ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ – ಜೋಷಿ

ಕುಂದಗೋಳ: ಹುಬ್ಬಳ್ಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯಲ್ಲಿ ಶಿರೂರ ಬಳಿ ಇರುವ ರೈಲ್ವೆ ಮೇಲ್ಸೇತುವೆ ಶಿಥಿಲಗೊಂಡಿರುವುದನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರವಿವಾರ ವೀಕ್ಷಿಸಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿ, ಸೇತುವೆ ಕಾಮಗಾರಿ ಕಳಪೆಯಾಗಿದ್ದು ಗುತ್ತಿಗೆದಾರರಿಂದ ಹಣ ಮರು ಪಾವತಿಸಿಕೊಂಡು ಕಪ್ಪುಪಟ್ಟಿಗೆ ಸೇರಿಸಬೇಕು. 6-7 ತಿಂಗಳ ಹಿಂದೆ ಈ ಸೇತುವೆಯನ್ನು ಇಲಾಖೆಗೆ ಹಸ್ತಾಂತರಿಸಿದ್ದು, ಇದರಲ್ಲಿ ಅಧಿ ಕಾರಿಗಳು ಹಾಗೂ ಗುತ್ತಿಗೆದಾರರ ತಪ್ಪು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅಂತವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆ ಅಧಿಕಾರಿ ಎಸ್‌.ಬಿ. ಚವಡಣ್ಣವರ ಅವರ ಬಳಿ ಸಾರಿಗೆ ಸಂಪರ್ಕಕ್ಕೆ ತೊಂದರೆ ಆಗದಂತೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದಾಗ ಶಿರೂರು, ಬಸಾಪುರ ಮಾರ್ಗವಾಗಿ ಸಂಶಿಗೆ ಸೇರುತ್ತೇವೆ ಎಂದರು.ಆ ರಸ್ತೆಯನ್ನು ಸಂಚಾರಕ್ಕೆ ಉತ್ತಮಗೊಳಿಸಬೇಕು ಎಂದು ಸಚಿವರು ಹೇಳಿದರು.

ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ಈ ಸೇತುವೆಯಿಂದಾಗಿ ಸಾಕಷ್ಟು ಜನರಿಗೆ ತೊಂದರೆ ಆಗುತ್ತಿದೆ. ರೈಲ್ವೆ ಹಳಿಗೆ ತಕ್ಷಣ ತಾತ್ಕಾಲಿಕವಾಗಿ ಗೇಟ್‌ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಜೋಶಿ ಅವರನ್ನು ಆಗ್ರಹಿಸಿದರು. ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ,ಬಿಜೆಪಿ ಮುಖಂಡ ಎಂ.ಆರ್‌. ಪಾಟೀಲ, ರವಿಗೌಡ ಪಾಟೀಲ ಮೊದಲಾದವರಿದ್ದರು.

Donate Janashakthi Media

Leave a Reply

Your email address will not be published. Required fields are marked *