ಕೋಲಾರ: ಗ್ರಾಮ ಪಂಚಾಯತಿ ನೌಕರರ ವೇತನ, ನೇರ ನೇಮಕಾತಿ ಆದೇಶವನ್ನು ತಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಿಐಟಿಯು ನೇತೃತ್ವದ ರಾಜ್ಯ ಗ್ರಾಮ ಪಂಚಾಯತಿ ನೌಕರ ಸಂಘದಿಂದ ಗುರುವಾರ ಜಿಲ್ಲಾ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಗ್ರಾಮ ಪಂಚಾಯಿತಿಯ ಬಿಲ್‍ಕಲೆಕ್ಟರ್ ಗುಮಾಸ್ತ ಹುದ್ದೆಯಿಂದ ಗ್ರೇಡ್-2 ಕಾರ್ಯದರ್ಶಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಆಯ್ಕೆ ಮೂಲಕ ನೇರ ನೇಮಕಾತಿಗೆ ತಡೆ ನೀಡಿದ್ದ ಆದೇಶವನ್ನು ಆರ್ಥಿಕ ಇಲಾಖೆಯು ಜೂನ್ 24ರಂದು ಈ ಹುದ್ದೆಗಳನ್ನು ನೇಮಕ ಮಾಡಲು ಸಹಮತ ನೀಡಿದ್ದರು ಇದರ ಅನ್ವಯ ಜುಲೈ 2ರಂದು ಸರಕಾರವು ನೇಮಕಾತಿ ಆದೇಶ ನೀಡಿದ್ದು ಮರುದಿನ ನೇಮಕಾತಿ ಆದೇಶವನ್ನು ಹಿಂಪಡೆದಿರುವುದರಿಂದ 25 ವರ್ಷಗಳಿಂದ ಸೇವೆ ಮಾಡಿ ನಿವೃತ್ತಿಯ ಅಂಚಿನಲ್ಲಿರುವ ಸಾವಿರಾರು ನೌಕರರಿಗೆ ತೀವ್ರವಾದ ಅನ್ಯಾಯವಾಗುವುದರಿಂದ ಈ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ನೌಕರರಿಗೆ ಒಂದು ವರ್ಷದಿಂದ ವೇತನವಿಲ್ಲದೇ ಸಂಕಷ್ಟದಲ್ಲಿದ್ದಾರೆ 15ನೇ ಹಣಕಾಸಿನಲ್ಲಿ ವೇತನ ನೀಡುವಂತೆ ಸರ್ಕಾರ ಆದೇಶ ಮಾಡಿದ್ದರು ತಳಮಟ್ಟದಲ್ಲಿ ಪಿಡಿಒಗಳು ವೇತನ ಪಾವತಿಸದಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ವೇತನ ಸಿಗುತ್ತಿಲ್ಲ 15ನೇ ಹಣಕಾಸಿನ ವೇತನ ಬಾಬ್ತು ಹಣವನ್ನು ಕಡಿತ ಮಾಡಿ ಸಿಬ್ಬಂದಿ ವೇತನ ಖಾತೆಗೆ ಜಮಾ ಮಾಡಬೇಕೆಂದು 30 ವರ್ಷಗಳಿಂದ ಸೇವೆ ಮಾಡಿದ್ದರೂ ಯಾವುದೇ ಸೇವಾ ನಿಯಮಾವಳಿಗಳಿರುವುದಿಲ್ಲ. ತೀವ್ರವಾದ ಅನಾರೋಗ್ಯಕ್ಕೆ ತುತ್ತಾದರೆ, ಅಕಾಲಿಕ ಮರಣವಾದರೆ ಯಾವುದೇ ಸವಲತ್ತುಗಳು ಇರುವುದಿಲ್ಲ. ಆದೇಶಗಳಿದ್ದರೂ ಅಧಿಕಾರಿಗಳು ಜಾರಿ ಮಾಡುವುದಿಲ್ಲ ಎಂದು ದೂರಿದರು.
ಸಿಐಟಿಯು ಜಿಲ್ಲಾ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಗ್ರಾಮ ಪಂಚಾಯತಿ ನೌಕರರಿಗೆ ಸಂಬಳ ನೀಡದ ಪಿಡಿಒಗಳನ್ನು ಅಮಾನತ್ತು ಮಾಡಬೇಕು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವಾಗ ಗ್ರಾಪಂನ ಎಲ್ಲಾ ಸಿಬ್ಬಂದಿಗಳನ್ನು ಒಳಪಡಿಸಬೇಕು ತ್ರೈಮಾಸಿಕ ವೇತನವು ಹಲವಾರು ಗ್ರಾಮ ಪಂಚಾಯಿತಿಗಳಿಗೆ ಕಡಿಮೆ ವೇತನವು ಬಿಡುಗಡೆಯಾಗಿದ್ದು, ಇದನ್ನು ಸರಿಪಡಿಸಬೇಕು ಸರ್ಕಾರಿ ಆದೇಶದಂತೆ ಸ್ಥಳೀಯ ತೆರಿಗೆ ಸಂಗ್ರಹದಲ್ಲಿ ಶೇ. 40 ರಷ್ಟು ಹಣವನ್ನು ಕಡ್ಡಾಯವಾಗಿ ಸಿಬ್ಬಂದಿಯ ವೇತನಕ್ಕೆ ಪಾವತಿಸಬೇಕು ಸರ್ಕಾರಿ ಆದೇಶದಂತೆ ಪ್ರತಿ ತಿಂಗಳು 5ನೇ ತಾರೀಖು ಸಿಬ್ಬಂದಿಯ ವೇತನವನ್ನು ಪಾವತಿಸಿ ಸರ್ಕಾರಕ್ಕೆ ವರದಿ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ನಿವೃತ್ತಿಯಾದ ಸಿಬ್ಬಂದಿಗೆ ಗ್ರಾಚ್ಯೂಟಿಯನ್ನು ಪಾವತಿ ಮಾಡಬೇಕು ಕೋವಿಡ್ ಸೋಂಕಿನಿಂದ ಮೃತಪಟ್ಟ ಗ್ರಾಮ ಪಂಚಾಯಿತಿ ನೌಕರರಿಗೆ 30 ಲಕ್ಷ ಪರಿಹಾರ ಮತ್ತು ಅವರ ಕುಟುಂಬದ ಸದಸ್ಯರಿಗೆ ಉದ್ಯೋಗವನ್ನು ನೀಡಬೇಕು ಸೇವೆಯಲ್ಲಿ ಮೃತಪಟ್ಟ ಗ್ರಾಮ ಪಂಚಾಯಿತಿ ನೌಕರರ ಕುಟುಂಬದ ಸದಸ್ಯರಿಗೆ ಅನುಕಂಪ ಆಧಾರದ ಮೇಲೆ ಶೀಘ್ರವಾಗಿ ಕೆಲಸ ನೀಡಬೇಕು ರಾಜಕೀಯ ಕಾರಣದಿಂದ ಕೆಲಸದಿಂದ ತೆಗೆದ ಗ್ರಾಮ ಪಂಚಾಯಿತಿ ನೌಕರರನ್ನು ಮತ್ತೆ ನೇಮಿಸಿಕೊಳ್ಳಬೇಕು. ಗ್ರಾಮ ಪಂಚಾಯಿತಿ ನೌಕರರ ಮೇಲಿನ ದಬ್ಬಾಳಿಕೆಯನ್ನು ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು
ಪ್ರತಿಭಟನೆಯ ನೇತೃತ್ವವನ್ನು ಗ್ರಾಮ ಪಂಚಾಯತಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಅಮರನಾರಾಯಣ, ಕಾರ್ಯದರ್ಶಿ ಯಲ್ಲಪ್ಪ, ಖಜಾಂಚಿ ಕೇಶವರಾವ್,ಮುಖಂಡರಾದ ವೆಂಕಟರಾಮೇಗೌಡ, ರಾಮಚಂದ್ರಪ್ಪ, ಕೃಷ್ಣಪ್ಪ, ಶ್ರೀನಿವಾಸ್, ಮುಂತಾದವರು ಇದ್ದರು.