ವಸಂತರಾಜ ಎನ್.ಕೆ
ಬಹು–ನಿರೀಕ್ಷಿತ ಇರಾನಿನ ಮೇಲಿನ ಯು.ಎಸ್–ಇಸ್ರೇಲಿ ಜಂಟಿ ಯುದ್ಧ ಆರಂಭವಾಗಿ ಮೂರು ದಿನಗಳು ಕಳೆದಿವೆ. ಯುದ್ಧದ ಮೂರು ದಿನಗಳ ನಂತರ (ಮಾರ್ಚ್ 2 ಮಧ್ಯರಾತ್ರಿ ಹೊತ್ತಿಗೆ) ಈ ಯುದ್ಧದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ – ಎರಡು ಬಾರಿಯೂ ಜಂಟಿ ಯುದ್ಧ ಆರಂಭಿಸಿದ ಯು.ಎಸ್ ಮತ್ತು ಇಸ್ರೆಲ್ ಗಳ ಉದ್ದೇಶಗಳೇನು? ಈ ಯುದ್ಧ ಕಳೆದ ಜೂನ್ 2025ರ 12 ದಿನಗಳ ಯುದ್ಧದ ಮುಂದುವರಿಕೆಯೆ? ಈ ಯುದ್ಧಗಳ ನಡುವೆಯೂ ಮೊದಲೂ ನಡೆಸಿದ ಶಾಂತಿ ಮಾತುಕತೆಗಳು ಬರಿಯ ನಾಟಕವೇ? ಜೂನ್ 2025ರಲ್ಲಿ ಇಸ್ರೇಲ್ ಯುದ್ಧ–ವಿರಾಮ ಬೇಡುವಂತೆ ಮಾಡಿದ ಇರಾನ್ ಈ ಬಾರಿ ಅದನ್ನು ಮತ್ತೆ ಮಾಡಬಲ್ಲುದೆ? ಎರಡೂ ಕಡೆಯವರೂ ಹಿಂದಿನ ಯುದ್ಧದಿಂದ ಕಲಿತ ಪಾಠದಿಂದಾಗಿ ದೀರ್ಘ ಯುದ್ಧಕ್ಕೆ ತಯಾರಾಗಿದ್ದಾರಾ? ಎಷ್ಟು ಕಾಲ ಯುದ್ಧ ನಡೆಯಬಹುದು? ಜಾಗತಿಕ ಭೌಗೋಳಿಕ–ರಾಜಕೀಯ ಮತ್ತು ಆರ್ಥಿಕದ ಮೇಲೆ ಏನು ಪರಿಣಾಮ ಬೀರಬಹುದು?
ಯು.ಎಸ್ ಮತ್ತು ಇಸ್ರೆಲ್ ಗಳ ಯುದ್ಧ ಉದ್ದೇಶಗಳೇನು?
ಇಸ್ರೇಲ್ ಮತ್ತು ಯು.ಎಸ್ ಉದ್ದೇಶಗಳು ಈ ಯುದ್ಧದ ಬಗ್ಗೆ ಒಂದೇ ಅಲ್ಲ. ಇಸ್ರೇಲ್ ನ ಉದ್ದೇಶ ಬಹಳ ಸ್ಪಷ್ಟ ದೂರಗಾಮಿಯದ್ದು. ನೆರೆಯ ಲೆಬನಾನ್, ಸಿರಿಯಾ, ಜೋರ್ಡಾನ್, ಇರಾಕ್ ಮತ್ತು ಪಶ್ಚಿಮದಲ್ಲಿ ಈಜಿಪ್ಟ್ ಮತ್ತು ಪೂರ್ವದಲ್ಲಿ ಸೌದಿ ಅರೇಬಿಯಾದ ಕೆಲವು ಭಾಗಗಳು ಸೇರಿದಂತೆ “ಮಹಾ ಇಸ್ರೇಲ್” ಸ್ಥಾಪನೆ ಝೀಯೋನಿಸ್ಟರ (ಜ್ಯೂ ಮೂಲಭೂತವಾದಿಗಳ) ಮಹಾ ಕನಸು. ಅಕ್ಟೋಬರ್ 20223 ರ ಹಾಮಾಸ್ ದಾಳಿಯ ನಂತರ ಉಂಟಾದ ಪರಿಸ್ಥಿತಿಯಲ್ಲಿ ಅದನ್ನು ನನಸು ಮಾಡುವುದಕ್ಕೆ ಸುವರ್ಣಾವಕಾಶ ಒದಗಿದೆ ಎಂಬುದು ನೆತನ್ಯಾಹು ಧೋರಣೆ. ಯು.ಎಸ್ ಸಕ್ರಿಯ ಪಾತ್ರವಿಲ್ಲದೆ ಇದು ಸಾಧ್ಯವಿಲ್ಲ ಎಂಬುದು ಆತನಿಗೆ ಗೊತ್ತು. ಎರಡೂ ಯುದ್ಧಗಳಿಗೆ ನೆತನ್ಯಾಹು ಅವಿರತವಾಗಿ ಯು.ಎಸ್ ಅಧ್ಯಕ್ಷ ಟ್ರಂಪ್ ಮೇಲೆ ಭಾರೀ ಒತ್ತಡ ಹೇರಿದ್ದು ಇದಕ್ಕಾಗಿಯೇ.

ತೈಲ ಸಂಪತ್ತಿನ ಭಂಡಾರವಾದ ಪಶ್ಚಿಮ ಏಶ್ಯಾದಲ್ಲಿ ಯು.ಎಸ್ ಸಹಚರನೊಬ್ಬನ ಪೂರ್ಣ ಛತ್ರಾಧಿಪತ್ಯಕ್ಕೆ ಅನುವು ಮಾಡುವ “ಮಹಾ ಇಸ್ರೇಲ್” ಗೆ ಯು.ಎಸ್ ವಿರೋಧವೇನಿಲ್ಲ. ಆದರೆ ಅದರ ಜಾಗತಿಕ ವ್ಯೂಹದಲ್ಲಿ ಅದು ಆದ್ಯತೆಯ ವಿಷಯವಲ್ಲ. ಆದರೆ ಹಿಂದಿನ ಯಾವುದೇ ಯು.ಎಸ್ ಅಧ್ಯಕ್ಷರಿಗೆ ಹೋಲಿಸಿದರೆ ಚುನಾವಣೆಗೆ ಕೊಟ್ಟ ಭಾರೀ ಮೊತ್ತದಿಂದ (ಮತ್ತು ಬಹುಶಃ ಎಪ್ ಸ್ಟೀನ್ ಫೈಲ್ ನ ಪ್ರಭಾವವೂ ಸೇರಿ) ಟ್ರಂಪ್ ಮೇಲೆ ಅತಿ ಹೆಚ್ಚು ನಿಯಂತ್ರಣವನ್ನು (ಇಸ್ರೇಲ್ ಮತ್ತು) ಯು.ಎಸ್ ನ ಪ್ರಬಲ ಝಿಯೋನಿಸ್ಟ್ ಲಾಬಿ ಹೊಂದಿದೆ. ಯಾವುದೇ ದೊಡ್ಡ ಯುದ್ಧಕ್ಕೆ ಪರವಾಗಿ ಯು.ಎಸ್ ನ ಪ್ರಬಲ ಮಿಲಿಟರಿ-ಕೈಗಾರಿಕಾ ಸಂಕೀರ್ಣವಂತೂ ಇದ್ದೇ ಇದೆ. ಆದರೆ ಯು.ಎಸ್ ನ ಪ್ರಭುತ್ವ ಅಥವಾ ಟ್ರಂಪ್ ಆಢಳಿತದಲ್ಲೂ ಅಥವಾ ಆಳುವ ರಿಪಬ್ಲಿಕನ್ ಪಕ್ಷದಲ್ಲೂ ಈ ಯುದ್ಧದ ಕುರಿತು ಒಮ್ಮತವಿಲ್ಲ. ನಿಜವಾದ “ವೈರಿಯಾದ” ಚೀನಾಕ್ಕೆ ಮಿಲಿಟರಿ ಮತ್ತೂ ಆರ್ಥಿಕವಾಗಿ ಸವಾಲು ಹಾಕಲು ಪಶ್ಚಿಮ ಗೋಲಾರ್ಧದಲ್ಲಿ ಮೊದಲು ಪೂರ್ಣ ಅಧಿಪತ್ಯ ಸ್ಥಾಪಿಸಬೇಕು. ಇತರ ಪ್ರದೇಶಗಳಲ್ಲಿ ಅನಗತ್ಯ ಮಿಲಿಟರಿ ಕಾರ್ಯಾಚರಣೆಯಲ್ಲಿ ಸಾಮರ್ಥ್ಯ ಪೋಲು ಮಾಡಬಾರದು ಎಂಬುದು ಯು.ಎಸ್ ಅಧಿಕೃತ ಭದ್ರತಾ ನೀತಿ. ಅದಲ್ಲದೆ “ಅನಗತ್ಯ ವಿದೇಶೀ ಯುದ್ಧದಲ್ಲಿ ಹಣ ಪೋಲು ಮಾಡಬಾರದು” ಎಂಬ “ಶಾಂತಿಪ್ರಿಯ” ಟ್ರಂಪ್ ನೀತಿ ಅವರ “ಮಗ” (ಮೇಕ್ ಅಮೆರಿಕ ಗ್ರೇಟ್ ಅಗೈನ್) ಚಳುವಳಿಯ ರಾಜಕೀಯ ನೆಲೆಯ ಮುಖ್ಯ ಧೋರಣೆ ಸಹ. ಈಗಾಗಲೇ ಅವರದೇ ಬೆಂಬಲಿಗರು ಅವರ ಧೋರಣೆ “ಮಗ”, “ಮಿಗ” (ಮೇಕ್ ಇಸ್ರೇಲ್ ಗ್ರೇಟ್ ಅಗೈನ್) ಆಗಿಬಿಟ್ಟಿದೆ ಎಂದು ಟೀಕೆ ಮಾಢುತ್ತಿದ್ದಾರೆ, ಅವರ ವಿರೋಧಿಗಳು ಹೀಗೆ ವ್ಯಂಗ್ಯವಾಢುತ್ತಿದ್ದಾರೆ.
ಜೂನ್ 2025ರಂತೆ ಈ ಬಾರಿಯ ಮಾತುಕತೆಗಳು ಸಹ ನಾಟಕವೆಂದು ಮತ್ತೆ ರುಜುವಾತಾಗಿದೆ. ಯುದ್ಧ ಆರಂಭವಾದ ಹಿಂದಿನ ದಿನ ಅಣ್ವಸ್ತ್ರದ ಕುರಿತು ಹೆಚ್ಚು ಕಡಿಮೆ ಒಪ್ಪಂದ ಸಿದ್ಧವಾಗಿತ್ತು ಎಂದು ಮಧ್ಯಸ್ತಿಕೆ ವಹಿಸಿದ್ದ ಒಮನ್ ವಿದೇಶ ಮಂತ್ರಿ ಹೇಳಿಕೆ ನೀಡಿದ್ದರು. ಇರಾನ್ ಮಾತುಕತೆಯಿಂದ ಹಿಂದೆ ಸರಿಯಿತು ಎಂದು ಟ್ರಂಪ್ (ಹಸಿ ಮಾತ್ರವಲ್ಲ) ಹಳೆಯ ಸುಳ್ಳು ಮಿಲಿಟರಿ ಹಿನ್ನಡೆಯಾಗಿ ನಿಲ್ಲಿಸಬೇಕಾಗಿದ್ದ ಯುದ್ಧವನ್ನು ಇಸ್ರೇಲಿಗೆ ಮತ್ತೆ ಆರಂಭಿಸಬೇಕಿತ್ತು, ಅಷ್ಟೇ.
“ಇರಾನಿ ಆಡಳಿತ ಕುಸಿದು ಬಿದ್ದಿದೆ” ಯೇ?
ಆದರೆ ಇಬ್ಬರೂ ಜಂಟಿಯಾಗಿ ಇರಾನ್ ಅಣ್ವಸ್ತ್ರ ಯೋಜನೆ, ಕ್ಷಿಪಣಿ ಸಾಮರ್ಥ್ಯಗಳನ್ನು ನಾಶ ಮಾಡುವುದು ಮತ್ತು ಧಾರ್ಮಿಕ ಸರ್ವಾಧಿಕಾರಿ ಆಡಳಿತವನ್ನು ಕಿತ್ತೊಗೆಯುವುದು ಈ ಯುದ್ಧದ ಉದ್ದೇಶ ವೆಂದಿದ್ದಾರೆ. ಈಗಿನ ಇರಾನಿ ಸರಕಾರ ಯು.ಎಸ್ ಮತ್ತು ಇಸ್ರೇಲ್ ಗೆ ತೀವ್ರ ಅಪಾಯಕಾರಿ ಎಂದೂ ಹೇಳಿದ್ದಾರೆ. ಇರಾನಿ ಪರಮೋಚ್ಛ ನಾಯಕ ಖಮೇನಿ ಮತ್ತು 48 ಉನ್ನತ ನಾಯಕರನ್ನು ಯುದ್ಧದ ಮೋದಲ ದಿನವೇ ಹತ್ಯೆಗೈಯಲಾಗಿದೆ. ಇರಾನಿ ಆಡಳಿತ ಮುಖ್ಯ ಕಚೇರಿ, ಆಂತರಿಕ ಭದ್ರತಾ ವಿಭಾಗ, ಸಂವಹನ ಕೇಂದ್ರ, ಮಿಲಿಟರಿ ಮುಖ್ಯ ಕಚೇರಿಗಳನ್ನು ಧ್ವಂಸ ಮಾಡಲಾಗಿದೆ. “ಇರಾನಿ ಆಡಳಿತ ಕುಸಿದು ಬಿದ್ದಿದೆ”, ಉಳಿದ ಆಡಳಿತದ ವಿಭಾಗಗಳು ಶೀಘ್ರವೇ ಶರಣಾಗುತ್ತವೆ”, ಇರಾನಿ ಜನತೆ ಅಧಿಕಾರ ತಮ್ಮ ಕೈಗೆ ತೆಗೆದುಕೊಳ್ಳಬೇಕೆಂದು ಟ್ರಂಪ್ ಕರೆ ಕೊಟ್ಟಿದ್ದಾರೆ.
“ಇರಾನ್ ಆಡಳಿತ ಕುಸಿದು ಬಿದ್ದಿದೆ” ಎಂಬುದನ್ನು ಸ್ವತಂತ್ರ ಮೂಲಗಳೂ ಯಾವುದೂ ಖಚಿತಪಡಿಸಿಲ್ಲ. ಹತ್ಯೆಯಾದ ಸರ್ವೋಚ್ಛ ನಾಯಕ ಖಮೇನಿ ಅವರ ಉತ್ತರಾಧಿಕಾರಿ ನೇಮಿಸುವ ಪ್ರಕ್ರಿಯೆ ಆರಂಭವಾಗಿದೆ. ಹತ್ಯೆಯಾದ ರಕ್ಷಣಾ ಸಚಿವ, ಮಿಲಿಟರಿ ಮುಖ್ಯಸ್ಥ ಇವರ ಉತ್ತರಾಧಿಕಾರಿಗಳನ್ನು ಆಗಲೇ ನೇಮಿಸಲಾಗಿದೆ. ಮಿಲಿಟರಿ ಪ್ರತಿದಾಳಿ ಆರಂಭವಾಗಿ ಮುಂದುವರೆಯುತ್ತಿರುವುದು ಸಹ “ಇರಾನ್ ಆಡಳಿತ ಕುಸಿದು ಬಿದ್ದಿದೆ” ಎಂಬುದನ್ನು ಅಲ್ಲಗಳೆಯುತ್ತಿದೆ. ಖಮೇನಿ ಅವರ ಹತ್ಯೆಯ ವಿರುದ್ಧ ಇರಾನಿನ ಒಳಗೂ ಮತ್ತು ನೆರೆಯ ಅರಬ್ ದೇಶಗಳಲ್ಲೂ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರಿರುವ ಪಾಕಿಸ್ತಾನ, ಭಾರತದಂತಹ ದೇಶಗಳಲ್ಲಿ ಕಂಡುಬಂದ ಭಾರೀ ಸ್ವಯಂಸ್ಫೂರ್ತ ಪ್ರತಿಭಟನಾ, ಸಂತಾಪ ಸೂಚಕ ಸಭೆಗಳನ್ನು ನೋಡಿದರೆ, ಯು.ಎಸ್-ಇಸ್ರೇಲ್ ಗಳ ಈ ಕ್ರಮ ಬಹುಶಃ ಇರಾನಿ ಆಡಳಿತದ ಬೆಂಬಲವನ್ನು ಇನ್ನಷ್ಟು ಗಟ್ಟಿ ಮಾಡಿರುವಂತೆ ಕಾಣುತ್ತದೆ. ಅವರು ಇಸ್ಲಾಮಿಕ ರಿಪಬ್ಲಿಕ್ ಪ್ರಭುತ್ವದ ಸಂಘಟನಾ ಮತ್ತು ರಾಜಕೀಯ ಶಕ್ತಿಯನ್ನು ಕಡಿಮೆ ಅಂದಾಜು ಮಾಡಿರುವಂತೆ ಕಾಣುತ್ತದೆ.
ಇರಾನಿ ಮಿಲಿಟರಿ ಬಲ ನಾಶವಾಗಿದೆಯೆ?
ಇರಾನಿ ಅಣ್ವಸ್ತ್ರ ಸ್ಥಾವರಗಳ ಮೇಲೆ ದಾಳಿ ಮಾಡಿ ಅದನ್ನು ನಾಶ ಮಾಡಲಾಗಿದೆ. ಕ್ಷಿಪಣಿ ತಯಾರಿಕೆ ಮತ್ತು ಉಡಾವಣಾ ಕೇಂದ್ರಗಳನ್ನು ಸಹ ಪೂರ್ಣ ಧ್ವಂಸ ಮಾಡಲಾಗಿದೆ. 10 ಇರಾನಿ ಯುದ್ಧನೌಕೆಗಳನ್ನು ಮುಳುಗಿಸಲಾಗಿದೆ. ಇರಾನಿ ಮಿಲಿಟರಿ ಬಲವನ್ನು ನೆಲಸಮ ಮಾಡಲಾಗಿದೆ ಎಂದು ಯು.ಎಸ್-ಇಸ್ರೇಲ್ ಹೇಳಿಕೊಂಡಿವೆ. 50 ಪಟ್ಟಣಗಳ ಮೇಲೆ , ನೂರಕ್ಕೂ ಹೆಚ್ಚು ಕಡೆ ಸಾವಿರಕ್ಕೂ ಹೆಚ್ಚು ದಾಳಿಗಳನ್ನು ಮಾಡಲಾಗಿದೆ. 555 ಇರಾನಿಯರು ಈ ದಾಳಿಗಳಲ್ಲಿ ಸತ್ತಿದ್ದಾರೆ. ಒಂದು ಹುಡುಗಿಯರ ಶಾಲೆ ಮೇಲೆ ನಡೆದ ಒಂದು ದಾಳಿಯಲ್ಲೇ (“ಇರಾನಿ ಮಹಿಳೆಯರ ಹಕ್ಕು ರಕ್ಷಣೆಗೆ ಹೋರಾಡುತ್ತಿರುವ”) ಯು.ಎಸ್ 180 ಶಾಲಾ ಹುಡುಗಿಯರ ಹತ್ಯೆ ಮಾಡಿದೆ.

ಭಾರೀ ದಾಳಿಗಳನ್ನು ಮಾಡಿ, ಇರಾನಿನ ಮಿಲಿಟರಿ ಸಾಮರ್ಥ್ಯಕ್ಕೆ ಸಾಕಷ್ಟು ಹಾನಿ ಮಾಡಲಾಗಿದೆ. ಎಂಬುದಕ್ಕೆ ಸಂಶಯವಿಲ್ಲ. ಆದರೆ ಪೂರ್ಣ ನಾಶಧ ಇಂತಹುದೇ ಹೇಳಿಕೆಗಳನ್ನು ಜೂನ್ 2025ರಲ್ಲೂ ಕೊಡಲಾಗಿತ್ತು. ಮಾತ್ರವಲ್ಲ. ಇಸ್ರೇಲ್ ಮತ್ತು ಸುತ್ತಲಿರುವ ಯು.ಎಸ್ ಮಿಲಿಟರಿ ನೆಲೆಗಳ ಮೇಲೆ ಇರಾನ್ ಮಾಡಿರುವ ಪ್ರತಿದಾಳಿಯ ವೇಗ, ತೀಕ್ಷ್ಣತೆಗಳನ್ನು ಗಮನಿಸಿದರೆ ಇದು ನಿಜವೆನಿಸುವುದಿಲ್ಲ. ಇರಾನಿನ ಭೂಗತ ಕ್ಷಿಪಣಿ ಉಡಾವಣಾ ನೆಲೆಗಳು ಸಕ್ರಿಯವಾಗಿವೆ. ಕತಾರ್, ಕುವೈತ್, ಬಹರೈನ್, ಯು.ಎ.ಇ, ಜೋರ್ಡಾನ್, ಸೌದಿ ಅರೇಬಿಯ, ಇರಾಕ್ ಗಳಲ್ಲಿರುವ ಯು.ಎಸ್ ಮಿಲಿಟರಿ ನೆಲೆಗಳ ಮೇಲೆ ಸತತ ಕ್ಷಿಪಣಿ/ಡ್ರೋನ್ ದಾಳಿಗಳಲ್ಲಿ ಇರಾನ್ ಸಾಕಷ್ಟು ಹಾನಿ ಮಾಡಿತು. ಕುವೈತ್ ನಲ್ಲಿ 3-4 ಎಫ್-15 ವಿಮಾನಗಳನ್ನು ಹೊಡೆರುಳಿಸಲಾಯಿತು. ಆದರೆ ಅದು ಕುವೈತ್ ವಿಮಾನ ಪಡೆ “ಬೈ ಮಿಸ್ಟೇಕ್” ಅವನ್ನು ಉರುಳಿಸಿದ್ದು ಯು.ಎಸ್ ಸಮಜಾಯಿಷಿ ನೀಡಿದೆ! ಬಹರೈನ್ ನಲ್ಲಿರುವ ಯು.ಎಸ್ ನೌಕಾನೆಲೆ ಪೂರ್ಣವಾಗಿ ಧ್ವಂಸವಾಗಿದೆ. ಯು.ಎಸ್ ನ ಅಬ್ರಹಾಂ ಲಿಂಕನ್ ಯುದ್ಧವಿಮಾನ ವಾಹಕದ ಮೇಲೆ ದಾಳಿ ಮಾಡಿ , ಅದರ ಡೆಕ್ ನ ದೊಡ್ಡ ವಿಭಾಗ ನಿರುಪಯೋಗಿ ಆಗಿದೆ ಎಂದು ಇರಾನ್ ಹೇಳಿದೆ. ಇಸ್ರೇಲಿ ರಾಜಕೀಯ ಮತ್ತು ಮಿಲಿಟರಿ ಮುಖ್ಯ ಕಚೇರಿ ಮೇಲೆ ತೀವ್ರ ಧಾಳಿ ನಡೆಸಿ ತೀವ್ರ ಹಾನಿಯಾಗಿದೆ. ಇಸ್ರೇಲಿನಲ್ಲಿ 11, ಯು.ಎಸ್ ಪಡೆಗಳಲ್ಲಿ 4 ಜನ ಸತ್ತಿದ್ದಾರೆ. ಆದರೆ ಯು.ಎಸ್ ಪಡೆಗಳಲ್ಲಿ 560ಕ್ಕೂ ಹೆಚ್ಚು ಜನ ಸತ್ತಿದ್ದಾರೆ ಎಂದೂ ಇರಾನ್ ಹೇಳಿದೆ! ಮಾತುಕತೆಗಳಲ್ಲಿ ಮಧ್ಯಸ್ತಿಕೆ ವಹಿಸಿದ ಒಮನ್ ಮೇಲೆ ಮಾತ್ರ ಇರಾನ್ ದಾಳಿ ಮಾಡಿಲ್ಲ.
ಇರಾನಿನ ಸುತ್ತ ಅರಬ್ ದೇಶಗಳಲ್ಲಿ ಇರುವ ಮಿಲಿಟರಿ ನೆಲೆಗಳನ್ನು ಯು.ಎಸ್ ಬಿಟ್ಟು ಓಡಿ ಹೋಗಿದೆ. ಈ ಅರಬ್ ‘ಸಹಚರ” (ಬಾಲಬಡುಕರು ಎಂದರೆ ಹೆಚ್ಚು ಸರಿಯಾದೀತು) ದೇಶಗಳ ಭದ್ರತೆ ಬಗ್ಗೆ ಯು.ಎಸ್ ಗಮನ ವಹಿಸುತ್ತಿಲ್ಲ. ಬರಿಯ ಇಸ್ರೇಲ್ ಭದ್ರತೆಯ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಈ ದೇಶಗಳ ಅಧಿಕಾರಿಗಳೂ, ನಾಗರಿಕರೂ ದೂರುತ್ತಿದ್ದಾರೆ ಎಂದು ಹೇಳಲಾಗಿದೆ. ಈ ದೇಶಗಳ ಸರಕಾರಗಳು ತಮ್ಮ ಮೇಲೆ ಇರಾನಿನ ದಾಳಿ “ನ್ಯಾಯಯುತ”ವಲ್ಲ ಎಂದು ಖಂಡಿಸಿವೆ. ಆ ದೇಶಗಳ ಜನತೆಯ ಮೇಲೆ ದಾಳಿ ಮಾಡಿಲ್ಲ. ಇರಾನಿನ ಮೇಲೆ ದಾಳಿ ಮಾಢಲು ಬಳಸುತ್ತಿರುವ, ಆ ದೇಶಗಳಲ್ಲಿರುವ ಯು.ಎಸ್ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ ಎಂದಿದೆ ಇರಾನ್. ಯು.ಎಸ್ ನ ಮಿಲಿಟರಿ ಬಲ ಮತ್ತು ಭದ್ರತೆ ಒದಗಿಸುವ ಸಾಮರ್ಥ್ಯದ ಬಗ್ಗೆ ಅರಬ್ ದೇಶಗಳಲ್ಲಿ ತೀವ್ರ ಅವಿಶ್ವಾಸ, ಯು.ಎಸ್ ಮೇಲೆ ಈ ಯುದ್ಧದ ಅಡ್ಡ ಪರಿಣಾಮವಾಗಬಹುದು.
ತೈಲ ಸ್ಥಾವರಗಳ ಮೇಲೆ ದಾಳಿ, ಹೊರ್ಮುಝ್ ಜಲಸಂಧಿ ಅಘೋಷಿತ ಬಂದ್!
ಇರಾನಿ ತೈಲ ಸ್ಥಾವರದ ಮೇಲೆ ಯು.ಎಸ್-ಇಸ್ರೇಲ್ ತೀವ್ರದಾಳಿ ನಡೆಸಿವೆ. ಇಸ್ರೇಲಿನ ಹೈಫಾ, ಸೌದಿ ಅರೇಬಿಯ, ಕಟಾರ್ ನ ಪ್ರನುಖ ತೈಲ/ಗ್ಯಾಸ್ ಸ್ಥಾವರಗಳ ಮೇಲೆ ಇರಾನ್ ದಾಳಿ ಮಾಡಿದೆ. ಸೌದಿ ಅರೇಬಿಯ ತೈಲ ಮತ್ತು ಕಟಾರ್ ಎಲ್,ಎನ್,ಜಿ ಉತ್ಪಾದನೆ ನಿಲ್ಲಿಸಬೇಕಾಗಿ ಬಂದಿದೆ.
ಅಲ್ಲದೆ ಪಶ್ಚಿಮ ಏಶ್ಯಾದ ಎಲ್ಲ ತೈಲ ಉತ್ಪಾದಕ ದೇಶಗಳ ತೈಲ ಸಾಗಾಣಿಕೆಯ ಏಕಮಾತ್ರ ಮಾರ್ಗವಾದ ಹೊರ್ಮುಝ್ ಜಲಸಂಧಿ ಮುಚ್ಚುವುದು ಇರಾನಿನ ಅಂತಿಮ ಅಸ್ತ್ರವಾಗಬಹುದು ಎಂದು ಹೇಳಲಾಗಿತ್ತು. ಆದರೆ ಇರಾನ್ ಏನೂ ಮಾಡದೆ ಹೊರ್ಮುಝ್ ಜಲಸಂಧಿ ಅಘೋಷಿತ ಬಂದ್ ಗೆ ಒಳಗಾಗಿದೆ. ಇದಕ್ಕೆ ಕಾರಣ ಮೂರು ತೈಲ ಟ್ಯಾಂಕರ್ ಗಳ ಮೇಲೆ ನಡೆದ ದಾಳಿ ಎನ್ನಲಾಗಿದೆ. ಇದನ್ನು ಯಾರು ಮಾಡಿದ್ದು ಎಂದು ತಿಳಿದು ಬಂದಿಲ್ಲ. ಒಂದು ತೈಲ ಟ್ಯಾಂಕರ್ ಭಾಗಶಃ ನಾಶವಾಗಿದೆ. ಅದರ ಸಿಬ್ಭಂದಿಯನ್ನು ಖಾಲಿ ಮಾಡಬೇಕಾಯಿತು. ಇನ್ನೆರಡು ಟ್ಯಾಂಕರ್ ಗಳ ಮೇಲೆ ದಾಳಿ ನಡೆದಿದೆ. ಈ ದಾಳಿಗಳಿಂದಾಗಿ ಇನ್ನೂರಕ್ಕೂ (ತೈಲ ಟ್ಯಾಂಕರ್ ಗಳಲ್ಲದೆ ಆಹಾರ ಮತ್ತಿತರ ಆವಶ್ಯಕ ವಸ್ತುಗಳ ಸಾಗಾಣಿಕೆ ಮಾಡುವ ) ಹೆಚ್ಚು ಸಾಗಾಣಿಕಾ ನೌಕೆಗಳು ಇದ್ದಲ್ಲೇ ಲಂಗರ್ ಹಾಕಿವೆ. ಯಾರು ಹೊರ್ಮುಝ್ ಜಲಸಂಧಿಯಲ್ಲಿ ಹೋಗಲು ನಿಷೇಧಿಸದಿದ್ದರೂ ಮೂರು ಟ್ಯಾಂಕರ್ ಗಳ ಮೇಲೆ ದಾಳಿಯಿಂದಾಗಿ ಸಾಗಾಣಿಕಾ ವಿಮಾ ಕಂಪನಿಗಳು ಪ್ರೀಮಿಯಂನ್ನು ವಿಪರೀತವಾಗಿ ಏರಿಸಿವೆ. ಇದು ಈ ಅಘೋಷಿತ ಬಂದ್ ಗೆ ಕಾರಣ ಆಗಿದೆ. ಈ ಪ್ರದೇಶಕ್ಕೆ ಬರುವ (ಆಹಾರ ಮತ್ತಿತರ ಆವಶ್ಯಕ ವಸ್ತುಗಳ) ಸಾಗಾಣಿಕಾ ಹಡಗುಗಳು ಸಹ ಹೊರ್ಮುಝ್ ಜಲಸಂಧಿಯಾಚೆಗೆ ಲಂಗರು ಹಾಕಿವೆ.

ಈ ಪ್ರದೇಶದಲ್ಲೇ ಈ ಪ್ರದೇಶದ “ರಕ್ಷಣೆ” ಗೆಂದೇ ಇರುವ ಯು.ಎಸ್ ಯುದ್ಧ ನೌಕೆಗಳು ರಕ್ಷಣೆ ಕೊಡಲಾರವೇ? ಈ ಯುದ್ಧ ನೌಕೆಗಳನ್ನು ನಿಯಂತ್ರಿಸುವ ಯು.ಎಸ್ ಸೆಂಟ್ರಲ್ ಕಮಾಂಡ್ “ತಾವು ರಕ್ಷಣೆ ಕೊಡಲು ಸಾಧ್ಯವಿಲ್ಲ” ಎಂದು ಹೇಳಿದೆಯಂತೆ! ಹಾಗಾದರೆ ಯಾವ ಪುರುಷಾರ್ಥಕ್ಕೆ ಈ ನೌಕಾ ಪಡೆ? ಬೆದರಿಸಲು ಮಾತ್ರವೇ? ರಕ್ಷಣೆ ಕೊಡಲು ಅಲ್ಲವೇ? ಯು.ಕೆ ಯ ಪ್ರಮುಖ ಸಾಗರ ಸಾಗಾಣಿಕೆ ಸಲಹಾ ಸಂಸ್ಥೆ ಸಹ ಎಲ್ಲ ಹಡಗುಗಳಿಗೆ “ಹೊರ್ಮುಝ್ ಜಲಸಂಧಿ ದಾಟುವುದು ಸುರಕ್ಷಿತವಲ್ಲ” ಎಂದು ಸೂಚಿಸಿದೆಯಂತೆ. ಇದು ಯು.ಎಸ್-ಇಸ್ರೇಲಿ ಕೂಟದ ಮಿಲಿಟರಿ ಬಲದ ಮಿತಿಗಳನ್ನು ತೋರಿಸುತ್ತಿದೆ.
ಹೊರ್ಮುಝ್ ಜಲಸಂಧಿ ಮೂಲಕ ಜಗತ್ತಿನ ದೈನಿಕ ಬಳಕೆಯ 20% ತೈಲ ದಿನಾ ಸಾಗಾಣಿಕೆಯಾಗುತ್ತದೆ. ಇದು ಪ್ರಮುಖವಾಗಿ ಭಾರತ, ಚೀನಾ, ಜಪಾನ್, ದ.ಕೊರಿಯಾ ಅಲ್ಲದೆ ಏಶ್ಯಾದ ಹೆಚ್ಚಿನ ದೇಶಗಳಿಗೆ ತೈಲ ಪೂರೈಸುತ್ತದೆ. ಈಗಾಗಲೇ 48 ಗಂಟೆಗಳು ಅದು ಬಂದ್ ಆಗಿದ್ದು, ಜಾಗತಿಕ ತೈಲ ಬೆಲೆಗಳು 10% ಏರಿವೆ. ತೈಲ ಕೊರತೆ ಹಲವು ದೇಶಗಳ ಆರ್ಥಿಕದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಜಾಗತಿಕ ಆರ್ಥಿಕ ಕುಸಿತಕ್ಕೆ ಕಾರಣವಾಗಬಹುದು. ಈಗಾಗಲೇ ಹಲವು ಕ್ಷೇತ್ರಗಳ ಶೇರು ಮಾರುಕಟ್ಟೆ ಕುಸಿಯುತ್ತಿದ್ದು, ಮುಂದೆ ಸಾರ್ವತ್ರಿಕ ಕುಸಿತ ಉಂಟಾಗಬಹುದು.
ಎಷ್ಟು ದಿನ ಯುದ್ಧ ಮುಂದುವರೆಯಬಹುದು?
ಎರಡೂ ಕಡೆಯವರೂ ಹಿಂದಿನ ಯುದ್ಧದಿಂದ (ಜೂನ್ 2025) ಕಲಿತ ಪಾಠದಿಂದಾಗಿ ದೀರ್ಘ ಯುದ್ಧಕ್ಕೆ ತಯಾರಾಗಿದ್ದಾರೆ. ತಮ್ಮ ಮತ್ತು ವೈರಿಯ ದೌರ್ಬಲ್ಯಗಳನ್ನು ಅರಿತಿದ್ದು ಅದಕ್ಕೆ ತಕ್ಕ ತಯಾರಿ ಮಾಡಿಕೊಂಡಿದ್ದಾರೆ. ಇಸ್ರೇಲ್ ಯುದ್ಧದ ಉದ್ದೇಶ ಪೂರೈಸುವವರೆಗೆ ಯುದ್ಧ ಮುಂದುವರೆಯುತ್ತದೆ ಎಂದಿದೆ. ಟ್ರಂಪ್ ಸಹ ಯುದ್ಧದ ಉದ್ದೇಶ ಪೂರೈಸಲು 4-5 ವಾರ ಯುದ್ಧ ಅಗತ್ಯವಾಗಬಹುದು ಎಂದಿದ್ದಾರೆ. ಅಗತ್ಯ ಬಿದ್ದರೆ ಇರಾನ್ ನಲ್ಲಿ ಭೂಸೈನ್ಯ ಇಳಿಸಲು ತಯಾರು ಎಂದಿದ್ದಾರೆ. ಇರಾನ್ ಸಹ ತಾನು ದೀರ್ಘ ಯುದ್ಧಕ್ಕೆ ತಯಾರು ಎಂದಿದೆ.
ಆದರೆ ಬಹುಶಃ ಮಿಲಿಟರಿ ಬಲಾಬಲಗಳಿಗಿಂತ ಹೆಚ್ಚಾಗಿ, ಮೇಲೆ ಹೇಳಿದ ಹಾಗೆ ಹೊರ್ಮುಝ್ ಜಲಸಂಧಿ, ತೈಲ ಬೆಲೆ, ಪೂರೈಕೆ ಮತ್ತು ಜಾಗತಿಕ ಆರ್ಥಿಕದ ಮೇಲೆ ಅದರ ಪರಿಣಾಮಗಳ ತೀವ್ರತೆ, ಯುದ್ಧ ಎಷ್ಟು ಕಾಲ ಮುಂದುವರೆಯಬಹುದು ಎಂಬುದನ್ನು ನಿರ್ಧರಿಸುತ್ತದೆ. ಯ.ಎಸ್ ಒಳಗೆ (ಯು.ಎಸ್ ಪಡೆಗಳ ಸಾವು-ನೋವು ಹೆಚ್ಚಿದಂತೆ) ಮತ್ತು “ಸಹಚರ” ಅರಬ್ ದೇಶಗಳಲ್ಲಿ ಯುದ್ಧಕ್ಕೆ ತೀವ್ರ ವಿರೋಧ ಸಹ ಪಾತ್ರ ವಹಿಸಬಹುದು.
*******************
