ಕೊರೊನಾ ದೇವರ ಆಟ; ಹೆಚ್ಚಿನ ಜಿಎಸ್​ಟಿ ಪರಿಹಾರ ಕೊಡಲ್ಲ: ಕೇಂದ್ರ

  • ಆರ್‌ಬಿಐನಿಂದ ಸಾಲ ಪಡೆದು ಪರಿಹಾರ ಹಣ ನೀಡುವ ಬಗ್ಗೆ ಪರಿಶೀಲನೆ: ಸರಕಾರ

ನವದೆಹಲಿ: ಕೊರೊನಾ ಬಿಕ್ಕಟ್ಟು ಭಗವಂತನ ಆಟ ಎಂದಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍, ಜಿಎಸ್‌ಟಿ ಸಂಗ್ರಹದ ಮೇಲೆ ಅನಿರೀಕ್ಷಿತ ಪರಿಣಾಮ ಬೀರಿದ್ದು, ರಾಜ್ಯಗಳಿಗೆ ಹೆಚ್ಚಿನ ಜಿಎಸ್ಟಿ ಪರಿಹಾರ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ತಿಳಿಸಿದ್ದಾರೆ.

ಇಂದು ಆನ್ಲೈನ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ 41ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಮಾಹಿತಿ ನೀಡಲಾಯಿತು. 2019-20ನೇ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಈಗಾಗಲೇ 1.65 ಲಕ್ಷ ಕೋಟಿಗೂ ಹೆಚ್ಚು ಜಿಎಸ್​ಟಿ ಪರಿಹಾರ ಹಣ ನೀಡಲಾಗಿದೆ. 97 ಸಾವಿರ ಕೋಟಿ ರೂ ಪರಿಹಾರ ಹಣದ ಕೊರತೆ ಬೀಳುವ ಅಂದಾಜು ಇದೆ ಎಂದು ಕೇಂದ್ರ ಹಣಕಾಸು ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಕೇಂದ್ರ ಸರ್ಕಾರದ ಪ್ರಕಾರ ಈ ವರ್ಷ ಜಿಎಸ್​ಟಿ ಸಂಗ್ರಹದಲ್ಲಿ 2.35 ಲಕ್ಷ ಕೋಟಿ ಕೊರತೆ ಬೀಳುತ್ತಿದೆ. ಜಿಎಸ್​ಟಿ ಸಂಗ್ರಹದಲ್ಲಿ ವ್ಯತ್ಯವಾದರೆ ಸರ್ಕಾರವೇ ಭರ್ತಿ ಮಾಡಬೇಕೆಂದು ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಈ ಸಂದರ್ಭದಲ್ಲಿ ಒತ್ತಾಯಿಸಿದವು. ಆದರೆ, ಬಿಕ್ಕಟ್ಟಿನಿಂದ ಜಿಎಸ್​ಟಿ ಸಂಗ್ರಹಕ್ಕೆ ಧಕ್ಕೆಯಾಗಿದ್ದರೆ ರಾಜ್ಯಗಳಿಗೆ ಪೂರ್ಣ ಜಿಎಸ್​ಟಿ ಪಾಲು ಕೊಡಬೇಕೆಂಬ ನಿಯಮ ಇಲ್ಲವೆಂದು ಕೇಂದ್ರ ಸರ್ಕಾರ ಕಾನೂನು ಉಲ್ಲೇಖಿಸಿ ಸಭೆಯಲ್ಲಿ ಸ್ಪಷ್ಟಪಡಿಸಿತು.

ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಈ ಜಿಎಸ್​ಟಿ ಸಭೆಯಲ್ಲಿ ಆದಾಯ ಕೊರತೆ ನೀಗಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಯಿತು. ಶಾಸನಬದ್ಧವಾಗಿ ಕೇಂದ್ರ ಸರಕಾರ ಜಿಎಸ್‌ಟಿ ಬಾಕಿಯನ್ನು ರಾಜ್ಯಗಳಿಗೆ ನೀಡಬೇಕು ಎಂದು ಕಾಂಗ್ರೆಸ್‌ ಹಾಗು ಬಿಜೆಪಿಯೇತರ ಆಡಳಿತವವಿರುವ ರಾಜ್ಯಗಳು ಹೇಳಿವೆ. ಆದರೆ ಇದನ್ನು ನಿರಾಕರಿಸಿರುವ ಕೇಂದ್ರ ಸರಕಾರ, ತೆರಿಗೆ ಸಂಗ್ರಹ ಇಳಿಕೆಯಾಗಿರುವಾಗ ಇದು ಅನ್ವಯವಾಗುವುದಿಲ್ಲ ಎಂದು ವಾದಿಸಿದೆ.

ಆರ್‌ಬಿಐನಿಂದ ಸಾಲ ಪಡೆದು ಪರಿಹಾರ

ಜಿಎಸ್‌ಟಿ ಮಂಡಳಿ ಸಭೆಯಲ್ಲಿ ರಾಜ್ಯಗಳು ಜಿಎಸ್‌ಟಿ ಪರಿಹಾರ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹಾಕಿವೆ. ಆದರೆ ಕೊರೊನಾದಿಂದ ಜಿಎಸ್‌ಟಿ ಸಂಗ್ರಹ ದೊಡ್ಡ ಮಟ್ಟಕ್ಕೆ ಕುಸಿದಿರುವುದರಿಂದ ಆರ್‌ಬಿಐನಿಂದ ಸಾಲ ಪಡೆದು ಪರಿಹಾರ ಹಣ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಸರಕಾರ ಹೇಳಿದೆ.

ಮಾರ್ಚ್‌ನಲ್ಲಿ ನೀಡಿದ 13,806 ಕೋಟಿ ರೂಪಾಯಿ ಸೇರಿ 2020ರಲ್ಲಿ ಕೇಂದ್ರ ಸರಕಾರ ಜಿಎಸ್‌ಟಿ ಪರಿಹಾರವಾಗಿ 1.65 ಲಕ್ಷ ಕೋಟಿ ರೂಪಾಯಿಯನ್ನು ರಾಜ್ಯಗಳಿಗೆ ನೀಡಿದೆ. ಆದರೆ ಇದೇ ಅವಧಿಯಲ್ಲಿ ಸಂಗ್ರಹಿಸಿದ ಸೆಸ್‌ ಮೆತ್ತ 95,444 ಕೋಟಿ ರೂಪಾಯಿ ಮಾತ್ರ ಎಂದು ಅವರು ಹೇಳಿದ್ದಾರೆ.
“ಸರಕಾರ ಪಂಜಾಬ್‌ನಂಥ ಪುಟ್ಟ ರಾಜ್ಯಕ್ಕೆ 4,400 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಪಂಜಾಬ್‌ನ ವೇತನದ ಬಿಲ್‌ 1,800 ಕೋಟಿ ರೂಪಾಯಿ. ಹೀಗಾಗಿ ನಮಿಗೆ ಸರಕಾರ ನಡೆಸಲು ಕಷ್ಟವಾಗುತ್ತಿದೆ,” ಎಂದು ಪಂಜಾಬ್‌ ಹಣಕಾಸು ಸಚಿವ ಮನಪ್ರೀತ್‌ ಸಿಂಗ್‌ ಬಾದಲ್‌ ಟ್ಟೀಟ್‌ ಮಾಡಿದ್ದಾರೆ.

ಜಿಎಸ್‌ಟಿ ಕಾನೂನಿನ ಅಡಿಯಲ್ಲಿ ಮೊದಲ ಐದು ವರ್ಷ ರಾಜ್ಯಗಳಿಗೆ ಆದಾಯ ನಷ್ಟವಾದರೆ ಅದನ್ನು ಪರಿಹಾರ ರೂಪದಲ್ಲಿ ಭರಿಸುವುದಾಗಿ ಖಾತರಿ ನೀಡಲಾಗಿತ್ತು. ಆದರೆ ಅದೀಗ ಪಾಲನೆಯಾಗುತ್ತಿಲ್ಲ.

Donate Janashakthi Media

Leave a Reply

Your email address will not be published. Required fields are marked *