ಕೋರ್ಟ್‌ ಆದೇಶದ ಹಿನ್ನಲೆ ಮುಷ್ಕರ ವಾಪಸ್ಸ ಪಡೆದ ಸಾರಿಗೆ ನೌಕರರು

ಬೆಂಗಳೂರು : ಸತತ 15 ದಿನಗಳ ನಂತರ 1.2 ಲಕ್ಷ ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿ ಸೇವೆಗೆ ಹಾಜರಾಗುತ್ತಾರೆ. ಸದ್ಯ ಮುಷ್ಕರವನ್ನು ಮುಂದೂಡುತ್ತೇವೆ ಎಂದು ಅವರು ತಿಳಿಸಿದರು.

ಸಾರಿಗೆ ಸಿಬ್ಬಂದಿ ಮುಷ್ಕರದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಿದೆ. ನ್ಯಾಯಮೂರ್ತಿಗಳ ಹೇಳಿಕೆಯನ್ನು ನಾವು ಗೌರವಿಸುತ್ತೇವೆ. ಕೊವಿಡ್ ಕಾರಣದಿಂದ ಕರ್ತವ್ಯಕ್ಕೆ ಹಾಜರಾಗಿ ಎಂದಿದ್ದಾರೆ. ಸೇವೆಗೆ ಹಾಜರಾಗುವಂತೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ಜನರಿಗೆ ತೊಂದರೆ ಕೊಡಬೇಡಿ ಎಂದು ಹೇಳಿದ್ದಾರೆ. ಹೀಗಾಗಿ ಹೈಕೋರ್ಟ್ ಆದೇಶದಂತೆ ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೋಡಿಹಳ್ಳಿ ಚಂದ್ರಶೇಖರ್​ ತಿಳಿಸಿದರು.

ಇದನ್ನು ಓದಿ: 44 ಲಕ್ಷ ಲಸಿಕೆ ಡೋಸ್‌ ವ್ಯರ್ಥ : ಹಾಳು ಮಾಡಿದ್ದರಲ್ಲಿ ತಮಿಳುನಾಡು ನಂ 1

ಸಿಎಂ ಯಡಿಯೂರಪ್ಪರಿಗೂ ಆರೋಗ್ಯ ಸರಿ ಇಲ್ಲ. ಮೇ ತಿಂಗಳಿನಲ್ಲಿ ಸಿಎಂ ಯಡಿಯೂರಪ್ಪ ಚರ್ಚಿಸೋಣ ಎಂದಿದ್ದಾರೆ. ಜೊತೆಗೆ ನಾಳೆ ನ್ಯಾಯಾಲಯದಲ್ಲೂ ನಮ್ಮ ಕುಂದುಕೊರತೆ ದಾಖಲಿಸುತ್ತೇವೆ. ನಾಳೆ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಇದೆ. ಈವೇಳೆ ನ್ಯಾಯಾಲಯದಲ್ಲಿ ನಮ್ಮೆಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೇವೆ. ಸದ್ಯಕ್ಕೆ ನಾವು ಘನ ನ್ಯಾಯಾಲಯದ ಆದೇಶದ ಮೇರೆಗೆ ಈ ಮುಷ್ಕರ ನಿಲ್ಲಿಸುತ್ತಿದ್ದೇವೆ. ನಾಳೆಯಿಂದ ಎಲ್ಲಾ ನೌಕರರು ಕೆಲಸಕ್ಕೆ ಹಾಜರಾಗುತ್ತಿದ್ದೇವೆ ಎಂದು ಅವರು ವಿವರಿಸಿದರು.

ಆದರೆ, ಮುಷ್ಕರದ ವೇಳೆ 2169 ಮಂದಿ ವಜಾ ಮಾಡಲಾಗಿದೆ. 2941 ಅಮಾನತು ಮಾಡಲಾಗಿದೆ. 7646 ಮಂದಿಗೆ ಶೋಕಾಸ್ ನೋಟೀಸ್ ನೀಡಿದೆ. 8 ಸಾವಿರ ಮಂದಿಯನ್ನು ವರ್ಗಾವಣೆ ಮಾಡಲಾಗಿದೆ. ಒಟ್ಟು 20 ಸಾವಿರ ನೌಕರರ ಮೇಲೆ ದಮನಕಾರಿ ನೀತಿ ಅನುಸರಿಲಾಗಿದೆ. ಸರ್ಕಾರದ ಈ ಎಲ್ಲಾ ನಿರ್ಧಾರ ವಾಪಾಸ್ ಪಡೆಯಬೇಕು. ನೌಕರರ ವಿರುದ್ಧ ಕೈಗೊಂಡ ಕ್ರಮ ಕೈಬಿಡಬೇಕು ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು

Donate Janashakthi Media

Leave a Reply

Your email address will not be published. Required fields are marked *