ಜತೆಗಿರುವನು ಚಂದಿರ ನಾಟಕಕ್ಕೆ ಬಜರಂಗದಳ, ಆರ್‌ಎಸ್‌ಎಸ್‌ ಅಡ್ಡಿ

ಶಿವಮೊಗ್ಗ: ಸೊರಬ ತಾಲ್ಲೂಕಿನ ಆನವಟ್ಟಿಯ ವೀರಶೈವ ಕಲ್ಯಾಣ ಮಂದಿರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಜತೆಗಿರುವನು ಚಂದಿರ’ ನಾಟಕಕ್ಕೆ ಮುಸ್ಲಿಂ ಪ್ರಧಾನ ಕಥಾಹಂದರ ಹೊಂದಿದೆ ಎಂದು ಆರೋಪಿಸಿ ಬಜರಂಗದಳ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರು ಅಡ್ಡಿಪಡಿಸಿದರು. ಇದರಿಂದಾಗಿ ಸಂಘಟಕರು ಅನಿವಾರ್ಯವಾಗಿ ನಾಟಕ ಪ್ರದರ್ಶನ ವನ್ನು ಅರ್ಧದಲ್ಲಿಯೇ ನಿಲ್ಲಿಸಿದರು.

ಜೋಸೆಫ್‌ ಸ್ಟೀನ್‌ ಅವರ ‘ಪಿಡ್ಲರ್‌ ಆನ್‌ ದಿ ರೂಫ್‌’ ನಾಟಕವನ್ನು ಜಯಂತ ಕಾಯ್ಕಿಣಿ ಅವರು ಕನ್ನಡಕ್ಕೆ ರೂಪಾಂತರ ಮಾಡಿದ್ದರು. ಅದನ್ನು ಶಿವಮೊಗ್ಗದ ರಂಗಬೆಳಕು ತಂಡವು ರಂಗಕ್ಕೆ ತಂದಿತ್ತು. ಈ ನಾಟಕದ ಪ್ರಯೋಗ ಭಾನುವಾರ ಆನವಟ್ಟಿಯಲ್ಲಿ ಆಯೋಜಿಸಲಾಗಿತ್ತು. ರಾತ್ರಿ 7.45ಕ್ಕೆ ನಾಟಕ ಆರಂಭವಾಗಿತ್ತು.

9.30ರ ಹೊತ್ತಿಗೆ ಆರ್‌ಎಸ್‌ಎಸ್‌ನ ಶ್ರೀಧರ ಆಚಾರ್‌, ಬಜರಂಗದಳದ ಮಂಜಣ್ಣ ಸಭಾಂಗಣದ ಒಳಗೆ ಬಂದಿದ್ದು, ಸಂಜಯ್‌ ಡೊಂಗ್ರೆ ಎಂಬುವವರು ಹೊರಗಡೆ ನಿಂತಿದ್ದರು. ‘ಬೋಲೊ ಭಾರತ್‌ ಮಾತಾಕಿ ಜೈ’, ‘ಜೈ ಹಿಂದ್‌’ ಘೋಷಣೆಗಳನ್ನು ಕೂಗಿದ ಅವರು, ನಾಟಕವನ್ನು ನಿಲ್ಲಿಸುವಂತೆ ಆಗ್ರಹಿಸಿದರು. ಪ್ರೇಕ್ಷಕರನ್ನು ಒತ್ತಾಯಪೂರ್ವಕವಾಗಿ ಹೊರಗೆ ಕಳುಹಿಸಿದರು. ಹೀಗಾಗಿ ಸಂಘಟಕರು ನಾಟಕವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದರು.

‘ದೇಶದಲ್ಲಿ ಹಿಂದೂ–ಮುಸ್ಲಿಂ ಗಲಾಟೆ ನಡೆಯುತ್ತಿರುವಾಗ ಮುಸ್ಲಿ ಮರೇ ಪ್ರಧಾನವಾಗಿರುವ ಕಥಾವಸ್ತು ಇಟ್ಟುಕೊಂಡು ನಾಟಕ ಮಾಡಿರುವುದು ಬೇಸರದ ಸಂಗತಿ. ಹಾಗಾಗಿ ನಾಟಕವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು’ ಎಂದು ಶ್ರೀಧರ ಆಚಾರ್ ಹಾಗೂ ಮಂಜಣ್ಣ ಸಮರ್ಥಿಸಿಕೊಂಡಿದ್ದಾರೆ.

‘ನಾಟಕದಲ್ಲಿ ಅಂತಹ ಸನ್ನಿವೇಶಗಳು ಇರಲಿಲ್ಲ. ನಾವು ಭಾರತೀಯರು ಒಂದೇ ಎಂದು ಸಾರುವ ಐಕ್ಯಭಾವ ನಾಟಕದಲ್ಲಿತ್ತು. ಅವರು ನೋಡಿ ವಿಮರ್ಶಿಸಬೇಕಿತ್ತು. ಅರ್ಧದಲ್ಲಿ ನಿಲ್ಲಿಸಿದ್ದು ಸರಿಯಲ್ಲ’ ಎಂದು ಆಯೋಜಕರಲ್ಲಿ ಒಬ್ಬರಾದ ಕೊಟ್ರಪ್ಪ ಹಿರೇಮಾಗಡಿ ನೋವು ತೋಡಿಕೊಂಡರು.

ಈ ಹಿಂದೆ ಶಿವಮೊಗ್ಗ ನಗರದಲ್ಲಿ ನಡೆದ ಮಾರಿಕಾಂಬ ಜಾತ್ರೆಯ ವೇಳೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ದೇವಸ್ಥಾನದ ಬಳಿ ಮಳಿಗೆ ಹಾಕಲು ಅವಕಾಶ ನೀಡಿರಲಿಲ್ಲ ಎಂಬುದನ್ನೂ ಈ ಸಂದರ್ಭದಲ್ಲಿ ಸ್ಮರಿಸಬಹುದು

Donate Janashakthi Media

Leave a Reply

Your email address will not be published. Required fields are marked *