ಚಿತ್ರದುರ್ಗ: ‘ಕಟ್ಟಡ ಕಾರ್ಮಿಕರಿಗೆ ಸರ್ಕಾರ ಕಳೆದ ವಾರ ಘೋಷಿಸಿರುವ ₹ 525 ಕೋಟಿ ಪರಿಹಾರವೂ ಸರ್ಕಾರದಲ್ಲ. ಅದು ಕಟ್ಟಡ ಕಾರ್ಮಿಕರ ಜೀವ ವಿಮಾ ಹಣವಾಗಿದೆ. ಅದರಲ್ಲಿ ತಲಾ ₹ 3 ಸಾವಿರ ಸಹಾಯಧನ ಘೋಷಿಸಿರುವುದು ಎಷ್ಟು ಸರಿ’ ಎಂದು ಕೆಪಿಸಿಸಿ ಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಪ್ರಶ್ನಿಸಿದರು.
‘ಕಟ್ಟಡ ಕಾರ್ಮಿಕರು ಕಟ್ಟಿರುವ ವಿಮಾ ಕಂತಿನ ಮೊತ್ತದಲ್ಲೇ ಪರಿಹಾರ ನೀಡಲಾಗುತ್ತಿದೆಯೇ ಹೊರತು ಸರ್ಕಾರ ಪ್ರತ್ಯೇಕ ಅನುದಾನ ನೀಡಿಲ್ಲ. ರಾಜ್ಯದಲ್ಲಿ 75 ಲಕ್ಷಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರಿದ್ದಾರೆ. ನಿಜಕ್ಕೂ ಸರ್ಕಾರಕ್ಕೆ ಕಾಳಜಿ ಇದ್ದರೆ, ಸಂಘಟಿತ-ಅಸಂಘಟಿತ ಎನ್ನದೇ ಎಲ್ಲಾ ಕಾರ್ಮಿಕರಿಗೂ ₹ 10 ಸಾವಿರ ಪರಿಹಾರ ಘೋಷಿಸಬೇಕು’ ಎಂದು ಒತ್ತಾಯಿಸಿದರು.
‘ಕಾಂಗ್ರೆಸ್ ಕಾರ್ಯಕರ್ತರು ಪರಿಹಾರಕ್ಕಾಗಿ ಅಸಂಘಟಿತ ಕಾರ್ಮಿಕರ ಹೆಸರು ನೋಂದಾಯಿಸುವ ಕೆಲಸ ಈಗಾಗಲೇ ಆರಂಭಿಸಿದ್ದಾರೆ’ ಎಂದ ಅವರು, ‘ಲಸಿಕೆ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡಿದೆ ಎಂಬುದಕ್ಕೆ ಬಿಜೆಪಿ ನಾಯಕರು ಸೂಕ್ತ ದಾಖಲೆ ಒದಗಿಸಬೇಕು’ ಎಂದು ಸವಾಲು ಹಾಕಿದರು.
ದೇಶದ ಎಲ್ಲರಿಗೂ ಉಚಿತವಾಗಿ ಲಸಿಕೆ ವಿತರಿಸಬೇಕು. ಲಸಿಕಾ ಕೇಂದ್ರಗಳ ಸಂಖ್ಯೆ ಹೆಚ್ಚಿಸುವ ಮೂಲಕ ಜನಜಂಗುಳಿ ನಿರ್ಮಾಣ ಆಗುವುದನ್ನು ತಪ್ಪಿಸಿ, ಈ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಒತ್ತಾಯಿಸಿದರು.
‘ಜಿಲ್ಲೆಗೆ ಉಸ್ತುವಾರಿ ಸಚಿವರಾಗಿರುವ ಬಿ. ಶ್ರೀರಾಮುಲು ಅವರು ಕೋವಿಡ್ ಪರಿಸ್ಥಿತಿಯಲ್ಲಿ ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿದ್ದು, ಕೆಲಸ ಮಾಡದೆಯೇ ಅತಿಥಿಗಳಂತೆ ಬಂದು ಹೋಗುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್‌ಬಾಬು ಟೀಕಿಸಿದರು.
ಮಾಜಿ ಶಾಸಕ ಡಿ. ಸುಧಾಕರ್, ಮುಖಂಡರಾದ ಹಾಲೇಶಪ್ಪ, ಭೀಮಸಮುದ್ರದ ಜಿ.ಎಸ್. ಮಂಜುನಾಥ್, ಎನ್.ಡಿ. ಕುಮಾರ್, ಸಂಪತ್‌ಕುಮಾರ್, ಮಹಡಿ ಶಿವಮೂರ್ತಿ ಇದ್ದರು.