GLENMARK ಎಂಬ ಕಂಪನಿಯು ಕೋವಿಡ್ ಸೋಂಕಿಗೆ Favipiravir ಎಂಬ ಔಷಧಿಯನ್ನು ಮಾತ್ರೆಯೊಂದಕ್ಕೆ 103 ರು. ಬೆಲೆಗೆ ಮಾರಲು ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯು ಅನುಮತಿಯನ್ನು ನೀಡಿದೆಯಷ್ಟೆ .
ಆದರೆ ಈ ಔಷಧವನ್ನು ಬಿಡುಗಡೆ ಮಾಡುವ ಮೊದಲು ಅನುಸರಿಸಬೇಕಾದ ಹಲವು ಪ್ರಕ್ರಿಯೆಗಳನ್ನು ಅನುಸರಿಸಿಲ್ಲವೆಂಬ ದೂರು ಕೇಳಿಬರುತ್ತಿದ್ದರೂ ಮಾಧ್ಯಮಗಳು ಮತ್ತು ಸರ್ಕಾರ ಅದನ್ನು ಕಡೆಗಣಿಸುತ್ತಿದೆ. ವಾಸ್ತವವಾಗಿ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳ ವೆಬ್ಸೈಟಿನಲ್ಲಿ ಈ ಔಷಧಿಯ ಸುತ್ತ ನಡೆದ ಕ್ಲಿನಿಕಲ್ ಟ್ರಯಲ್ ನ ವಿವರಗಳಾಗಲಿ, ಅನುಸರಿಸಿದ ವಿಧಾನಗಳಾಗಲಿ ಅಥವಾ ಅದರ ಪರಿಣಾಮಗಳನ್ನು ಸ್ವತಂತ್ರ ಪರಿಣಿತರ ಸಂಸ್ಥೆ ಅನುಮೋದನೆ ಮಾಡಿದ ವಿವರಗಳಾಗಲಿ ಯಾವುದು ಲಭ್ಯವಿಲ್ಲ. ಹೀಗಾಗಿ ಬಾಬಾ ರಾಮದೇವನ ಕೊರೊನಿಲ್ ರೀತಿ ಇದು ಸಹ ತುರ್ತು ಲಾಭಕ್ಕೆ ನಡೆಯುತ್ತಿರುವ ಹವಣಿಕೆಯಂತೆ ಕಾಣುತ್ತಿದೆ.
ಈ ಬಗ್ಗೆ ಮಹಾರಾಷ್ಟ್ರದ ಸೇವಾಗ್ರಾಮದ ಕಸ್ತೂರ್ ಬಾ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಆದ ಪ್ರೊಫೆಸರ್ SP ಕಲಾಂತ್ರಿ ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕರ್ತರಾದ ದಿನೇಶ್ ಠಾಕೂರ್ ಅವರು ಇಂದಿನ “The HIndu” ಪತ್ರಿಕೆಯಲ್ಲಿ ಒಂದು ವಿವರವಾದ ಲೇಖನ ಬರೆದಿದ್ದಾರೆ. ಮತ್ತು, ಎಲ್ಲಿಯತನಕ ಭಾರತೀಯ ಔಷಧ ಸಂಸ್ಥೆಯು Favipiravir ಔಷಧೀಯ ಕ್ಲಿನಿಕಲ್ ಟ್ರಯಲ್ ಗಳ ಹಾಗು ಅನುಸರಿಸಿದ ವಿಧಾನಗಳ ಸಂಪೂರ್ಣ ವಿವರಗಳನ್ನು ಪರಿಣಿತರ ಮತ್ತು ಸಾರ್ವಜನಿಕರ ಅವಗಾಹನೆಗೆ ಬಿಡುಗಡೆ ಮಾಡುವುದಿಲ್ಲವೋ ಅಲ್ಲಿಯತನಕ ಸಹದೇಶವಾಸಿಗಳು ದಯವಿಟ್ಟು ಆ ಔಷಧಿಯನ್ನು ಬಳಸಬಾರದೆಂದು ಚಿಂತಕಾರದ ಶಿವಸುಂದರ್ ರವರು ವಿನಂತಿ ಮಾಡಿದ್ದಾರೆ.