– ಅನುದಾನ ಬಿಡುಗಡೆ ಸಂಬಂಧಿತ ಚರ್ಚೆ: ಸಿಎಂ ಕಚೇರಿ, ಎಚ್‌ಡಿಕೆ ಸ್ಪಷ್ಟನೆ
ಬೆಂಗಳೂರು: ಮುಂಗಾರು ಅಧಿವೇಶನದ ವೇಳೆ ಬಿಜೆಪಿ ಅತೃಪ್ತರನ್ನು ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ಜೆಡಿಎಸ್-ಬಿಜೆಪಿ ಜೊತೆಗೂಡಿ ಮತ್ತೆ ಸರ್ಕಾರ ರಚಿಸಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ.
ಇಬ್ಬರೂ ನಾಯಕರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಬಳಿಕ ಕುಮಾರಸ್ವಾಮಿ ಸುದ್ದಿಗಾರರ ಜತೆ ಮಾತನಾಡಿ, ಮಳೆಯಿಂದ ದಾಸರಹಳ್ಳಿ ಕ್ಷೇತ್ರದಲ್ಲಿ ಭಾರಿ ಹಾನಿ ಆಗಿರುವುದರಿಂದ ಪರಿಹಾರ ಒದಗಿಸುವುದೂ ಸೇರಿ ವಿವಿಧ ವಿಷಯ ಕುರಿತು ಚರ್ಚಿಸಲು ಬಂದಿದ್ದಾಗಿ ತಿಳಿಸಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮಂಜುನಾಥ್ ಅವರೂ ಕುಮಾರಸ್ವಾಮಿ ಜತೆಗಿದ್ದರು. ನಗರದಲ್ಲಿ ಮಂಜುನಾಥ್ ಜೆಡಿಎಸ್‌ನಿಂದ ಗೆದ್ದಿರುವ ಏಕೈಕ ಶಾಸಕ.
ಈ ಬಗ್ಗೆ ಸಿಎಂ ಕಚೇರಿ ಮೂಲಗಳೂ ಕೂಡ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ತಕ್ಷಣವೇ ಆಗಬೇಕಾಗಿರುವ ಕೆಲಸಗಳು ಮತ್ತು ರಾಮನಗರ ಕ್ಷೇತ್ರಕ್ಕೆ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಮಾತುಕತೆಗೆ ಬಂದಿದ್ದರು ಎಂದು ತಿಳಸಿವೆ.
ಮೈತ್ರಿ ಸರ್ಕಾರ ಪತನವಾದ ಬಳಿಕ ಇದೇ ಮೊದಲ ಬಾರಿಗೆ ಇಬ್ಬರ ಭೇಟಿ ಆಗಿದೆ. ಮುಂಗಾರು ಅಧಿವೇಶನದ ವೇಳೆ ಬಿಜೆಪಿ ಅತೃಪ್ತರನ್ನು ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ಜೆಡಿಎಸ್-ಬಿಜೆಪಿ ಜೊತೆಗೂಡಿ ಮತ್ತೆ ಸರ್ಕಾರ ರಚಿಸಲಿದ್ದಾರೆ ಎಂಬ ಊಹಾಪೋಹಗಳು ಇರುವುದರಿಂದ ಇಬ್ಬರ ಭೇಟಿ ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ.