ಕೃಷಿ ಮಸೂದೆ ವಿರುದ್ಧ ಸಿಡಿದೆದ್ದ ರೈತರು : ಮೋದಿಯ ಅಶ್ರುವಾಯು, ಬ್ಯಾರಿಕೇಡ್ ಗಳಿಗೆ ಹೆದರದ ರೈತರು

ದೆಹಲಿ : ಕೇಂದ್ರ ಸರ್ಕಾರದ  ಮೂರು ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ರಾಷ್ಟ್ರಾಧ್ಯಂತ ಕಳೆದ ಮೂರ್ನಾಲ್ಕು ತಿಂಗಳಿನಿಂದ  ರೈತರು  ಪ್ರತಿಭಟಿಸುತ್ತಿದ್ದಾರೆ. ಇಂದು ದೇಶದಾದ್ಯಂತ ರೈತ ಸಂಘಟನೆಗಳು ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿ ಚಲೋ ಹೋರಾಟಕ್ಕೆ ಕರೆ ನೀಡಿದ್ದವು. ಇದರ ಭಾಗವಾಗಿ ಉತ್ತರಪ್ರದೇಶ, ಪಂಜಾಬ್, ಹರಿಯಾಣ ರಾಜ್ಯದಿಂದ ಅಸಂಖ್ಯಾತ ರೈತ ಹೋರಾಟಗಾರರು ಕೇಂದ್ರ ಸರಕಾರದ ಅಡೆ ತಡೆಗಳನ್ನು ಮೀರಿ ಇಂದು ದೆಹಲಿಗೆ ಪಾದಯಾತ್ರೆ ಮೂಲಕ ಆಗಮಿಸಿದ್ದು, ಮೋದಿ ಸರಕಾರದ ವಿರುದ್ದ  ಘೋಷಣೆಗಳನ್ನು  ಕೂಗಿದರು.

ದೆಹಲಿ ಚಲೋ ಹೊರಟಿದ್ದ ರೈತರನ್ನು ಹರಿಯಾಣ ಗಡಿಯಲ್ಲಿಯೇ ತಡೆಹಿಡಿಯುವುದಕ್ಕಾಗಿ  ಪೊಲೀಸರು ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿ ಬ್ಯಾರಿಕೇಡ್​ ಹಾಕಿ ತಡೆಯುವ ಮೂಲಕ ಅವರು ದೆಹಲಿ ಪ್ರವೇಶಿಸುವುದನ್ನು ತಡೆ ಹಿಡಯಲು ಪ್ರಯತ್ನವನ್ನು ನಡೆಸಿದರು.

ಪೊಲೀಸರ  ಈ ಕೃತ್ಯದಿಂದ  ಕೋಪಗೊಂಡ ರೈತರು ಬ್ಯಾರಿಕ್ಯಾಡಗಳನ್ನು ಕಿತ್ತು ಎಸೆದು ದೆಹಲಿಯತ್ತ ಸಾಗಿದರು.  ಹಲವು ಕಡೆ ರೈತರು ಬ್ಯಾರಿಕೇಡ್​ಗಳನ್ನು ಮುರಿದು ನದಿಗೆ ಎಸೆದಿರುವ ಘಟನೆಗಳು ನಡೆದಿವೆ. “ನಿಮ್ಮ ನೀರಿನ ಫಿರಂಗಿಗಳಿಗೆ ನಾವು ಹೆದರುವುದಿಲ್ಲ, ಇಗೋ ನೋಡಿ ಇದು ಜನರಶಕ್ತಿ ಎಂದು ರೈತರು ಘೋಷಣೆಗಳನ್ನು ಕೂಗುತ್ತಾ  ಮುನ್ನುಗುತ್ತಿರುವುದು” ವಿಶೇಷವಾಗಿತ್ತು.

ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ್, ರಾಜಸ್ಥಾನ, ಕೇರಳ ಮತ್ತು ಪಂಜಾಬ್ , ಕರ್ನಾಟಕ ಸೇರಿದಂತೆ  ಅನೇಕ  ರಾಜ್ಯಗಳಿಂದ ಲಕ್ಷಾಂತರ  ರೈತರು  ಟ್ರ್ಯಾಕ್ಟರ್‌ ಮೂಲಕ, ಕಾಲ್ನಡಿಗೆಯ ಮೂಲಕ ಮತ್ತು ವಿವಿಧ ವಾಹನಗಳ ಮೂಲಕ ದೆಹಲಿಗೆ ತೆರಳಿದ್ದಾರೆ.  ಪೊಲೀಸರು ರೈತರ ಮೇಲೆ ಅಶ್ರುವಾಯು ಮತ್ತು ಜಲಾನಿಲ ದಾಳಿ ಮಾಡಿದ್ದಾರೆ. ಆದರೂ ರೈತರು  ಹೆದರದೆ ಪ್ರತಿಭಟನೆ ನಡೆಸುತ್ತಿದ್ದಾರೆ, ರೈತರ ಮೇಲೆ ನಡೆಸಿದ ದಾಳಿಯ ವಿರುದ್ದ  ಇಂದು ದೇಶವ್ಯಾಪಿ ಹೋರಾಟವನ್ನು ನಡೆಸಲಾಗಿದೆ ಎಂದು  ಅಖಿಲ ಭಾರತ ಕಿಸಾನ ಸಭಾದ ಪ್ರಧಾನ ಕಾರ್ಯದರ್ಶಿ  ಹನನ್ ಮುಲ್ಲಾ ತಿಳಿಸಿದ್ದಾರೆ.

ದೆಹಲಿಯತ್ತ ಆಗಮಿಸುತ್ತಿರುವ ರೈತರನ್ನು ಮಾರ್ಗ ಮಧ್ಯೆ ತಡೆಯಲು ರಸ್ತೆಗಳನ್ನು ದೊಡ್ಡದೊಡ್ಡ ಕಲ್ಲುಗಳನ್ನು ಹಾಕಿ ಬಂದ್‍ ಮಾಡಿದ್ದರು. ಬ್ಯಾರಿಕೇಡ್‍ಗಳನ್ನು ಮುಳ್ಳುತಂತಿಗಳಿಂದ  ಸುತ್ತಿ ರಸ್ತೆಗಳನ್ನು ಬಂದ್‍ ಮಾಡಲಾಗಿತ್ತು. ಜೊತೆಗೆ ಸಾವಿರಾರು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಆದರೆ ಈ ಯಾವ ಅಡ್ಡಿಗಳೂ ರೈತರನ್ನು ತಡೆಯಲಾಗಲಿಲ್ಲ. ಕೊನೆಗೆ  ರೈತರನ್ನು ಚದುರಿಸಲು ಹರಿಯಾಣ ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿದ್ದಾರೆ.  ಇದ್ಯಾವುದಕ್ಕೂ  ಜಗ್ಗದೆ ರೈತರು ದೆಹಲಿಯತ್ತ ಧಾವಿಸಿದ್ದಾರೆ ಎಂದು  ದೆಹಲಿ ಹೋರಾಟದಲ್ಲಿ ಭಾಗಿಯಾಗಿರುವ ರಾಜ್ಯ ರೈತ  ಸಂಘ  ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ  ಕೋಡಿಹಳ್ಳಿ ಚಂದ್ರಶೇಖರ್ ರವರು ತಿಳಿಸಿದ್ದಾರೆ.

ಕೃಷಿ ಮಸೂದೆಗಳನ್ನು ವಿರೋಧಿಸಿ ನಡೆದ ದೆಹಲಿ ಚೊಲೊ ಹೋರಾಟವನ್ನು ಬೆಂಬಲಿಸಿ ಕರ್ನಾಟಕದಲ್ಲೂ ಪ್ರತಿಭಟನೆಯನ್ನು ನಡೆಸಲಾಗಿದೆ. ಕೇಂದ್ರ ಸರಕಾರದ ಕಚೇರಿಗೆ ಮುತ್ತಿಗೆಯನ್ನು ಹಾಕಲಾಯಿತು. ಕೆಲವಡೆ ಪೊಲೀಸರಿಗೂ ಮತ್ತು ರೈತರಿಗೂ ಮಾತಿನ ಚಕಮಕಿ ನಡೆಯಿತು. ಹಾಸನದಲ್ಲಿ ಪ್ರತಿಭಟನೆಕಾರರನ್ನು ಬಂಧಿಸಿ ಬಿಡಗಡೆ ಮಾಡಲಾಯಿತು.

ಕೇಂದ್ರ ಸರಕಾರ ರೈತರ ಮೇಲೆ ಲಾಠಿಪ್ರಹಾರ, ಅಶ್ರುವಾಯು ಪ್ರಯೋಗಿಸಿ ದೌರ್ಜನ್ಯವನ್ನು ನಡೆಸಿದ್ದಾರೆ. ಮೋದಿ ಸರಕಾರಕ್ಕೆ ರೈತರು ತಕ್ಕಪಾಠ ಕಲಿಸಲಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಎಚ್.ಆರ್. ನವೀನ್ ಕುಮಾರ್ ರವರು ಎಚ್ಚರಿಕೆಯನ್ನು ನೀಡಿದ್ದಾರೆ.

ರೈತರ ಜೊತೆ ಕೇಂದ್ರ ಸರಕಾರ ನಡೆದುಕೊಳ್ಳುತ್ತಿರುವ ಕ್ರಮವನ್ನು ಗಮನಿಸಿದರೆ, ದೆಹಲಿಯಲ್ಲಿ ಹೋರಾಟ ಕಾವು ಇನ್ನಷ್ಟು ಹೆಚ್ಚಾಗಬಹುದಾಗಿದೆ. ರೈತರ ಈ ಆಕ್ರೋಶಕ್ಕೆ ಎಚ್ಚೆತ್ತುಕೊಳ್ಳದ ಮೋದಿ ಸರಕಾರ ರೈತರನ್ನು ಬಂಧಿಸಲು ದೊಡ್ಡ ಕ್ರೀಡಾಂಗಣವನ್ನೆ ಸಜ್ಜುಗೊಳಿಸಿದೆ. ಸರಕಾರ ತನ್ನ ಹಠದಿಂದ ಹಿಂದೆ ಸರಿದು ರೈತರ ಮಾತಗಳನ್ನು ಆಲಿಸಬೇಕಿದೆ. ಅಪಾಯಕಾರಿ ಮಸೂದೆಗಳನ್ನು ವಾಪಸ್ಸ ಪಡೆಯಲು ಚಿಂತನೆಯನ್ನು ಮಾಡಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *