ನ್ಯೂಯಾರ್ಕ್: ಪ್ಯಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್ ಮತ್ತು ಇಸ್ರೇಲ್ ತಕ್ಷಣದ ಮಾನವೀಯ ಒಪ್ಪಂದಕ್ಕೆ ಬರುವಂತೆ ಕರೆ ನೀಡುವ ನಿರ್ಣಯವನ್ನು ಶುಕ್ರವಾರ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಭಾರಿ ಬಹುಮತದೊಂದಿಗೆ ಅಂಗೀಕರಿಸಿದೆ. ಅದೇ ವೇಳೆ ಗಾಜಾದ ಗಡಿಯೊಳಗೆ ಪರಿಹಾರ ನೆರವು ಪ್ರವೇಶಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಲಾಗಿದೆ. ಈ ವೇಳೆ ಭಾರತವು ಭಾಗವಹಿಸದೆ ಅಂತಹ ಕಾಯ್ದುಕೊಂಡಿದೆ.
ನಿರ್ಣಯದ ಪರವಾಗಿ ಒಟ್ಟು 120 ದೇಶಗಳು ಮತ ಚಲಾಯಿಸಿದರೆ, ಇಸ್ರೇಲ್ ಮತ್ತು ಅಮೆರಿಕೆ ಸೇರಿದಂತೆ 14 ದೇಶಗಳು ವಿರುದ್ಧವಾಗಿ ಮತ ಚಲಾಯಿಸಿದವು. ಭಾರತ, ಕೆನಡಾ ಸೇರಿದಂತೆ ಇತರ 45 ದೇಶಗಳು ಗೈರುಹಾಜರಾಗಿದ್ದವು.
ಭಾರತವು ಗೈರು ಹಾಜರಾಗಿರುದರ ವಿರುದ್ಧ ವಿಪಕ್ಷಗಳು ಕಿಡಿಕಾರಿದ್ದು, ಭಾರತದ ಗೈರು ಹಾಜರಿ ಆಘಾತಕರ ಸಂಗತಿ ಎಂದು ಸಿಪಿಐ(ಎಂ) ಮತ್ತು ಸಿಪಿಐ ಜಂಟಿ ಹೇಳಿಕೆಯಲ್ಲಿ ಖೇದ ವ್ಯಕ್ತಪಡಿಸಿವೆ.
ಇದನ್ನೂ ಓದಿ : ಇಸ್ರೇಲ್‌ನಿಂದ ಗಾಜಾ ನರಮೇಧ | ಪ್ಯಾಲೆಸ್ತೀನ್ ಬೆಂಬಲಿಸಿ ಯುರೋಪಿನಾದ್ಯಂತ ರ‍್ಯಾಲಿ
“ಭಾರೀ ಬೆಂಬಲದೊಂದಿಗೆ ಅಂಗೀಕರಿಸಿದ ಒಂದು ನಿರ್ಣಯದಲ್ಲಿ ಭಾರತವು ಗೈರುಹಾಜರಾಗಿರುವುದು, ಎಷ್ಟರ ಮಟ್ಟಿಗೆ ಭಾರತದ ವಿದೇಶಾಂಗ ಧೋರಣೆಯು ಯುಎಸ್ ಸಾಮ್ರಾಜ್ಯಶಾಹಿಯ ಅಡಿಯಾಳು ಮಿತ್ರತ್ವದಿಂದ ಮತ್ತು ಯುಎಸ್-ಇಸ್ರೇಲ್-ಭಾರತದ ನಂಟನ್ನು ಕ್ರೋಢೀಕರಿಸುವ ಮೋದಿ ಸರ್ಕಾರದ ಕ್ರಮಗಳಿಂದ ರೂಪುಗೊಳ್ಳುತ್ತಿದೆ ಎಂಬುದನ್ನು ತೋರಿಸುತ್ತದೆ. ಇದು ಪ್ಯಾಲೇಸ್ಟಿನಿಯನ್ ಗುರಿಸಾಧನೆಗೆ ಭಾರತದ ದೀರ್ಘಕಾಲದ ಬೆಂಬಲಕ್ಕೆ ತದ್ವಿರುದ್ಧವಾಗಿದೆ” ಎಂದು ಸಿಪಿಐಎಂ, ಸಿಪಿಐ ಜಂಟಿಯಾಗಿ ಹೇಳಿಕೆ ನೀಡಿವೆ.
ಅಕ್ಟೋಬರ್ 7 ರಂದು ಪ್ಯಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್ ದಕ್ಷಿಣ ಇಸ್ರೇಲ್‌ನ ಮೇಲೆ ನಡೆಸಿದ ದಾಳಿಯ ನಂತರ ಇಸ್ರೇಲ್ ಗಾಜಾದ ಮೇಲೆ ಬಾಂಬ್ ದಾಳಿಯನ್ನು ಪ್ರಾರಂಭಿಸಿದೆ. ಈ ವರೆಗೆ ಕನಿಷ್ಠ 7,326 ಪ್ಯಾಲೆಸ್ತೀನಿಯನ್ನರನ್ನು ಇಸ್ರೇಲ್ ಹತ್ಯೆ ಮಾಡಿದ್ದು, ದಾಳಿಯಲ್ಲಿ 18,000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಹಮಾಸ್ ದಾಳಿಯ ನಂತರ ಇಸ್ರೇಲ್ ನಂತರ ಗಾಜಾದ ಮೇಲೆ “ಸಂಪೂರ್ಣ ಮುತ್ತಿಗೆ” ವಿಧಿಸಿದ್ದು, ತೀವ್ರ ಬಾಂಬ್ ದಾಳಿಗೆ ಇಳಿದಿತ್ತು. ಕಳೆದ ವಾರ ಗಾಜಾದ ಅಲ್-ಅಹ್ಲಿ ಅರಬ್ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದ ನಂತರ ಸುಮಾರು 500 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಡಿಯೊ ನೋಡಿ: ಪ್ಯಾಲಿಸ್ತೇನ್ ಪರ ಪ್ರತಿಭಟನೆ ಮಾಡುವುದು ಅಪರಾಧವೆ?