ಬೆಂಗಳೂರು: ಕರಾಳ ಮೂರು ಕೃಷಿ ಕಾಯ್ದೆಗಳ ರದ್ದತಿಯ ಘೋಷಣೆ, ಕಾರ್ಪೊರೇಟ್ ಕಂಪನಿಗಳ ವಿರೋಧಿ ಐಕ್ಯ ರೈತ ಚಳುವಳಿಗೆ ಸಿಕ್ಕಿದ ವಿಜಯವಾಗಿದೆ. ಕನಿಷ್ಠ ಬೆಂಬಲ ಬೆಲೆ ಕಾನೂನು ರಚನೆ ಹಾಗು ವಿದ್ಯುತ್ ಮಸೂದೆ-2020 ರ ವಾಪಸ್ ಖಚಿತವೆಂಬ ವಿಶ್ವಾಸದೊಂದಿಗೆ ಹೋರಾಟಕ್ಕೆ ನಿರ್ಧಾರ, ಕಾರ್ಮಿಕ ಸಂಹಿತೆಗಳ ರದ್ಧತಿ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ತಡೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಿಯಂತ್ರಣ ಹಾಗು ರಾಜ್ಯ ಸರ್ಕಾರ ಕೂಡಲೇ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಗೋಹತ್ಯೆ ನಿಷೇದ ಕಾಯ್ದೆ ತಿದ್ದುಪಡಿಗಳನ್ನು ವಾಪಸ್ಸು ಪಡೆಯಬೇಕು, ಬೆಳೆ ನಷ್ಠ ಪರಿಹಾರ ನೀಡಿಕೆ, ರೈತರ ಹಾಲಿನ ದರ ಏರಿಕೆಗೆ ಮುಂದಾಗಬೇಕೆಂದು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹಿಸಿದೆ.
ಇದನ್ನು ಓದಿ: ರೈತ ಹೋರಾಟಕ್ಕೆ ಸಂದ ಭಾರೀ ಜಯ: ಸಂಯುಕ್ತ ಹೋರಾಟ ಕರ್ನಾಟಕ ಹರ್ಷ
ನಗರದ ಪ್ರೆಸ್ಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಸಂಯೋಜಕರು ಚಾರಿತ್ರಿಕ ವಿಜಯ – ಬೆಂಬಲಿಸಿದವರಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ, ನವೆಂಬರ್ 26, 2021 ಕ್ಕೆ ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಬಂದ್ ಚಳುವಳಿ ನಡೆಸಲು ಕರೆ ನೀಡಿದೆ.
ಮತ್ತೆರಡು ಜನ ವಿರೋಧಿ ಕಾಯ್ದೆ ವಾಪಸ್ಸಾಗಲಿ
ಒಂದು ವರ್ಷದಿಂದ ನಡೆದ ಚಾರಿತ್ರಿಕ ರೈತ ಚಳುವಳಿ, ಹೋರಾಟದಲ್ಲಿ ಪ್ರಾಣತೆತ್ತ ಸುಮಾರು 700 ಹುತಾತ್ಮ ರೈತರ ತ್ಯಾಗ, ಕಾರ್ಮಿಕ ವರ್ಗ, ದೇಶದ, ಜಗತ್ತಿನ ರೈತಪರ ಶಕ್ತಿಗಳ ಒತ್ತಡದ ಫಲವಾಗಿ ವಿಜಯವನ್ನು ಪಡೆಯಲು ಸಾಧ್ಯವಾಗಿದೆ. ಈ ವಿಜಯಕ್ಕೆ ಪ್ರತ್ಯೇಕ್ಷ ಹಾಗು ಪರೋಕ್ಷವಾಗಿ ಕಾರಣರಾದ ಎಲ್ಲರನ್ನೂ ಅಭಿನಂದಿಸುತ್ತೇವೆ ಎಂದಿರುವ ಸಂಘಟಕರು, ಈ ವಿಜಯ ಭಾಗಶಃವಾಗಿದ್ದು, ಈ ಹೋರಾಟದ ಮತ್ತೇರಡು ಪ್ರಮುಖ ಬೇಡಿಕೆಗಳಾದ ಕನಿಷ್ಠ ಬೆಂಬಲ ಬೆಲೆ ಖಾತರಿ ಮಾಡುವ ಕಾನೂನು ಹಾಗು ವಿದ್ಯುತ್ ಮಸೂದೆ-2020 ನ್ನು ಸಹ ಕೂಡಲೇ ಇತ್ಯಾರ್ಥ ಪಡಿಸಬೇಕೆಂದು ಪ್ರಧಾನಿ ಮೋದಿಯವರಿಗೆ ಸಂಯುಕ್ತ ಹೋರಾಟ-ಕರ್ನಾಟಕ ಆಗ್ರಹಿಸುತ್ತದೆ.
ಈ ಐತಿಹಾಸಿಕ ಹೋರಾಟ ಸ್ವಾತಂತ್ರ್ಯ ಭಾರತದಲ್ಲಿ ನಡೆದ ಅತಿ ದೊಡ್ಡ ನಿರಂತರ ಹೋರಾಟವಾಗಿದ್ದು, ಚರಿತ್ರೆಯನ್ನು ನಿರ್ಮಿಸಿದೆ ಮಾತ್ರವಲ್ಲದೇ, ಜನಪರ ಹೋರಾಟಗಳ ಮೂಲಕ ಎಷ್ಠೇ ಸರ್ವಾಧಿಕಾರಿ ಸರ್ಕಾರಗಳನ್ನು ಬಗ್ಗಿಸಬಹುದೆಂಬ ವಿಶ್ವಾಸವನ್ನು ಮೂಡಿಸಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ಇದನ್ನು ಓದಿ: ಕೃಷಿ ಕಾಯ್ದೆಗಳ ರದ್ದತಿ: ಜಿಲೇಬಿ ಹಂಚಿ ಸಂಭ್ರಮಿಸಿದ ರೈತರು
ಪ್ರಧಾನಿ ನರೇಂದ್ರ ಮೋದಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವ ಬಗ್ಗೆ ಪ್ರಕಟಿಸಿದ್ದಾರೆ. ಆದರೆ ಈ ಹೋರಾಟದ ಮತ್ತೇರಡು ಬೇಡಿಕೆಗಳಾದ ಕನಿಷ್ಠ ಬೆಂಬಲ ಬೆಲೆ ಕಾನೂನು ಪ್ರಶ್ನೆ, ವಿದ್ಯುತ್ ಮಸೂದೆ ವಾಪಸಾತಿಯ ಬಗ್ಗೆ ಖಚಿತ ನಿಲುವನ್ನು ಪ್ರಕಟಿಸಿಲ್ಲ ಎಂದು ತಿಳಿಸಿದರು.
ಕನಿಷ್ಠ ಬೆಂಬಲ ಬೆಲೆ ಕಾನೂನು, ವಿದ್ಯುತ್ ಮಸೂದೆ, ನಾಲ್ಕು ಕಾರ್ಮಿಕ ಸಂಹಿತೆಗಳ ರದ್ಧತಿ, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನಿಯಂತ್ರಣಕ್ಕಾಗಿ ಹಾಗು ರಾಜ್ಯ ಸರ್ಕಾರದ ಕಾನೂನು ತಿದ್ದುಪಡಿಗಳ ವಿರುದ್ದ, ಬೆಳೆ ನಷ್ಟ ಪರಿಹಾರಕ್ಕಾಗಿ, ರೈತರ ಹಾಲಿನ ದರಗಳನ್ನು ಹೆಚ್ಚಿಸಲು ಆಗ್ರಹಿಸಿ ನವೆಂಬರ್ 26, 2021ಕ್ಕೆ ರಾಷ್ಟ್ರೀಯ ಹೆದ್ದಾರಿಗಳ ಬಂದ್ ಚಳುವಳಿಗೆ ಕರೆ
ರೈತ ಚಳುವಳಿಯೊಂದಿಗೆ ನಡೆದ ಧೀಮಂತ ಕಾರ್ಮಿಕ ಚಳುವಳಿಗಳ ಬಗ್ಗೆ ತೀರ ಅಸಡ್ಡೆಯಿಂದ ವರ್ತಿಸುತ್ತಿದ್ದ ಪ್ರಧಾನಿ ಮೋದಿಯವರು, ಕರಾಳ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವುದಾಗಿ ಘೋಷಿಸಿದರು. ಈ ಕಾಲಾವಧಿಯಲ್ಲಿ ಹಲವು ಚಾರಿತ್ರಿಕ ಮುಷ್ಕರಗಳನ್ನು ನಡೆಸಿದ ಕಾರ್ಮಿಕ ವರ್ಗದ ಕಾರ್ಮಿಕರ ಸಂಹಿತೆ ರದ್ಧತಿಯ ಬಗ್ಗೆ ಮಾತನಾಡುತ್ತಿಲ್ಲ. ಪ್ರತಿ ದಿನ ದೇಶದ ಆಸ್ತಿಗಳಾಗಿರುವ ಸಾರ್ವಜನಿಕ ಉದ್ದಿಮೆಗಳನ್ನು ಮೂರು ಕಾಸಿಗೆ, ನಾಲ್ಕು ಕಾಸಿಗೆ ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಕಾರ್ಪೊರೇಟ್ ಕಂಪನಿಗಳ ಜೇಬು ತುಂಬಿಸುವ ಸಲುವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮಾಡಿಸಿ, ಸಾಮಾನ್ಯ ಜನರನ್ನು `ಹಸಿವಿನ’ ಕಡೆಗೆ ತಳ್ಳಲಾಗುತ್ತಿದೆ. ಈ ನೀತಿಗಳನ್ನು ವಿರೋಧಿಸಿ “ರಾಷ್ಟ್ರೀಯ ಹೆದ್ದಾರಿ ಬಂದ್” ಚಳುವಳಿಯನ್ನು ಸಂಘಟಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರದಷ್ಟೇ ಹೆಚ್ಚು ಜನ ವಿರೋಧಿಯಾದ ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಉಗ್ರ ಹೋರಾಟಕ್ಕೆ ನಿರ್ಧಾರ
ಇದೇ ಸಂದರ್ಭದಲ್ಲಿ ಕೇಂದ್ರ ಮತ್ತು ಬಿಜೆಪಿ ಆಡಳಿತವಿರುವ ಇತರೆ ರಾಜ್ಯ ಸರ್ಕಾರಗಳಿಗಿಂತ ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿಗಳು ಇತ್ಯಾದಿ ಜನ ವಿಭಾಗಗಳ ಮೇಲೆ ತೀವ್ರ ದಾಳಿಯನ್ನು ನಡೆಸುತ್ತಿದೆ ಎಂದು ತಿಳಿಸಿರುವ ಸಂಯುಕ್ತ ಹೋರಾಟ ಕರ್ನಾಟಕ ಹೇಳಿದೆ.
ಇದನ್ನು ಓದಿ: ಕೃಷಿ ಕಾನೂನು ರದ್ದತಿಯು ರೈತರ ಸತ್ಯಾಗ್ರಹದಿಂದ ಅವರ ದುರಹಂಕಾರವನ್ನು ಸೋಲಿಸಿದೆ
ಕರಾಳ ಮೂರು ಕೃಷಿ ಕಾಯ್ದೆಗಳಿಗೆ ನ್ಯಾಯಾಲಯ ಮತ್ತು ರೈತ ಆಂದೋಲನ ತಡೆ ನೀಡಿದರೂ, ಬಿಜೆಪಿ ಆಡಳಿತವಿರುವ ಬೇರೆ ರಾಜ್ಯ ಸರ್ಕಾರಗಳು ಸುಮ್ಮನಿದ್ದರೂ ನಮ್ಮ ರಾಜ್ಯ ಸರ್ಕಾರ, ಕರಾಳ ಕೃಷಿ ಕಾಯ್ದೆಗಳ ಜಾರಿಯ ಭಾಗವಾಗಿ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಗೋಹತ್ಯೆ ನಿಷೇದ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತಂದು ಭಾರೀ ವೇಗವಾಗಿ ಜಾರಿ ಮಾಡುತ್ತಿದೆ. ಕನಿಷ್ಠ ಚರ್ಚೆ ಇಲ್ಲದೆ ಹೊಸ ಶಿಕ್ಷಣ ನೀತಿಯನ್ನು ತರಾತುರಿಯಾಗಿ ಜಾರಿ ಮಾಡಲಾಗುತ್ತಿದೆ. ಅಲ್ಲದೆ ವಿಪರೀತ ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯ ಸರ್ಕಾರ, ಕಳೆದ ಒಂದೂವರೆ ತಿಂಗಳ ಸತತ ಮಳೆಯಿಂದ ಸಾವಿರಾರು ಕೋಟಿ ರೂ.ಗಳ ಬೆಳೆ ನಷ್ಟವಾದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಂಕಷ್ಟದಲ್ಲಿರುವ ಹೈನುಗಾರಿಕೆಯ ರೈತರಿಗೆ ಹೆಚ್ಚಿನ ನೆರವನ್ನು ನೀಡುವ ಬದಲಿಗೆ ಒಂದು ಲೀಟರ್ ಹಾಲಿನ ಉತ್ಪಾದನಾ ವೆಚ್ಚ 35.00 ರೂ. ದಾಟುತ್ತಿರುವಾಗ ರೈತರ ಹಾಲಿನ ದರವನ್ನು ರೂ.23.00, ರೂ.24.00 ಕ್ಕೆ ಇಳಿಸಿದೆ.
ಹೀಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಈ ಧೋರಣೆಗಳನ್ನು ಹಿಮ್ಮೆಟ್ಟಿಸಲು ನವೆಂಬರ್ 26, 2021 ರಂದು ಬೆಳ್ಳಗೆಯಿಂದ ಸಂಜೆಯವರೆಗೆ ರಾಜ್ಯದ “ರಾಷ್ಟ್ರೀಯ ಹೆದ್ದಾರಿ ಬಂದ್” ಚಳುವಳಿಯನ್ನು ಸಂಘಟಿಸಲಾಗುತ್ತಿದೆ ಎಂದು ಕರೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟ
ಬೆಂಗಳೂರು-ಹೈದ್ರಾಬಾದ್ ಹೆದ್ದಾರಿಯಲ್ಲಿ ಚದಲಪುರ ಕ್ರಾಸ್, ಚಿಕ್ಕಬಳ್ಳಾಪುರ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶ್ರೀರಂಗಪಟ್ಟಣ್ಣ, ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ತುಮಕೂರು ಟೋಲ್, ಹೆದ್ದಾರಿ 13 ರಲ್ಲಿ ಹೊಸಪೇಟೆ ಜಂಕ್ಷನ್, ಸುರಪುರ-ಶಹಪುರ ನಡುವೆ ದೇವದುರ್ಗ ಕ್ರಾಸ್ ಇತ್ಯಾದಿ ಪ್ರಮುಖ ಕೇಂದ್ರಗಳಲ್ಲಿ ಸಾವಿರಾರು ರೈತರು, ಕಾರ್ಮಿಕರು ತಮ್ಮ ಕುರಿ, ಜಾನುವಾರು, ಟ್ರಾಕ್ಟರ್ ಇತ್ಯಾದಿಗಳೊಂದಿಗೆ ಹೆದ್ದಾರಿ ಬಂದ್ ಮಾಡಲಿದ್ದಾರೆ. ಈ ಹೋರಾಟದಲ್ಲಿ ರಾಜ್ಯದ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನರು, ಮಹಿಳೆಯರು, ಕನ್ನಡ ಪರ ಸಂಘಟನೆಗಳು, ನಾಗರೀಕರು ಭಾಗವಹಿಸಲಿದ್ದಾರೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ತಿಳಿಸಿದೆ.
ರಾಜ್ಯ ಸರ್ಕಾರಕ್ಕೆ ಸಂಯುಕ್ತ ಹೋರಾಟ-ಕರ್ನಾಟಕದ ಗಡುವು
ಪ್ರಧಾನಿ ಮೋದಿ ಘೋಷಣೆಯಂತೆಯೇ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಗೋಹತ್ಯೆ ನಿಷೇದ ಕಾಯ್ದೆಗಳ ತಿದ್ದುಪಡಿಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿರುವ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯು ರಾಜ್ಯ ಸರ್ಕಾರ ಇಂತಹ ಕ್ರಮಗಳಿಗೆ ಮುಂದಾದಲ್ಲಿ ಮಾತ್ರ ನವೆಂಬರ್ 26, 2021 ರ ಚಳುವಳಿಯ ಬಗ್ಗೆ ಪುನರ್ ಪರಿಶೀಲನೆ ಮಾಡಲು ಸಿದ್ದವೆಂದು ತಿಳಿದೆ.
ಅಲ್ಲದೆ ಬೆಳೆ ನಷ್ಟ ಪರಿಹಾರ ನೀಡಿಕೆ, ಹಾಲಿನ ಬೆಲೆ ಇಳಿಕೆ ಇತ್ಯಾದಿ ಅಂಶಗಳ ಕುರಿತು ಚರ್ಚಿಸಲು ಕೂಡಲೇ ರೈತ ಸಂಘಟನೆಗಳ ಸಭೆಯೊಂದನ್ನು ಕರೆಯಬೇಕೆಂದು ರಾಜ್ಯದ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಸಂಯುಕ್ತ ಹೋರಾಟ-ಕರ್ನಾಟಕದ ಸಂಯೋಜಕರುಗಳಾದ ಬಡಗಲಪುರ ನಾಗೇಂದ್ರ, ಜಿ.ಸಿ.ಬಯ್ಯಾರೆಡ್ಡಿ, ಕೋಡಿಹಳ್ಳಿ ಚಂದ್ರಶೇಖರ್, ಗುರುಪ್ರಸಾದ ಕೆರೆಗೋಡು, ಮಾವಳ್ಳಿ ಶಂಕರ್, ಕೆ.ವಿ.ಭಟ್, ಪಿಆರ್ಎಸ್ ಮಣಿ, ನೂರ್ ಶ್ರೀಧರ್, ದೇವಿ, ವಾಸುದೇವರೆಡ್ಡಿ, ಜಯಣ್ಣ ಅವರು ಜಂಟಿಯಾಗಿ ಆಗ್ರಹಿಸಿದ್ದಾರೆ.