ಲಂಡನ್: ಪ್ಯಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್ ಮತ್ತು ಇಸ್ರೇಲ್ ಮಧ್ಯೆ ನಡೆಯುತ್ತಿರುವ ಯುದ್ಧವು ಮೂರನೇ ವಾರಕ್ಕೆ ಕಾಲಿಡುತ್ತಿದೆ. ಆದರೆ ಇಸ್ರೇಲ್ ಗಾಜಾದ ಪ್ಯಾಲೆಸ್ತೀನ್ ನಾಗರಿಕರನ್ನು ಗುರಿಯಾಗಿಸಿ ವಾಯುದಾಳಿ ಮುಂದುವರೆಸಿದೆ. ಈ ನಡುವೆ ಇಸ್ರೇಲ್ ಬೆಂಬಲಿಸುವ ಯುರೋಪಿನ ಹಲವಾರು ದೇಶಗಳಲ್ಲಿ ಕಳೆದ ಶನಿವಾರ ಮತ್ತು ಭಾನುವಾರ ಪ್ಯಾಲೆಸ್ತೀನ್ ಹಕ್ಕಿನ ಪರವಾಗಿ ಪ್ರತಿಭಟನಾ ರ‍್ಯಾಲಿ ನಡೆದಿದೆ. ಯುದ್ಧದ ವೇಳೆ ನಾಗರಿಕರನ್ನು ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಸುತ್ತಿರುವ ದಾಳಿಯು ಯುದ್ಧಾಪರಾಧವಾಗಿದ್ದು, ಇದನ್ನು ವಿರೋಧಿಸಿ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ನರಮೇಧ
ಇಸ್ರೇಲ್ ದಾಳಿಯನ್ನು ನರಮೇಧ ಎಂದು ಬಣ್ಣಿಸಲಾಗಿದ್ದು, ಪ್ರತಿರೋಧದ ಹೆಸರಿನಲ್ಲಿ ಗಾಜಾದಲ್ಲಿ ಜನಾಂಗೀಯ ಹತ್ಯಾಕಾಂಡ ನಡೆಯುತ್ತಿದೆ ಎಂದು ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪ್ಯಾಲೆಸ್ತೀನ್ ಬೆಂಬಲಿಸಿ ಯುರೋಪಿನ ಲಂಡನ್, ಬರ್ಲಿನ್, ರೋಮ್ ಮತ್ತು ಫ್ರೆಂಚ್ ನಗರವಾದ ಮಾರ್ಸಿಲ್ಲೆ ಬೀದಿಗಳಲ್ಲಿ ಪ್ರತಿಭಟನಾ ರ‍್ಯಾಲಿಗಳು ನಡೆದಿವೆ. ಈ ವೇಳೆ ಪ್ರತಿಭಟನಾಕಾರರು ಗಾಜಾದಲ್ಲಿ ಕದನ ವಿರಾಮ ಘೋಷಿಸುವಂತೆ ಹಾಗೂ ಪರಿಹಾರ ಕಾರ್ಯಗಳನ್ನು ಸುರಕ್ಷಿತವಾಗಿ ನಡೆಸಲು ಅನುವು ಮಾಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ಶಾಂತಿ ನೆಲೆಸಲಿ ಎಂದವರನ್ನು ಬಂಧಿಸಿದ ಸರ್ಕಾರ!
ಕಳೆದ ವಾರಾಂತ್ಯದಲ್ಲಿ ಯುರೋಪಿನಾದ್ಯಂತ ಹಲವು ದೇಶಗಳಲ್ಲಿ ಬೃಹತ್ ಜನಸಮೂಹ ಪ್ರತಿಭಟನಾ ರ‍್ಯಾಲಿ ನಡೆಸಿವೆ. ಲಂಡನ್‌ನ ಬೀದಿಗಳಲ್ಲಿ ಸತತವಾಗಿ ಎರಡನೇ ವಾರವೂ ಶನಿವಾರ ಮತ್ತು ಭಾನುವಾರದಂದು ರ‍್ಯಾಲಿ ನಡೆದಿದ್ದು, ಪ್ರತಿಭಟನಾಕಾರರು ಯುದ್ಧ ವಿರೋಧಿ ಘೋಷಣೆ ಕೂಗಿದ್ದಾರೆ.
ಸುಮಾರು 1 ಲಕ್ಷ ಜನರು ಭಾಗವಹಿಸಿದ್ದ ರ‍್ಯಾಲಿಯಲ್ಲಿ ಪ್ಯಾಲೆಸ್ತೀನ್ ಧ್ವಜಗಳನ್ನು ಬೀಸಿ “ಫ್ರೀ ಪ್ಯಾಲೆಸ್ತೀನ್” ಘೋಷಣೆಯನ್ನು ಕೂಗಿದ್ದಾರೆ. ಪ್ರತಿಭಟನಾಕಾರರು ಇಂಗ್ಲೇಂಡ್ ಪ್ರಧಾನಿ ರಿಷಿ ಸುನಕ್ ಅವರ ಅಧಿಕೃತ ನಿವಾಸವಾದ ಡೌನಿಂಗ್ ಸ್ಟ್ರೀಟ್‌ನ ಹೊರಗೆ ಸಮಾವೇಶಗೊಳ್ಳುವ ಮೊದಲು ನಗರದ ಮೂಲಕ ಮೆರವಣಿಗೆ ನಡೆಸಿದ್ದಾರೆ.
ಅದೇ ರೀತಿ ಇಟಲಿಯ ರೋಮ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು ಗಾಜಾದ ಮೇಲಿನ ಇಸ್ರೇಲಿ ವೈಮಾನಿಕ ದಾಳಿಯನ್ನು ನಿಲ್ಲಿಸುವಂತೆ ಕರೆ ನೀಡಿದರು. ಪ್ಯಾಲೆಸ್ತೀನ್ ಧ್ವಜಗಳನ್ನು ಬೀಸಿದ ಅವರು, “ಫ್ರೀ ಪ್ಯಾಲೆಸ್ತೀನ್!” ಎಂಬ ಘೋಷಣೆಯೊಂದಿಗೆ ಮೆರವಣಿಗೆ ನಡೆಸಿದರು.
ಇದನ್ನೂ ಓದಿ: ಪ್ಯಾಲೆಸ್ತೀನ್ ‘ದಿ ಫ್ರೀಡಂ ಥಿಯೇಟರ್’ ಮೇಲೆ ಇಸ್ರೇಲ್ ಸೇನೆಯಿಂದ ದಾಳಿ: ಆನ್‌ಲೈನ್ ಖಂಡನಾ ಸಭೆ
ಈ ವೇಳೆ ಮಾತನಾಡಿದ ಇಟಲಿಯ ಪ್ಯಾಲೇಸ್ತೀನಿಯನ್ ವಿದ್ಯಾರ್ಥಿ ಚಳವಳಿಯ ಅಧ್ಯಕ್ಷ ಮಾಯಾ ಇಸಾ “ಇಸ್ರೇಲ್ ಅಲ್ಲಿ ಯುದ್ಧಾಪರಾಧಗಳನ್ನು ನಡೆಸುತ್ತದೆ. ಅದು ಮಾನವೀಯತೆಯ ವಿರುದ್ಧದ ಅಪರಾಧಗಳಾಗಿವೆ. ಅಂತರಾಷ್ಟ್ರೀಯ ಸಮುದಾಯವು ಎಂದಿಗೂ ಅದರ ಕಾರ್ಯನಿರ್ವಹಿಸಲಿಲ್ಲ” ಎಂದು ಹೇಳಿದ್ದಾರೆ.
🔴 À Marseille aussi, les rassemblements s'organisent pour demander la paix et le cessez-le-feu immédiat en Palestine
Depuis le 7 octobre 2023, les frappes israéliennes sur Gaza ont tué 4 651 Palestiniens. pic.twitter.com/8kkvzbO7im
— L'insoumission (@L_insoumission) October 22, 2023
ಜರ್ಮನಿಯ ಬರ್ಲಿನ್‌ನಲ್ಲಿ ಪ್ರತಿಭಟನೆಗೆ ಪೋಲಿಸರು ನಿಷೇಧ ಹೇರಿದ ಹೊರತಾಗಿಯು, ಸಾವಿರಾರು ಪ್ಯಾಲೆಸ್ತೀನ್ ಪರ ಪ್ರತಿಭಟನಾಕಾರರು ಶನಿವಾರ ದೇಶದ ರಾಜಧಾನಿಯ ಬೀದಿಗಳಲ್ಲಿ ಅಡೆತಡೆಯಿಲ್ಲದೆ ಮೆರವಣಿಗೆ ನಡೆಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ಸುತ್ತುವರೆದರಾದರೂ, ಕೊನೆಗೆ ಮೆರವಣಿಗೆಗೆ ತೆರಳಲು ಅವಕಾಶ ನೀಡಿದ್ದಾರೆ.
ಇದನ್ನೂ ಓದಿ: ಗಾಜಾ ನರಮೇಧ | ಇಸ್ರೇಲ್‌ನಿಂದ ಮತ್ತೊಂದು ವಾಯು ದಾಳಿ; 700ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರ ಹತ್ಯೆ
ಫ್ರಾನ್ಸ್‌ನಲ್ಲಿ ಹಲವಾರು ಸಂಘಟನೆಗಳು ಜಂಟಿಯಾಗಿ ರ‍್ಯಾಲಿ ನಡೆಸಿದ್ದು, ಪ್ಯಾಲೆಸ್ತೀನ್‌ನಲ್ಲಿ ಶಾಂತಿ ನೆಲೆಸುವಂತೆ ಆಗ್ರಹಿಸಿದ್ದಾರೆ. ದಕ್ಷಿಣ ಫ್ರಾನ್ಸ್‌ನ ಹಳೆಯ ಬಂದರಿನ ಮಾರ್ಸಿಲ್ಲೆ ಬಳಿ ಸಾವಿರಾರು ಜನರು ಜಮಾಯಿಸಿ ಪ್ರತಿಭಟನೆ ನಡೆಸಿ ಕದನ ವಿರಾಮಕ್ಕೆ ಆಗ್ರಹಿಸಿದ್ದಾರೆ.
ಬೋಸ್ನಿಯಾ ದೇಶದ ನಗರ ಸರಜೆವೊದಲ್ಲಿ ಭಾನುವಾರ ಸಾವಿರಾರು ಜನರು ಜಮಾಯಿಸಿ, ಪ್ಯಾಲೆಸ್ತೀನ್ ಬೆಂಬಲಿಸಿ ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ. ಈ ರ‍್ಯಾಲಿಯನ್ನು ಸರಜೆವೊ ಸಿಟಿ ಹಾಲ್ ಬೆಂಬಲಿಸಿದ್ದು, ನಗರದ ಮೇಯರ್ ಬೆಂಜಮಿನಾ ಕಾರಿಕ್ ಕೂಡಾ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. 1992 ರಲ್ಲಿ ಬೋಸ್ನಿಯನ್ ಯುದ್ಧದ ಸಮಯದಲ್ಲಿ ಸರಜೆವೊದಲ್ಲಿ ಕೆಲಸ ಮಾಡಿದ ಪ್ಯಾಲೇಸ್ತೀನಿಯನ್ ವೈದ್ಯರು ಕೂಡಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸರಜೆವೊ ನಗರವು 1990 ರ ದಶಕದಲ್ಲಿ ಬೋಸ್ನಿಯನ್ ಯುದ್ಧದ ಸಮಯದಲ್ಲಿ ಬಾಂಬ್ ದಾಳಿ ಒಳಗಾಗಿತ್ತು.
ಕಳೆವ ವಾರ ಕೂಡಾ ಯುರೋಪಿನ ಟರ್ಕಿ, ಗ್ರೀಸ್, ಪೋಲೆಂಡ್, ಸೆರ್ಬಿಯಾ ಸೇರಿದಂತೆ ಹಲವು ದೇಶಗಳಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಪ್ರತಿಭಟನಾ ರ‍್ಯಾಲಿ ನಡೆದಿತ್ತು.
ವಿಡಿಯೊ ನೋಡಿ: “ನಮ್ಮ ಹೆಸರಿನಲ್ಲಿ ಪ್ಯಾಲೆಸ್ತೀನಿಯನ್ನರ ನರಮೇಧ ಮಾಡಬೇಡಿ” : ಅಮೆರಿಕಾ ಮತ್ತು ಇಸ್ರೇಲ್ ವಿರೋಧಿಸಿ 10 ಸಾವಿರ ಯಹೂದಿಗಳಿಂದ ಪ್ರತಿಭಟನೆ