸಬೇಕಾದರೆ, ಮೊದಲು ನಿಬಂಧನೆಗಳ ಅಧಿಸೂಚನೆ ಹೊರಡಿಸಬೇಕು, ಮತ್ತು ನಂತರ ಅವುಗಳ ವಿರುದ್ಧ ಸಾರ್ವಜನಿಕ ಆಕ್ರೋಶ ಸೃಷ್ಟಿಸಬೇಕು, ಅಂತಿಮವಾಗಿ ನ್ಯಾಯಾಲಯ ತೋರಿಕೆಯ ಕಾರಣಗಳ ಮೇಲೆ ತಡೆಯಾಜ್ಞೆ ಕೊಡುವಂತಾಗಬೇಕು. ದಲಿತರು, ಆದಿವಾಸಿಗಳು ಹಾಗೂ ಒಬಿಸಿ ಸಮುದಾಯಗಳ ವ್ಯಾಪಕ ಬೆಂಬಲವಿಲ್ಲದೆ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಅರಿತಿರುವ ಬಿಜೆಪಿ ಈ ವಿಭಾಗಗಳವರ ಮನ ಒಲಿಸಲು ಸಾಂಕೇತಿಕ ಪ್ರದರ್ಶನಗಳು, ಅರೆಬರೆ ಕ್ರಮಗಳು, ತುತ್ತೂರಿಗಳ ಮೊರೆ ಹೋಗುತ್ತದೆ. ಈ ಯುಜಿಸಿ ನಿಬಂಧನೆಗಳು ಕೂಡ ಆ ತಂತ್ರಗಳಲ್ಲಿ ಒಂದು. ಈ ಘಟನಾವಳಿ ಪ್ರತಿಯೊಬ್ಬರನ್ನೂ ತುಷ್ಟೀಕರಿಸಲು ಪ್ರÀಯತ್ನಿಸುತ್ತಲೇ ಹಿಂದೂ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಜಾತಿ ದಮನವನ್ನು ಅಡಗಿಸಿಡುವ ಆರ್‌ಎಸ್‌ಎಸ್/ಬಿಜೆಪಿ ಗುರಿಗಳ ಈಡೇರಿಕೆಗೆ ನೆರವಾಗುತ್ತಿದೆ.
– ಸವೇರ
– ಅನು: ಟಿ.ಸುರೇಂದ್ರ ರಾವ್
ಭಾರತೀಯ ಸಮಾಜವನ್ನು ಲಾಗಾಯ್ತಿನಿಂದ ಕಾಡುತ್ತಿರುವ ಒಂದು ಕೇಡು, ಕಳೆದೊಂದು ದಶಕದಲ್ಲಿ ಉನ್ನತ ಶಿಕ್ಷಣದಲ್ಲಿ ಅದರ ಕೆಲವೊಂದು ಪರಿಣಾಮಗಳನ್ನು ಸರಿಪಡಿಸುವ ಒಂದು ಭಾಗಶಃ ನಡೆ, ಹೊಸ ನಿಬಂಧನೆಗಳು, ಅದಕ್ಕೆ ಒಂದು ಭೀಷಣ, ಯೋಜಿತವಾಗಿದ್ದಂತಿದ್ದ ಪ್ರತಿಕ್ರಿಯೆ, ಮಾಧ್ಯಮಗಳ ವ್ಯಾಪಕ ಪ್ರಚಾರ-ಕೊನೆಗೂ ಆ ನಡೆ ವಿಫಲ, ಅಂತಹ ಯೋಚನೆಯೇ ಮೂಲೆಗುಂಪು-ಇದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿರುವ ಜಾತಿ ತಾರತಮ್ಯವನ್ನು ಕೊನೆಗಾಣಿಸುವುದಾಗಿ ಹೇಳಿದ ವಿಶ್ವವಿದ್ಯಾಲಯಗಳ ಅನುದಾನ ಆಯೋಗದ(ಯುಜಿಸಿ) ಹೊಸ ನಿಬಂಧನೆಗಳ ಕಳೆದ ಎರಡು ವಾರಗಳ ಪಯಣದ ಒಟ್ಟು ಸಾರ.
ಈ ಹೊಸ ಯುಜಿಸಿ ನಿಬಂಧನೆಗಳಿಗೆ ಸುಪ್ರೀಂ ಕೋರ್ಟು ಜನವರಿ 29 ರಂದು ತಡೆ ನೀಡಿತು; ಮುಂದಿನ ವಿಚಾರಣೆಯ ದಿನವನ್ನು ನಿಗದಿಪಡಿಸಿ, ಅಲ್ಲಿಯವರೆಗೂ ಹಿಂದಿನ 2012 ರ ನಿಯಮಗಳೇ ಮುಂದುವರಿಯುತ್ತವೆ ಎಂದು ನಿರ್ದೇಶನ ನೀಡಿತು. ಹೊಸ ನಿಬಂಧನೆಗಳಲ್ಲಿ ಹಲವಾರು ಮಿತಿಗಳಿದ್ದಾಗ್ಯೂ ಮೇಲ್ಜಾತಿಯ ವಿದ್ಯಾರ್ಥಿಗಳ ಹಾಗೂ ಆಳುವ ಪಕ್ಷ ಬಿಜೆಪಿಯ ಒಂದು ವಿಭಾಗದವರನ್ನೂ ಒಳಗೊಂಡಂತೆ ಕೆಲವು ರಾಜಕೀಯ ಪಕ್ಷಗಳ ಕೂಗಾಟ, ಮತ್ತು ಮಾಧ್ಯಮಗಳ ಉನ್ಮಾದಭರಿತ ಪ್ರಚಾರಗಳಿಂದಾಗಿ ಸರ್ವೋಚ್ಛ ನ್ಯಾಯಾಲಯವು ಮಧ್ಯಪ್ರವೇಶ ಮಾಡಿತು ಎನ್ನುವುದು ಸ್ಪಷ್ಟ.
ಎಷ್ಟೊಂದು ಚುರುಕಾಗಿ ಪ್ರತಿಕ್ರಿಯೆ ಕಾಣಿಸಿಕೊಂಡಿತು ಎಂಬುದು ಹಾಗೂ ಘಟನೆಗಳು ಅನಾವರಣಗೊಂಡ ರೀತಿಯು ಅದೊಂದು ತಾಳ-ಮೇಳ ಪ್ರದರ್ಶನ ಎಂದು ಬಹಳಷ್ಟು ಮಂದಿ ನಂಬುವಂತಾಗಿದೆ. ಬಿಜೆಪಿಯಿಂದ ಹಿಡಿದು ಬಿಎಸ್‌ಪಿಯವರೆಗಿನ ರಾಜಕೀಯ ಪಕ್ಷಗಳು ಮೊದಲು ಮನಸ್ಸಿಲ್ಲದ ಮನಸ್ಸಿನಿಂದ ಹೊಸ ನಿಬಂಧನೆಗಳನ್ನು ಸ್ವಾಗತಿಸಿದವು, ನಂತರ ತಿಪ್ಪರಲಾಗ ಹಾಕಿದವು; ನ್ಯಾಯಾಲಯದ ತಡೆಯಾಜ್ಞೆಯನ್ನು ಸ್ವಾಗತಿಸಿದವು! ಉಚ್ಛಕುಲೀನರ ಭೀತಿ ಶಮನವಾಯಿತು ಮತ್ತು ಎಲ್ಲವೂ ಎಂದಿನ ಸ್ಥಿತಿಗೆ ಮರಳಿತು.
ಇದನ್ನೂ ಓದಿ: ಶೀಘ್ರವೇ ತಾಲೂಕು ಮಟ್ಟಕ್ಕೂ ಅಕ್ಕಪಡೆ ವಿಸ್ತರಣೆ: ಲಕ್ಷ್ಮೀ ಹೆಬ್ಬಾಳಕರ್
ಎಷ್ಟೊಂದು ಚುರುಕಾಗಿ ಪ್ರತಿಕ್ರಿಯೆ ಕಾಣಿಸಿಕೊಂಡಿತು. ಬಿಜೆಪಿಯಿಂದ ಹಿಡಿದು ಬಿಎಸ್‌ಪಿಯವರೆಗಿನ ರಾಜಕೀಯ ಪಕ್ಷಗಳು ಮೊದಲು ಮನಸ್ಸಿಲ್ಲದ ಮನಸ್ಸಿನಿಂದ ಹೊಸ ನಿಬಂಧನೆಗಳನ್ನು ಸ್ವಾಗತಿಸಿದವು, ನಂತರ ತಿಪ್ಪರಲಾಗ ಹಾಕಿದವು; ನ್ಯಾಯಾಲಯದ ತಡೆಯಾಜ್ಞೆಯನ್ನು ಸ್ವಾಗತಿಸಿದವು! ಉಚ್ಛಕುಲೀನರ ಭೀತಿ ಶಮನವಾಯಿತು ಮತ್ತು ಎಲ್ಲವೂ ಎಂದಿನ ಸ್ಥಿತಿಗೆ ಮರಳಿತು.
ಜಾತಿ ತಾರತಮ್ಯ
ಸುಪ್ರೀಂ ಕೋರ್ಟಿನ ಮೇಲ್ವಿಚಾರಣೆಯನ್ನೂ ಒಳಗೊಂಡಂತೆ ಮತ್ತೆ-ಮತ್ತೆ ಉಚ್ಛರಿಸಿದ ಒಂದು ದೀರ್ಘ ಪ್ರಕ್ರಿಯೆ ನಂತರ ಹೊರಹೊಮ್ಮಿದ ನಿಬಂಧನೆಗಳ ಅಧಿಸೂಚನೆಯನ್ನು ಯುಜಿಸಿ ಜನವರಿ 13, 2026 ರಂದು ಪ್ರಕಟಿಸಿತು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಪಕವಾಗಿದ್ದ ಜಾತಿ ಆಧಾರಿತ ತಾರತಮ್ಯಗಳ ಮೇಲೆ ಸ್ವಲ್ಪವೂ ಪರಿಣಾಮ ಬೀರಲು ಸಾಧ್ಯವಾಗದ 2012 ರ ನಿಬಂಧನೆಗಳ ಸ್ಥಾನದಲ್ಲಿ ಆ ಹೊಸ ನಿಯಮಗಳನ್ನು ತರಲಾಗಿತ್ತು. ಅಲ್ಲಿ ಮುಂಚೆಯಿಂದಲೂ ಈ ತಾರತಮ್ಯಗಳು ಹೇಗಿದ್ದವು ಎಂದರೆ, ದಿನನಿತ್ಯದ ಗೇಲಿಗಳು ಹಾಗೂ ನಿಂದನೆಗಳಿಂದ ಹಿಡಿದು ದೈಹಿಕ ಕಿರುಕುಳಗಳ ವರೆಗೆ, ಅದಕ್ಕಿಂತಲೂ ಹೆಚ್ಚಾಗಿ ಸಾಂಸ್ಥಿಕ ತಾರತಮ್ಯ ಸಹಿಸಲಾಗದ ನೋವುಗಳಾಗಿದ್ದವು. 2016 ರ ರೋಹಿತ್ ವೇಮುಲಾ ಆತ್ಮಹತ್ಯೆ ಹಾಗೂ 2019 ರ ಪಾಯಲ್ ತಡ್ವಿಯ ಆತ್ಮಹತ್ಯೆ ಅಲ್ಲಿ ಮನೆ ಮಾಡಿದ್ದ ತೀವ್ರವಾದ ಅಸಹ್ಯಕರ ಒಳಗುದಿಗಳ ಸಂಕೇತಗಳಾಗಿದ್ದವು.
2021 ರಲ್ಲಿ ಲೋಕಸಭೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂಧ್ರ ಪ್ರಧಾನ್ ಅವರು ಒಂದು ಲಿಖಿತ ಉತ್ತರ ನೀಡಿ ಬಯಲು ಮಾಡಿದ ಸತ್ಯ ಹೀಗಿತ್ತು: -2014 ಮತ್ತು 2021 ರ ನಡುವೆ ಕೇಂದ್ರ ಸರ್ಕಾರವು ನಡೆಸುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 24 ವಿದ್ಯಾರ್ಥಿಗಳು, 3 ಪರಿಶಿಷ್ಟ ಬುಡಕಟ್ಟು ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳು ಮತ್ತು 41 ಇತರ ಹಿಂದುಳಿದ ಜಾತಿಗಳಿಗೆ ಸೇರಿದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಸ್ಥೆಗಳಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಐಐಟಿ (ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ), ಐಐಎಂ (ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ಸ್), ಎನ್‌ಐಐಟಿ (ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಇನ್‌ಫರ್ಮೇಶನ್ ಟೆಕ್ನಾಲಜಿ), ಮತ್ತು ಹಲವಾರು ವೈದ್ಯಕೀಯ ಕಾಲೇಜುಗಳು ಒಳಗೊಂಡಿವೆ. ರಾಜ್ಯ ವಿಶ್ವವಿದ್ಯಾನಿಲಯಗಳು ಮತ್ತು ಇತರ ರಾಜ್ಯಗಳ ಅಡಿ ಬರುವ ಸಂಸ್ಥೆಗಳ ದತ್ತಾಂಶಗಳು ಲಭ್ಯವಿಲ್ಲ ಎನ್ನುವುದು ಅಷ್ಟೇ ಆಘಾತಕಾರಿಯಾಗಿದೆ.
2014 ಮತ್ತು 2021 ರ ನಡುವೆ ಕೇಂದ್ರ ಸರ್ಕಾರವು ನಡೆಸುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 24 ವಿದ್ಯಾರ್ಥಿಗಳು, 3 ಪರಿಶಿಷ್ಟ ಬುಡಕಟ್ಟು ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳು ಮತ್ತು 41 ಇತರ ಹಿಂದುಳಿದ ಜಾತಿಗಳಿಗೆ ಸೇರಿದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2012 ರ ನಿಬಂಧನೆಗಳು ಎಷ್ಟು ಪರಿಣಾಮಕಾರಿಯಾಗಿದ್ದವು ಅನ್ನುವುದನ್ನು ಇತ್ತೀಚೆಗೆ ಯುಜಿಸಿಯು ವಿಶ್ವವಿದ್ಯಾನಿಲಯಗಳಲ್ಲಿನ ಜಾತಿ ತಾರತಮ್ಯ ಕುರಿತು ಸುಪ್ರೀಂಕೋರ್ಟಿಗೆ ಸಲ್ಲಿಸಿದ ವರದಿಯಲ್ಲಿ ನೋಡಬಹುದು: ಕಳೆದ 5 ವರ್ಷಗಳಲ್ಲಿ ಜಾತಿ ತಾರತಮ್ಯಗಳ ದೂರುಗಳಲ್ಲಿ ಶೇಕಡಾ 118.4 ರಷ್ಟು ಏರಿಕೆಯಾಗಿವೆ, ಒಂದು ವರ್ಷದ ಹಿಂದೆ 200ಕ್ಕೂ ಕಡಿಮೆ ಇದ್ದದ್ದು 400 ರಷ್ಟಕ್ಕೆ ಏರಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ವಿಶೇಷವಾಗಿ, ಎಲ್ಲ ಐಐಟಿ, ಐಐಎಂ, ಮುಂತಾದ ಉಚ್ಛ ಸಂಸ್ಥೆಗಳಲ್ಲಿ ಸಾಂಸ್ಥಿಕ ಪೂರ್ವಾಗ್ರಹಗಳು ಎಷ್ಟರಮಟ್ಟಿಗೆ ಬೇರೂರಿವೆ ಎಂಬುದನ್ನು ಹಲವು ವಿಶ್ಲೇ಼ಷಕರು ಎತ್ತಿ ತೋರಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವಾಲಯವು ನೇಮಿಸಿರುವ ಐಐಟಿ ನಿರ್ದೇಶಕರುಗಳ 8 ಸದಸ್ಯರ ಸಮಿತಿಯು 2020 ರ ಡಿಸೆಂಬರ್‌ನಲ್ಲಿ “ಈ ಸಂಸ್ಥೆಗಳು ರಾಷ್ಟ್ರೀಯ ಪ್ರಾಮುಖ್ಯತೆಯಲ್ಲಿ ಮತ್ತು ಸಂಶೋಧನೆಗಳಲ್ಲಿ ತೊಡಗಿಕೊಂಡಿವೆ, ಆದಕಾರಣ ಅಲ್ಲಿ ಮೀಸಲಾತಿಗಳನ್ನು ಕಿತ್ತೊಗೆಯಬೇಕು” ಎಂಬ ಶಿಫಾರಸು ನೀಡಿರುವುದು ಈ ನಿಟ್ಟಿನಲ್ಲಿ ಒಂದು ಸಂಕೇತ. ನಿರ್ದೇಶಕರುಗಳೇ ‘ಎಸ್.ಸಿ/ಎಸ್.ಟಿ/ಒಬಿಸಿ ವಿದ್ಯಾರ್ಥಿಗಳು ಸಂಶೋಧನೆ ಮಾಡಲು ಅಸಮರ್ಥರು ಎಂದು ಭಾವಿಸಿದರೆ ಅಲ್ಲಿಯ ಇತರ ಅಧಿಕಾರಿಗಳು ಮತ್ತು ಪ್ರಾಧ್ಯಾಪಕರು/ವಿದ್ಯಾರ್ಥಿಗಳ ಪಾಡೇನು ಎನ್ನುವುದನ್ನು ನೀವೇ ಯೋಚಿಸಿ.
ಇಲ್ಲಿದೆ ಮತ್ತೊಂದು ಸಾಂಸ್ಥಿಕ ವಾಲಿಕೆಯ ಉದಾಹರಣೆ: 2021 ರಲ್ಲಿ ಶಿಕ್ಷಣ ಸಚಿವಾಲಯವು ಸಂಸತ್ತಿಗೆ ನೀಡಿದ ಮಾಹಿತಿಯು ಹೀಗಿದೆ: 45 ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ, ಕೇವಲ ಒಬ್ಬ ಪರಿಶಿಷ್ಟ ಜಾತಿ(ಎಸ್‌ಸಿ) ಸಮುದಾಯದ ಉಪಕುಲಪತಿಯನ್ನು ಮತ್ತು ಒಬ್ಬ ಪರಿಶಿಷ್ಟ ಬುಡಕಟ್ಟು(ಎಸ್.ಟಿ.) ಸಮುದಾಯದ ಉಪಕುಲಪತಿಯನ್ನು ಮಾತ್ರ ನೇಮಿಸಲಾಗಿದೆ. ನೆನಪಿಡಿ, ಸಂವಿಧಾನದ ಪ್ರಕಾರ ಕೇಂದ್ರೀಯ ಸಂಸ್ಥೆಗಳಲ್ಲಿ ಶೇಕಡಾ 15 ರಷ್ಟು ಎಸ್.ಸಿ.ಸಮುದಾಯಗಳವರಿಗೆ, ಶೇಕಡಾ 7.5 ರಷ್ಟು ಎಸ್.ಟಿ.ಸಮುದಾಯಗಳವರಿಗೆ ಮತ್ತು ಶೇಕಡಾ 27 ರಷ್ಟು ಒಬಿಸಿ ಸಮುದಾಯಗಳವರಿಗೆ ಹಾಗೂ ಶೇಕಡಾ 10 ರಷ್ಟು ಆರ್ಥಿಕವಾಗಿ ದುರ್ಬಲ ವಿಭಾಗದವರಿಗೆ ಸ್ಥಾನಗಳನ್ನು ಮೀಸಲಿಡಬೇಕು.
ದೈನಂದಿನ ಬದುಕಿನಲ್ಲಿ ನಿರಂತರ ತಾರತಮ್ಯಗಳ ಜತೆಯಲ್ಲೇ, ಎಸ್.ಸಿ, ಎಸ್.ಟಿ. ಮತ್ತು ಒಬಿಸಿ ಸಮುದಾಯಗಳ ಹಾಗೂ ಮುಸ್ಲಿಮರಂತಹ ಇತರ ಅಂಚಿಗೆ ತಳ್ಳಲ್ಪಟ್ಟಿರುವ ವಿಭಾಗಗಳ ವಿದ್ಯಾರ್ಥಿಗಳು ಕಲಿಕೆಯ ಮುಕ್ತ ಹಾಗೂ ಪ್ರಗತಿಪರ ವಾತಾವರಣ ಇರಬೇಕಾಗಿದ್ದ ಕ್ಷೇತ್ರದಲ್ಲಿಯೂ ಅತ್ಯಂತ ವಿಷಮ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಆಡಳಿತಾತ್ಮಕ ಕ್ರಿಯೆಯ ಮೂಲಕ ನಿವಾರಿಸುವ ಪ್ರಯತ್ನ ಇದಾಗಿತ್ತು.
2012 ಮತ್ತು 2026 ರ ನಡುವೆ ಆದ ಬದಲಾವಣೆ
ಯುಜಿಸಿಯ ಹೊಸ ನಿಬಂಧನೆಗಳ ಗುರಿ “ಮತ, ಜನಾಂಗ, ಲಿಂಗ, ಹುಟ್ಟಿದ ಸ್ಥಳ, ಜಾತಿ, ಅಥವಾ ವಿಕಲತೆಯ ಆಧಾರದ ಮೇಲಷ್ಟೇ, ವಿಶೇಷವಾಗಿ ಪರಿಶಿಷ್ಟ ಜಾತಿಗಳ ಹಾಗೂ ಪರಿಶಿಷ್ಟ ಬುಡಕಟ್ಟುಗಳ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ, ಮತ್ತು ಆರ್ಥಿಕವಾಗಿ ದುರ್ಬಲ ವಿಭಾಗಗಳ ಸದಸ್ಯರು, ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು, ಅಥವಾ ಇವರಲ್ಲಿ ಯಾರೊಬ್ಬರ ವಿರುದ್ಧ ತಾರತಮ್ಯವನ್ನು ನಿರ್ಮೂಲ ಮಾಡುವುದು ಮತ್ತು ಸಂಪೂರ್ಣ ಸಮತ್ವವನ್ನು ಉತ್ತೇಜಿಸುವುದು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾಗೀದಾರನ್ನೆಲ್ಲ ಒಳಗೊಳ್ಳುವುದು ಆಗಿದೆ” ಎಂದು ಹೇಳಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಪಕವಾಗಿ ಬಿಟ್ಟಿರುವ ಜಾತಿ-ಆಧಾರಿತ ತಾರತಮ್ಯಗಳನ್ನು ಎಳ್ಳಷ್ಟೂ ಮುಟ್ಟಲಾರದ 2012 ರ ನಿಬಂಧನೆಗಳನ್ನು ಬದಲಾಯಿಸುವುದು ಅದರ ಉದ್ದೇಶವಾಗಿದೆ. ಯುಜಿಸಿಯ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಇವು ಅನ್ವಯವಾಗುತ್ತವೆ. ಆದರೆ ಐಐಟಿ, ಐಐಎಂ, ಮುಂತಾದವುಗಳನ್ನು ಹೊರತುಪಡಿಸಲಾಗಿದೆ. ಈ ಗುರಿಗಳನ್ನು ಸಾಧಿಸುವ ಸಲುವಾಗಿ ಪ್ರತಿಯೊಂದು ಸಂಸ್ಥೆಯೂ ಸಮಾನ ಅವಕಾಶ ಕೇಂದ್ರ, ಒಂದು ಸಮತ್ವ ಸಮಿತಿ, ಮತ್ತು ಸಮತ್ವ ಪಡೆಗಳನ್ನು ರಚಿಸಬೇಕು ಎಂದು ಈ ಹೊಸ ನಿಬಂಧನೆಗಳು ಹೇಳುತ್ತವೆ..
2012 ಮತ್ತು 2026 ರ ನಿಬಂಧನೆಗಳ ನಡುವೆ ಇರುವ ಅತಿ ದೊಡ್ಡ ವ್ಯತ್ಯಾಸವೆಂದರೆ 2026ರಲ್ಲಿ ಒಬಿಸಿಗಳನ್ನು ಒಳಗೊಳ್ಳಲಾಗಿದೆ. ಇದೇ ಮುಖ್ಯವಾಗಿ ಮೇಲ್ಜಾತಿ ಜನಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳಿಗೆ ಕಾರಣವಾಗಿತ್ತು. ಇವುಗಳಲ್ಲದೆ, ಇನ್ನೂ ಕೆಲವು ಗಮನಾರ್ಹ ವ್ಯತ್ಯಾಸಗಳನ್ನು ಕಾಣಬಹುದು: 2012ರ ನಿಬಂಧನೆಗಳು ಸಲಹೆಯ ಸ್ವರೂಪದಲ್ಲಿದ್ದವು, ಅನುಸರಿಸದಿದ್ದರೆ ಸಂಸ್ಥೆಯ ವಿರುದ್ಧ ಯಾವುದೇ ಕ್ರಮ ಜರುಗಿಸಲಾಗುವುದಿಲ್ಲ; ಆದರೆ 2026 ರ ನಿಯಮಗಳು ಯುಜಿಸಿಯ ಮೇಲ್ವಿಚಾರಣೆಯಲ್ಲಿ ಜಾರಿಯಾಗಬೇಕು, ಇಲ್ಲವಾದರೆ, ಭಾರಿ ದಂಡ ತೆರಬೇಕಾಗುತ್ತದೆ, ಯುಜಿಸಿ ಯೋಜನೆಯಿಂದ ಅವನ್ನು ಹೊರಗೆ ಹಾಕಬಹುದು ಅಥವ ಅನುದಾನ ಕೂಡ ಸಿಗದು. 2012 ರ ನಿಬಂಧನೆಗಳಲ್ಲಿ ಒಬ್ಬ ತಾರತಮ್ಯ-ವಿರೋಧಿ ಅಧಿಕಾರಿಯನ್ನು ನೇಮಿಸಬೇಕಾಗಿತ್ತು. ಮತ್ತು ಆ ತಾರತಮ್ಯ-ವಿರೋಧಿ ಅಧಿಕಾರಿಯ ತೀರ್ಮಾನದ ವಿರುದ್ಧ ಸಂಸ್ಥೆಯ ಮುಖ್ಯಸ್ಥರ ಎದುರು ಮನವಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಹೊಸ ನಿಬಂಧನೆಗಳ ಪ್ರಕಾರ ದೂರುಗಳನ್ನು ನೀಡಲು ಮತ್ತು ಅವುಗಳ ವಿಲೇವಾರಿಯ ವಿಧಾನಗಳಲ್ಲಿ ಕೂಡ ಹೆಚ್ಚು ವಿವರವಾದ ಅಂಶಗಳಿವೆ. ಸುಳ್ಳು ದೂರುಗಳನ್ನು ನೀಡಿದಾಗ ಅದನ್ನು ನಿಭಾಯಿಸಲು ಹಿಂದಿನ ಕರಡು ನಿಬಂಧನೆಗಳಲ್ಲಿ ಇದ್ದಂತೆ ಇಲ್ಲಿ ಅವಕಾಶವಿಲ್ಲ.
ಕಳೆದ ವರ್ಷದವರೆಗೂ ಸ್ವತಃ ಸುಪ್ರಿಂ ಕೋರ್ಟ್ ತಾನೇ ಮಾರ್ಗದರ್ಶನ ನೀಡಿ ನಿಬಂಧನೆಗಳನ್ನು ರೂಪಿಸುವ ಪ್ರಕ್ರಿಯೆಗಳಲ್ಲಿ ಮೇಲ್ವಿಚಾರಣೆ ಮಾಡುತ್ತಿತ್ತು ಮತ್ತು ನಿಬಂಧನೆಗಳನ್ನು ಅಂತಿಮಗೊಳಿಸಲು ಯುಜಿಸಿಗೆ ಹಸಿರು ನಿಶಾನೆ ನೀಡಿತ್ತು. ಆದರೆ ಈಗ ಅದು ಮೇಲ್ಜಾತಿ ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಅನುಮಾನಗಳನ್ನು ಒಪ್ಪಿಕೊಂಡಂತೆ ಕಾಣುತ್ತದೆ; ಈ ಹೊಸ ನಿಬಂಧನೆಗಳಿಗೆ ಅದೀಗ ತಡೆಯಾಜ್ಞೆ ನೀಡಿದೆ.
ಹೊಸ ನಿಬಂಧನೆಗಳ ಕುರಿತ ಗಲಭೆ-ಗದ್ದಲ ಬಹುಪಾಲು ಮೇಲ್ಜಾತಿ ವಿದ್ಯಾರ್ಥಿಗಳು ಭಾವಿಸಿಕೊಂಡಿರುವ ಅನುಮಾನಗಳಿಗೆ ಸಂಬಂಧಪಟ್ಟವುಗಳು. ಇದರಲ್ಲಿ ತಮ್ಮ ವಿರುದ್ಧ ಸುಳ್ಳು ದೂರುಗಳನ್ನು ನೀಡಬಹುದು, ಇದು ತಿರುಗುಮುರುಗಾದ ತಾರತಮ್ಯವಾಗುತ್ತದೆ, ಜಾತಿ ವಿಭಜನೆಗೆ ಉತ್ತೇಜನ ನೀಡುತ್ತದೆ ಹಾಗೂ ಕರಾಳ ದಂಡಗಳನ್ನು ವಿಧಿಸಬಹುದೆಂಬ ಅನುಮಾನಗಳೂ ಸೇರಿವೆ..
ಕಳೆದ ವರ್ಷದವರೆಗೂ ಸ್ವತಃ ಸುಪ್ರಿಂ ಕೋರ್ಟ್ ತಾನೇ ಮಾರ್ಗದರ್ಶನ ನೀಡಿ ನಿಬಂಧನೆಗಳನ್ನು ರೂಪಿಸುವ ಪ್ರಕ್ರಿಯೆಗಳಲ್ಲಿ ಮೇಲ್ವಿಚಾರಣೆ ಮಾಡುತ್ತಿತ್ತು ಮತ್ತು ನಿಬಂಧನೆಗಳನ್ನು ಅಂತಿಮಗೊಳಿಸಲು ಯುಜಿಸಿಗೆ ಹಸಿರು ನಿಶಾನೆ ನೀಡಿತ್ತು. ಆದರೆ ಈಗ ಅದು ಮೇಲ್ಜಾತಿ ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಅನುಮಾನಗಳನ್ನು ಒಪ್ಪಿಕೊಂಡಂತೆ ಕಾಣುತ್ತದೆ; ಈ ಹೊಸ ನಿಬಂಧನೆಗಳಿಗೆ ಅದೀಗ ತಡೆಯಾಜ್ಞೆ ನೀಡಿದೆ.
ಬಿಜೆಪಿ/ಆರೆಸ್ಸೆಸ್‌ನ ಎರಡು ದೋಣಿ ಸವಾರಿ
ಈ ನಿಬಂಧನೆಗಳಿಂದಾಗಿ ಇನ್ನು ತಮ್ಮ ವಿರುದ್ಧವೇ ತಾರತಮ್ಯವಾಗುತ್ತದೆ ಅಥವಾ ತೀವ್ರವಾದ ಜಾತಿ ವಿಭಜನೆಗೆ ಕಾರಣವಾಗುತ್ತದೆ ಎಂಬ ಮೇಲ್ಜಾತಿಯವರ ಅನುಮಾನಗಳು ಆಧಾರರಹಿತ. ಜಾತಿ ತಾರತಮ್ಯವು ಈಗಾಗಲೇ ಸಮಾಜ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಾಸುಹೊಕ್ಕಾಗಿದೆ. ಅಂತಹ ಅನಾಗರಿಕ ಆಚರಣೆಗಳನ್ನು ತಡೆಯುವ ಕ್ರಮಗಳು ಜಾತಿ ವಿಭಜನೆಯನ್ನು ಆಳಗೊಳಿಸುವುದಿಲ್ಲ. ಇದು ನಾಲ್ಕು ವರ್ಣಗಳ ವ್ಯವಸ್ಥೆಯನ್ನು ಸಮರ್ಥಿಸುವ ಬಿಜೆಪಿ/ಆರೆಸ್ಸೆಸ್‌ನಂತವರ ಮತ್ತು ಅವರ ಜತೆಯವರ ವಿಕೃತ ತರ್ಕವಷ್ಟೆ. ಬಹಳ ಕಾಲದಿಂದ ಅವರು ಈ ರೀತಿಯ ವಾದ ಮಾಡುತ್ತಾ ಬರುತ್ತಿದ್ದಾರೆ. ಹಿಂದೂ ಸಮಾಜದ ವಿವಿಧ ವಿಭಾಗಗಳ ನಡುವೆ ‘ಸಾಮರಸ್ಯ’ ಇರಬೇಕು, ಆದರೆ ತಾರತಮ್ಯ ಆಚರಿಸುವವರ ಮೇಲೆ ಕ್ರಮ ತೆಗೆದುಕೊಳ್ಳಬಾರದು ಎಂದು ಆರೆಸ್ಸೆಸ್ ಜೋರಾಗಿ ವಾದಿಸುತ್ತ ಬಂದಿದೆ. ಹೃದಯವನ್ನು ಬದಲಾಯಿಸಬೇಕು, ಅದು ಮನವೊಲಿಕೆಯ ಮೂಲಕ ಬರುತ್ತದೆಯೇ ವಿನಹ ಶಿಕ್ಷೆಯ ಮೂಲಕ ಅಲ್ಲ ಎಂದು ಅದು ವಾದ ಮಾಡುತ್ತದೆ.
ಈ ನಿಬಂಧನೆಗಳಿಂದಾಗಿ ಇನ್ನು ತಮ್ಮ ವಿರುದ್ಧವೇ ತಾರತಮ್ಯವಾಗುತ್ತದೆ ಅಥವಾ ತೀವ್ರವಾದ ಜಾತಿ ವಿಭಜನೆಗೆ ಕಾರಣವಾಗುತ್ತದೆ ಎಂಬ ಮೇಲ್ಜಾತಿಯವರ ಅನುಮಾನಗಳು ಆಧಾರರಹಿತ. ಜಾತಿ ತಾರತಮ್ಯವು ಈಗಾಗಲೇ ಸಮಾಜ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಾಸುಹೊಕ್ಕಾಗಿದೆ. ಅಂತಹ ಅನಾಗರಿಕ ಆಚರಣೆಗಳನ್ನು ತಡೆಯುವ ಕ್ರಮಗಳು ಜಾತಿ ವಿಭಜನೆಯನ್ನು ಆಳಗೊಳಿಸುವುದಿಲ್ಲ. ಇದು ನಾಲ್ಕು ವರ್ಣಗಳ ವ್ಯವಸ್ಥೆಯನ್ನು ಸಮರ್ಥಿಸುವ ಬಿಜೆಪಿ/ಆರೆಸ್ಸೆಸ್‌ನಂತವರ ಮತ್ತು ಅವರ ಜತೆಯವರ ವಿಕೃತ ತರ್ಕವಷ್ಟೆ.
ಇವೆಲ್ಲವೂ ಅತ್ಯಂತ ದೋಷಪೂರಿತ ತರ್ಕಗಳು, ಜಾತಿ ವಿಭಜನೆಯನ್ನು ಹಾಗೂ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಮರೆಮಾಚಲಿಕ್ಕಷ್ಟೆ. ಶತ ಶತಮಾನಗಳಿಂದ ಅವರು ಇಂತಹ ಮಾತನ್ನೇ ಆಡುತ್ತಾ ಬಂದಿದ್ದಾರೆ ಆದರೆ ಜಾತಿ ಸಂರಚನೆಯಲ್ಲಿ ಸ್ವಲ್ಪವೂ ಬದಲಾವಣೆ ತರುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಏಕೆಂದರೆ, ನಾಲ್ಕು ಜಾತಿಗಳ ವ್ಯವಸ್ಥೆ ಸಂಫ್ರದಾಯದಲ್ಲಿ ಹಾಗೂ ಧರ್ಮಗ್ರಂಥಗಳಲ್ಲಿ ಆಳವಾಗಿ ಬೇರುಬಿಟ್ಟಿದೆ. ಅದನ್ನು ತೇಲಿಸಿಬಿಟ್ಟು ಹೃದಯ ಪರಿವರ್ತನೆಗೆ ಮನವಿ ಮಾಡುವುದು ವ್ಯರ್ಥ. ಅದು ಪ್ರತಿಕ್ಷಣ ಕುಟುಂಬಗಳಲ್ಲಿ, ಶಾಲೆಗಳಲ್ಲಿ ಮತ್ತು ಒಟ್ಟಾರೆಯಾಗಿ ಸಾಮಾಜಿಕ ಬದುಕಿನಲ್ಲಿ ನಿರಂತರವಾಗಿ ಮುಂದುವರಿಯುತ್ತಿದೆ.
ಆದರೆ ಬಿಜೆಪಿ/ಆರೆಸ್ಸೆಸ್ ನವರಿಗೆ ಇನ್ನೊಂದು ಉದ್ದೇಶವಿದೆ. ಅದೆಂದರೆ ಚುನಾವಣಾ ಪ್ರಾಬಲ್ಯ. ದಲಿತರು, ಆದಿವಾಸಿಗಳು ಹಾಗೂ ಒಬಿಸಿ ಸಮುದಾಯಗಳ ವ್ಯಾಪಕ ಬೆಂಬಲವಿಲ್ಲದೆ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದು ಅವರಿಗೆ ಅರಿವಾಗಿದೆ. ಈ ವಿಭಾಗಗಳವರ ಮನ ಒಲಿಸುವ ವಿವಿಧ ತಂತ್ರಗಳನ್ನು ಬಿಜೆಪಿ ಸದಾ ಮಾಡುತ್ತಿರುತ್ತದೆ. ಅದಕ್ಕಾಗಿ ಅದು ಸಾಂಕೇತಿಕ ತೋರಿಕೆಗಳು, ಅರೆಬರೆ ಕ್ರಮಗಳು, ತುತ್ತೂರಿಗಳ ಮೊರೆ ಹೋಗುತ್ತದೆ. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎಂಬ ಗಾದೆಯಂತೆ ಹಲವಾರು ತಂತ್ರಗಳನ್ನು ಬಿಜೆಪಿ ಮಾಡುತ್ತಲೇ ಬರುತ್ತಿದೆ. ಯುಜಿಸಿ ನಿಬಂಧನೆಗಳು ಕೂಡ ಆ ತಂತ್ರಗಳಲ್ಲಿ ಒಂದು. ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಜಾತಿ ತಾರತಮ್ಯಗಳ ವಿರುದ್ಧ ತಾವಿದ್ದೇವೆ ಎಂದು ತೋರಿಸಿಕೊಳ್ಳಲು ಸಮಿತಿಗಳು ಮತ್ತು ದಂಡಗಳ ಆಡಳಿತಾತ್ಮಕ ಕ್ರಮಗಳನ್ನು ಒದಗಿಸುತ್ತಾರೆ. ಇದರಲ್ಲಿ ಹಿಂದಿನ ಆವೃತ್ತಿ ವಿಫಲವಾಗಿದೆಯಾದ್ದರಿಂದ ಹೊಸ ಇನ್ನೂ ಬಲವಾದ ಕ್ರಮಗಳ ಹೊಸ ಆವೃತ್ತಿ ಕಿರೀಟ ಸಿಗುತ್ತದೆ ಎಂದು ಅವರು ಬಗೆದಿದ್ದರು.
ಇದನ್ನೂ ನೋಡಿ: ದಲಿತ ನೋವಿನ ಧ್ವನಿ – ಸಂಬಳಿಗೋಲು | ಪುಸ್ತಕ ಬಿಡುಗಡೆ Janashakthi Media
ಈ ಎರಡು ತದ್ವಿರುದ್ಧ ಗುರಿಗಳನ್ನು, ಅಂದರೆ ‘ಸಾಮರಸ್ಯ’ ಮತ್ತು ಜಾತಿ ತಾರತಮ್ಯದ ವಿರುದ್ಧ ಸಕ್ರಿಯ ಆಡಳಿತಾತ್ಮಕ ಹೋರಾಟ ಇವೆರಡನ್ನು ಸಂಯೋಜಿಸಬೇಕಾದರೆ, ಮೊದಲು ನಿಬಂಧನೆಗಳ ಅಧಿಸೂಚನೆ ಹೊರಡಿಸಬೇಕು, ಮತ್ತು ನಂತರ ಅವುಗಳ ವಿರುದ್ಧ ಸಾರ್ವಜನಿಕ ಆಕ್ರೋಶ ಸೃಷ್ಟಿಸಬೇಕು, ಅಂತಿಮವಾಗಿ ನ್ಯಾಯಾಲಯ ತೋರಿಕೆಯ ಕಾರಣಗಳ ಮೇಲೆ ತಡೆಯಾಜ್ಞೆ ಕೊಡುವಂತಾಗಬೇಕು. ಇಲ್ಲಿರುವ ಪ್ರಶ್ನೆ, ಇವೆಲ್ಲ ಪೂರ್ವಯೋಜಿತವೇ, ಹೂಟದಿಂದ ಮಾಡಿದವುಗಳೇ ಅಥವ ಕೆಲವು ಹಿರಿಯ ಮುಖಂಡರು ನಡೆಸಿದರೇ ಎಂಬುದಲ್ಲ. ಈ ಘಟನಾವಳಿ ಪ್ರತಿಯೊಬ್ಬರನ್ನೂ ತುಷ್ಟೀಕರಿಸಲು ಪ್ರಯತ್ನಿಸುತ್ತಲೇ ಹಿಂದೂ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಜಾತಿ ದಮನವನ್ನು ಅಡಗಿಸಿಡುವ ಆರ್‌ಎಸ್‌ಎಸ್/ಬಿಜೆಪಿ ಗುರಿಗಳ ಈಡೇರಿಕೆಗೆ ನೆರವಾಗುತ್ತಿದೆ.
(ಕೃಪೆ: ಪೀಪಲ್ಸ್ ಡೆಮಾಕ್ರಸಿ, ಫೆಬ್ರುವರಿ 8)
