ಆಸ್ಪತ್ರೆಯಲ್ಲಿ ವೈದ್ಯರ ಸುರಕ್ಷತೆಗಾಗಿ ರಾಷ್ಟ್ರೀಯ ಕಾರ್ಯಪಡೆ ರಚಿಸಿದ ಸುಪ್ರೀಂಕೋರ್ಟ್!

ಆಸ್ಪತ್ರೆಯಲ್ಲಿ ವೃತ್ತಿ ನಿರತ ವೈದ್ಯರ ಮೇಲೆ ಹಲ್ಲೆ, ದೌರ್ಜನ್ಯ ತಡೆಯಲು ಹಾಗೂ ಅವರ ಸುರಕ್ಷತೆಯನ್ನು ಖಚಿತಪಡಿಸಲು ಸುಪ್ರೀಂಕೋರ್ಟ್ ರಾಷ್ಟ್ರೀಯ ಕಾರ್ಯಪಡೆ ರಚಿಸಿದೆ.

ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಕೋಲ್ಕತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಮಂಗಳವಾರ ತಜ್ಞರ ವೈದ್ಯರ ಕಾರ್ಯಪಡೆ ರಚಿಸಿ ಮಹತ್ವದ ಆದೇಶ ಹೊರಡಿಸಿದ್ದು, 3 ವಾರಗಳಲ್ಲಿ ಮಧ್ಯಂತರ ವರದಿ ನೀಡುವಂತೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಮಂಗಳವಾರ ಪ್ರಸ್ತುತ ದೇಶದಲ್ಲಿರುವ ಕಾನೂನು ವೈದ್ಯರ ರಕ್ಷಣೆಗೆ ಸಾಕಾಗುವುದಿಲ್ಲ. ಆದ್ದರಿಂದ ಕಾನೂನು ಬಲಿಷ್ಠಗೊಳಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯಪಡೆ 2 ತಿಂಗಳಲ್ಲಿ ಪೂರ್ಣ ಪ್ರಮಾಣದ ವರದಿ ನೀಡುವಂತೆ ಸೂಚಿಸಿದೆ.

ಸರ್ಜನ್ ವೈಸ್ ಅಡ್ಮಿರಲ್ ಆರ್.ಸರಿನ್, ಡಾ.ಡಿ.ನಾಗೇಶ್ವರ್ ರೆಡ್ಡಿ, ಡಾ.ಎಂ. ಶ್ರೀನಿವಾಸ್, ಡಾ.ಪ್ರತಿಮಾ ಮೂರ್ತಿ, ಡಾ.ಗೋವಾರ್ದನ್ ದತ್ ಪುರಿ, ಡಾ.ಸೌಮಿತ್ರಾ ರಾವತ್, ಪ್ರೊ.ಅನಿತಾ ಸಕ್ಸೆನಾ, ದೆಹಲಿಯ ಏಮ್ಸ್ ಆಸ್ಪತ್ರೆಯ ಕಾರ್ಡಿಯಾಲಿಜಿಸ್ಟ್ ಮುಖ್ಯಸ್ಥೆ ಪ್ರೊ.ಪಲ್ಲವಿ ಸಪ್ರೆ, ಮುಂಬೈನ ಗ್ರಾಂಟ್ ಮೆಡಿಕಲ್ ಕಾಲೇಜು ಡೀನ್ ಡಾ.ಪದ್ಮ ಶ್ರೀವಾತ್ಸವ ಮುಂತಾದವರು ಸುಪ್ರೀಂಕೋರ್ಟ್ ನಿಯೋಜಿಸಿದ ಕಾರ್ಯಪಡೆಯಲ್ಲಿದ್ದಾರೆ.

ವಿಚಾರಣೆ ವೇಳೆ ಶವ ಹಸ್ತಾಂತರಗೊಂಡ 3 ಗಂಟೆಗಳ ನಂತರ ಎಫ್ ಐಆರ್ ದಾಖಲಿಸಿದ್ದು ಯಾಕೆ ಎಂದು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ಪ್ರಕರಣ ದಾಖಲಾದ ಕೂಡಲೇ ಏಕೆ ಕ್ರಮ ಕೈಗೊಳ್ಳದೇ ಮೀನಾಮೇಷ ಎಣಿಸುತ್ತಿದ್ದೀರಿ ಎಂದು ಪ್ರಶ್ನಿಸಿದೆ.

ಇದೇ ವೇಳೆ ವೃತ್ತಿಪರ ವೈದ್ಯರ ರಕ್ಷಣೆಗೆ ಸೂಕ್ತ ಕಾನೂನು ಜಾರಿಗೆ ತರಲು ಮುಂದಾಗಿರುವ ಸುಪ್ರೀಂಕೋರ್ಟ್, ಇದೊಂದು ಆಕಸ್ಮಿಕ ಘಟನೆ. ಮತ್ತೊಂದು ಅತ್ಯಾಚಾರ ಘಟನೆ ನಡೆದ ನಂತರ ಬದಲಾವಣೆ ಮಾಡಲು ಕಾಯುವ ಸಮಯವಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

Donate Janashakthi Media

Leave a Reply

Your email address will not be published. Required fields are marked *