ಡಾ. ಟಿ. ಆರ್. ಚಂದ್ರಶೇಖರ
ಇಂದು ಯಾವುದನ್ನು ತಪ್ಪಾಗಿ ಫ್ರೀಬಿಸ್ ಎಂದು ಕರೆಯಲಾಗುತ್ತಿದೆಯೋ ಅವುಗಳ ಕಾರ್ಯಕ್ರಮಗಳ ಮೂಲಕವೇ ಇಂದು ದೇಶದ ಅಭಿವೃದ್ಧಿ ಭೂಪಟದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಮುಂಚೂಣಿಯಲ್ಲಿವೆ. ಸಾಮಾಜಿಕ ನ್ಯಾಯ ಎಂಬ ನುಡಿಯನ್ನು ಬಳಸಿ ಈ ರಾಜ್ಯಗಳನ್ನು ಹಣಿಯಲು ಸಾಧ್ಯವಾಗದ ಪ್ರಧಾನಿ ‘ಫ್ರಿಬೀಸ್’ ಹೆಸರಿನಲ್ಲಿ ಹಳಿಯುತ್ತಿದ್ದಾರೆ. ಅಭಿವೃದ್ಧಿ ನೀತಿಗಳನ್ನು ರೂಪಿಸಿಕೊಳ್ಳುವ ಅಧಿಕಾರ ರಾಜ್ಯಗಳಿಗಿದೆ. ಪ್ರಧಾನಿ ಯಾವುದನ್ನು ಫ್ರೀಬಿಸ್ ಎಂದು ಕರೆಯುತ್ತಿದ್ದರೋ ಅವುಗಳ ಬಗ್ಗೆ ನೀತಿ ರೂಪಿಸಿಕೊಳ್ಳುವ ಅಧಿಕಾರ ರಾಜ್ಯಗಳಿಗಿದೆ. ಇದನ್ನು ಸಂಸತ್ತಾಗಲಿ, ನ್ಯಾಯಾಲಯಗಳಾಗಲಿ ಅಥವಾ ರಿಸರ್ವ್ ಬ್ಯಾಂಕಾಗಲಿ ರದ್ದುಪಡಿಸುವುದು ಸಾಧ್ಯವಿಲ್ಲ. ಮತದಾರರು ಅಂತಿಮವಾಗಿ ಯಾವುದು ಫ್ರಿಬೀಸ್ ಯಾವುದು ಕಲ್ಯಾಣ ಕಾರ್ಯಕ್ರಮ ಎಂಬುದನ್ನು ನಿರ್ಧರಿಸುತ್ತಾರೆ. ಅವರ ಆಯ್ಕೆಯ ಸ್ವಾತಂತ್ರವನ್ನು ಫ್ರೀಬೀಸ್ ಎಂದು ಬಲಿಕೊಡುವುದು ಅವರಿಗೆ ಮಾಡುವ ಅವಮಾನ.
ಸದಾ ಜನರ ಮನಸ್ಸನ್ನು ನಿಜವಾಗಿ ಅವರನ್ನು ಕಾಡುತ್ತಿರುವ ಕ್ರೂರ ಸಮಸ್ಯೆಗಳಾದ ಬೆಲೆ ಏರಿಕೆ, ಅಪೌಷ್ಟಿಕತೆ, ನಿರುದ್ಯೋಗ, ಅಸಮಾನತೆ, ಧಾರ್ಮಿಕ ದೌರ್ಜನ್ಯ — ಮುಂತಾದವುಗಳಿಂದ ಬೇರೆಡೆಗೆ ಸೆಳೆಯುವುದು ನಮ್ಮ ಪ್ರಧಾನಮಂತ್ರಿ ಅವರ ಬಹುದೊಡ್ಡ ಗುಣವಾಗಿದೆ. ಏಕೆಂದರೆ ಅವರಿಗೆ ರೆಟೆರಿಕ್‌ನಲ್ಲಿ ಹೆಚ್ಚು ನಂಬಿಕೆಯಿದೆ. ಸಮಸ್ಯೆಯ ಆಳ-ಅಗಲಗಳನ್ನು ಪರಿಶೀಲಿಸುವ ವ್ಯವಧಾನ ಅವರಿಗಿಲ್ಲ. ಇಂದು ದೇಶದಲ್ಲಿನ ರಾಜಕಾರಣಿಗಳು ನಡೆಸುತ್ತಿರುವ ಮತ್ತು ‘ಸುಳ್ಳುಬುರುಕ’ ಮಾಧ್ಯಮಗಳಲ್ಲಿ ನಡೆಯುತ್ತಿರುವ ಫ್ರೀಬೀಸ್ ಅಥವಾ ಪುಕ್ಕಟೆ – ಬಿಟ್ಟಿ ಅಥವಾ ಪ್ರಧಾನಮಂತ್ರಿಗಳ ಪರಿಭಾಷೆಯ ‘ರೆವ್ಡಿ ಸಂಸ್ಕೃತಿ’ ಕುರಿತ ಚರ್ಚೆಯನ್ನು ಇದಕ್ಕೆ ಸಾಕ್ಷಿಯಾಗಿ ನೋಡಬಹುದು. ಅವರಿಗಾಗಲಿ ಅಥವಾ ಇದರ ಬಗ್ಗೆ ವಿಚಾರಣೆ ನಡೆಸುತ್ತಿರುವ ಸರ್ವೋಚ್ಛ ನ್ಯಾಯಾಲಯಕ್ಕಾಗಲಿ, ಇದರ ಬಗ್ಗೆ ಆತಂಕವನ್ನು ವ್ಯಕ್ತಪಡಿಸುತ್ತಿರುವ ರಿಸರ್ವ್ ಬ್ಯಾಂಕಿಗಾಗಲಿ ‘ಫ್ರೀಬೀಸ್’ ಎಂದರೇನು ಮತ್ತು ಇವು ಜನಕಲ್ಯಾಣ ಕಾರ್ಯಕ್ರಮಗಳಿಂದ ಹೇಗೆ ಭಿನ್ನ ಎಂಬುದನ್ನು ವಿವರಿಸುವುದು ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರಧಾನಮಂತ್ರಿ ಏನು ಹೇಳಿದ್ದಾರೆ ಎಂಬುದನ್ನು ಮೊದಲು ನೋಡೋಣ. ಅವರು ಹೇಳುತ್ತಾರೆ ’ಮತಗಳನ್ನು ಪಡೆಯುವುದಕ್ಕಾಗಿ ಕೆಲವು ರಾಜ್ಯ ಸರ್ಕಾರಗಳು ರೇವ್ಡಿ ಸಂಸ್ಕೃತಿಯಲ್ಲಿ ಮುಳುಗಿಹೋಗಿವೆ. ಆದರೆ ಡಬಲ್‌ಎಂಜಿನ್ ಸರ್ಕಾರ ಎಕ್ಸ್‌ಪ್ರೆಸ್ ಹೈವೇಗಳು, ರೈಲು ಮಾರ್ಗಗಳ ನಿರ್ಮಾಣದಲ್ಲಿ ನಿರತವಾಗಿದೆ’ ಎಂದು ಹೇಳಿ ಮುಂದುವರಿದು ಅವರು ‘ಉಚಿತವಾಗಿ ನೀಡುವ ಕಾಣಿಕೆ ಸಂಸ್ಕೃತಿಯು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ’ ಎಂದು ನಾಡಿನ ಯುವಜನರಿಗೆ ಎಚ್ಚರಿಕೆ ನೀಡಿದ್ದಾರೆ.
ನ್ಯಾಯಾಲಯದ ಕಟಕಟೆಯಲ್ಲಿ ಚರ್ಚೆ: ಬಿಜೆಪಿಯ ಮುಖಂಡರೊಬ್ಬರು ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೋಡಿ ‘ಅವೈಚಾರಿಕ ಉಚಿತ ಕೊಡುಗೆ’ಗಳ ಅಪಾಯದ ಬಗ್ಗೆ ನ್ಯಾಯಾಲಯದ ಗಮನ ಸೆಳೆದು, ಇದು ಒಂದು ರೀತಿಯಲ್ಲಿ ಚುನಾವಣೆಗಳಲ್ಲಿ ಮತ ಪಡೆಯಲು ನಡೆಸುವ ‘ಭ್ರಷ್ಠಾಚಾರ’ ಎಂದು ಬಣ್ಣಿಸಿದ್ದಾರೆ. ಇದರಲ್ಲಿ ನಾನೇನು ಕಡಿಮೆಯೆಂದು ರಿಸರ್ವ್ ಬ್ಯಾಂಕು ‘ಉಚಿತವಾಗಿ ವಿದ್ಯುತ್, ಸೈಕಲ್ಲುಗಳು, ಕುಡಿಯುವ ನೀರು, ಸಾರ್ವಜನಿಕ ಸಾರಿಗೆ ಮುಂತಾದವುಗಳನ್ನು ನೀಡುವ ಕಾರ್ಯಕ್ರಮಗಳು ಖಾಸಗಿ ಬಂಡವಾಳ ಹೂಡಿಕೆಗೆ ಕಂಟಕವಾಗಿ ಪರಿಣಮಿಸಿವೆ’ ಎಂದು ಫ್ರೀಬೀಸ್ ವಿರುದ್ಧದ ತನ್ನ ಆತಂಕವನ್ನು ವ್ಯಕ್ತಪಡಿಸಿದೆ. ಅನೇಕರು ಉಚಿತ ಕೊಡುಗೆಗಳು ‘ಕಾರ್ಮಿಕರನ್ನು ಸೋಮಾರಿಗಳನ್ನಾಗಿ ಮಾಡಿಬಿಡುತ್ತವೆ’ ಎಂದು ತಮ್ಮ ಘನವಾದ ವಿಚಾರವನ್ನು ಮಂಡಿಸುತ್ತಿದ್ದಾರೆ. ಅನ್ನ ಭಾಗ್ಯ ಕಾರ್ಯಕ್ರಮ 2014ರಲ್ಲಿ ಜಾರಿಗೆ ಬಂದಾಗ ಕರ್ನಾಟಕದ ಒಬ್ಬ ಉದ್ಯಮಿ ‘ತೆರಿಗೆದಾರರ ಹಣದ ಲೂಟಿ’ ಎಂದು ಹೇಳಿದ್ದರು. ಪ್ರಧಾನಮಂತ್ರಿ ಅವರನ್ನು ಸೇರಿಸಿಕೊಂಡು ಇವರೆಲ್ಲರ ಪ್ರಕಾರ ‘ಫ್ರೀಬೀಸ್’ ಕಾರ್ಯಕ್ರಮವನ್ನು ನಿಲ್ಲಿಸಬೇಕು. ಫ್ರಿಬೀಸ್‌ಗಳು ಅಭಿವೃದ್ಧಿ ಸಾಧನಗಳಲ್ಲ ಎಂಬುದೇ ಇಂದು ದಟ್ಟವಾಗಿ ಕೇಳಿಬರುತ್ತಿರುವ ಅಭಿಪ್ರಾಯವಾಗಿದೆ.
ಫ್ರೀಬಿಸ್‌ಗಳಲ್ಲಿ ಕೆಲವರು ಭಿನ್ನತೆಯನ್ನು ಮಾಡುತ್ತಾರೆ. ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ, ಕುಡಿಯುವ ನೀರು ಮುಂತಾದವುಗಳು ‘ಜನಕಲ್ಯಾಣ ಕಾರ್ಯಕ್ರಮ’ಗಳಾದರೆ ಟಿ ವಿ, ಲ್ಯಾಪ್‌ಟಾಪುಗಳು, ಗ್ರೈಡರ್ ಗಳು, ವಿದ್ಯುತ್, ಮಹಿಳೆಯರಿಗೆ ಸಾರ್ವಜನಿಕ ಸಾರಿಗೆ, ಅಡುಗೆ ಅನಿಲ ಮುಂತಾದವುಗಳನ್ನು ಉಚಿತವಾಗಿ, ಅಂದರೆ ಪುಕ್ಕಟೆಯಾಗಿ ನೀಡುವುದನ್ನು ಫ್ರೀಬೀಸ್ ಎಂದು ವರ್ಗೀಕರಣ ಮಾಡುತ್ತಾರೆ. ನಿಜವಾಗಿ ಜನಕಲ್ಯಾಣ ಕಾರ್ಯಕ್ರಮಗಳಾವುವು ಮತ್ತು ಫ್ರೀಬಿಸ್‌ಗಳು ಯಾವುದು ಎಂಬುದನ್ನು ಗುರುತಿಸುವುದು ಸುಲಭವಲ್ಲ. ಉದಾ: ವಿದ್ಯುತ್ತು. ಕರ್ನಾಟಕದಲ್ಲಿ ಪ. ಜಾ. ಮತ್ತು ಪ. ಪಂ.ಗಳ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 75 ಯುನಿಟ್ ವಿದ್ಯುತ್ತ ಉಚಿತವಾಗಿ ನೀಡಲಾಗುತ್ತಿದೆ. ಪಿ.ಎಮ್. ಕಿಸಾನ್ ಕಾರ್ಯಕ್ರಮಕ್ಕೆ (ಇದು ಪ್ರಧಾನಮಂತ್ರಿಗಳ ಕಾರ್ಯಕ್ರಮ) 2022-23ರಲ್ಲಿ ಕರ್ನಾಟಕ ಸರ್ಕಾರ ನೀಡಲಾಗುತ್ತಿರುವ ಅನುದಾನ ರೂ.2000 ಕೋಟಿ. ಈ ಕಾರ್ಯಕ್ರಮಗಳನ್ನು ಯಾವ ಆಧಾರದಲ್ಲಿ ‘ಫ್ರೀಬೀಸ್’ ಕರೆಯುವುದು? ಗ್ರಾಮೀಣ ಪ್ರದೇಶದ ಗುಡಿಸಲು ವಾಸಿಗಳಿಗೆ ಉಚಿತವಾಗಿ ವಿದ್ಯುತ್ತ್ ನೀಡುವುದಕ್ಕೂ ಮತ್ತು ಜನಸಂಖ್ಯೆಯ ಬೆಳವಣಿಗೆಯ ನಿಯಂತ್ರಣಕ್ಕೂ ನಡುವೆ ಸಂಬಂದವಿದೆ ಎನ್ನುವ ಒಂದು ಲಘುಹಾಸ್ಯ ಒಂದು ಕಾಲಕ್ಕೆ ಕೇಳಿಬರುತ್ತಿತ್ತು. ಇದರಲ್ಲಿ ಸತ್ಯಾಂಶವಿಲ್ಲ ಎಂದು ಹೇಳಲು ಬರುವುದಿಲ್ಲ. ಕರ್ನಾಟಕ ಸರ್ಕಾರ ಆಹಾರ ಭದ್ರತೆಗಾಗಿ 2022-23ರಲ್ಲಿ ನೀಡಿರುವ ಅನುದಾನ ರೂ. 2801 ಕೋಟಿ. ಒಟ್ಟು ಬಜೆಟ್ ವೆಚ್ಚದಲ್ಲಿ ಇದರ ಪ್ರಮಾಣ ಶೇ. 1.12. ಇದಕ್ಕೂ ದಿನಗೂಲಿ ಕಾರ್ಮಿಕರ ದುಡಿಮೆಯ ಕಾರ್ಯಕ್ಷಮತೆಗೂ ನಡುವೆ ಸಂಬಂಧವಿದೆ. ದಿನಗೂಲಿ ದುಡಿಮೆಗಾರರ ಆಹಾರ ಭದ್ರತೆಯು ಅವರ ಉತ್ಪಾದಕತೆಯನ್ನು ಹೆಚ್ಚಿಸಿದರೆ ಅದರಿಂದ ಅವರಿಗೆ ಹಾಗೂ ಆರ್ಥಿಕತೆಗೆ ಉಪಯೋಗವಾಗುತ್ತದೆ. ಇದನ್ನು ‘ರೇವ್ಡಿ ಸಂಸ್ಕೃತಿ’ ಎಂದು ಕರೆಯುವುದು ಎಷ್ಟರ ಮಟ್ಟಿಗೆ ಸರಿ!
ಉಚಿತ ಕಾಣಿಕೆ ಸಂಸ್ಕೃತಿ(ರೇವ್ಡಿ)ಬಗ್ಗೆ ಮಾತನಾಡುವ ಮನುಷ್ಯ ಕರ್ನಾಟಕದ ಶಾಸಕರುಗಳಿಗೆ ನೀಡುವ ಸಂಬಳ ಮತ್ತು ಭತ್ಯೆಗಳು ಬಗ್ಗೆ ಮಾತನಾಡುವುದಿಲ್ಲ. ಇದು ಫ್ರೀಬಿಸುಗಳಲ್ಲವೆ?
ಮಾಸಿಕ ಸಂಬಳ; ರೂ.25000, ಮಾಸಿಕ ಸಾದಿಲ್ವಾರು; ರೂ.40000 ಅಂಚೆ ವೆಚ್ಚ; ರೂ.5000. ಆಪ್ತ ಸಹಾಯಕ ಸಂಬಳ: ರೂ.10000. ಸಾರಿಗೆ ವೆಚ್ಚ: ರೂ.40000. ದಿನವಹಿ ಸಭಾ ಭತ್ಯೆ; ರೂ. 2000. ವಾಹನ ಖರೀದಿಗೆ ಶೇ. 7 ರ ಬಡ್ಡಿಯಲ್ಲಿ ರೂ.15 ಲಕ್ಷ ಸಾಲ — ಇತ್ಯಾದಿ ಇತ್ಯಾದಿ.
ಈ ಪಾವತಿಗಳು ಜನಕಲ್ಯಾಣ ಕಾರ್ಯಕ್ರಮಗಳಲ್ಲ. ಇವುಗಳು ಫ್ರಿಬೀಸ್ ಅಲ್ಲವೆ! ರಾಜ್ಯದ 224 ಶಾಸಕರಿಗೆ ಇಷ್ಟೆಲ್ಲ ಸವಲತ್ತುಗಳನ್ನು ನೀಡಲಾಗುತ್ತಿದೆ. ಅದೇ ಮನ್‌ರೇಗದಲ್ಲಿ ಕೂಲಿಕಾರರಿಗೆ ದಿನಗೂಲಿ ರೂ.280. ಅದೂ ಕೂಡ ವಾರ್ಷಿಕ ದಿನಗಳ ಮಿತಿ 100 ದಿನಗಳು. ಕನಾಟಕದಲ್ಲಿ 2011ರ ಜನಗಣತಿ ಪ್ರಕಾರ 71 ಲಕ್ಷ ಭೂರಹಿತ ದಿನಗೂಲಿ ಕಾರ್ಮಿಕರಿದ್ದಾರೆ. ಅರ್ಥಶಾಸ್ತ್ರದ ಒಂದು ನಿಯಮದ ಪ್ರಕಾರ ದುಡಿಮೆಗಾರರೊಬ್ಬರು ಉತ್ಪಾದನೆಗೆ ಎಷ್ಟು ಕಾಣಿಕೆ ಸಲ್ಲಿಸುತ್ತಾರೋ ಅದಕ್ಕೆ ಸಮನಾಗಿ ಅವರಿಗೆ ಕೂಲಿಯಿರಬೇಕು. ಆದರೆ ನಮ್ಮ ಸಮಾಜದ ಸಂದರ್ಭದಲ್ಲಿ ಸರ್ಕಾರವೇ ಇದನ್ನು ಪಾಲಿಸುತ್ತಿಲ್ಲ. ಉದಾ: ಸರ್ಕಾರಿ ಇಲಾಖೆಯಲ್ಲಿ ಖಾಯಮಾಗಿ ಕೆಲಸ ಮಾಡುವ ಒಬ್ಬರು ಕಚೇರಿ ಸಹಾಯಕರಿಗೆ ಎಷ್ಟು ಸಂಬಳ ನೀಡಲಾಗುತ್ತಿದೆಯೋ ಅದಕ್ಕಿಂತ ಕಡಿಮೆ ಸಂಬಳವನ್ನು ಅದೇ ಕೆಲಸವನ್ನು ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೀಡುತ್ತಿಲ್ಲ. ಇದರಿಂದ ಕಾರ್ಮಿಕರ ದುಡಿಮೆಗೆ ಸಮನಾದ ಪ್ರತಿಫಲ(ಕೂಲಿ/ಸಂಬಳ)ದೊರೆಯುತ್ತಿಲ್ಲ. ಈ ಕೊರತೆಯನ್ನು ಅನ್ನಭಾಗ್ಯದ ಮೂಲಕ, ಉಚಿತ ವಿದ್ಯುತ್ತಿನ ಮೂಲಕ, ಉಚಿತ ಕುಡಿಯುವ ನೀರಿನ ಮೂಲಕ ನೀಡ ಬೇಕಾದುದು ಸಾಮಾಜಿಕ ನ್ಯಾಯ.
ರಾಜ್ಯ ಸರ್ಕಾರಗಳ ಅಧಿಕಾರದ ಹಗರಣ
ಫ್ರಿಬೀಸ್ ಕುರಿತಂತೆ ನಡೆಯುತ್ತಿರುವ ಚರ್ಚೆಯ ಮೂಲದಲ್ಲಿನ ಕಾರ್ಯತಂತ್ರವೆಂದರೆ ಅಭಿವೃದ್ಧಿ ನೀತಿ-ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವ ರಾಜ್ಯ ಸರ್ಕಾರಗಳ ಸಂವಿಧಾನದತ್ತ ಅಧಿಕಾರವನ್ನು ಕಬಳಿಸುವುದಾಗಿದೆ. ಅದು ಕಲ್ಯಾಣ ಕಾರ್ಯಕ್ರಮವಾಗಿರಲಿ ಅಥವಾ ಪ್ರಧಾನಮಂತ್ರಿ ಹೇಳುತ್ತಿರುವ ಫ್ರೀಬೀಸುಗಳಾಗಿರಲಿ ಅವುಗಳ ಬಗ್ಗೆ ನೀತಿ ರೂಪಿಸಿಕೊಳ್ಳುವುದು ರಾಜ್ಯ ಸರ್ಕಾರಗಳ ಸ್ವಾಯತ್ತ ಅಧಿಕಾರ. ಇದನ್ನು ಸಂವಿಧಾನ ಅವುಗಳಿಗೆ ನೀಡಿದೆ. ಈಗಾಗಲೆ ವೈದ್ಯಕೀಯ ಪರೀಕ್ಷೆಗೆ ರಾಷ್ಟ್ರಮಟ್ಟದ ನೀಟ್ ಪರೀಕ್ಷೆ, ಜಿಎಸ್‌ಟಿ, ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆಗೆ ರಾಷ್ಟ್ರಮಟ್ಟದ ಸಿ.ಯು.ಈ.ಟಿ, ರಾಜ್ಯಪಟ್ಟಿಯಲ್ಲಿರುವ ಕೃಷಿ ಬಗ್ಗೆ ಕಾಯಿದೆಗಳನ್ನು ರೂಪಿಸುವುದು ಮುಂತಾದ ವಿಷಯಗಳಲ್ಲಿ ರಾಜ್ಯಗಳ ಸಂವಿಧಾನದತ್ತ ಅಧಿಕಾರದ ಮೇಲೆ ಒಕ್ಕೂಟ ಸರ್ಕಾರದ ದಾಳಿ ನಡೆದಿದೆ. ಈ ಎಲ್ಲ ದಾಳಿಯ ಮೂಲದಲ್ಲಿರುವುದು ರಾಜ್ಯ ಸರ್ಕಾರಗಳ ಸಾಮಾಜಿಕ ನ್ಯಾಯ ಪ್ರಣೀತ ಕಾರ್ಯಕ್ರಮಗಳನ್ನು ಹಣಿಯುವುದು, ರಾಜ್ಯಮಟ್ಟದ ಭಾಷೆ ಮತ್ತು ಪಠ್ಯಕ್ರಮದಲ್ಲಿ ಕಲಿತ ಪ.ಜಾ., ಪ.ಪಂ. ಒಬಿಸಿ ಮತ್ತು ಅಲ್ಪಸಂಖ್ಯಾತ ಮಕ್ಕಳ ಭವಿಷ್ಯವನ್ನು ಶಿಥಿಲಗೊಳಿಸುವುದು ಮುಂತಾದ ಒಕ್ಕೂಟ ತತ್ವ ವಿರೋಧಿ ಪ್ರಣಾಳಿಕೆಯಾಗಿದೆ.
ದಕ್ಷಿಣ ಭಾರತದ ರಾಜ್ಯಗಳ ಸಾಮಾಜಿಕ ನ್ಯಾಯ ಪ್ರಣಾಳಿಕೆಯನ್ನು ಹಳಿಯುವುದು – ಹಣಿಯುವುದು ಪ್ರಧಾನಮಂತ್ರಿ ಅವರ ಪ್ರೀಬೀಸ್ ರಾಜಕಾರಣದ ಮೂಲದಲ್ಲಿರುವ ಕುತಂತ್ರವಾಗಿದೆ. ಪ್ರಧಾನಮಂತ್ರಿ ಅವರು ಗಮನಿಸಬೇಕಾದ ಸಂಗತಿಯೆಂದರೆ ದೇಶದ ಒಟ್ಟು ಜನಸಂಖ್ಯೆಯಲ್ಲಿ ದಕ್ಷಿಣ ಭಾರತದ ಆರು ರಾಜ್ಯಗಳ ಪ್ರಮಾಣ ಶೇ. 20.72. ಈ ರಾಜ್ಯಗಳು ದೇಶದ ವರಮಾನಕ್ಕೆ 2019-20ರಲ್ಲಿ ನೀಡಿದ ಕಾಣಿಕೆ ರೂ.56.12 ಲಕ್ಷ ಕೋಟಿ. ಆದರೆ ದೇಶದ ಜನಸಂಖ್ಯೆಯಲ್ಲಿ ಶೇ. 39.46 ಪಾಲು ಪಡೆದಿರುವ ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಜಾರ್ಖಂಡ್ ರಾಜ್ಯಗಳು ದೇಶದ ವರಮಾನಕ್ಕೆ 2019-20ರಲ್ಲಿ ನೀಡಿದ ಕಾಣಿಕೆ ರೂ.48.86 ಲಕ್ಷ ಕೋಟಿ. ಇಂದು ಯಾವುದನ್ನು ತಪ್ಪಾಗಿ ಫ್ರೀಬಿಸ್ ಎಂದು ಕರೆಯಲಾಗುತ್ತಿದೆಯೋ ಅವುಗಳ ಕಾರ್ಯಕ್ರಮಗಳ ಮೂಲಕವೇ ಇಂದು ದೇಶದ ಅಭಿವೃದ್ಧಿ ಭೂಪಟದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಮುಂಚೂಣಿಯಲ್ಲಿವೆ. ಸಾಮಾಜಿಕ ನ್ಯಾಯ ಎಂಬ ನುಡಿಯನ್ನು ಬಳಸಿ ಈ ರಾಜ್ಯಗಳನ್ನು ಹಣಿಯಲು ಸಾಧ್ಯವಾಗದ ಪ್ರಧಾನಿ ‘ಫ್ರಿಬೀಸ್’ ಹೆಸರಿನಲ್ಲಿ ಹಳಿಯುತ್ತಿದ್ದಾರೆ.
ಅಭಿವೃದ್ಧಿ ನೀತಿಗಳನ್ನು ರೂಪಿಸಿಕೊಳ್ಳುವ ಅಧಿಕಾರ ರಾಜ್ಯಗಳಿಗಿದೆ. ಪ್ರಧಾನಿ ಯಾವುದನ್ನು ಫ್ರೀಬಿಸ್ ಎಂದು ಕರೆಯುತ್ತಿದ್ದರೋ ಅವುಗಳ ಬಗ್ಗೆ ನೀತಿ ರೂಪಿಸಿಕೊಳ್ಳುವ ಅಧಿಕಾರ ರಾಜ್ಯಗಳಿಗಿದೆ. ಇದನ್ನು ಸಂಸತ್ತಾಗಲಿ, ನ್ಯಾಯಾಲಯಗಳಾಗಲಿ ಅಥವಾ ರಿಸರ್ವ್ ಬ್ಯಾಂಕಾಗಲಿ ರದ್ದುಪಡಿಸುವುದು ಸಾಧ್ಯವಿಲ್ಲ. ಮತದಾರರು ಅಂತಿಮವಾಗಿ ಯಾವುದು ಫ್ರಿಬೀಸ್ ಯಾವುದು ಕಲ್ಯಾಣ ಕಾರ್ಯಕ್ರಮ ಎಂಬುದನ್ನು ನಿರ್ಧರಿಸುತ್ತಾರೆ. ಅವರ ಆಯ್ಕೆಯ ಸ್ವಾತಂತ್ರವನ್ನು ಫ್ರೀಬೀಸ್ ಎಂದು ಬಲಿಕೊಡುವುದು ಅವರಿಗೆ ಮಾಡುವ ಅವಮಾನ. ಈ ಬಗ್ಗೆ ನಾವು ಪ್ರಾಂಜಲ ಮನಸ್ಸಿನಿಂತ ಯೋಚಿಸುವ ಅಗತ್ಯವಿದೆ.